ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ ನಗರಸಭೆ ಚುನಾವಣೆ: ’ಕೈ’ ಮೇಲಾಗುವುದೋ; ‘ಕಮಲ’ ಅರಳುವುದೋ?

Published : 9 ಸೆಪ್ಟೆಂಬರ್ 2024, 6:41 IST
Last Updated : 9 ಸೆಪ್ಟೆಂಬರ್ 2024, 6:41 IST
ಫಾಲೋ ಮಾಡಿ
Comments

ಚಾಮರಾಜನಗರ: ಚಾಮರಾಜನಗರ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸೆ.9ರಂದು ಚುನಾವಣೆ ನಿಗದಿಯಾಗಿದ್ದು, ಅಧಿಕಾರ ಗದ್ದುಗೆ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಅಧಿಕಾರ ಹಿಡಿಯಲು ಸಂಖ್ಯಾಬಲವೇ ನಿರ್ಣಾಯಕವಾಗಿರುವುದರಿಂದ ಮ್ಯಾಜಿಕ್ ನಂಬರ್ ತಲುಪಲು ರಾಜಕೀಯ ಪಕ್ಷಗಳು ಕೊನೆಯ ಕ್ಷಣದ ಕಸರತ್ತು ನಡೆಸುತ್ತಿವೆ. ತಂತ್ರ ಪ್ರತಿತಂತ್ರಗಳ ಮಧ್ಯೆ ಯಾರ ಕೈ ಮೇಲಾಗಲಿದೆ ಕಾದು ನೋಡಬೇಕಿದೆ.

31 ಸದಸ್ಯರ ಬಲದ ಚಾಮರಾಜನಗರ ನಗರಸಭೆಯಲ್ಲಿ ಬಿಜೆಪಿ 15, ಕಾಂಗ್ರೆಸ್‌ 8, ಎಸ್‌ಡಿಪಿಐ 6, ತಲಾ ಒಬ್ಬರು ಬಿಎಸ್‌ಪಿ ಹಾಗೂ ಪಕ್ಷೇತರರು ಇದ್ದಾರೆ. ಕ್ಷೇತ್ರದ ಸಂಸದರು ಹಾಗೂ ಶಾಸಕರಿಗೂ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಲ್ಲಿ ಮತ ಚಲಾಯಿಸುವ ಹಕ್ಕು ಇರುವುದರಿಂದ ಸಂಖ್ಯಾ ಬಲ 33ಕ್ಕೆ ಏರಿದಂತಾಗಿದೆ.

ಬಿಎಸ್‌ಪಿ ಸದಸ್ಯ ಅನರ್ಹ:

ನಗರಸಭೆಯ ಕೌನ್ಸಿಲ್ ಸಭೆಗಳಿಗೆ ಒಂದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಗೆ ಗೈರಾಗಿರುವ ಕಾರಣ ನೀಡಿ 27ನೇ ವಾರ್ಡ್‌ನ ಬಿಎಸ್‌ಪಿ ಸದಸ್ಯ ವಿ.ಪ್ರಕಾಶ್ ಅವರ ಸದಸ್ಯತ್ವವನ್ನು ಜಿಲ್ಲಾಧಿಕಾರಿ ಅನರ್ಹಗೊಳಿಸಿರುವುದರಿಂದ ನಗರಸಭೆಯ ಒಟ್ಟು ಸದಸ್ಯರ ಬಲ 32ಕ್ಕೆ ಕುಸಿದಂತಾಗಿದೆ.

17 ‌ಮ್ಯಾಜಿಕ್ ನಂಬರ್:

ಪ್ರಸ್ತತ 32 ಸದಸ್ಯ ಬಲದ ನಗರಸಭೆಯ ಅಧಿಕಾರ ಚುಕ್ಕಾಣಿ ಹಿಡಿಯಲು 17 ಮಂದಿಯ ಬೆಂಬಲ ಅಗತ್ಯವಿದೆ. ಮೇಲ್ನೋಟಕ್ಕೆ ಬಿಜೆಪಿ (15) ಅತಿ ಹೆಚ್ಚು ಸದಸ್ಯರ ಬಲಹೊಂದಿದ್ದರೂ ಅಧಿಕಾರ ಹಿಡಿಯಲು ಎರಡು ಮತದ ಕೊರತೆ ಎದುರಾಗಿದೆ.

8 ಸದಸ್ಯರ ಬಲ ಹೊಂದಿರುವ ಕಾಂಗ್ರೆಸ್‌ ಪಕ್ಷ ಸಂಸದರು ಹಾಗೂ ಶಾಸಕರ ಮತಗಳ ಜೊತೆಗೆ ಎಸ್‌ಡಿಪಿಐನ 6 ಹಾಗೂ ಒಬ್ಬರು ಪಕ್ಷೇತರ ಸದಸ್ಯರ ಬೆಂಬಲ ಪಡೆದು 17ರ ಮ್ಯಾಜಿಕ್ ನಂಬರ್ ತಲುಪಿ ಸುಲಭವಾಗಿ ಅಧಿಕಾರ ಪಡೆಯುವ ಲೆಕ್ಕಾಚಾರದಲ್ಲಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ನಗರಸಭೆಯಲ್ಲಿ ಕಾಂಗ್ರೆಸ್ ಸುಲಭವಾಗಿ ಅಧಿಕಾರ ಹಿಡಿಯಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆ:

ಹೆಚ್ಚು ಸಂಖ್ಯಾಬಲ ಹೊಂದಿದ್ದರೂ ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ಅಧಿಕಾರದಿಂದ ವಂಚಿತವಾಗಿರುವ ಬಿಜೆಪಿಗೆ ಚಾಮರಾಜನಗರ ನಗರಸಭೆ ಪ್ರತಿಷ್ಠೆಯ ಕಣವಾಗಿದೆ. ಅತಿ ಹೆಚ್ಚು ಸದಸ್ಯರನ್ನು ಹೊಂದಿದ್ದರೂ ಅಧಿಕಾರ ಕಳೆದುಕೊಂಡರೆ ತೀವ್ರ ಮುಖಭಂಗ ಎದುರಾಗಲಿರುವ ಹಿನ್ನೆಲೆಯಲ್ಲಿ ಶತಾಯಗತಾಯ ಚಾಮರಾಜನಗರ ನಗರಸಭೆಯ ಅಧಿಕಾರ ಹಿಡಿಯಲು ತಂತ್ರ ರೂಪಿಸಿದೆ ಎನ್ನಲಾಗಿದೆ.

‘ಗೈರು’ ರಾಜಕೀಯ:

‘ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇಬೇಕು ಎಂಬ ಜಿದ್ದಿಗೆ ಬಿದ್ದಿರುವ ರಾಜಕೀಯ ಪಕ್ಷಗಳು ‘ಗೈರು’ ಹಾಗೂ ‘ಅಡ್ಡ ಮತದಾನ’ ಮಾಡಿಸುವ ರಾಜಕೀಯಕ್ಕೆ ಮುಂದಾಗಿವೆ ಎನ್ನಲಾಗಿದೆ. ಸೆ.9ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರು ಗೈರು ಅಥವಾ ಅಡ್ಡ ಮತದಾನ ಮಾಡಿದರೆ ಬಿಜೆಪಿಯ ಗೆಲುವಿನ ಹಾದಿ ಸುಗಮವಾಗಲಿದೆ. ಹಾಗೆಯೇ ಬಿಜೆಪಿಯ ಒಬ್ಬರು ಸದಸ್ಯ ಗೈರು ಅಥವಾ ಅಡ್ಡ ಮತದಾನ ಮಾಡಿದರೆ ಅಧಿಕಾರ ಕಾಂಗ್ರೆಸ್ ಪಾಲಾಗಲಿದೆ. ಕೊನೆ ಕ್ಷಣದವರೆಗೂ ಯಾವುದೇ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ’ ಎನ್ನುತ್ತಾರೆ ರಾಜಕೀಯ ತಜ್ಞರು.

ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ:

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂಬಂಧ ಪ್ರತಿಕ್ರಿಯೆ ಪಡೆಯಲು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನಕುಮಾರ್ ಅವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಅಬ್ರಾರ್ ಅಹಮದ್‌ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ
ಅಬ್ರಾರ್ ಅಹಮದ್‌ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ
ಅಧಿಕಾರ ಹಿಡಿಯಲು ಉಭಯ ಪಕ್ಷಗಳ ತಂತ್ರಗಾರಿಕೆ ಎರಡೂ ಪಕ್ಷಗಳಿಗೆ ಅಡ್ಡ ಮತದಾನ, ಗೈರು ಭೀತಿ ಕೊನೆಯ ಕ್ಷಣದವರೆಗೂ ಕುತೂಹಲ
ಚಾಮರಾಜನಗರ ನಗರಸಭೆಯ ಅಧಿಕಾರ ಹಿಡಿಯುವ ವಿಶ್ವಾಸವಿದೆ. ಅಧ್ಯಕ್ಷ ಸ್ಥಾನಕ್ಕೆ ಆರ್‌.ಎಂ.ರಾಜಪ್ಪ ಹೆಸರು ಅಂತಿಮವಾಗಿದೆ. ಉಪಾಧ್ಯಕ್ಷ ಸ್ಥಾನವನ್ನು ಎಸ್‌ಡಿಪಿಐಗೆ ಬಿಟ್ಟುಕೊಡುವ ಬಗ್ಗೆ ಚರ್ಚೆಗಳು ನಡೆದಿವೆ.
–ಮರಿಸ್ವಾಮಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ
ಮನುವಾದಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದ್ದು ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ಎಸ್‌ಡಿಪಿಐಗೆ ಉಪಾಧ್ಯಕ್ಷ ಸ್ಥಾನ ಹಂಚಿಕೆಯಾಗಿದೆ. ಎಸ್‌ಡಿಪಿಐನ 6 ಸದಸ್ಯರಲ್ಲೊಬ್ಬರು ಉಪಾಧ್ಯಕ್ಷರಾಗಲಿದ್ದಾರೆ.
–ಅಬ್ರಾರ್ ಅಹಮದ್‌ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ
ಯಾರಾಗಲಿದ್ದಾರೆ ಅಧ್ಯಕ್ಷ
ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಸಹಜವಾಗಿ ಆಕಾಂಕ್ಷಿಗಳು ಹೆಚ್ಚಾಗಿದ್ದರೂ ಕಾಂಗ್ರೆಸ್‌ನಿಂದ ಹಿರಿಯ ಮುಖಂಡ 31ನೇ ವಾರ್ಡ್‌ನ ಸದಸ್ಯ ಆರ್‌.ಎಂ.ರಾಜಪ್ಪ ಹೆಸರು ಅಂತಿಮವಾಗಿದೆ. ಉಪಾಧ್ಯಕ್ಷ ಸ್ಥಾನ ಎಸ್‌ಡಿಪಿಐಗೆ ಬಿಟ್ಟುಕೊಡಲು ಕಾಂಗ್ರೆಸ್‌ ಒಪ್ಪಿಕೊಂಡಿದೆ. ಬಿಜೆಪಿಯಿಂದ ಸುರೇಶ್‌ ಸುದರ್ಶನ ಗೌಡ (21ನೇ ವಾರ್ಡ್) ಎಚ್‌.ಎಸ್‌. ಮಮತಾ ಬಾಲಸುಬ್ರಹ್ಮಣ್ಯಂ (22ನೇ ವಾರ್ಡ್) ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿವೆ. 
1 ವರ್ಷ 3 ತಿಂಗಳು ಅಧಿಕಾರ
ನಗರಸಭೆಯ ಅಧಿಕಾರಾವಧಿ ಬಾಕಿ ಉಳಿದಿರುವುದು ಒಂದು ವರ್ಷ ಮೂರು ತಿಂಗಳು ಮಾತ್ರ. ನೂತನವಾಗಿ ಆಯ್ಕೆಯಾಗುವ ಅಧ್ಯಕ್ಷ ಉಪಾಧ್ಯಕ್ಷರಿಗೆ ಸಿಗುವುದು 1.3 ವರ್ಷ ಅಧಿಕಾರಾವಧಿ ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT