ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಆಚರಣೆ, ಆಹಾರ ಪದ್ಧತಿ ಹತ್ತಿಕ್ಕಲು ಯತ್ನ: ಮಹಾದೇವ ಶಂಕನಪುರ

ಕೊಳ್ಳೇಗಾಲ: ಚಾಮರಾಜನಗರ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಕಳವಳ
Last Updated 8 ಫೆಬ್ರುವರಿ 2023, 13:46 IST
ಅಕ್ಷರ ಗಾತ್ರ

ಕೊಳ್ಳೇಗಾಲ (ಕುಮಾರ ನಿಜಗುಣ ವೇದಿಕೆ): ‘ಮುಕ್ತ ಅನ್ನ, ಆಹಾರ ಅವರವರ ಇಚ್ಛೆ ಮತ್ತು ಹಕ್ಕು. ಆದರೆ, ನಮ್ಮ ಜಿಲ್ಲೆಯ ಮಹತ್ವದ ಜಾತ್ಯತೀತ ಮತ್ತು ಸಹಿಷ್ಣುತೆಗೆ ಧಕ್ಕೆಯಾಗುವ ಸ್ಥಿತಿ ಎದುರಾಗಿದೆ. ಜಿಲ್ಲೆಯ ಬಹುಸಂಖ್ಯಾತರು ನಡೆಸುವ ಜಾತ್ರೆಗಳು ಮತ್ತು ಅಲ್ಲಿನ ಧಾರ್ಮಿಕ ಆಚರಣೆ, ಊಟೋಪಚಾರಗಳನ್ನು ಕಾನೂನು ಮುಂದಿಟ್ಟು ದಮನ ಮಾಡುವ ಬೆಳವಣಿಗೆ ನಡೆಯುತ್ತಿದೆ’ ಎಂದು ಚಾಮರಾಜನಗರ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಮಹಾದೇಹ ಶಂಕನಪುರ ಬುಧವಾರ ಕಳವಳ ವ್ಯಕ್ತಪಡಿಸಿದರು.

ನಗರದ ಎಂಜಿಎಸ್‌ವಿ ಮೈದಾನದಲ್ಲಿ ಉದ್ಘಾಟನೆಗೊಂಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಜಾತಿ ವಿನಾಶ, ಜಾತ್ಯತೀತತೆ, ಸಮಾನತೆ, ಸಹಿಷ್ಣುತೆ, ಏಕತೆ, ಸಹಬಾಳ್ವೆ... ನಮ್ಮ ಜಾನಪದ ಮಹಾಕಾವ್ಯಗಳ ಆಶಯಗಳು. ನೀಲಗಾರ ದೀಕ್ಷೆ, ಕಂಸಾಳೆ ಗುಡ್ಡರ ದೀಕ್ಷೆ ಮೊದಲಾದವು ಜಾತಿ ವಿನಾಶ ಹಾಗೂ ಶರಣರ ವಚನ ಚಳವಳಿಯ ಆಶಯಗಳ ರೂಪ. ಆದರೆ ಚಿಕ್ಕಲ್ಲೂರು, ಶಿವನಸಮುದ್ರ, ಬಿಳಿಗಿರಿರಂಗನಬೆಟ್ಟ, ಕುರುಬನಕಟ್ಟೆ, ಬೂದುಬಾಳು, ಏಳುದಂಡು ಮುನೇಶ್ವರ.. ಹೀಗೆ ಜಿಲ್ಲೆಯ ಜಾತ್ರಾ ಕೇಂದ್ರಗಳಲ್ಲಿನ ಆಚರಣೆಗಳು ಮತ್ತು ಆಹಾರ ಪದ್ಧತಿಗಳನ್ನು ಹತ್ತಿಕ್ಕುವ ಬೆಳವಣಿಗೆಗಳು ಸಂವಿಧಾನ ಬದ್ಧ, ಪ್ರಜಾಸತ್ತಾತ್ಮಕ ಹಕ್ಕುಗಳ ವಿರೋಧವಾಗುತ್ತದೆ. ಇದು ಖಂಡನೀಯ' ಎಂದರು.

‘ಚಿಕ್ಕಲ್ಲೂರು ಜಾತ್ರೆಯಲ್ಲಿ‌ ನಡೆಯುವ ಪಂಕ್ತಿ ಸೇವೆ ಎಂಬ ಸಹಪಂಕ್ತಿ ಭೋಜನದ ಆಚರಣೆ ಜಾತ್ಯತೀತ ಮತ್ತು ಸೌಹಾರ್ದತೆ ಎಂಬ ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸುವಂತದ್ದಾಗಿದೆ. ಪ್ರಾಣಿ ಬಲಿ ತಡೆ ಹಾಗೂ ಆ ಸಂಬಂಧದ ಕಾಯ್ದೆ ಜಾರಿಯಾಗಬೇಕು ನಿಜ. ಆದರೆ, ಅದು ದುರುಪಯೋಗವಾಗಬಾರದು. ತಪ್ಪಾಗಿ ಅರ್ಥೈಸಲೂಬಾರದು. ಸರ್ಕಾರದ ವೇದಿಕೆಗಳಲ್ಲಿ ಈ ಬಗ್ಗೆ ಧ್ವನಿ ಎತ್ತಬೇಕಾದುದು ಜಿಲ್ಲೆಯ ಜನಪ್ರತಿನಿಧಿಗಳ ಜವಾಬ್ದಾರಿ ಮತ್ತು ಕರ್ತವ್ಯ' ಎಂದರು.

‘ಈ ಮಣ್ಣಿನಲ್ಲಿ ಮಂಟೇಸ್ವಾಮಿ, ಮಾದೇಶ್ವರರ ಕರುಣೆ, ಪ್ರೀತಿ, ಮೈತ್ರಿ ಜಾತ್ಯತೀತತೆ, ಸಮಾನತೆಯ ಮಹಿಮೆ ಇದೆ. ಇದು ಶರಣರ ವಚನ ಚಳವಳಿ ಮುಂದುವರಿದ ಜಾಗೃತ ಭೂಮಿ. ಆದರೆ, ಇಂದು ಅಸಹಿಷ್ಣುತೆ, ಅಸ್ಕೃಶ್ಯತೆ, ಜಾತೀಯತರ, ಅಮಾನವೀಯತೆ ತಾಂಡವವಾಡುತ್ತಿದೆ. ಇವು ಪ್ರಜಾಪ್ರಭುತ್ವ, ಸಂವಿಧಾನ ಕಾನೂನುಗಳನ್ನೇ ಅಣಕಿಸುತ್ತಿವೆ’ ಎಂದು ಹೇಳಿದ ಅವರು, ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರದಲ್ಲಿ ಇತ್ತೀಚೆಗೆ ನಡೆದ ಅಸ್ಪೃಶ್ಯತೆ ಆಚರಣೆ, ಗುಂಡ್ಲುಪೇಟೆಯಲ್ಲಿ ಮೂರು ವರ್ಷಗಳ ಹಿಂದೆ ನಡೆದಿದ್ದ ಯುವಕನ ಬೆತ್ತಲೆ ಮೆರವಣಿಗೆ, ಕಂದಹಳ್ಳಿ–ಸಂತೇಮರಹಳ್ಳಿ ದಲಿತರ ಜೋಡಿ ಕೊಲೆ, ಸುಳ್ವಾಡಿ ಪ್ರಕರಣಗಳ‌ನ್ನು ಉಲ್ಲೇಖಿಸಿದರು.

‘ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಸಂವಿಧಾನ ಕಾನೂನು ಜಾರಿಯಲ್ಲಿದ್ದರೂ ಶಾಸಕರೆಂಬ ಶಾಸನ ಕರ್ತೃಗಳಿದ್ದರೂ ನಮ್ಮ ವ್ಯವಸ್ಥೆಗೆ ಏನಾಗಿದೆ? ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಇರುವುದು ಸಂವಿಧಾನ ಜಾರಿಗಾಗಿ. ಈ ವ್ಯವಸ್ಥೆ ಬದಲಾಗದೇ ಹೋದರೆ ಡಾ.ಬಿ.ಆರ್‌.ಅಂಬೇಡ್ಕರ್‌ ನುಡಿದಿರುವಂತೆ ಅಸಮಾನತೆಗೆ ಒಳಗಾದವರು ಈ ವ್ಯವಸ್ಥೆಯನ್ನು ಧ್ವಂಸ ಮಾಡಬಹುದು. ಕುಲೇಳು ಹದಿನೆಂಟು ಜಾರಿಗಳು ಏಕವಾಗಿ ಸಮಾನವಾಗಿ ಬದುಕುವುದನ್ನು ಕಲಿಯಬೇಕು. ಇದೇ ಮಾದೇಶ್ವರ, ಮಂಟೇಸ್ವಾಮಿ, ಸಿದ್ಧಪ್ಪಾಜಿ ಹಾಗೂ ಇಂದಿನ ಸಂವಿಧಾನ ಸಾರುವ ಸಂದೇಶಗಳು ಮತ್ತು ಆಶಯಗಳೂ ಆಗಿವೆ’ ಎಂದರು.

ಜಿಲ್ಲೆಗೂ ವಿಶೇಷ ಸ್ಥಾನಮಾನ ಕೊಡಿ

‘ಸಂವಿಧಾನದ 371–ಜೆ ಕಲಂ ತಿದ್ದುಪಡಿಯಿಂದಾಗಿ ಹೈದರಬಾದ್ ಕರ್ನಾಟಕ/ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ದೊರೆತಿರುವ ವಿಶೇಷ ಸ್ಥಾನಮಾನ, ಸೌಲಭ್ಯಗಳನ್ನು ಚಾಮರಾಜನಗರ ಜಿಲ್ಲೆಗೂ ಅನ್ವಯಿಸಬೇಕು. ಚಾಮರಾಜಗರ ಜಿಲ್ಲೆಯೂ ಹಿಂದುಳಿದ ಗಡಿ ಜಿಲ್ಲೆ ಹಾಗೂ ಬರಪರಿಸ್ಥಿತಿಯನ್ನೂ ಎದುರಿಸುತ್ತಿದ್ದು 371-ಜೆ ಕಲಂಗೆ ಒಳಪಡುವ ಎಲ್ಲ ಅರ್ಹತೆಗಳು ಜಿಲ್ಲೆಗೆ ಇದೆ. ಈ ಬೇಡಿಕೆಯನ್ನು ಸರ್ಕಾರ ಹಾಗೂ ಜನಪ್ರತಿನಿಧಿಗಳು ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂಬುದು ಜಿಲ್ಲೆಯ ಜನರ ಕೂಗು’ ಎಂದು ಮಹಾದೇವ ಶಂಕನಪುರ ಹೇಳಿದರು.

‘ಸಿಂಗಾನಲ್ಲೂರು-ಗಾಜನೂರು ಡಾ.ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರ ಸ್ವಂತ ಊರುಗಳು. ಅವರ ಕುಟುಂಬ ವರ್ಗದವರ ನೆರವಿನೊಂದಿಗೆ ಅವರ ಮನೆಗಳನ್ನು ಸ್ಮಾರಕವಾಗಿಸುವುದು. ಹಾಗೂ ಜಿಲ್ಲೆಯ ಆಸಕ್ತ ರಂಗಭೂಮಿ-ಜಾನಪದ ನಾಟಕ-ಕಿರುತೆರೆ ನಟನ ಆಸಕ್ತರಿಗೆ ನೆರವಾಗುವಂತೆ ಡಾ.ಪುನೀತ್ ರಾಜಕುಮಾರ್ ಹೆಸರಲ್ಲಿ ತರಬೇತಿ ಕೇಂದ್ರವನ್ನು ಆರಂಭಿಸಬೇಕು’ ಎಂದು ಅವರು ಸಲಹೆ ನೀಡಿದರು.

ಸಮ್ಮೇಳನ ಸರ್ವಾಧ್ಯಕ್ಷರ ಸಲಹೆಗಳು

* ಜಿಲ್ಲೆಯ ಗಡಿ ಭಾಗಗಳಲ್ಲಿರುವ ಸರ್ಕಾರಿ-ಖಾಸಗಿ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕೆ ಹಾಗೂ ಕನ್ನಡ ಮಾಧ್ಯಮ ಅನುಷ್ಠಾನದ ಬಗ್ಗೆ ಜಾಗೃತಿ ಮೂಡಿಸಬೇಕು.

* ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಗಣನೀಯ ಕಡಿಮೆಯಾಗುತ್ತಿರುವುದು ಅತ್ಯಂತ ಕಳವಳಕಾರಿ. ಇದಕ್ಕೆ ಕಾರಣವನ್ನು ಕಂಡುಕೊಳ್ಳುವುದು ಅದನ್ನು ನಿವಾರಿಸಬೇಕು.

* ಜಿಲ್ಲೆಯಲ್ಲಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಜಾನಪದ ವಿವಿಯ ಪ್ರಾದೇಶಿಕ ಕೇಂದ್ರ, ಹಂಪಿ ಕನ್ನಡ ವಿವಿಯ ದೇಸಿ ಸಂಸ್ಕೃತಿ ಅಧ್ಯಯನ ಕೇಂದ್ರ ಮತ್ತು ಮಂಟೇಸ್ವಾಮಿ ಅಧ್ಯಯನ ಪೀಠಗಳು ಈಗಾಗಲೇ ಸ್ಥಾಪನೆಯಾಗಿ ಕೆಲಸ ಮಾಡುತ್ತಿವೆ. ಇವು ವಿದ್ಯಾರ್ಥಿಗಳು, ಸಂಶೋಧಕರು, ಸಾಹಿತ್ಯ ಮತ್ತು ಸಂಸ್ಕೃತಿ ಆಸಕ್ತರು, ಕಲಾವಿದರು ಹಾಗೂ ವಿದ್ವಾಂಸರುಗಳಿಗೆ ಇವುಗಳ ಪ್ರಯೋಜನ ಪಡೆಯಲು ಅನುಕೂಲವಾಗುವಂತೆ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಈ ಕೇಂದ್ರಗಳು ಕೆಲಸ ಮಾಡಬೇಕು.

* ಜಿಲ್ಲೆಯಲ್ಲಿ ಸ್ವತಂತ್ರವಾಗಿ ಅಸ್ತಿತ್ವಕ್ಕೆ ಬರುವ ವಿವಿಗೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾನಿಲಯ ಎಂದು ನಾಮಕರಣ ಮಾಡಬೇಕು.

* ಜಿಲ್ಲೆಯಾದ್ಯಂತ ಇರುವ ಸಂತರು, ಶರಣರ ಇರುವ ಶ್ರದ್ಧಾ ಕೇಂದ್ರಗಳನ್ನು ಸಂರಕ್ಷಿಸುವ, ಅಭಿವೃದ್ಧಿಪಡಿಸುವುದಕ್ಕಾಗಿ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಮಂಟೇಸ್ವಾಮಿ ನೀಲಗಾರ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು.

* ಜಿಲ್ಲೆಯ ರೈತರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು. ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುವ ಹಾಗೂ ವಾಸ ಮಾಡುವ ರೈತರಿಗೆ ಸಾಗುವಳಿ ಪತ್ರ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT