ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ್‌–2: ಡಿಪಿಆರ್‌ ಬದಲಾವಣೆಗೆ ಒಲವು

ಚಾಮರಾಜನಗರ: ನಗರಸಭೆ ಸಾಮಾನ್ಯ ಸಭೆ– ವಿವಿಧ ವಿಷಯಗಳ ಬಗ್ಗೆ ಚರ್ಚೆ
Last Updated 24 ಜನವರಿ 2023, 16:44 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದಲ್ಲಿ ಕುಡಿಯುವ ನೀರನ್ನು ಪೂರೈಸುವುದಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದರು ₹102.85 ಕೋಟಿ ವೆಚ್ಚದ ಅಮೃತ್‌–2 ಯೋಜನೆಯ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ಬದಲಾವಣೆ ಮಾಡಬೇಕು ಎಂಬ ಅಭಿಪ್ರಾಯವನ್ನು ನಗರಸಭೆಯ ಸದಸ್ಯರು ಮಂಗಳವಾರ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷ ಸಿ.ಎಂ.ಆಶಾ ನಟರಾಜು ಅವರ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ₹276 ಕೋಟಿ ವೆಚ್ಚದ ನಗರಕ್ಕೆ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಅಮೃತ್‌–2 ಯೋಜನೆ ಪ್ರಸ್ತಾಪವಾಯಿತು.

ಯೋಜನೆಯ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಜಲಮಂಡಳಿಯ ಎಂಜಿನಿಯರ್‌ ಉಮೇಶಪ್ಪ, ‘ಮುಂದಿನ 30 ವರ್ಷಗಳಲ್ಲಿ ನಗರದ ಜನಸಂಖ್ಯೆಯ ಬೆಳವಣಿಗೆಯನ್ನು ಲೆಕ್ಕಹಾಕಿ, ಪ್ರತಿ ಮನೆಗೂ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಅಮೃತ್‌–2 ಜಾರಿಗೆ ಬಂದಿದ್ದು, ಕೇಂದ್ರ ಸರ್ಕಾರ ₹47.13 ಕೋಟಿ, ರಾಜ್ಯ ಸರ್ಕಾರ ₹37.7 ಕೋಟಿ ನೀಡಲಿದೆ. ಸ್ಥಳೀಯ ಸಂಸ್ಥೆ ₹9.43 ಕೋಟಿ ಭರಿಸಬೇಕು’ ಎಂದರು.

‘ಮಂಗಲದಿಂದ ಚಾಮರಾಜನಗರಕ್ಕೆ 8.50 ಕಿ.ಮೀ ಉದ್ದದ ಪೈಪ್‌ಲೈನ್‌ ಇದ್ದು, ಅದು ಹಾಳಾಗಿದ್ದರೆ ಅದನ್ನು ಸರಿಪಡಿಸುವುದು, ಶಿಥಿಲವಾಗಿರುವ ಟ್ಯಾಂಕ್ ತೆರವು ಮಾಡಿ, ಹೊಸ ಟ್ಯಾಂಕ್ ನಿರ್ಮಿಸಿ, ದಿನದ 24 ಗಂಟೆ ನೀರು ಸರಬರಾಜು ಮಾಡುವುದು ಯೋಜನೆ ಉದ್ದೇಶ’ ಎಂದರು.

ಬಿಜೆಪಿ ಸದಸ್ಯ ರಾಘವೇಂದ್ರ ಮಾತನಾಡಿ, ‘ಕೇವಲ ಪೈಪ್‌ಲೈನ್, ಜಾಕ್‌ವೆಲ್ ದುರಸ್ತಿಪಡಿಸುವ ಯೋಜನೆಗೆ ನಮ್ಮ ಒಪ್ಪಿಗೆ ಇಲ್ಲ. ₹276 ಕೋಟಿಯ ಕಾವೇರಿ ಕುಡಿಯುವ ನೀರು 2 ನೇ ಹಂತದ ಯೋಜನೆ ಅನುಷ್ಠಾನ ಮಾಡಬೇಕು ಎಂಬುದು ನಮ್ಮ ಒತ್ತಾಯ’ ಎಂದರು.

ಕಾಂಗ್ರೆಸ್‌ನ ಆರ್.ಎಂ.ರಾಜಪ್ಪ ಮಾತನಾಡಿ, ‘ಜಿಲ್ಲಾಉಸ್ತುವಾರಿ ಸಚಿವರು ನಗರಕ್ಕೆ ಬುಧವಾರ ನಗರಕ್ಕೆ ನೀಡಲಿದ್ದಾರೆ. ಅಮೃತ್ -2 ಯೋಜನೆಯ ಡಿಪಿಆರ್ ಬದಲಾವಣೆ ಮಾಡಬೇಕು ಎಂದು ಅವರಲ್ಲಿ ಮನವಿ ಮಾಡೋಣ. ಆ ಬಳಿಕ ಈ ಬಗ್ಗೆ ನಿರ್ಧಾರ ಮಾಡೋಣ’ ಎಂದು ಸಲಹೆ ನೀಡಿದರು. ಎಲ್ಲ ಸದಸ್ಯರು ಇದನ್ನು ಅನುಮೋದಿಸಿದರು.

ಎಲ್ಲ ವಾರ್ಡ್‌ಗಳಲ್ಲಿ ಖಾತಾ ಆಂದೋಲನ ಬೇಕು: ‘ನಗರಸಭೆಯ ಎಲ್ಲ31 ವಾರ್ಡ್‌ಗಳಲ್ಲೂ ಖಾತೆ ಆಂದೋಲನ ಮಾಡಬೇಕು. 7ನೇ ವಾರ್ಡ್‌ನಲ್ಲಿ ಮಾತ್ರ ಮಾಡಲಾಗಿದೆ. ದಾಖಲೆಗಳೆಲ್ಲ ಇರುವ ಕಡೆ ಆಂದೋಲನ ಮಾಡಿ ಪ್ರಯೋಜನ ಇಲ್ಲ. ದಾಖಲೆಗಳು ಇಲ್ಲದ ಕಡೆಗಳಲ್ಲಿ ಈ ಆಂದೋಲನ ಹಮ್ಮಿಕೊಳ್ಳಬೇಕು’ ಎಂದು ಪಕ್ಷೇತರ ಸದಸ್ಯ ಬಸವಣ್ಣ ಆಗ್ರಹಿಸಿದರು.

ಸದಸ್ಯರಾದ ಚಂದ್ರಶೇಖರ್‌, ಕಲೀಲ್‌ ಉಲ್ಲಾ ಈ ಮಾತಿಗೆ ಧ್ವನಿಗೂಡಿಸಿದರು.

ಆಯುಕ್ತ ಎಸ್‌.ವಿ.ರಾಮದಾಸ್‌ ಮಾತನಾಡಿ, ‘ಪ್ರಾಯೋಗಿಕವಾಗಿ 7ವೇ ವಾರ್ಡ್‌ನಲ್ಲಿ ಆಂದೋಲನ ಮಾಡಲಾಗಿದ್ದು, ಎಲ್ಲ ವಾರ್ಡ್‌ಗಳಿಗೂ ಇದನ್ನು ವಿಸ್ತರಿಸಲಾಗುವುದು’ ಎಂದು ಭರವಸೆ ನೀಡಿದರು.

ಸದಸ್ಯ ಎಂ.ಮಹೇಶ್‌ ಮಾತನಾಡಿ, ‘ಆರು ತಿಂಗಳಿಗೊಮ್ಮೆ ಸಾಮಾನ್ಯಸಭೆ ಮಾಡಿದರೆ ಪ್ರಯೋಜನ ಇಲ್ಲ. ಪ್ರತಿ ತಿಂಗಳೂ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು’ ಎಂದು ಒತ್ತಾಯಿಸಿದರು.

ಸದಸ್ಯ ಸುದರ್ಶನಗೌಡ ಮಾತನಾಡಿ, ‘ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಾಗಿವೆ. ಅಲ್ಲದೇ ಅಧಿಕಾರಿಗಳು ಭ್ರಷ್ಟಚಾರದಲ್ಲಿ ತೊಡಗಿವೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ನಗರಸಭೆಗೆ ಬರುವ ಆದಾಯಕ್ಕೆ ಕತ್ತರಿ ಬೀಳುತ್ತಿದೆ’ ಎಂದರು.

ಉಪಾಧ್ಯಕ್ಷೆ ಪಿ.ಸುಧಾ, ಸದಸ್ಯರು, ನಗರಸಭೆ ಸಿಬ್ಬಂದಿ ಇದ್ದರು.

‘ಫ್ಲೆಕ್ಸ್‌ಗೆ ಅವಕಾಶ ಕೊಡದಿರಿ’

ನಗರದಲ್ಲಿ ಈಚೆಗೆ ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಪ್ಲೆಕ್ಸ್‌ಗಳ ಅಳವಡಿಕೆ ಹೆಚ್ಚಾಗುತ್ತಿದ್ದು, ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜನದಟ್ಟಣೆಯಿರುವ ನಗರದ ಭುವನೇಶ್ವರಿ ವೃತ್ತದಿಂದ ರಾಮಸಮುದ್ರದವರಗೆ ಭಾರಿ ಗಾತ್ರದ ಫ್ಲೆಕ್ಸ್ ಅಳವಡಿಸಲಾಗುತ್ತಿದ್ದು, ಸಂಚಾರ ದೃಷ್ಟಿಯಿಂದ ಈ ರಸ್ತೆಯಲ್ಲಿ ಫ್ಲೆಕ್ಸ್ ಅಳವಡಿಕೆ ನಿಷೇಧಿಸಬೇಕು’ ಎಂದು ಸದಸ್ಯರು ಆಗ್ರಹಿಸಿದರು.

ಆಯುಕ್ತ ಎಸ್.ವಿ.ರಾಮದಾಸ್, ‘ನಿಗದಿತ ಶುಲ್ಕ ಪಾವತಿ ಮಾಡಿಸಿಕೊಂಡು, ಫ್ಲೆಕ್ಸ್ ಅಳವಡಿಕೆಗೆ ಅನುಮತಿ ನೀಡಲಾಗುತ್ತಿದೆ. ಒಂದೂವರೆ ತಿಂಗಳಲ್ಲಿ ನಗರಸಭೆಗೆ ₹88 ಸಾವಿರ ಸಂಗ್ರಹವಾಗಿದೆ. ಅಳವಡಿಸಿದ ಪ್ಲೆಕ್ಸ್ ತೆರವು ಮಾಡಲು ವಿಳಂಬಮಾಡಿದಲ್ಲಿ ಒಂದು ಫ್ಲೆಕ್ಸ್ ₹10 ರಂತೆ ದಂಡ ವಿಧಿಸಲಾಗುತ್ತಿದೆ’ ಎಂದರು.

ಸುದರ್ಶನಗೌಡ, ರಾಜಪ್ಪ ಮಾತನಾಡಿ, ‘ರಸ್ತೆಯ ಮಧ್ಯೆ ವಿಭಜಕಗಳೀಗೆ ಫ್ಲೆಕ್ಸ್‌ ಕಟ್ಟುವುದಕ್ಕೆ ನಿಷೇಧ ಹೇರಬೇಕು. ರಸ್ತೆಬದಿ ಕಟ್ಟಿಕೊಳ್ಳಲು ಅಭ್ಯಂತರವಿಲ್ಲ’ ಎಂದರು.

ಮೂಲಸೌಕರ್ಯಕ್ಕೆ ಆಗ್ರಹಿಸಿ ಸದಸ್ಯರ ಧರಣಿ

3ನೇ ವಾರ್ಡ್‌ನಲ್ಲಿರುವ ಆಶ್ರಯ ಬಡಾವಣೆಗೆ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ವಾರ್ಡ್‌ನ ಎಸ್‌ಡಿಪಿಐ ಸದಸ್ಯ ಮಹಮ್ಮದ್ ಅಮೀಕ್ ಸಭೆಯಲ್ಲಿ ಧರಣಿ ನಡೆಸಿದರು. ಸದಸ್ಯರಾದ ಎಂ.ಮಹೇಶ್, ತೌಸಿಯಾ ಬಾನು, ಕಲೀಲ್ ಉಲ್ಲಾ ಸೇರಿದಂತೆ ಇತರರು ಬೆಂಬಲ ಸೂಚಿಸಿದರು.

‘ಆಶ್ರಯ ಬಡಾವಣೆಯಲ್ಲಿ ಕುಡಿಯುವ ನೀರು ಒದಗಿಸಲು ಪೈಪ್‌ಲೈನ್ ಮಾಡಿ ನಾಲ್ಕು ವರ್ಷಗಳೇ ಆಗಿವೆ. ಆದರೆ, ಇಲ್ಲಿಯ ತನಕ ಕುಡಿಯುವ ನೀರಿನ ಪೂರೈಕೆ ಆಗಿಲ್ಲ. ಅಲ್ಲದೆ, ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ, ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ನಿವಾಸಿಗಳಿಗೆ ಅನನುಕೂಲವಾಗಿದೆ’ ಎಂದು ದೂರಿದರು.

ಆಯುಕ್ತರು ಹಾಗೂ ಇತರೆ ಸದಸ್ಯರ ಮನವೊಲಿಕೆಗೂ ಜಗ್ಗದ ಧರಣಿ ನಿರತರು ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸುವಂತೆ ಪಟ್ಟು ಹಿಡಿದರು. ಬಳಿಕ ಆಯುಕ್ತ ರಾಮದಾಸ್‌ ಭರವಸೆ ನೀಡಿದ ನಂತರ ಧರಣಿ ಅಂತ್ಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT