ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಗ್ರಾಮಸ್ಥರು

ಮಹದೇಶ್ವರ ಬೆಟ್ಟದ ದುರ್ಗಮ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಭೇಟಿ
Last Updated 3 ಅಕ್ಟೋಬರ್ 2020, 14:37 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ, ದಟ್ಟ ಅರಣ್ಯದಲ್ಲಿರುವಇಂಡಿಗನತ್ತ, ದೊಡ್ಡಾಣೆ, ಮೆಂದಾರೆ, ಕೊಕ್ಕಬರೆ, ಕೊಮ್ಮಡಿಕ್ಕಿ, ಆನೆಹೊಲ, ತೇಕಾಣೆ, ನಾಗಮಲೆ, ಹಳೆಯೂರು ಹಾಗೂ ಇನ್ನಿತರ ಕಾಡಂಚಿನ ಗ್ರಾಮಸ್ಥರು ತಾವು ಎದುರಿಸುತ್ತಿರುವ ಸಮಸ್ಯೆಗಳ ಸರಮಾಲೆಯನ್ನೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ ಕುಮಾರ್‌ ಹಾಗೂ ಜಿಲ್ಲಾಡಳಿತದ ಮುಂದೆ ಶನಿವಾರ ಬಿಚ್ಚಿಟ್ಟರು.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ವಿದ್ಯುತ್‌ ಸಂಪರ್ಕ, ಶಾಲೆ ನಿರ್ಮಾಣ, ಶಾಲಾ ಕೊಠಡಿ ದುರಸ್ತಿ, ಪಡಿತರ ವಿತರಣೆ, ಶಾಲಾ ಶಿಕ್ಷಕರು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ನೇಮಕ, ಆಂಬುಲೆನ್ಸ್ ವ್ಯವಸ್ಥೆ, ಅಂಗನವಾಡಿ ಕೆಂದ್ರಕ್ಕೆ ಸ್ವಂತ ಕಟ್ಟಡ, ಕುಡಿಯುವ ನೀರು ಸೇರಿದಂತೆ ಗುಣಮಟ್ಟದ ಜೀವನ ನಡೆಸಲು ಬೇಕಾದ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಿಕೊಡುವಂತೆ ಸಚಿವರಿಗೆ ಮನವಿ ಮಾಡಿದರು.

ಅರಣ್ಯ ಪ್ರದೇಶದಲ್ಲಿರುವ ಗ್ರಾಮಗಳ ಜನರ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸುವುದಕ್ಕಾಗಿ ಸಚಿವ ಸುರೇಶ್‌ ಕುಮಾರ್‌ ಅವರು ಶನಿವಾರ, ಸ್ಥಳೀಯ ಶಾಸಕ ಆರ್‌.ನರೇಂದ್ರ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಮೆದಗಾಣೆ, ಇಂಡಿಗನತ್ತ, ತುಳಸೀಕೆರೆ ಗ್ರಾಮಗಳಿಗೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.

ಮೊದಲು ಮೆದಗಾಣೆ ಗ್ರಾಮಕ್ಕೆ ತೆರಳಿದ ಸಚಿವರು ಅಲ್ಲಿನ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

‘ಸರ್ಕಾರದಿಂದ ಮನೆ ಮಂಜೂರಾಗಿದ್ದು ಕಟ್ಟಡವನ್ನೂ ಕಟ್ಟಿ ಜಿಪಿಎಸ್ ಮಾಡಲಾಗಿದೆ. ಒಂದು ವರ್ಷ ಕಳೆದರೂ ಹಣ ಬಂದಿಲ್ಲ. ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆ ಸೇರಿದಂತೆ ಗ್ರಾಮಕ್ಕೆ ರಸ್ತೆ, ನೀರು, ವಿದ್ಯುತ್ ಸಂಪರ್ಕ, ಕೆರೆಗೆ ನೀರು, ಅಲ್ಲಲ್ಲಿ ಚೆಕ್‌ಡ್ಯಾಂ ನಿರ್ಮಾಣ, ವಸತಿ ಸೌಲಭ್ಯ, ಪಡಿತರ ವ್ಯವಸ್ಥೆ ಹಾಗೂ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸಿಕೊಡಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದರು.

ರಸ್ತೆ ನಿರ್ಮಾಣಕ್ಕೆ ಅನುಮತಿ: ಗ್ರಾಮಸ್ಥರ ಮನವಿಗೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್ ಅವರು, ‘ವಸತಿ ನಿರ್ಮಾಣದ ವಿವಿಧ ಹಂತಗಳ ಮೊತ್ತವನ್ನು ಖಾತೆಗೆ ವರ್ಗಾಯಿಸಲು ವ್ಯವಸ್ಥೆ ಮಾಡಲಾಗುವುದು. ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ ಅನುಮತಿ ನೀಡಿದ್ದು, ಮಳೆಗಾಲ ಮುಗಿದ ನಂತರ ಕಾಮಗಾರಿ ಕೈಗೆತ್ತಿಕೊಂಡು ರಸ್ತೆ ನಿರ್ಮಿಸಲಾಗುವುದು. ನಂತರ ಅರಣ್ಯ ಇಲಾಖೆ ಹಾಗೂ ಸೆಸ್ಕ್ ಅಧಿಕಾರಿಗಳು ಚೆರ್ಚಿಸಿ ಗ್ರಾಮಕ್ಕೆ ಶಾಶ್ವತ ರಸ್ತೆ ಹಾಗೂ ವಿದ್ಯುತ್‌ ಸೌಲಭ್ಯ ಕಲ್ಪಿಸಿಕೊಡುವುದರ ತೀರ್ಮಾನಿಸಲಿದ್ದಾರೆ. ಪ್ರತಿತಿಂಗಳ ಪಡಿತರವನ್ನು ವಾಹನದ ಮೂಲಕ ಮನೆ ಬಾಗಿಲಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗುವುದು’ ಎಂದರು.

ಆಶ್ರಮ ಶಾಲೆಯಲ್ಲಿ ನಡೆಯುತ್ತಿರುವ ವಿದ್ಯಾಗಮದ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ, ‘ಜನರಿಗೆ ಜಾಬ್ ಕಾರ್ಡ್ ವಿತರಣೆ ಮಾಡಿ ನರೇಗಾ ಅಡಿ ಉದ್ಯೋಗ, ಸೇವಾಮಿತ್ರ ಯೋಜನೆಯಡಿ ವೃದ್ಧಾಪ್ಯ ವೇತನವನ್ನು ವಿತರಿಸಲು ಮಾಡಲು ಅನುಕೂಲ ಕಲ್ಪಿಸಿಕೊಡಲಾಗುವುದು’ ಎಂದು ತಿಳಿಸಿದರು.

ಶಾಲಾ ಮಕ್ಕಳಿಗೆ ವಾಹನದ ವ್ಯವಸ್ಥೆ

ತುಳಸಿಕೆರೆ ಗ್ರಾಮದಲ್ಲಿ ನಡೆದ ಸಭೆಯಲ್ಲೂ ಸುತ್ತಮುತ್ತಲಿನ ಗ್ರಾಮಸ್ಥರು ಇಂತಹದೇ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಸುರೇಶ್‌ ಕುಮಾರ್‌ ಅವರು ಮಾತನಾಡಿ, ‘ನಾನು ಭೇಟಿ ನೀಡಿದ ಎಲ್ಲ ಗ್ರಾಮಗಳಲ್ಲೂ ಇದೇ ರೀತಿಯ ಸಮಸ್ಯೆಗಳಿವೆ. ಇಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು. ಅತಿ ಶೀಘ್ರದಲ್ಲಿ ಪರಿಹಾರ ಕಲ್ಪಿಸಲಾಗುವುದು. ಈ ಗ್ರಾಮಗಳಿಂದ ಮಹದೇಶ್ವರ ಬೆಟ್ಟ ಶಾಲೆಗೆ ತೆರಳುವ ಶಾಲಾ ಮಕ್ಕಳಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿಕೊಡಲಾಗುವುದು. ಮನೆ ಇಲ್ಲದವರಿಗೆ ಮನೆ, ಶಾಲಾ ದುರಸ್ತಿ, ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದರೆ ಶಿಕ್ಷಕರನ್ನೂ ನೇಮಕ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಸಣ್ಣ ಪುಟ್ಟ ಕೆಲಸಗಳನ್ನು ಈ ಕೂಡಲೇ ಮಾಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು, ತಹಶೀಲ್ದಾರ್‌ ನಾಗರಾಜು, ಅರಣ್ಯಾಧಿಕಾರಿಗಳು, ಕಂದಾಯ ಅಧಿಕಾರಿಗಳು, ಲೋಕೋಪ‍ಯೋಗಿ ಇಲಾಖೆ ಅಧಿಕಾರಿಗಳು, ಗ್ರಾಮಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT