ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಫಲಿತಾಂಶ| ಚಾಮರಾಜನಗರ ಜಿಲ್ಲೆಗೆ ಹರ್ಷಿತ, ಪ್ರಿಯಾಂಕ, ಸುಮಾ ಪ್ರಥಮ

ದ್ವಿತೀಯ ಪಿಯು: ಕುಸಿದ ಫಲಿತಾಂಶ, ಜಿಲ್ಲೆಗೆ 18ನೇ ಸ್ಥಾನ ಶೇ 63,02 ಮಂದಿ ತೇರ್ಗಡೆ
Last Updated 18 ಜೂನ್ 2022, 15:48 IST
ಅಕ್ಷರ ಗಾತ್ರ

ಚಾಮರಾಜನಗರ: 2021–22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಕುಸಿದಿದೆ. ಶೇ 63.02ರಷ್ಟು ಫಲಿತಾಂಶ ದಾಖಲಾಗಿದೆ. ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ 18ನೇ ಸ್ಥಾನ ಸಿಕ್ಕಿದೆ.

ಜಿಲ್ಲೆಯಲ್ಲಿ 6,985 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 4,402 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲೆಯಲ್ಲಿರುವ 61 ಪಿಯು ಕಾಲೇಜುಗಳ ಪೈಕಿ ಚಾಮರಾಜನಗರದ ಬ್ರೈಟ್‌ ಪಿಯು ಕಾಲೇಜು ಮಾತ್ರ ಶೇ 100ರಷ್ಟು ಫಲಿತಾಂಶ ದಾಖಲಿಸಿದೆ.

ಕಳೆದ ವರ್ಷ ಕೋವಿಡ್‌ನಿಂದಾಗಿ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿತ್ತು. 2020ನೇ ಸಾಲಿನ ಫಲಿತಾಂಶಕ್ಕೆ (ಶೇ 69.29) ಹೋಲಿಸಿದರೆ, ಈ ಬಾರಿ ಜಿಲ್ಲೆಯ ಫಲಿತಾಂಶದಲ್ಲಿ ಶೇ 6.27ರಷ್ಟು ಕುಸಿತ ಕಂಡು ಬಂದಿದೆ. ರಾಜ್ಯ ಮಟ್ಟದಲ್ಲಿ ಜಿಲ್ಲೆಯ ಸ್ಥಾನದಲ್ಲೂ ಆರು ಸ್ಥಾನ ಇಳಿಕೆಯಾಗಿದೆ. 2020ರಲ್ಲಿ 12ನೇ ಸ್ಥಾನದಲ್ಲಿತ್ತು.

ಬಾಲಕಿಯರ ಸಾಧನೆ: ವಿಜ್ಞಾನ, ವಾಣಿಜ್ಯ ಹಾಗೂ ಕಲಾ... ಈ ಮೂರೂ ವಿಭಾಗಗಳಲ್ಲಿ ವಿದ್ಯಾರ್ಥಿನಿಯರೇ ಜಿಲ್ಲಾ ಮಟ್ಟದಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಗಳಿಸಿದ್ದಾರೆ. ಅದರಲ್ಲೂ, ಸಾಧಕ ಆರು ವಿದ್ಯಾರ್ಥಿಗಳ ನಾಲ್ವರು ಕೊಳ್ಳೇಗಾಲದವರು. ಮೂವರು ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು.

600ಕ್ಕೆ 591 ಅಂಕಗಳನ್ನು (98.5%) ಗಳಿಸಿರುವ ಕೊಳ್ಳೇಗಾಲದ ನಿಸರ್ಗ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತ ಎಸ್‌. ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾರೆ.

ಚಾಮರಾಜನಗರದ ಬ್ರೈಟ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕಪಾಣಿ ಡಿ. 589 ಅಂಕಗಳನ್ನು ಗಳಿಸಿ (ಶೇ 98.16) ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಗುಂಡ್ಲುಪೇಟೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸುಮಾ ಎಸ್‌. ಕಲಾ ವಿಭಾಗದಲ್ಲಿ 600ಕ್ಕೆ 569 ಅಂಕಗಳನ್ನು ಗಳಿಸಿ ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ಕೊಳ್ಳೇಗಾಲದ ನಿಸರ್ಗ ಪದವಿ ಪೂರ್ವ ಕಾಲೇಜಿನ ಮೇಘನಾ ಎಂ. ವಿಜ್ಞಾನ ವಿಷಯದಲ್ಲಿ 587 ಅಂಕಗಳನ್ನು ಗಳಿಸಿ ಜಿಲ್ಲೆಗೆ ಎರಡನೇ ಸ್ಥಾನಿಯಾಗಿದ್ದಾರೆ.

ಅದೇ ಕಾಲೇಜಿನ ಸಿಂಚನ ಎನ್‌. ಅವರು ವಾಣಿಜ್ಯ ವಿಷಯದಲ್ಲಿ 585 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯರಾಗಿದ್ದಾರೆ.

ಕೊಳ್ಳೇಗಾಲದ ಜೆಎಸ್‌ಎಸ್‌ ಮಹಿಳಾ ಪದವಿ ಪೂರ್ವ ಕಾಲೇಜಿನ ಪೂರ್ಣಿಮಾ ಎಂ, ಅವರು ಕಲಾ ವಿಭಾಗದಲ್ಲಿ 568 ಅಂಕಗಳನ್ನು ಪಡೆದು ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಬಂದಿರುವ ಸುಮಾ ಅವರು ಗುಂಡ್ಲುಪೇಟೆಯ ಅಣ್ಣೂರು ಕೇರಿ ಗ್ರಾಮಸ ಸ್ವಾಮಿ ಹಾಗೂ ತಾಯಮ್ಮ ದಂಪತಿಯ ಪುತ್ರಿ. ಸ್ವಾಮಿ ಅವರು ವೃತ್ತಿಯಲ್ಲಿ ಗಾರೆ ಕೆಲಸ ಮಾಡುವವರು.

ಬಾಲಕರು ಮುಂದು: ಜಿಲ್ಲೆಯಲ್ಲಿ ಹೊಸಬರು6,985 ಪರೀಕ್ಷೆ ಬರೆದಿದ್ದಾರೆ. ಸಾಮಾನ್ಯವಾಗಿ ಫಲಿತಾಂಶವನ್ನು ಹೊಸ ವಿದ್ಯಾರ್ಥಿಗಳತೇರ್ಗಡೆಯ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಇಷ್ಟು ವಿದ್ಯಾರ್ಥಿಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರ ವಿವರಗಳು ಸದ್ಯಕ್ಕೆ ಸಿಕ್ಕಿಲ್ಲ.

ಹೊಸಬರು, ಪುನರಾವರ್ತಿತರು, ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 7,959 ಮಂದಿ ಈ ಬಾರಿ ಪರೀಕ್ಷೆ ಬರೆದಿದ್ದರು. ಈ ಪೈಕಿ 4,035 ಬಾಲಕರು ಹಾಗೂ 3,924 ಮಂದಿ ಬಾಲಕಿಯರು. ಇವರಲ್ಲಿ 73 ಖಾಸಗಿ ಅಭ್ಯರ್ಥಿಗಳು, 152 ಪುನರಾವರ್ತಿತರು ಸೇರಿದಂತೆ 4,627 ಮಂದಿ ತೇರ್ಗಡೆಯಾಗಿದ್ದಾರೆ. ಈ ಪೈಕಿ 1,948 ಬಾಲಕರು ಹಾಗೂ 2,679 ಬಾಲಕಿಯರು.

ಶೇ 100 ಫಲಿತಾಂಶ: ಚಾಮರಾಜನಗರದ ಬ್ರೈಟ್‌ ಪದವಿ ಪೂರ್ವ ಕಾಲೇಜಿನಲ್ಲಿರುವ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಎಲ್ಲ 66 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 100ರಷ್ಟು ಫಲಿತಾಂಶ ಪಡೆದಿದೆ. ಇಡೀ ಜಿಲ್ಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಯನ್ನೂ ಅದು ಪಡೆದಿದೆ.

ಕಲಾ ವಿಭಾಗದಲ್ಲಿ ಕಡಿಮೆ ಫಲಿತಾಂಶ

ಫಲಿತಾಂಶದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗಮಲ್ಲೇಶ್‌ ಅವರು, ‘ರಾಜ್ಯದಲ್ಲಿ ಬಹುತೇಕ ಎಲ್ಲ ಜಿಲ್ಲೆಗಳ ಫಲಿತಾಂಶ ಈ ಬಾರಿ ಕಡಿಮೆಯಾಗಿದೆ. ಜಿಲ್ಲೆಯಲ್ಲೂ ಕುಸಿದಿದೆ. ಕಲಾ ವಿಭಾಗದಲ್ಲಿ ಫಲಿತಾಂಶ ಕಡಿಮೆಯಾಗಿದ್ದರಿಂದ ಒಟ್ಟಾರೆ ಫಲಿತಾಂಶ ಕಡಿಮೆಯಾಗಿದೆ’ ಎಂದು ಹೇಳಿದರು.

ಬಹುತೇಕ ಖಾಸಗಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳು ಮಾತ್ರ ಇವೆ. ಸರ್ಕಾರಿ ಕಾಲೇಜುಗಳಲ್ಲಿ ಕಲಾ ವಿಭಾಗ ಸೇರಿದ ಮೂರು ವಿಷಯಗಳನ್ನು ಬೋಧನೆ ಮಾಡಲಾಗುತ್ತಿದೆ. ಕಲಾ ವಿಭಾಗದ ಫಲಿತಾಂಶ ಕಡಿಮೆಯಾಗಿರುವುದರಿಂ ಸರ್ಕಾರಿ ಕಾಲೇಜುಗಳಲ್ಲೂ ಫಲಿತಾಂಶ ಕಡಿಮೆಯಾಗಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT