ಗುರುವಾರ , ಮೇ 19, 2022
21 °C

ಶನಿವಾರ ರೈತ ನಾಯಕ ಎಂಡಿಎನ್‌ ಜನ್ಮದಿನ: ಕೃಷಿ ಕಾಯ್ದೆಗಳ ಬಗ್ಗೆ ವಿಚಾರಗೋಷ್ಠಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 85ನೇ ಜನ್ಮ ದಿನದ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ನಂಜುಂಡಸ್ವಾಮಿ ಅವರ ನೆನಪು ಹಾಗೂ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ (ಫೆ.13) ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಂಡಿದೆ.

ಕಾರ್ಯಕ್ರಮದಲ್ಲಿ, ‘ಇಂದಿನ ರೈತವಿರೋಧಿ ಕಾಯ್ದೆಗಳ ಬಗ್ಗೆ ಪ್ರೊ.ನಂಜುಂಡಸ್ವಾಮಿ ಅವರಿಗಿದ್ದ ಮುಂದಾಲೋಚನೆಗಳು’ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಹಾಗೂ ಸಂವಾದ ನಡೆಯಲಿದೆ. 

ಸಾಹಿತಿ ದೇವನೂರು ಮಹಾದೇವ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ್‌ ಕಮ್ಮರಡಿ, ಚಿಂತಕ ಡಾ.ಮುಜಾಫರ್‌ ಅಸಾದಿ ಹಾಗೂ ರಂಗಕರ್ಮಿ ಕೆ.ವೆಂಕಟರಾಜು ಅವರು ವಿಷಯವನ್ನು ಮಂಡಿಸಲಿದ್ದಾರೆ. 

ಬೆಳಿಗ್ಗೆ 11.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಉದ್ಘಾಟಿಸಲಿದ್ದಾರೆ. ಸಂಘದ ಮೈಸೂರು ವಿಭಾಗದ ಕಾರ್ಯದರ್ಶಿ ಎ.ಎಂ.ಮಹೇಶ ಪ್ರಭು ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. 

ಅಮೃತ ಭೂಮಿಯಲ್ಲಿ ಕಾರ್ಯಕ್ರಮ
ನಂಜುಂಡಸ್ವಾಮಿ ಅವರ 85ನೇ ಜನ್ಮ ದಿನದ ಅಂಗವಾಗಿ ಶನಿವಾರ ತಾಲ್ಲೂಕಿನ ಹೊಂಡರಬಾಳುವಿನಲ್ಲಿರುವ ಅಮೃತಭೂಮಿ ಅಂತರರಾಷ್ಟ್ರೀಯ ಸುಸ್ಥಿರ ಕೃಷಿ ಅಭಿವೃದ್ಧಿ ಕೇಂದ್ರದಲ್ಲೂ ವಿವಿಧ ಕಾರ್ಯಗಳು ನಡೆಯಲಿವೆ. 

ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿ ಹಳ್ಳಿ ಚಂದ್ರಶೇಖರ್‌ ಬಣ) ಹಾಗೂ ಅಮೃತಭೂಮಿ ಅಂತರರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರವು ಜಂಟಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ರೈತರನ್ನು ರಾಸಾಯನಿಕ ಮುಕ್ತ ಕೃಷಿ ಮಾಡುವಂತೆ ಪ್ರೇರೇಪಿಸುವುದಕ್ಕಾಗಿ ‘ವಿಷಮುಕ್ತ ಕರ್ನಾಟಕ’ ಎಂಬ ಅಭಿಯಾನಕ್ಕೆ ಚಾಲನೆ ದೊರಕಲಿದೆ. ‘ಪ್ರೊ.ಎಂ.ಡಿ.ಎನ್‌.ಸ್ವಾಭಿಮಾನಿ ರೈತ ಉತ್ಪಾದಕ ಕಂಪನಿ–ಕರ್ನಾಟಕ’ ಎಂಬ ಕಂಪನಿಯ ಲೋಕಾರ್ಪಣೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ. 

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನುಗಳಿಂದ ರೈತರಿಗೆ ಆಗುವ ತೊಂದರೆ ಹಾಗೂ ರೈತರೇ ಕಟ್ಟಬಹುದಾದ ಪರ್ಯಾಯಗಳ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು