ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ: ಗದ್ದುಗೆ ಕುತೂಹಲಕ್ಕೆ ಇಂದು ತೆರೆ

ಕಾಂಗ್ರೆಸ್‌, ಬಿಜೆಪಿ ಬೆಂಬಲಿತರ ಪೈಪೋಟಿ, ಸ್ವತಂತ್ರವಾಗಿ ಗೆದ್ದಿದ್ದ ವೆಂಕಟರಾವ್‌ ನಿರ್ಣಾಯಕ
Last Updated 3 ಜುಲೈ 2022, 16:13 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಸ್ಥಾನಕ್ಕೆ ಸೋಮವಾರ (ಜುಲೈ 4) ಮಧ್ಯಾಹ್ನ ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿವೆ.

12 ಮಂದಿ ಚುನಾಯಿತ ಸದಸ್ಯರು, ಮೂವರು ನಾಮನಿರ್ದೇಶಿತ ಸದಸ್ಯರು ಹಾಗೂ ಕೃಷಿ ಸಹಕಾರ ಸಂಸ್ಕರಣ ಸಂಘಗಳ ಪ್ರತಿನಿಧಿ ಕ್ಷೇತ್ರದ (ತೆಂಗು ಬೆಳೆಗಾರರ ಸಂಸ್ಕರಣಾ ಸಂಘ) ಒಬ್ಬರು ಸೇರಿದಂತೆ 16 ಸದಸ್ಯ ಬಲದ ಎಪಿಎಂಸಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಗಳಿಸಲು 9 ಸದಸ್ಯರ ಬೆಂಬಲ ಬೇಕು.

ಸ್ವತಂತ್ರ ಅಭ್ಯರ್ಥಿ ನಿರ್ಣಾಯಕ:11 ಕೃಷಿಕ ಕ್ಷೇತ್ರ ಹಾಗೂ ಒಂದು ವರ್ತಕರ ಕ್ಷೇತ್ರದ ಪೈಕಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು, ನಾಲ್ವರಲ್ಲಿ ಬಿಜೆಪಿ ಬೆಂಬಲಿತರು ಹಾಗೂ ಒಂದರಲ್ಲಿ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಸರ್ಕಾರ ನೇಮಿಸಿರುವ ಮೂವರು ನಾಮ ನಿರ್ದೇಶಿತ ಸದಸ್ಯರು ಬಿಜೆಪಿಯವರೇ. ತೆಂಗು ಬೆಳೆಗಾರರ ಸಂಸ್ಕರಣಾ ಘಟಕದ ಆಡಳಿತ ಮಂಡಳಿಯೂ ಬಿಜೆಪಿ ತೆಕ್ಕೆಯಲ್ಲಿದೆ.

ಹಾಗಾಗಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ಎಂಟು ಇವೆ. ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಏಳು ಮಂದಿ ಇದ್ದಾರೆ. ಹಾಗಾಗಿ, ಚಾಮರಾಜನಗರ ವರ್ತಕರ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿರುವ ವೆಂಕಟರಾವ್‌ ಅವರು ನಿರ್ಣಾಯಕರಾಗಲಿದ್ದಾರೆ. ಅವರ ಬೆಂಬಲ ಸಿಕ್ಕಿದರೆ ಬಿಜೆಪಿಗೆ 9 ಸದಸ್ಯರ ಬೆಂಬಲ ದೊರೆತು ಸುಲಭವಾಗಿ ಅಧಿಕಾರ ಹಿಡಿಯಲಿದೆ. ಒಂದು ವೇಳೆ ಅವರು ಕಾಂಗ್ರೆಸ್‌ ಪರ ಒಲವು ತೋರಿದರೆ ಅಭ್ಯರ್ಥಿ ಬೆಂಬಲಿಸಿದರೆ, ಎರಡೂ ಕಡೆಯವರಿಗೆ ಎಂಟೆಂಟು ಸಮ ಮತಗಳು ಸಿಗಲಿವೆ. ಆಗ ಲಾಟರಿ ಮೂಲಕ ಅಧ್ಯಕ್ಷರು, ಉಪಾಧ್ಯಕ್ಷ ಆಯ್ಕೆ ನಡೆಯಲಿದೆ.

ಅಭ್ಯರ್ಥಿಗಳು: ಕಾಂಗ್ರೆಸ್‌ ಹಾಗೂ ಬಿಜೆಪಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ.

ಬಿಜೆಪಿಯು ಅಧ್ಯಕ್ಷ ಸ್ಥಾನಕ್ಕೆ ಮನೋಜ್‌ ಪಟೇಲ್‌ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಲಾವತಿ ಅವರನ್ನು ಆಯ್ಕೆ ಮಾಡಿದೆ.

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಎಚ್‌.ಎನ್‌.ಮಹದೇವಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಲ್‌.ರಾಮಚಂದ್ರ ಅವರನ್ನು ಕಣಕ್ಕಿಳಿಸಿದೆ.

ಬಿಜೆಪಿ ಹೆಚ್ಚು ಉತ್ಸಾಹದಲ್ಲಿ ಇದ್ದಂತೆ ಕಂಡು ಬರುತ್ತಿದ್ದು, ಸ್ವತಂತ್ರ ಅಭ್ಯರ್ಥಿಯ ಬೆಂಬಲ ಗಿಟ್ಟಿಸಲು ಕಸರತ್ತು ನಡೆಸುತ್ತಿದೆ. ಗೆಲ್ಲುವ ವಿಶ್ವಾಸ ಹೊಂದಿರುವ ಬಿಜೆಪಿ, ಐದು ವರ್ಷಗಳ ಎಪಿಎಂಸಿ ಆಡಳಿತದಲ್ಲಿ ತಲಾ 20 ತಿಂಗಳ ಕಾಲ ಅವಧಿಗೆ ಒಬ್ಬರಂತೆ ಮೂವರನ್ನು ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಿದೆ.

ಇತ್ತ ಕಾಂಗ್ರೆಸ್‌ ಕೂಡ ರಣತಂತ್ರದಲ್ಲಿ ತೊಡಗಿದೆ. ಪಕ್ಷೇತರ ಸದಸ್ಯರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ. ಬಿಜೆಪಿ ಪಾಳಯದಲ್ಲಿ ಅಡ್ಡ ಮತದಾನ ನಡೆದರೆ ಗೆಲ್ಲುವ ಅವಕಾಶವಿದೆ ಎಂದು ಹೇಳುತ್ತಿದ್ದಾರೆ ಮುಖಂಡರು.

ಯಾರೆಲ್ಲ ಸದಸ್ಯರು..?

ಬಿಜೆಪಿ ಬೆಂಬಲಿತರು:ಮನೋಜ್‌ ಪಟೇಲ್‌ (ಚಾಮರಾಜನಗರ ಕ್ಷೇತ್ರ), ಮಹದೇವ ಪ್ರಸಾದ್‌ (ಹರವೆ), ರವಿಕುಮಾರ್‌ (ಅಮಚವಾಡಿ) ಮತ್ತು ಕಲಾವತಿ (ಉಮ್ಮತ್ತೂರು)

ಕಾಂಗ್ರೆಸ್‌ ಬೆಂಬಲಿತರು:ಗುರುಸ್ವಾಮಿ ಎಂ.ಬಿ (ಬದನಗುಪ್ಪೆ ಕ್ಷೇತ್ರ), ಪ್ರೇಮ (ಉಡಿಗಾಲ),ಎಚ್‌.ಎನ್‌.ಮಹದೇವಸ್ವಾಮಿ (ಹರದನಹಳ್ಳಿ) ಎ.ಎಸ್‌.ಪ್ರದೀಪ್‌ (ನಾಗವಳ್ಳಿ), ಜಿ.ಎಂ.ರವಿಶಂಕರಮೂರ್ತಿ (ಹೊಂಗನೂರು), ಮಹೇಶ್‌ ಎಂ. (ಯಳಂದೂರು) ಮತ್ತು ಎಲ್‌.ರಾಮಚಂದ್ರ (ಅಗರ)

ಸ್ವತಂತ್ರ ಸದಸ್ಯ:ವೆಂಕಟರಾವ್ (ಚಾಮರಾಜನಗರ ವರ್ತಕರ ಕ್ಷೇತ್ರ)

ನಾಮನಿರ್ದೇಶಿತ ಸದಸ್ಯರು: ತಾವರಕಟ್ಟೆ ಮೋಳೆ ಮಹೇಶ್‌, ಯಳಂದೂರು ಶಿವಕುಮಾರ್‌, ಕೆಂಗಾಕಿ ಪ್ರೇಮ

--

ಪಕ್ಷದ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಮನೋಜ್‌ ಪಟೇಲ್‌, ಉಪಾಧ್ಯಕ್ಷ ಸ್ತಾನಕ್ಕೆ ಕಲಾವತಿ ಸ್ಫರ್ಧಿಸಲಿದ್ದಾರೆ. ನಮಗೆ ಗೆಲುವು ಖಚಿತ
ಆರ್‌.ಸುಂದರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

--

ಮಹದೇವಸ್ವಾಮಿ ಅಧ್ಯಕ್ಷ ಸ್ಥಾನ, ರಾಮಚಂದ್ರ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಅಧಿಕಾರ ಹಿಡಿಯಲು ನಮಗೂ ಅವಕಾಶ ಇದೆ
ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT