ಭಾನುವಾರ, ಜನವರಿ 17, 2021
20 °C
ನಾಲ್ವರು ಅಭ್ಯರ್ಥಿಗಳ ನಡುವೆ ಪೈಪೋಟಿ, ಆನ್‌ಲೈನ್‌ನಲ್ಲಿ ಮತದಾನ

ಚಾಮರಾಜನಗರ: ಜಿಲ್ಲಾ ಯುವ ಕಾಂಗ್ರೆಸ್‌ ಚುನಾವಣೆಗೆ ಕ್ಷಣಗಣನೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾ ಯುವ ಕಾಂಗ್ರೆಸ್‌ಗೆ ಭಾನುವಾರ (ಜ.10) ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ನಾಲ್ವರ ನಡುವೆ ಪೈಪೋಟಿ ಏರ್ಪಟ್ಟಿದೆ. 

ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳ ಯುವ ಕಾಂಗ್ರೆಸ್‌ಗೆ ಚುನಾವಣೆ ನಡೆಯುತ್ತಿದ್ದು, ಹತ್ತು ಜಿಲ್ಲೆಗಳಲ್ಲಿ ಭಾನುವಾರ ನಡೆಯಲಿದೆ. ಉಳಿದ ಕಡೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ನಡೆಯಲಿದೆ.

ಚಾಮರಾಜನಗರದಲ್ಲಿ ಭಾನುವಾರ ನಡೆಯಲಿದೆ. ಈ ಬಾರಿ ಆನ್‌ಲೈನ್‌ ಮೂಲಕ ಮತದಾನ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಅವಕಾಶ ನೀಡಲಾಗಿದೆ. 

ಜಿಲ್ಲೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ನಾಲ್ವರು ಕಣಕ್ಕೆ ಇಳಿದಿದ್ದಾರೆ. ಕೊಳ್ಳೇಗಾಲ ತಾಲ್ಲೂಕಿನ ಸರಗೂರಿನ ಶಿವಶಂಕರ್‌, ಚಾಮರಾಜನಗರ ತಾಲ್ಲೂಕಿನ ಹರವೆಯ ಮಧುಸೂದನ್‌, ಚಾಮರಾಜನಗರದ ಸೋಮಶೇಖರ್‌ ಹಾಗೂ ಕೊಳ್ಳೇಗಾಲದ ಅಬ್ದುಲ್ಲಾ ಅವರು ಸ್ಪರ್ಧಿಸಿದ್ದಾರೆ.

ನಾಲ್ವರು ಕೂಡ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಬಿರುಸಿನ ಪೈಪೋಟಿ ಇದೆ ಎಂದು ಮೂಲಗಳು ಹೇಳಿವೆ. ಜಿಲ್ಲೆಯ ಕಾಂಗ್ರೆಸ್‌ ‌ಮುಖಂಡರು ಹಾಗೂ ಶಾಸಕರ ಒಲವು ಶಿವಶಂಕರ್‌ ಅವರ ಕಡೆಗಿದೆ ಎಂದು ತಿಳಿದು ಬಂದಿದೆ. 

ಚುನಾವಣೆಯಲ್ಲಿ ಗೆದ್ದವರು ಅಧ್ಯಕ್ಷರಾದರೆ, ಸೋತವರು ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹುದ್ದೆಗಳನ್ನು ಅಲಂಕರಿಸಿದ್ದಾರೆ. 

ಜಿಲ್ಲೆಯಲ್ಲಿ ಯುವ ಕಾಂಗ್ರೆಸ್‌ಗೆ 5,600 ಸದಸ್ಯರಿದ್ದು, ಇವರು ಭಾನುವಾರ ಆನ್‌ಲೈನ್‌ ಮೂಲಕ ಹಕ್ಕು ಚಲಾಯಿಸುವ ಅರ್ಹತೆ ಪಡೆದಿದ್ದಾರೆ. 

ಕಡಿಮೆ ಸದಸ್ಯರು: ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್‌ ಸದಸ್ಯರ ಸಂಖ್ಯೆ ಕಡಿಮೆ ಇದೆ. 

‘ಕಳೆದ ಚುನಾವಣೆಯ ಸಂದರ್ಭದಲ್ಲಿ 11,750 ಸದಸ್ಯರಿದ್ದರು. ಈ ಬಾರಿ ಆನ್‌ಲೈನ್‌ ಮೂಲಕ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗಿತ್ತು. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿತ್ತು. ಗ್ರಾಮೀಣ ಭಾಗದ ಕಾರ್ಯಕರ್ತರಿಗೆ ಆನ್‌ಲೈನ್‌ ಮೂಲಕ ನೋಂದಣಿ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಸದಸ್ಯರ ಸಂಖ್ಯೆ ಕಡಿಮೆ ಇದೆ. 5,600 ಮಂದಿ ಭಾನುವಾರ ಮತದಾನ ಮಾಡಲಿದ್ದಾರೆ’ ಎಂದು ಜಿಲ್ಲಾ ಯುವ ಕಾಂಗ್ರೆಸ್‌ನ ಹಾಲಿ ಸದಸ್ಯ ಚೇತನ್‌ ದೊರೆರಾಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಆನ್‌ಲೈನ್‌ ಚುನಾವಣೆ

ಈ ಬಾರಿ ಸದಸ್ವತ್ಯ ನೋಂದಣಿಯನ್ನು ಆನ್‌ಲೈನ್‌ನಲ್ಲಿ ಮಾಡಲಾಗಿದೆ. ಮತದಾನವನ್ನೂ ಆನ್‌ಲೈನ್‌ನಲ್ಲೇ ನಡೆಸಲಾಗುತ್ತಿದೆ. ಸದಸ್ಯರು ಮೊಬೈಲ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ನೋಂದಣಿ ಮಾಡಿಕೊಂಡರೆ ಮೊಬೈಲ್‌ಗೆ ಒಟಿಪಿ ಬರುತ್ತದೆ. ಒಟಿಪಿ ಬಳಸಿಕೊಂಡು ಮತದಾನ ಮಾಡಬೇಕಾಗುತ್ತದೆ ಎಂದು ಚೇತನ್‌ ದೇವರಾಜ್‌ ಅವರು ವಿವರಿಸಿದರು. 

ಸ್ಪರ್ಧಿಸಿದವರಿಗೆಲ್ಲರಿಗೂ ಹುದ್ದೆ

ಯುವ ಕಾಂಗ್ರೆಸ್‌ನಲ್ಲಿ ಎಲ್ಲ ಹುದ್ದೆಗಳಿಗೂ ಚುನಾವಣೆ ನಡೆಯುವುದಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಮತದಾನ ನಡೆಯುತ್ತದೆ. ಅಭ್ಯರ್ಥಿಗಳ ಪೈಕಿ ಹೆಚ್ಚು ಮತಗಳನ್ನು ಪಡೆದವರು ಅಧ್ಯಕ್ಷರಾಗುತ್ತಾರೆ. ಎರಡನೇ ಹೆಚ್ಚು ಮತಗಳನ್ನು ಪಡೆದವರು ಉಪಾಧ್ಯಕ್ಷರಾಗುತ್ತಾರೆ. ಮೂರನೇ ಸ್ಥಾನ ಪಡೆದವರು ಪ್ರಧಾನ ಕಾರ್ಯದರ್ಶಿಯಾಗುತ್ತಾರೆ. ಹೀಗಾಗಿ, ಸ್ಪರ್ಧಿಸಿದವರಿಗೆಲ್ಲರಿಗೂ ಹುದ್ದೆ ಖಚಿತವಾಗಿ ಸಿಗುತ್ತದೆ. 

‘ಜಿಲ್ಲೆಯ ಮಟ್ಟಿಗೆ ಅಧ್ಯಕ್ಷ ಸ್ಥಾನ ಒಂದೇ ಆಗಿದ್ದರೆ, ಉಪಾಧ್ಯಕ್ಷ ಸ್ಥಾನಗಳು ನಾಲ್ಕು, ಪ್ರಧಾನ ಕಾರ್ಯದರ್ಶಿ ಸ್ಥಾನಗಳು ಆರು ಇವೆ. ಉಪಾಧ್ಯಕ್ಷ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ, ಸಾಮಾನ್ಯ, ಅಲ್ಪಸಂಖ್ಯಾತರು, ಮಹಿಳೆಗೆ ಮೀಸಲು ಇರುತ್ತದೆ. ಪ್ರಧಾನ ಕಾರ್ಯದರ್ಶಿ ಹುದ್ದೆಗಳಲ್ಲಿ ಈ ನಾಲ್ಕು ಅಲ್ಲದೇ ಅಂಗವಿಕಲರಿಗೂ ಮೀಸಲಾತಿ ಇದೆ. 25 ಮಂದಿಯನ್ನು ನಾಮನಿರ್ದೇಶನ ಮಾಡುವ ಅಧಿಕಾರವೂ ಅಧ್ಯಕ್ಷರಿಗೆ ಇರುತ್ತದೆ’ ಎಂದು ಚೇತನ್‌ ದೊರೆರಾಜ್‌ ಅವರು ಹೇಳಿದರು. 

ಪಾರದರ್ಶಕ ಚುನಾವಣೆ

ಯುವ ಕಾಂಗ್ರೆಸ್‌ ಚುನಾವಣೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರ ಆರ್‌.ಧ್ರುವನಾರಾಯಣ ಅವರು, ‘ಎಲ್ಲ ಜಿಲ್ಲೆಗಳಲ್ಲಿ ಯುವ ಕಾಂಗ್ರೆಸ್‌ಗೆ ಪಾರದರ್ಶಕವಾಗಿ ಆನ್‌ಲೈನ್‌ ಮೂಲಕ ಚುನಾವಣೆ ನಡೆಯುತ್ತಿದೆ. ಚಾಮರಾಜನಗರ ಸೇರಿದಂತೆ 10 ಜಿಲ್ಲೆಗಳಲ್ಲಿ ಭಾನುವಾರ ನಡೆಯಲಿದೆ. ಇದರಲ್ಲಿ ಪಕ್ಷದ ಹಿರಿಯ ಮುಖಂಡರ ಹಸ್ತಕ್ಷೇಪ ಇರುವುದಿಲ್ಲ’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು