ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಿ ಬಳಕೆ: ಚಾಮರಾಜನಗರ ಜಿಲ್ಲೆಯ ಶಾಸಕರು ಮುಂದು

ಶೇ 89ರಷ್ಟು ಅನುದಾನ ಖರ್ಚು, ಸಮುದಾಯ ಭವನ, ಮೂಲಸೌಕರ್ಯಕ್ಕೆ ಒತ್ತು
Last Updated 26 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (ಶಾಸಕದ ನಿಧಿ) ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಅನುದಾನದ ಬಳಕೆಯಲ್ಲಿ ಜಿಲ್ಲೆಯ ಶಾಸಕರು ಮುಂದಿದ್ದು, ದೊಡ್ಡ ಮೊತ್ತವನ್ನು ಉಳಿಸಿಕೊಂಡಿಲ್ಲ.

ಕ್ಷೇತ್ರದ ಅಭಿವೃದ್ಧಿಗಾಗಿ ನಿಗದಿಪಡಿಸಿರುವ ಅನುದಾನವನ್ನು ಶಾಸಕರು ಬಳಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆ ಸದಸ್ಯರು ಹಾಗೂ ವಿಧಾನ ಪರಿಷತ್‌ ಸದಸ್ಯರಿಗೆ ಬರೆದಿದ್ದ ಪತ್ರ ಇತ್ತೀಚೆಗೆ ಸುದ್ದಿ ಮಾಡಿತ್ತು.

2018–19ರಿಂದ ಇಲ್ಲಿವರೆಗಿನ ಮೂರೂವರೆ ವರ್ಷಗಳ ಅವಧಿಯಲ್ಲಿ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನವನ್ನು ಜಿಲ್ಲೆಯ ನಾಲ್ವರು ಶಾಸಕರು ಹೇಗೆ ಬಳಸಿದ್ದಾರೆ ಎಂಬ ಬಗ್ಗೆ ‘ಪ್ರಜಾವಾಣಿ’ಯು ಜಿಲ್ಲಾಡಳಿತದಿಂದ ಮಾಹಿತಿ ಕಲೆ ಹಾಕಿದೆ. ನಾಲ್ವರು ಕೂಡ ನಿಗದಿತ ಅನುದಾನವನ್ನು ತಮ್ಮ ಕ್ಷೇತ್ರದಲ್ಲಿ ವಿವಿಧ ಯೋಜನೆಗಳಿಗೆ ವ್ಯಯಿಸಿರುವುದು ತಿಳಿದು ಬಂದಿದೆ.

ಪ್ರತಿ ವರ್ಷ ಒಬ್ಬ ಶಾಸಕರಿಗೆ ₹2 ಕೋಟಿಯಷ್ಟು ಅನುದಾನ ನಿಗದಿ ಮಾಡಲಾಗುತ್ತಿದೆ. 2020–21ನೇ ಸಾಲಿನಲ್ಲಿ ಮಾತ್ರ ಕೋವಿಡ್‌ ಕಾರಣಕ್ಕೆ ಸರ್ಕಾರ ₹1 ಕೋಟಿ ಅನುದಾನ ಕಡಿತಗೊಳಿಸಿ, ₹1 ಕೋಟಿ ಮಾತ್ರ ನೀಡಿತ್ತು.

2018–19ರಿಂದ 2021–22ರ ಸಾಲಿನವರೆಗೆ ಪ್ರತಿಯೊಬ್ಬ ಶಾಸಕರಿಗೂ ತಲಾ ₹7 ಕೋಟಿಯಂತೆ ಒಟ್ಟು ₹28 ಕೋಟಿ ಅನುದಾನ ಮಂಜೂರಾಗಿದೆ. ಈ ಪೈಕಿ, ಶಾಸಕರು ₹24.9 ಕೋಟಿ ಖರ್ಚು ಮಾಡಿದ್ದಾರೆ. 2021–22ನೇ ಸಾಲು ಪೂರ್ಣಗೊಳ್ಳಲು ಇನ್ನೂ ಐದು ತಿಂಗಳು ಕಾಲಾವಕಾಶವಿದ್ದು, ₹2 ಕೋಟಿಯಲ್ಲಿ ಈಗಾಗಲೇ ಅರ್ಧದಷ್ಟು ಹಣ ಮಂಜೂರಾಗಿದೆ. ಶಾಸಕರು ಕಾಮಗಾರಿಗಳ ಪಟ್ಟಿಯನ್ನು ಸಲ್ಲಿಸುತ್ತಿದ್ದಾರೆ. ಈ ವರ್ಷವೂ ನಿಗದಿತ ಹಣ ಖರ್ಚಾಗಲಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಪುಟ್ಟರಂಗಶೆಟ್ಟಿ ಮುಂದೆ: ಶಾಸಕರ ನಿಧಿಯನ್ನು ವೆಚ್ಚ ಮಾಡುವುದರಲ್ಲಿ ಚಾಮರಾಜನಗರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮುಂದಿದ್ದಾರೆ. ಅವರು ಇಲ್ಲಿವರೆಗೆ ₹6.86 ಕೋಟಿ ವೆಚ್ಚದ ಕಾಮಗಾರಿಗಳಿಗೆ ಹಣ ವಿನಿಯೋಗಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ (2021–22) ಈಗಾಗಲೇ ಅವರು ₹1.91 ಕೋಟಿ ಹಣವನ್ನು ಬಳಕೆ ಮಾಡಿದ್ದಾರೆ.

ಎರಡನೇ ಸ್ಥಾನದಲ್ಲಿ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರಿದ್ದಾರೆ. ಮೂರೂವರೆ ವರ್ಷಗಳಲ್ಲಿ ₹7 ಕೋಟಿ ಅನುದಾನದಲ್ಲಿ ₹6.58 ಕೋಟಿಯನ್ನು ಬಳಕೆ ಮಾಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ₹1.58 ಕೋಟಿ ವೆಚ್ಚದ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ.

₹5.80 ಕೋಟಿ ವೆಚ್ಚ ಮಾಡಿರುವ ಹನೂರು ಶಾಸಕ ಆರ್‌.ನರೇಂದ್ರ ಅವರು ನಂತರದ ಸ್ಥಾನದಲ್ಲಿದ್ದಾರೆ. ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರು ₹5.71 ಕೋಟಿ ವ್ಯಯಿಸಿದ್ದಾರೆ. ನಿರಂಜನಕುಮಾರ್‌ ಅವರು ಮಾತ್ರ ಮೊದಲ ವರ್ಷ ಪೂರ್ಣ ಅನುದಾನ ಬಳಸಿಲ್ಲ. ₹2 ಕೋಟಿ ಪೈಕಿ ₹1.35 ಕೋಟಿ ಮಾತ್ರ ಖರ್ಚಾಗಿದೆ.

ನಾಲ್ವರೂ ಶಾಸಕರು ಪ್ರಸಕ್ತ ಸಾಲಿನ ಅನುದಾನದಲ್ಲಿ ಕೋವಿಡ್‌ ನಿರ್ವಹಣೆಗಾಗಿ ಖರ್ಚು ಮಾಡಿದ್ದಾರೆ. ನರೇಂದ್ರ ಅವರನ್ನು ಬಿಟ್ಟು ಉಳಿದ ಮೂವರೂ ತಲಾ ₹50 ಲಕ್ಷ ನೀಡಿದ್ದಾರೆ. ನರೇಂದ್ರ ಅವರು ₹23.50 ಲಕ್ಷ ಕೊಟ್ಟಿದ್ದಾರೆ.

ಸಮುದಾಯ ಭವನಕ್ಕೆ ಸಿಂಹಪಾಲು
ಶಾಸಕರ ನಿಧಿಯನ್ನು ಯಾವೆಲ್ಲಾ ಉದ್ದೇಶಗಳಿಗೆ ಬಳಸಬಹುದು ಎಂಬುದಕ್ಕೆ ಸರ್ಕಾರ ನಿಯಮಾವಳಿ ರೂಪಿಸಿದೆ. ಅನುದಾನ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಗೆ ಜಮೆಯಾಗಲಿದೆ.

ಸಮುದಾಯ ಭವನ, ದೇವಾಲಯ ಅಭಿವೃದ್ಧಿ, ಗ್ರಾಮೀಣ ಭಾಗದ ರಸ್ತೆ, ಚರಂಡಿ, ಕುಡಿಯುವ ನೀರು, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡ, ಬಸ್‌ ತಂಗುದಾಣ, ಗ್ರಂಥಾಲಯ ನಿರ್ಮಾಣ, ಪುಸ್ತಕಗಳ ಕೊಡುಗೆ... ಮುಂತಾದ ಜನರ ಉಪಯೋಗಕ್ಕೆ ಬರುವ ಕೆಲಸಗಳಿಗೆ ಅನುದಾನವನ್ನು ಬಳಸಬಹುದು.

ಜಿಲ್ಲೆಯಲ್ಲಿ ಇದುವರೆಗೆ ವ್ಯಯಿಸಲಾಗಿರುವ ಅನುದಾನದ ಅಂಕಿ ಅಂಶಗಳನ್ನು ಪರಿಗಣಿಸಿ ಹೇಳುವುದಾದರೆ, ನಿಧಿಯ ಸಿಂಹಪಾಲು ಸಮುದಾಯ ಭವನಗಳ ನಿರ್ಮಾಣಕ್ಕೆ ವ್ಯಯವಾಗುತ್ತದೆ.

ಮೂರೂವರೆ ವರ್ಷಗಳಲ್ಲಿ ನಾಲ್ವರು ಶಾಸಕರು ವೆಚ್ಚ ಮಾಡಿರುವ ₹ 24.9 ಕೋಟಿ ಹಣದಲ್ಲಿ ₹ 14.32 ಕೋಟಿಯಷ್ಟು ಮೊತ್ತ ಸಮುದಾಯ ಭವನಗಳಿಗೆ ಖರ್ಚಾಗಿದೆ. ರಸ್ತೆ, ಚರಂಡಿ, ಕುಡಿಯುವ ನೀರಿನಂತಹ ಮೂಲ ಸೌಕರ್ಯ ಕಾಮಗಾರಿಗಳಿಗೆ ₹ 5.60 ಕೋಟಿಯಷ್ಟು ವ್ಯಯಿಸಲಾಗಿದೆ. ₹ 1.73 ಕೋಟಿಯನ್ನು ಕೋವಿಡ್‌ ನಿರ್ವಹಣೆಗೆ ಖರ್ಚು ಮಾಡಲಾಗಿದೆ. ₹ 1.23 ಕೋಟಿಯಷ್ಟು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT