ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಚಂಗಡಿ ಗ್ರಾಮ ಸ್ಥಳಾಂತರ: ಬಿಡುವುದೇ ಗ್ರಹಣ?

ಗಡಿ ಜಿಲ್ಲೆಯ ಮಹತ್ವಕಾಂಕ್ಷಿ ಯೋಜನೆ, ಹೊಸ ಸರ್ಕಾರದ ಮೇಲೆ ಗ್ರಾಮಸ್ಥರ ನಿರೀಕ್ಷೆ
Published 2 ಜೂನ್ 2023, 23:30 IST
Last Updated 2 ಜೂನ್ 2023, 23:30 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಕುಗ್ರಾಮ ಚಂಗಡಿ ಗ್ರಾಮ ಸ್ಥಳಾಂತರಗೊಳಿಸುವ ಅರಣ್ಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗೆ ಮೂರು ವರ್ಷಗಳಿಂದ ಗ್ರಹಣ ಬಡಿದಿದ್ದು, ನೂತನ ಸರ್ಕಾರದ ಅವಧಿಯಲ್ಲಾದರೂ ಯೋಜನೆ ಕಾರ್ಯಗತವಾಗುವುದೇ ಎಂಬ ನಿರೀಕ್ಷೆಯಲ್ಲಿ ಚಂಗಡಿ ಗ್ರಾಮಸ್ಥರಿದ್ದಾರೆ. 

ಸೌಕರ್ಯಗಳ ಕೊರತೆ, ವನ್ಯಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ಇಲ್ಲಿನ ಗ್ರಾಮಸ್ಥರು, ಸ್ವಯಂ ಪ್ರೇರಿತರಾಗಿ ಸ್ಥಳಾಂತರಕ್ಕೆ ಒಪ್ಪಿದ್ದರು. 2016ರಲ್ಲೇ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಇಲಾಖೆಯ ಅಧಿಕಾರಿಗಳು ಆಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. 2018ರಿಂದ ಪ್ರಕ್ರಿಯೆ ಶುರುವಾಗಿತ್ತು. ಸರ್ಕಾರ ಕೂಡ ಯೋಜನೆಗೆ ಒಪ್ಪಿಗೆ ನೀಡಿತ್ತು.  ಗ್ರಾಮಸ್ಥರ ಪುನರ್‌ವಸತಿಗಾಗಿ ಮಲೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು ಮಾಸ್ಟರ್‌ ಪ್ಲಾನ್‌ ಕೂಡ ಸಿದ್ಧ ಮಾಡಿದ್ದಾರೆ. ಪುನರ್ವಸತಿಗೆ ಸ್ಥಳ ಗುರುತಿಸಿದ್ದಾರೆ. ಪರಿಹಾರ ಪ್ಯಾಕೇಜ್‌ಗಳನ್ನೂ ರೂಪಿಸಿದ್ದಾರೆ. ಆದರೆ, ಸರ್ಕಾರ ಹಣ ಬಿಡುಗಡೆ ಮಾಡದಿರುವುದರಿಂದ ಯೋಜನೆ ನನೆಗುದಿಗೆ ಬಿದ್ದಿದೆ. 

ಗ್ರಾಮದಲ್ಲಿ ಸೌಕರ್ಯಗಳೇ ಇಲ್ಲದಿರುವುದರಿಂದ ಹಲವು ಕುಟುಂಬಗಳು ಈಗಾಗಲೇ ಊರು ತೊರೆದಿವೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳು ಗ್ರಾಮದಲ್ಲಿ 256 ಕುಟುಂಬಗಳನ್ನು ಸರ್ವೆ ಮಾಡಿದ್ದವು. ಈ ಪೈಕಿ 230 ಕುಟುಂಬಗಳು ಸ್ಥಳಾಂತರಕ್ಕೆ ಲಿಖಿತವಾಗಿ ಸಮ್ಮತಿಸಿವೆ. ಸ್ಥಳಾಂತರ ಯೋಜನೆಗೆ ₹34.50 ಕೋಟಿ ಬೇಕು ಎಂದು ಇಲಾಖೆ ಅಂದಾಜಿಸಿದೆ. 

ಮೂರು ಪರಿಹಾರ ಪ್ಯಾಕೇಜ್‌: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ 140 ಕುಟುಂಬಗಳನ್ನು 2010ರಲ್ಲಿ ಹುಣಸೂರು ತಾಲ್ಲೂಕಿನ ಶೆಟ್ಟಹಳ್ಳಿಗೆ ಸ್ಥಳಾಂತರಿಸಲಾದ ಯೋಜನೆಯ ಮಾದರಿಯಲ್ಲೇ ಈ ಯೋಜನೆ ರೂಪಿಸಲಾಗಿದೆ. 

ಮೂರು ಪರಿಹಾರ ಪ್ಯಾಕೇಜ್‌ಗಳಲ್ಲಿ ಮೊದಲನೆಯದ್ದು, ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ₹15 ಲಕ್ಷ ನಗದು ಕೊಡುವುದು. ಎರಡನೇ ಪ್ಯಾಕೇಜ್‌ನಲ್ಲಿ ಫಲಾನುಭವಿ ಕುಟುಂಬಗಳಿಗೆ ₹75 ಸಾವಿರ ನಗದು, ಮೂರು ಎಕರೆ ಜಮೀನು ಹಾಗೂ ಮನೆ ನಿರ್ಮಿಸಿಕೊಡಲಾಗುತ್ತದೆ. ಮೂರನೇ ಪ್ಯಾಕೇಜ್‌ನಲ್ಲಿ  ಫಲಾನುಭವಿಗಳಿಗೆ ₹ 5 ಲಕ್ಷ ನಗದು ಮತ್ತು ಮನೆ ನಿರ್ಮಿಸಿ ಕೊಡಲಾಗುತ್ತದೆ. 

ಸ್ಥಳ ಗುರುತು: ತಾಲ್ಲೂಕಿನ ಡಿ.ಎಂ.ಸಮುದ್ರದ ಬಳಿ ಪುನರ್ವಸತಿ ಕಲ್ಪಿಸುವುದಕ್ಕೆ  ಇದಕ್ಕಾಗಿ ಅರಣ್ಯ ಭೂಮಿಯನ್ನು ಗುರುತಿಸಲಾಗಿದೆ. 

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್‌.ಸುರೇಶ್‌ಕುಮಾರ್‌ 2020ರ ಮೇ ತಿಂಗಳಲ್ಲಿ ಗ್ರಾಮಕ್ಕೆ ತೆರಳಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದರು. 2021ರ ಅಂತ್ಯದೊಳಗೆ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಆಶಯ ವ್ಯಕ್ತಪಡಿಸಿದ್ದರು. ಭರವಸೆ ಕೊಟ್ಟು ಮೂರು ವರ್ಷಗಳಾದರೂ ಯೋಜನೆಯಲ್ಲಿ ಪ್ರಗತಿಯಾಗಿಲ್ಲ’ ಎಂದು ಚಂಗಡಿ ಗ್ರಾಮದ ಮುನಿಸ್ವಾಮಿ ಹೇಳಿದರು. 

ಮಾಲತಿಪ್ರಿಯಾ
ಮಾಲತಿಪ್ರಿಯಾ
ಎಂ.ಆರ್‌.ಮಂಜುನಾಥ್‌
ಎಂ.ಆರ್‌.ಮಂಜುನಾಥ್‌
ಚಂಗಡಿ ಕರಿಯಪ್ಪ
ಚಂಗಡಿ ಕರಿಯಪ್ಪ

ಮುಂದಿನ ಅಧಿವೇಶನದಲ್ಲಿ ಚಂಗಡಿ ಪುನರ್ವಸತಿ ಯೋಜನೆ ಬಗ್ಗೆ ಸಿ.ಎಂ ಗಮನಕ್ಕೆ ತಂದು ಶೀಘ್ರವಾಗಿ ಯೋಜನೆಗೆ ಚಾಲನೆ ನೀಡಲಾಗುವುದು. ಎಂ.ಆರ್ ಮಂಜುನಾಥ್ ಹನೂರು ಶಾಸಕ

ಪುನರ್ವಸತಿ ಕಲ್ಪಿಸುವಂತೆ ಹಿಂದಿನ ಸಿ.ಎಂ. ಬಸವರಾಜ ಬೊಮ್ಮಾಯಿಗೆ 2 ಬಾರಿ ಮನವಿ ಮಾಡಿದ್ದೆವು. ಯಾವುದೇ ಪ್ರಯೀಜನವಾಗಿಲ್ಲ ಕರಿಯಪ್ಪ ಚಂಗಡಿ ಗ್ರಾಮದ ಮುಖಂಡ

ಪುನರ್ವಸತಿಗೆ ಸಂಬಂಧಿಸಿದಂತೆ ವರದಿಯನ್ನು ಕೊಂಚ ಪರಿಷ್ಕರಿಸಿ ಜಿಲ್ಲಾಧಿಕಾರಿಗಳ 2 ತಿಂಗಳ ಹಿಂದೆ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಡಾ.ಎಂ.ಮಾಲತಿಪ್ರಿಯಾ ಪ್ರಭಾರ ಸಿಸಿಎಫ್‌ ಚಾಮರಾಜನಗರ.

ಹುಸಿಯಾದ ಬೊಮ್ಮಾಯಿ ಭರವಸೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ಹನೂರು ತಾಲ್ಲೂಕಿಗೆ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ಬಾರಿ ಬಂದಿದ್ದಾಗ ಚಂಗಡಿ ಗ್ರಾಮಸ್ಥರು ರೈತ ಸಂಘದ ಜತೆಗೂಡಿ ಮನವಿ ಸಲ್ಲಿಸಿದ್ದರು.  ‘ತಮ್ಮ ಸರ್ಕಾರದ ಅವಧಿಯಲ್ಲೇ ಯೋಜನೆಯನ್ನು ಆರಂಭಿಸಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದ್ದರು. ಅದು ಹುಸಿಯಾಗಿದೆ. ಈಗ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರವಾದರೂ ಯೋಜನೆಯನ್ನು ಅನುಷ್ಠಾನಗೊಳಿಸಿ ನಮ್ಮನ್ನು ಸಂಕಷ್ಟದಿಂದ ಪಾರು ಮಾಡಬೇಕು’ ಎಂದು ಚಂಗಡಿ ಗ್ರಾಮಸ್ಥರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT