ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22 ಹಳ್ಳಿ ವ್ಯಾಪ್ತಿ: ಸರ್ಕಾರಿ ಪ್ರೌಢಶಾಲೆಯೇ ಇಲ್ಲ

ಚಾಮರಾಜನಗರ: ಘೋಷಣೆಯಾಗಿ ಉಳಿದ ಎಚ್‌ಡಿಕೆ ಭರವಸೆ, ಆರಂಭಕ್ಕೆ ಆಗ್ರಹ
Last Updated 15 ಆಗಸ್ಟ್ 2019, 19:04 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ಹಾಗೂ ಸುತ್ತಮುತ್ತಲಿನ 22 ಹಳ್ಳಿಗಳ ವ್ಯಾಪ್ತಿಯಲ್ಲಿ ಒಂದೂ ಸರ್ಕಾರಿ ಪ್ರೌಢಶಾಲೆ ಇಲ್ಲ.

ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ಸಂಭವಿಸಿದ್ದ ವಿಷ ಪ್ರಸಾದ ದುರಂತದ ಸಂತ್ರಸ್ತರಿಗೆ ಸಾಂತ್ವನ ಹೇಳುವುದಕ್ಕಾಗಿ ಕಳೆದ ಡಿಸೆಂಬರ್‌ನಲ್ಲಿ ಸುಳ್ವಾಡಿಗೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, 2019–20ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಪ್ರೌಢಶಾಲೆ ಆರಂಭಿಸುವುದಾಗಿ ಭರವಸೆ ನೀಡಿದ್ದರು.

ಶೈಕ್ಷಣಿಕ ವರ್ಷ ಆರಂಭಗೊಂಡು ಎರಡೂವರೆ ತಿಂಗಳು ಕಳೆದಿವೆ. ಇನ್ನು ಈ ವರ್ಷ ಆರಂಭವಾಗುವ ಸಾಧ್ಯತೆ ಕ್ಷೀಣವಾಗಿದೆ. ತಮ್ಮ ಊರಿಗೂ ಸರ್ಕಾರಿ ಪ್ರೌಢಶಾಲೆಯ ಭಾಗ್ಯ ಬಂತು ಎಂದು ಸಂತಸಪಟ್ಟಿದ್ದ ಜನರ ನಿರೀಕ್ಷೆ ಹುಸಿಯಾಗಿದೆ.

ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 22 ಹಳ್ಳಿಗಳು ಬರುತ್ತವೆ. ಈ ಭಾಗದಲ್ಲಿ ಮಾರ್ಟಳ್ಳಿಯೇ ದೊಡ್ಡ ಊರು. ಅಂದಾಜು 24,600 ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ ಲಿಂಗಾಯತರು, ಬೇಡಗಂಪಣರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪಡೆಯಾಚ್ಚಿ ಗೌಂಡರ್‌, ಲಂಬಾಣಿ ಹಾಗೂ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಮಾರ್ಟಳ್ಳಿ, ವಡ್ಡರದೊಡ್ಡಿ, ಸುಳ್ವಾಡಿ ಮತ್ತು ಸಂದನಪಾಳ್ಯದಲ್ಲಿ ಖಾಸಗಿ ಪ್ರೌಢಶಾಲೆಗಳಿವೆ. ಈ ಭಾಗದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮಕ್ಕಳು, ಪ್ರೌಢ ಶಿಕ್ಷಣಕ್ಕಾಗಿ ಈ ಶಾಲೆಗಳನ್ನೇ ಅವಲಂಬಿಸಿದ್ದಾರೆ.20 ಕಿ.ಮೀ ದೂರದಲ್ಲಿರುವ ರಾಮಾಪುರ, 13 ಕಿ.ಮೀ ದೂರದಲ್ಲಿ ಕೌದಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆಗಳಿವೆ. ಆದರೆ, ಇಲ್ಲಿಗೆ ಸಾರಿಗೆ ಸಂಸ್ಥೆಯ ಬಸ್‌ಗಳ ಸೌಲಭ್ಯ ಇಲ್ಲ. ಖಾಸಗಿ ಬಸ್‌ ಅಥವಾ ಆಟೊಗಳನ್ನೇ ಅವಲಂಬಿಸಬೇಕಾಗಿದೆ.

‘ಕುಮಾರಸ್ವಾಮಿ ಅವರ ಮಾತಿನ ಮೇಲೆ ಭರವಸೆ ಇತ್ತು. ಆದರೆ, ಅದು ಘೋಷಣೆಯಷ್ಟೇ ಆಗಿ ಉಳಿದಿದೆ. ಖಾಸಗಿ ಪ್ರೌಢಶಾಲೆಗಳು ಇರುವುದರಿಂದ ಇಲ್ಲಿನ ಮಕ್ಕಳು ಹೇಗೋ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಬಡ ಕುಟುಂಬಗಳಿಗೆ ಖಾಸಗಿ ಶಾಲೆಯ ಶುಲ್ಕ ಭರಿಸುವುದು ಕಷ್ಟವಾಗುತ್ತದೆ’ ಎಂದು ಮಾರ್ಟಳ್ಳಿಯ ಸಾಮಾಜಿಕ ಕಾರ್ಯಕರ್ತ ಜಾನ್‌ ಡಾನ್‌ ಬಾಸ್ಕೊ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಭಾಗದಲ್ಲಿ ಬಡವರು ಹೆಚ್ಚಿದ್ದಾರೆ. ಸರ್ಕಾರಿ ಪ್ರೌಢಶಾಲೆ ಇದ್ದರೆ ಮಕ್ಕಳಿಗೆ ಬಿಸಿಯೂಟ ಸೇರಿದಂತೆ ಎಲ್ಲ ಸೌಲಭ್ಯಗಳೂ ಸಿಗುತ್ತವೆ. ಪೋಷಕರಿಗೂ ಹೊರೆಯಾಗುವುದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ, ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಹೇಳಿದರು.

ಸಲ್ಲಿಕೆಯಾಗದ ಪ್ರಸ್ತಾವ

ಪ್ರೌಢಶಾಲೆ ಆರಂಭಿಸುವ ಬಗ್ಗೆ ಕುಮಾರಸ್ವಾಮಿ ಭರವಸೆ ನೀಡಿದ ನಂತರದಲ್ಲಿ ಆರು ತಿಂಗಳು ಸಮ
ಯವಿತ್ತು. ಆದರೆ, ಈ ಅವಧಿಯಲ್ಲಿ ಜಿಲ್ಲಾಡಳಿತವಾಗಲೀ, ಜನಪ್ರತಿನಿಧಿಗಳಾಗಲೀ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿಲ್ಲ.

‘ಪ್ರೌಢಶಾಲೆ ಆರಂಭಿಸುವ ವಿಚಾರದಲ್ಲಿ ಪ್ರಗತಿಯಾಗಿಲ್ಲ. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯನ್ನು 10ನೇ ತರಗತಿಯವರೆಗೆ ಮೇಲ್ದರ್ಜೆಗೇರಿಸಲು ಅವಕಾಶವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಮಂಜುನಾಥ್‌ ತಿಳಿಸಿದರು.

ಮಾರ್ಟಳ್ಳಿ, ಅದರ ಸುತ್ತಮುತ್ತಲಿರುವ ಶಾಲೆ ಸ್ಥಿತಿಗತಿ, ಮಕ್ಕಳ ವಿವರ ಲಭ್ಯವಿದೆ. ಇಲಾಖೆ ಅನುಮತಿ ನೀಡಿದ ತಕ್ಷಣ ಶಾಲೆ ಆರಂಭಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT