ಗುರುವಾರ , ಏಪ್ರಿಲ್ 22, 2021
30 °C
ಮತ್ತೆ ಕುಸಿದ ಈರುಳ್ಳಿ ಬೆಲೆ, ಹಬ್ಬದ ಬಳಿಕ ಇಳಿದ ಹೂವುಗಳ ಧಾರಣೆ

ಮಾರುಕಟ್ಟೆಯಲ್ಲೀಗ ದ್ರಾಕ್ಷಿ ಭರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಹಣ್ಣುಗಳ ಮಾರುಕಟ್ಟೆಗೆ ಎರಡು ವಾರಗಳಿಂದ ಭಾರಿ ಪ್ರಮಾಣದಲ್ಲಿ ದ್ರಾಕ್ಷಿ ಆವಕವಾಗುತ್ತಿದ್ದು, ಎಲ್ಲಿ ನೋಡಿದರಲ್ಲಿ ವ್ಯಾಪಾರಿಗಳು ತಳ್ಳು ಗಾಡಿಗಳಲ್ಲಿ ದ್ರಾಕ್ಷಿ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. 

ಮಾರುಕಟ್ಟೆಯಲ್ಲಿ ಮೂರು ಬಗೆಯ ದ್ರಾಕ್ಷಿಗಳು ಲಭ್ಯವಿದ್ದು, ಕಪ್ಪು (ಕಡು ನೀಲಿ ಬಣ್ಣ) ದ್ರಾಕ್ಷಿ, ಎರಡು ತಳಿಯ ಬಿಳಿ ದ್ರಾಕ್ಷಿಗಳು ಮಾರಾಟವಾಗುತ್ತಿವೆ. ಎಲ್ಲವೂ ಸೀಡ್‌ಲೆಸ್‌ ದ್ರಾಕ್ಷಿಗಳು. ಶರದ್ ತಳಿಯ ಕಪ್ಪು ದ್ರಾಕ್ಷಿಗೆ ಕೆಜಿಗೆ ₹160 ಬೆಲೆ ಇದೆ (ಹಾಪ್‌ ಕಾಮ್ಸ್‌ನಲ್ಲಿ). ಆಕಾರದಲ್ಲಿ ಸ್ವಲ್ಪ ಉದ್ದವಾಗಿರುವ ಸೋನಕಾ ತಳಿಯ ಬಿಳಿ ಸೀಡ್‌ಲೆಸ್‌ ದ್ರಾಕ್ಷಿಗೆ ಕೆಜಿಗೆ ₹60ರಿಂದ ₹80 ಇದೆ. ಗಾತ್ರದಲ್ಲಿ ಚಿಕ್ಕದಾಗಿ ಗುಂಡಗಾಗಿರುವ ಸ್ಥಳೀಯ ತಳಿಯ ದ್ರಾಕ್ಷಿಗೆ ಕೆಜಿಗೆ ₹60 ಇದೆ.  

ಕಪ್ಪು ದ್ರಾಕ್ಷಿ ದುಬಾರಿಯಾಗಿರುವುದರಿಂದ ಬೇಡಿಕೆ ಕಡಿಮೆ. ಸೋನಕಾ ತಳಿಯ ಬಿಳಿ ದ್ರಾಕ್ಷಿಗೆ ಹೆಚ್ಚು ಬೇಡಿಕೆ ಕಂಡು ಬರುತ್ತಿದೆ. 

‘ದ್ರಾಕ್ಷಿ ಬೆಳೆಯ ಋತು ಆರಂಭವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಕಪ್ಪು ದ್ರಾಕ್ಷಿ ಹಾಗೂ ಸೋನಕಾ ತಳಿ ದ್ರಾಕ್ಷಿಗಳನ್ನು ಮಾರಾಟ ಮಾಡುತ್ತಿದ್ದೇವೆ. ಇವೆರಡೂ ಸಿಹಿಯಾಗಿದ್ದು, ಇನ್ನೊಂದು ಸ್ಥಳೀಯ ತಳಿ ಸ್ವಲ್ಪ ಹುಳಿಯಾಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಟೊಮೆಟೊ, ಈರುಳ್ಳಿ ಅಗ್ಗ: ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೊ, ಈರುಳ್ಳಿ ಬೆಲೆ ಕೆಜಿಗೆ ₹5 ಕಡಿಮೆಯಾಗಿದೆ. ಕಳೆದ ವಾರ ಟೊಮೆಟೊ ಕೆಜಿಗೆ ₹20 ಇತ್ತು.

ಈರುಳ್ಳಿ ಬೆಲೆ ವಾರದಿಂದ ವಾರಕ್ಕೆ ಕಡಿಮೆಯಾಗುತ್ತಿದೆ. ಕಳೆದ ವಾರ ಹಾಪ‍್‌ಕಾಮ್ಸ್‌ನಲ್ಲಿ ₹30 ಇತ್ತು. ಈ ವಾರ ₹25 ಆಗಿದೆ. ಬೆಂಡೆಕಾಯಿಯ ಬೆಲೆಯಲ್ಲೂ ₹10 ಇಳಿಕೆಯಾಗಿದೆ. ಸೋಮವಾರ ಹಾಪ್‌ಕಾಮ್ಸ್‌ನಲ್ಲಿ ಬೆಂಡೇಕಾಯಿ ಕೆಜಿಗೆ ₹40ಕ್ಕೆ ಮಾರಾಟವಾಗುತ್ತಿತ್ತು. 

ಉಳಿದಂತೆ ಕ್ಯಾರೆಟ್ (₹20), ಬೀನ್ಸ್‌ (₹40), ಹಸಿ ಮೆಣಸಿನಕಾಯಿ (₹30–₹40), ದಪ್ಪಮೆಣಸಿನಕಾಯಿ (₹40) ಬೆಲೆಗಳಲ್ಲಿ ವ್ಯತ್ಯಾಸವಾಗಿಲ್ಲ. 

ದಾಳಿಂಬೆ ದುಬಾರಿ: ಹಣ್ಣುಗಳ ಪೈಕಿ ದಾಳಿಂಬೆ ಬೆಲೆ ₹20 ಹೆಚ್ಚಾಗಿದೆ. ಉಳಿದ ಹಣ್ಣುಗಳ ಧಾರಣೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ. 

ಮಾಂಸದ ಮಾರುಕಟ್ಟೆಯಲ್ಲೂ ಹೆಚ್ಚಿನ ವ್ಯಾತ್ಯಾಸ ಕಂಡು ಬಂದಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಚಿಕನ್‌ ಬೆಲೆ ಕೆಜಿಗೆ ₹140ರಿಂದ ₹150ರವರೆಗೆ ಇದೆ. ಮಟನ್‌ ಬೆಲೆ ₹560 ಇದೆ.

ಹೂವಿನ ಬೆಲೆ ಕುಸಿತ 

ಮಹಾಶಿವರಾತ್ರಿ ಹಬ್ಬದ ಬಳಿಕ ಹೂವುಗಳಿಗೆ ಬೇಡಿಕೆ ಕುಸಿದಿದ್ದು, ಧಾರಣೆ ಇಳಿಮುಖವಾಗಿದೆ. 

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕಳೆದ ವಾರ ಕನಕಾಂಬರಕ್ಕೆ ಕೆಜಿಗೆ ₹500ರಿಂದ ₹600 ಇತ್ತು. ಈ ವಾರ ₹200ಕ್ಕೆ ಇಳಿದಿದೆ. ₹500ರವರೆಗಿದ್ದ ಕಾಕಡದ ಬೆಲೆ ₹160ಕ್ಕೆ ಕುಸಿದಿದೆ. ₹160 ಇದ್ದ ಸೇವಂತಿಗೆಗೆ ಸೋಮವಾರ ₹100–₹120 ಇತ್ತು. ಚೆಂಡು ಹೂವು ಕೆಜಿಗೆ ₹30 ಹಾಗೂ ಸುಗಂಧರಾಜ ₹60ರಿಂದ ₹80ರವರೆಗೆ ಬೆಲೆ ಇದೆ. 

‘ಶಿವರಾತ್ರಿ ಹಬ್ಬದ ಸಮಯದಲ್ಲಿ ಹೂವಿಗೆ ಹೆಚ್ಚು ಬೇಡಿಕೆ ಇದ್ದುದರಿಂದ ಬೆಲೆಯೂ ಹೆಚ್ಚಳವಾಗಿತ್ತು. ಹಬ್ಬದ ನಂತರ ಬೇಡಿಕೆ ಇಲ್ಲ. ಯುಗಾದಿವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ. ಧಾರಣೆಯಲ್ಲಿ ಸಣ್ಣ ಪ್ರಮಾಣದಲ್ಲಿ ಏರಿಳಿತ ಕಂಡು ಬರಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.