ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಅಕ್ರಮ ಖಾತೆ, ಮಧ್ಯವರ್ತಿಗಳ ಹಾವಳಿಯ ಕೂಗು

ನಗರಸಭೆ ಸಾಮಾನ್ಯ ಸಭೆ, ಅಧಿಕಾರಿಗಳ ವಿರುದ್ಧ ಸದಸ್ಯರ ಆರೋಪ
Last Updated 22 ಸೆಪ್ಟೆಂಬರ್ 2022, 16:31 IST
ಅಕ್ಷರ ಗಾತ್ರ

ಚಾಮರಾಜನಗರ: ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಖಾತೆಗಳನ್ನು ಮಾಡಲಾಗುತ್ತಿದೆ. ನಗರಸಭೆ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಇನ್ನೂ ನಿಂತಿಲ್ಲ ಎಂಬ ಆರೋಪವನ್ನು ಹಲವು ಸದಸ್ಯರು ಗುರುವಾರ ಮಾಡಿದರು.

ಅಧ್ಯಕ್ಷೆ ಸಿ.ಎಂ.ಆಶಾ ನೇತೃತ್ವದಲ್ಲಿ ನಗರಸಭೆಯ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್‌ನ ಆರ್‌.ಪಿ.ನಂಜುಂಡಸ್ವಾಮಿ, ಆರ್‌.ಎಂ.ರಾಜಪ್ಪ ಅವರು ಈ ಬಗ್ಗೆ ಪ್ರಸ್ತಾಪಿಸಿದರು.

‘ಮಧ್ಯವರ್ತಿಗಳಿಂದಾಗಿ ಅಕ್ರಮ ಖಾತೆಗಳನ್ನು ಅಧಿಕಾರಿಗಳು ಮಾಡಿಕೊಡುತ್ತಿದ್ದಾರೆ. ಜನಸಾಮಾನ್ಯರಿಗೆ ದಾಖಲೆಗಳು ಸರಿ ಇದ್ದರೂ, ಇ–ಸ್ವತ್ತು, ಖಾತೆಗಳನ್ನು ಮಾಡಿಕೊಡಲಾಗುತ್ತಿಲ್ಲ ಎಂದು ದೂರಿದರು. ಮಧ್ಯವರ್ತಿಗಳಿಂದಾಗಿ ಸದಸ್ಯರಿಗೆ ಬೆಲೆಯೇ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಸುದರ್ಶನ್‌ ಗೌಡ ಸೇರಿದಂತೆ ಬಿಜೆಪಿಯ ಹಲವು ಸದಸ್ಯರು ಇದಕ್ಕೆ ದನಿಗೂಡಿಸಿದರು.

ಪ್ರಭಾರ ಆಯುಕ್ತ ನಟರಾಜುಪ್ರತಿಕ್ರಿಯಿಸಿ, ‘ನಾನು ಆಯುಕ್ತ ಹುದ್ದೆ ವಹಿಸಿಕೊಂಡ ಮೇಲೆ, ಖಾತೆ ಮಾಡಿಕೊಡುವ ಸಂಬಂಧ 2017ರ ಸುತ್ತೋಲೆ ಪ್ರಕಾರವೇ ಮಾಡಿಕೊಡಲಾಗುತ್ತಿದೆ. ಒಂದು ವೇಳೆ ಯಾರಿಗಾದರೂ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದರೆ, ಅದನ್ನು ರದ್ದು ಮಾಡಲಾಗುವುದು’ ಎಂದರು.

ಇ–ಸ್ವತ್ತು ನೀಡುವಲ್ಲಿ ಆಗುತ್ತಿರುವ ತೊಂದರೆ ಬಗ್ಗೆ ಪ್ರಸ್ತಾಪಿಸಿದ ಕಂದಾಯ ಅಧಿಕಾರಿ ಶರವಣ ಅವರು, ‘2018ರ ಸರ್ಕಾರದ ಆದೇಶದಂತೆ ಚುಡಾದಿಂದ ವಿನ್ಯಾಸ– ನಕ್ಷೆ ಅನುಮೋದನೆಗೊಂಡಿರುವ ಬಡಾವಣೆಗಳಿಗೆ ಮಾತ್ರ ಇ–ಸ್ವತ್ತು ನೀಡಲಾಗುತ್ತಿದೆ’ ಎಂದರು.

ಭೇಟಿ ನೀಡದ್ದಕ್ಕೆ ಆಕ್ರೋಶ: ನಗರದಲ್ಲಿ ಭಾರಿ ಮಳೆಯಾದ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿ ಹಾಗೂ ಮನೆಗಳಿಗೆ ಹಾನಿಯಾದ ವಾರ್ಡ್‌ಗಳಿಗೆ ನಗರಸಭೆ ಅಧ್ಯಕ್ಷರು ಭೇಟಿ ನೀಡಿಲ್ಲ ಎಂದು 17ನೇ ವಾರ್ಡ್‌ ಸದಸ್ಯ ಬಸವಣ್ಣ ಆಕ್ರೋಶ ವ್ಯಕ್ತಪಡಿಸಿದರು.

‘ಎಡೆಬಿಡದೆ ಸುರಿದ ಮಳೆಯಿಂದ ಕೆಲವು ವಾರ್ಡ್‌ಗಳು ಜಲಾವೃತಗೊಂಡವು. ಹಲವು ಮನೆಗಳಿಗೂ ಹಾನಿಯಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಆದರೆ ನಗರಸಭೆಯ ಅಧ್ಯಕ್ಷರು ವಾರ್ಡ್‌ಗಳಿಗೆ ಭೇಟಿ ನೀಡಲಿಲ್ಲ. ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸ ಮಾಡಲಿಲ್ಲ’ ಎಂದು ದೂರಿದರು.

ಆಶಾ ಪ್ರತಿಕ್ರಿಯಿಸಿ, ‘ತೀವ್ರ ತೊಂದರೆಗೆ ಒಳಗಾಗಿದ್ದ ಮೂರ್ನಾಲ್ಕು ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಉಳಿದ ಕಡೆಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಮಾಹಿತಿ ಪಡೆದಿದ್ದೇನೆ’ ಎಂದು ಸಮಜಾಯಿಷಿ ನೀಡಿದರು.

ನೀರು ಪೋಲು: ಸದಸ್ಯ ಸುದರ್ಶನ್‌ ಗೌಡ ಅವರು ನಗರದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವಾಗ ಭಾರಿ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಆಯುಕ್ತ ನಟರಾಜ್‌ ಪ್ರತಿಕ್ರಿಯಿಸಿ ‘ಪೈಪ್‌ಲೈನ್‌ ದುರಸ್ತಿಗಾಗಿ ₹16 ಲಕ್ಷದ ಟೆಂಡರ್‌ ಕರೆಯಲಾಗಿದೆ. ಶೀಘ್ರ ಸೋರಿಕೆ ತಡೆಯಲಾಗುವುದು’ ಎಂದರು.

ಟ್ಯಾಂಕ್‌ ಜಾಗ ಒತ್ತುವರಿ: ಒಂದನೇ ವಾರ್ಡ್ ಸದಸ್ಯೆ ನೀಲಮ್ಮ ಮಾತನಾಡಿ, ‘1ನೇ ಮತ್ತು 2ನೇ ವಾರ್ಡ್‌ಗೆ ನೀರು ಪೂರೈಸುತ್ತಿದ್ದ ಓವರ್‌ ಹೆಡ್‌ ಟ್ಯಾಂಕ್‌ ಶಿಥಿಲವಾಗಿದೆ ಎಂಬ ಕಾರಣಕ್ಕೆ ಅದನ್ನು ತೆರವುಗೊಳಿಸಲಾಗಿದೆ. ಈಗ ಎರಡು ವಾರ್ಡ್‌ಗಳಿಗೆ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಹೊಸದಾಗಿ ಟ್ಯಾಂಕ್‌ ನಿರ್ಮಾಣ ಮಾಡಬೇಕು. ಈ ಹಿಂದೆ ಟ್ಯಾಂಕ್‌ ಇದ್ದ ಜಾಗವನ್ನು ವ್ಯಕ್ತಿಯೊಬ್ಬರು ತಮ್ಮದು ಎಂದು ಹೇಳಿಕೊಳ್ಳುತ್ತಿದ್ದು, ಖಾತೆಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಆಗ್ರಹಿಸಿದರು.

ನಟರಾಜು ಅವರು ಮಾತನಾಡಿ, ‘ಹೊಸ ಟ್ಯಾಂಕ್‌ ನಿರ್ಮಾಣ ಸದ್ಯಕ್ಕೆ ಸಾಧ್ಯವಿಲ್ಲ. ಕುಡಿಯುವ ನೀರು ಪೂರೈಸಲು ಬೇರೆ ವ್ಯವಸ್ಥೆ ಮಾಡೋಣ. ಟ್ಯಾಂಕ್‌ ಇದ್ದ ಜಾಗ ನಗರಸಭೆಯದ್ದು. ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸಲಾಗುವುದು’ ಎಂದರು.

ನಗರಸಭೆ ಉಪಾಧ್ಯಕ್ಷೆ ಸುಧಾ, ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

ಬೀದಿ ನಾಯಿ ಹಾವಳಿ ತಡೆಗಟ್ಟಿ...

5ನೇ ವಾರ್ಡ್‌ನ ತೌಸಿಯಾ ಭಾನು ಹಾಗೂ 9ನೇ ವಾರ್ಡ್‌ನ ಎಂ.‌ಮಹೇಶ್‌ ಅವರು ನಗರದಲ್ಲಿ ಬೀದಿ ನಾಯಿ ಹಾವಳಿ ಬಗ್ಗೆ ಗಮನ ಸೆಳೆದರು.

‘ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ತೌಸಿಯಾಭಾನು ಹೇಳಿದರು

ಮಹೇಶ್ ಮಾತನಾಡಿ, ‘ಜಿಲ್ಲಾ ಕಣ್ಗಾವಲು ಘಟಕದ ಪ್ರಕಾರ, ‌ಈ ವರ್ಷ 268 ಮಕ್ಕಳಿಗೆ, ಕಳೆದ ವರ್ಷ 794 ಮಕ್ಕಳಿಗೆ ಹಾಗೂ 2020ರಲ್ಲಿ 903 ಮಕ್ಕಳಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿವೆ’ ಎಂದರು.

ಆಯುಕ್ತ ನಟರಾಜು, ‘ಪಶು ವೈದ್ಯಕೀಯ ಇಲಾಖೆಯಿಂದ ಮಾತನಾಡಿದ್ದು, ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲು ತಿಳಿಸಲಾಗಿದೆ. ಆದರೆ, ನಗರದಲ್ಲಿ ಸೂಕ್ತವಾದ ಕ್ಲಿನಿಕ್ ವ್ಯವಸ್ಥೆಯಿಲ್ಲ. ಇದಕ್ಕಾಗಿ ಅರ್ಧ ಎಕರೆ ಜಾಗದ ಅವಶ್ಯಕತೆ ಇದೆ. ಶೀಘ್ರದಲ್ಲಿ ಈ ಬಗ್ಗೆ ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT