ಶನಿವಾರ, ಅಕ್ಟೋಬರ್ 23, 2021
20 °C
ಉತ್ತರ ಪ್ರದೇಶದ ರೈತರ ಸಾವು, ಪ್ರಿಯಾಂಕಾ ಬಂಧನ ಖಂಡಿಸಿ ಪ್ರತಿಭಟನೆ, ರಸ್ತೆ ತಡೆ

ಕೇಂದ್ರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಕಾಂಗ್ರೆಸ್‌ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಉತ್ತರ ಪ್ರದೇಶದ ಲಖೀಂಪುರ–ಖೇರಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿದು ನಾಲ್ವರು ಮೃತಪಟ್ಟ ಘಟನೆ ಹಾಗೂ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಬಂಧನವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. 

ಚಾಮರಾಜೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಸೇರಿದ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ಅಲ್ಲಿ ರಸ್ತೆ ತಡೆ ನಡೆಸಿ ಸ್ವಲ್ಪ ಹೊತ್ತು ಪ್ರತಿಭಟನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು, ‘ಉತ್ತರ ಪ್ರದೇಶದಲ್ಲಿ  ರೈತ ವಿರೋಧಿ ಕಾಯ್ದೆಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಷ್ ಮಿಶ್ರಾ ಅವರು ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಹಾಗೂ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿದ್ದಾರೆ. ಇದು ನಿಜಕ್ಕೂ ಪ್ರಜಾಪ್ರಭುತ್ವದ ಕಗ್ಗೊಲೆ. ಇದನ್ನು ಖಂಡಿಸಿ ಕಾಂಗ್ರೆಸ್‌ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದೆ’ ಎಂದರು. 

‘ಜಿಲ್ಲೆಯಲ್ಲೂ ಎರಡು ದಿನಗಳ ಹಿಂದೆಯೇ ಪ್ರತಿಭಟನೆ ನಡೆಸಬೇಕಿತ್ತು. ಆದರೆ, ರಾಷ್ಟ್ರಪತಿ ಅವರ ಭೇಟಿ ಇದ್ದುದರಿಂದ ಮುಂದೂಡಲಾಗಿತ್ತು. ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ರೈತ ವಿರೋಧಿ ನೀತಿ ಖಂಡನೀಯ. ಅಜಯ್‌ ಮಿಶ್ರಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರ ಮಗ ಆಶಿಷ್‌ ಮಿಶ್ರಾ ಅವರನ್ನು ಬಂಧಿಸಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ’ ಎಂದು ಅವರು ಹೇಳಿದರು. 

ನಂತರ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿದ ಪ್ರತಿಭಟನಕಾರರು, ಭವನದ ಪ್ರವೇಶ ದ್ವಾರದ ಬಳಿ ಸ್ವಲ್ಪ ಹೊತ್ತು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ ಅವರು ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು. 

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವು, ಆರ್.ಮಹದೇವು, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಮುಖಂಡ ಸದಾಶಿವಮೂರ್ತಿ, ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ಅರುಣ್ ಕುಮಾರ್, ಬ್ಲಾಕ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ, ಮಹಮ್ಮದ್ ಅಸ್ಗರ್, ಕೆಪಿಸಿಸಿ ಸದಸ್ಯ ಸ್ಯಯದ್ ರಫೀ,  ಕಾಗಲವಾಡಿಚಂದ್ರು, ಶಿವಮೂರ್ತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರಾಜಶೇಖರ್ ಜತ್ತಿ, ಶಕುಂತಲಾ, ನಾಗರತ್ನ, ನಗರಸಭಾ ಸದಸ್ಯರಾದ ಚಿನ್ನಮ್ಮ, ನೀಲಮ್ಮ, ಕಲಾವತಿ, ಭಾಗ್ಯಮ್ಮ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.