ಮಂಗಳವಾರ, ಸೆಪ್ಟೆಂಬರ್ 21, 2021
28 °C
ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಬಿ.ಬಿ.ಕಾವೇರಿ ಅಧ್ಯಕ್ಷತೆಯಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಕೋವಿಡ್‌ ಮೂರನೇ ಅಲೆ ತಡೆಗೆ ಸಕಲ ಸಿದ್ಧತೆ: ಡಾ.ಎಂ.ಸಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಸಂಭಾವ್ಯ ಕೋವಿಡ್‌ ಮೂರನೇ ಅಲೆ ಎದುರಿಸಲು ಜಿಲ್ಲೆಯಲ್ಲಿ ಸಕಲ ಸಿದ್ಧತೆ ನಡೆದಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಬುಧವಾರ ಇಲ್ಲಿ ತಿಳಿಸಿದರು. 

ಜಿಲ್ಲಾ ಪ‍ಂಚಾಯಿತಿ ಆಡಳಿತಾಧಿಕಾರಿ ಬಿ.ಬಿ.ಕಾವೇರಿ ನೇತೃತ್ವದಲ್ಲಿ ನಡೆದ ಜಿಲ್ಲಾ ಪಂಚಾಯಿತಿಯ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಮೂರನೇ ಅಲೆ ತಡೆಗೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದ ಅವರು, ‘ಕೋವಿಡ್‌ 3ನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಇತರ ಮಾನವ ಸಂಪನ್ಮೂಲಗಳಿಗೆ ತರಬೇತಿ ನೀಡಲಾಗುತ್ತಿದೆ’ ಎಂದರು.

‘ಮೊದಲ ಸುತ್ತಿನಲ್ಲಿ ಸ್ಟಾಫ್‌ ನರ್ಸ್‌ಗಳಿಗೆ ತರಬೇತಿ ನೀಡಲಾಗಿದೆ. ವೈದ್ಯರಿಗೂ ತಜ್ಞ ವೈದ್ಯರಿಂದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೂರನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರಬಹುದು ಎಂಬ ಅಭಿಪ್ರಾಯ ಇರುವುದರಿಂದ ಪ್ರತಿ ಗ್ರಾಮ ಪ‍ಂಚಾಯಿತಿ ವ್ಯಾಪ್ತಿಯಲ್ಲಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು, ಗ್ರಾಮಗಳಲ್ಲಿ, ಶಾಲೆಗಳಲ್ಲಿ ಮೂರನೇ ಅಲೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಇವರು ಮಾಡಲಿದ್ದಾರೆ’ ಎಂದು ಹೇಳಿದರು. 

ಆಮ್ಲಜನಕ ಘಟಕ: ‘ಎರಡನೇ ಅಲೆಯಲ್ಲಿ ಆಮ್ಲಜನಕ ಕೊರತೆ ಕಾಡಿದ್ದರಿಂದ ಮುಂದೆ ಇಂತಹ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ 6 ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕ ಇದೆ. ವೈದ್ಯಕೀಯ ಕಾಲೇಜಿನ ಹೊಸ ಆಸ್ಪತ್ರೆಯಲ್ಲಿ 20 ಸಾವಿರ ಲೀಟರ್‌ನ ಘಟಕ ಸ್ಥಾಪಿಸಲಾಗುತ್ತಿದೆ.

ಇದಲ್ಲದೇ ವಿವಿಧೆಡೆ ಸಾಕಷ್ಟು ಆಮ್ಲಜನಕದ ಸಾಂದ್ರಕಗಳಿವೆ. ಕೊಳ್ಳೇಗಾಲ ಆಸ್ಪತ್ರೆಯಲ್ಲಿ ನೈಸರ್ಗಿಕ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಸಂತೇಮರಹಳ್ಳಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗುತ್ತಿದೆ. ಇದರ ಜೊತೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 300 ಎಲ್‌ಪಿಎಂ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಡಾ.ಎಂ.ಸಿ.ರವಿ ಸಭೆಗೆ ಮಾಹಿತಿ ತಿಳಿಸಿದರು. 

ಗರ್ಭಿಣಿಯರು, ಬಾಣಂತಿಯರಿಗೆ ಲಸಿಕೆ: ಗರ್ಭಿಣಿಯರು, ಬಾಣಂತಿಯರಿಗೆ ಲಸಿಕೆ ನೀಡಲಾಗುತ್ತಿದೆಯೇ ಎಂದು ಕಾವೇರಿ ಪ್ರಶ್ನಿಸಿದ್ದಕ್ಕೆ, ಪ್ರತಿಕ್ರಿಯಿಸಿದ ರವಿ ‘15 ದಿನದ ಹಿಂದೆ ಐಸಿಎಂಆರ್‌ ಗರ್ಭಿಣಿಯರು ಹಾಗೂ ಬಾಣಂತಿಯರಿಗೂ ಲಸಿಕೆ ನೀಡಲು ಒಪ್ಪಿಗೆ ಸೂಚಿಸಿದೆ. ರಾಜ್ಯ ಸರ್ಕಾರದಿಂದಲೂ ಸೂಚನೆ ಬಂದಿದೆ. ಜಿಲ್ಲೆಗೆ 5 ಸಾವಿರ ಲಸಿಕೆಗಳ ಗುರಿ ನೀಡಲಾಗಿದೆ. ಗರ್ಭಿಣಿಯರು ಹಾಗೂ ಬಾಣಂತಿಯರು ಚಿಕಿತ್ಸೆಗಾಗಿ ಬರುವಾಗ ಅವರಿಗೆ ಲಸಿಕೆ ಬಗ್ಗೆ ತಿಳಿಹೇಳಿ ಮನವೊಲಿಸಲಾಗುವುದು’ ಎಂದರು.  

ರೈತರಿಂದ ಸ್ವಯಂ ಸಮೀಕ್ಷೆ: ‘ಈ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ರೈತರೇ ಸ್ವಯಂ ಆಗಿ ಬೆಳೆ ಸಮೀಕ್ಷೆ ಮಾಡಬೇಕಾಗಿದ್ದು, ಇದುವರೆಗೆ 1,700 ಮಂದಿ ಮಾಡಿದ್ದಾರೆ. ಮಳೆ ಪ್ರಮಾಣವೂ ಉತ್ತಮವಾಗಿದ್ದು, ಮುಂದಿನ ತಿಂಗಳು ಬಿತ್ತನೆ ಗುರಿ ಶೇ 100 ತಲುಪುತ್ತೇವೆ’ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಸೋಮಶೇಖರ್‌ ತಿಳಿಸಿದರು. 

ಕೃಷಿ ಇಲಾಖೆಯು ರೈತರಿಗೆ ವಿತರಿಸಿರುವ ಮಣ್ಣಿನ ಆರೋಗ್ಯ ಕಾರ್ಡ್‌ ಬಗ್ಗೆ ಜಂಟಿ ನಿರ್ದೇಶಕಿ ಅವರಲ್ಲಿ ಮಾಹಿತಿ ಕೇಳಿದ ಬಿ.ಬಿ.ಕಾವೇರಿ, ಸಮರ್ಪಕವಾಗಿ ವಿತರಿಸುವಂತೆ ಸೂಚಿಸಿದರು. 

‘ಇದುವರೆಗೆ 3,660 ಮಂದಿಗೆ ಜಿಲ್ಲೆಯಲ್ಲಿ ಮಣ್ಣಿನ ಆರೋಗ್ಯ ಕಾರ್ಡ್‌ ವಿತರಿಸಲಾಗಿದೆ. ಜಿಲ್ಲೆಗೆ ನೀಡಿರುವ ಗುರಿಯನ್ನು ತಲುಪಿದ್ದೇವೆ’ ಎಂದು ಜಂಟಿ ನಿರ್ದೇಶಕಿ ಚಂದ್ರಕಲಾ ಮಾಹಿತಿ ನೀಡಿದರು. 

ಸಭೆಯಲ್ಲಿ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

‘ಮೇವಿನ ಕೊರತೆ ಇಲ್ಲ’

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಉಪನಿರ್ದೇಶಕ ಡಾ.ಸಿ.ವೀರಭದ್ರಯ್ಯ, ‘ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಸಾಕಷ್ಟು ಮೇವು ಲಭ್ಯವಾಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದು’ ಎಂದರು.

‘ಕಳೆದ ತಿಂಗಳು ಜಿಲ್ಲೆಯ ಕೆಲವು ಕಡೆಗಳಲ್ಲಿ ಕಾಲುಬಾಯಿ ಜ್ವರ ಪ್ರಕರಣಗಳು ಕಾಣಿಸಿಕೊಂಡಿದ್ದವು. ಕೇಂದ್ರ ಸ‌ರ್ಕಾರ ಈ ಬಾರಿ ಕಾಲುಬಾಯಿ ಲಸಿಕೆ ಅಭಿಯಾನ ಹಮ್ಮಿಕೊಂಡಿರಲಿಲ್ಲ. ಹಾಗಾಗಿ ಪ್ರಕರಣಗಳು ವರದಿಯಾದವು. ಪ್ರಕರಣ ವರದಿಯಾದ ಕಡೆಗಳಲ್ಲಿ ಲಸಿಕೆ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಕುರಿ, ಮೇಕೆಗಳಿಗೆ ಕರಳು ಬೇನೆಗಾಗಿ ಲಸಿಕೆ ನೀಡಲಾಗಿದೆ’ ಎಂದು ಹೇಳಿದರು.

ಹಾಸ್ಟೆಲ್‌ ದಾಖಲಾತಿ ಹೆಚ್ಚಿಸಲು ಸೂಚನೆ

ಸಮಾಜ ಕಲ್ಯಾಣ, ‌ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ, ಹಾಸ್ಟೆಲ್‌ಗಳಲ್ಲಿ ಆಗುತ್ತಿರುವ ದಾಖಲಾತಿಗಳ ಬಗ್ಗೆ ಮಾಹಿತಿ ಕೇಳಿದರು. 

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾಗೀರಥಿ ಮಾತನಾಡಿ, ‘ಹಾಸ್ಟೆಲ್‌ಗಳ ಒಟ್ಟು ಸಾಮರ್ಥ್ಯದ ಶೇ 45 ವಿದ್ಯಾರ್ಥಿಗಳಷ್ಟೇ ದಾಖಲಾಗಿದ್ದಾರೆ’ ಎಂದರು.

‘ಇಲಾಖೆ ವ್ಯಾಪ್ತಿಯಲ್ಲಿ 17 ಹಾಸ್ಟೆಲ್‌ಗಳಿದ್ದು, 920 ಮಕ್ಕಳ ಪೈಕಿ 250 ಮಂದಿ ದಾಖಲಾಗಿದ್ದಾರೆ. ಕಳೆದ ವರ್ಷ ಒಟ್ಟು 1,775 ಸೀಟು ಮಂಜೂರಾಗಿದ್ದು, 920 ಮಂದಿ ಹಾಸ್ಟೆಲ್‌ ಸೌಲಭ್ಯ ಬಳಸಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರೇವಣ್ಣ ತಿಳಿಸಿದರು.

‘ಸರ್ಕಾರ ಮಕ್ಕಳ ಅನುಕೂಲಕ್ಕಾಗಿ ಹಾಸ್ಟೆಲ್‌ ತೆರೆದು ಅವರಿಗೆ ಬೇಕಾದಂತಹ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸುತ್ತಿದೆ. ಇದಕ್ಕಾಗಿ ಸಾಕಷ್ಟು ವೆಚ್ಚ ಮಾಡುತ್ತಿದೆ. ಹಣ ಫೋಲಾಗಬಾರದು. ಹಾಗಾಗಿ, ಹಾಸ್ಟೆಲ್‌ನ ಸಾಮರ್ಥ್ಯದಷ್ಟು ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಬಿ.ಬಿ.ಕಾವೇರಿ ಸೂಚಿಸಿದರು. 

ಹಾಸ್ಟೆಲ್‌ಗೆ ಭೇಟಿ ನೀಡಿ: ‘ಯಾರೆಲ್ಲಾ ಹಾಸ್ಟೆಲ್‌ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದೀರಿ’ ಎಂದು ಕಾವೇರಿ ಕೇಳಿದಾಗ, ರೇವಣ್ಣ ಮಾತ್ರ ಭೇಟಿ ನೀಡಿದ್ದಾಗಿ ತಿಳಿಸಿದರು. 

‘ಎಲ್ಲರೂ ಕಡ್ಡಾಯವಾಗಿ ಹಾಸ್ಟೆಲ್‌ಗೆ ಹೋಗಿ ವ್ಯವಸ್ಥೆಗಳನ್ನು ಪರಿಶೀಲಿಸಬೇಕು. ವಿದ್ಯಾರ್ಥಿಗಳ ಅಭಿಪ್ರಾಯ ಕೇಳಬೇಕು. ಅವರೊಂದಿಗೆ ಕುಳಿತು ಊಟ ಮಾಡಬೇಕು. ಆಗ ಮಾತ್ರ ಅಲ್ಲಿನ ನಿಜವಾದ ಸಮಸ್ಯೆಗಳು ಗೊತ್ತಾಗುತ್ತವೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರವನ್ನೇ ಪೂರೈಸಬೇಕು’ ಎಂದು ತಾಕೀತು ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು