ಬುಧವಾರ, ಆಗಸ್ಟ್ 10, 2022
23 °C
ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ರೈತರಿಗೆ ಮಾರ್ಗದರ್ಶನ ನೀಡಲು ಸಲಹೆ

ಗಡುವಿನೊಳಗೆ ಬೆಳೆ ಸಮೀಕ್ಷೆ ಪೂರ್ಣಗೊಳಿಸಲು ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬೆಳೆ ನಷ್ಟ, ಬೆಳೆ ವಿಮೆ ಸೇರಿದಂತೆ ವಿವಿಧ ಪರಿಹಾರ ಸೌಲಭ್ಯಕ್ಕಾಗಿ ರೈತರೇ ಫೋಟೊ ತೆಗೆದು ಅಪ್ ಲೋಡ್ ಮಾಡಲು ಅವಕಾಶ ನೀಡಿರುವ ಸಮೀಕ್ಷೆ ಬಗ್ಗೆ ರೈತರಿಗೆ ಅಧಿಕಾರಿಗಳು ಮಾರ್ಗದರ್ಶನ ನೀಡಿ ಇನ್ನು 10 ದಿನಗಳೊಳಗೆ ಸಂಪೂರ್ಣ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

2"020–21ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ರೈತರು ತಾವು ಬೆಳೆದ ಬೆಳೆಯನ್ನು ಸ್ವಯಂ ಸಮೀಕ್ಷೆ  ನಡೆಸಲು ಅವಕಾಶ ನೀಡಲಾಗಿದೆ. ರೈತರಿಗೆ ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ಮಾಡಿ ಸಮೀಕ್ಷಾ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಸೂಚಿಸಲಾಗಿರುವ ಗಡುವಿಗೆ ಕಾಯದೇ ಮುಂಚಿತವಾಗಿಯೇ ಸಮೀಕ್ಷೆ ಕಾರ್ಯದಲ್ಲಿ ಪ್ರಗತಿ ಸಾಧಿಸಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಸಮೀಕ್ಷಾ ಕಾರ್ಯದ ಉಸ್ತುವಾರಿ ವಹಿಸಿ ರೈತರಿಗೆ ನೆರವಾಗಲು ರೇಷ್ಮೆ, ಪಶುಸಂಗೋಪನೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನೇ ನೋಡೆಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಈ ಅಧಿಕಾರಿಗಳು ವ್ಯಾಪಕವಾಗಿ ಕ್ಷೇತ್ರ ಪ್ರವಾಸ ಕೈಗೊಂಡು ಬೆಳೆ ಸಮೀಕ್ಷೆ ಪರಿಶೀಲನೆ ಮಾಡಬೇಕು. ಮಾಹಿತಿ ಅಪ್ ಲೋಡ್ ಮಾಡಲು ನೆರವಾಗಬೇಕು. ವಿಳಂಬ, ನಿರ್ಲಕ್ಷ್ಯ ಧೋರಣೆ ವಹಿಸುವುದನ್ನು ಸಹಿಸಲಾಗುವುದಿಲ್ಲ. ಬೆಳೆ ಸಮೀಕ್ಷೆ ಜಿಲ್ಲೆಯಲ್ಲಿ ಕುಂಠಿತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹಿರಿಯ ಅಧಿಕಾರಿಗಳು ವಹಿಸಬೇಕು’ ಎಂದು ಡಾ.ಎಂ.ಆರ್.ರವಿ ಅವರು ಹೇಳಿದರು. 

‘ಬೆಳೆ ಸರ್ವೆ ಮಾಡಲು ರೈತರೊಂದಿಗೆ ಮಾರ್ಗದರ್ಶನ ಮಾಡಲು ಖಾಸಗಿ (ಪಿ.ಆರ್) ನಿವಾಸಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ರೈತರ ಸಮ್ಮತಿ, ಒಪ್ಪಿಗೆ ಪಡೆದು ನಿಯಮಾನುಸಾರ ಕ್ರಮ ಬದ್ಧ ಮಾಹಿತಿಯೊಂದಿಗೆ ಸಮೀಕ್ಷೆಗೆ ಸಹಕರಿಸಲು ಅಧಿಕಾರಿಗಳು ಮುಂದಾಗಬೇಕು’ ಎಂದರು. 

ಪೂರ್ಣ ಪ್ರಮಾಣದಲ್ಲಿ ಬೆಳೆ ಸರ್ವೆ ಕಾರ್ಯ ಆಗಲೇಬೇಕು. ಗ್ರಾಮ ಲೆಕ್ಕಿಗರು, ತಹಶೀಲ್ದಾರರು, ಸೇರಿದಂತೆ ಎಲ್ಲ ಅಧಿಕಾರಿಗಳು ಕ್ರಿಯಾ ಯೋಜನೆ ಅನುಸಾರ ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ರೈತರನ್ನು ಖುದ್ದು ಭೇಟಿ ಮಾಡಿ ಬೆಳೆ ಸಮೀಕ್ಷೆಗೆ ನೆರವಾಗಬೇಕು. ಸೂಚಿಸಲಾಗಿರುವ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆ ಕಾರ್ಯವನ್ನು ಆದ್ಯತೆ ಮೇರೆಗೆ ಪರಿಗಣಿಸಿ ಪ್ರಗತಿ ಸಾಧಿಸಬೇಕು. ಇಲ್ಲವಾದಲ್ಲಿ ಗಂಭೀರ ಕ್ರಮಕ್ಕೆ ಒಳಗಾಗಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಜಂಟಿ ಕೃಷಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.