ಚಾಮರಾಜನಗರ: ಜಿಲ್ಲೆಯಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂಬ ಜನರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿ, ಕಳೆದ ವರ್ಷದ ಬಜೆಟ್‌ನಲ್ಲಿ ವಿನೂತನ ಮಾದರಿಯ ವಿ.ವಿ ಸ್ಥಾಪನೆ ಮಾಡುವುದಾಗಿ ಘೋಷಿಸಿತ್ತು. ವರ್ಷದ ಬಳಿಕ ಹೊಸ ವಿ.ವಿಗೆ ಕುಲಪತಿ ನೇಮಕವಾಗಿದೆ.
ಮೈಸೂರು ವಿ.ವಿಯ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಎಂ.ಆರ್.ಗಂಗಾಧರ್ ಜಿಲ್ಲೆಯ ಪ್ರತ್ಯೇಕ ವಿ.ವಿಯ ಮೊದಲ ಕುಲಪತಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ಹೊಸ ಜವಾಬ್ದಾರಿ ಹಾಗೂ ತಮ್ಮ ಯೋಜನೆಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
ಅದರ ಪೂರ್ಣ ವಿವಿರ ಇಲ್ಲಿದೆ...
ಪ್ರ: ಹೊಸ ವಿ.ವಿಯನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ವಹಿಸಿಕೊಂಡಿದ್ದೀರಿ. ತಕ್ಷಣದ ನಿಮ್ಮ ಯೋಜನೆಗಳೇನು?
ಉ: ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಚಾಮರಾಜನಗರ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿ ನನ್ನನ್ನು ನೇಮಿಸುವ ಮೂಲಕ ದೊಡ್ಡ ಹೊಣೆ ನೀಡಿದೆ. ಚಾಮರಾಜನಗರ ಜಿಲ್ಲೆಯ ಬಗ್ಗೆ ಅರಿತಿದ್ದೇನೆ. ಇಲ್ಲಿಯ ವಿದ್ಯಾರ್ಥಿಗಳಿಗೆ ಶಿಕ್ಷಣದ ಹಸಿವು ಇದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ನೀಡುವುದು ನನ್ನ ಗುರಿ. ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಕ್ಕೆ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಉದ್ಯೋಗ, ಕೌಶಲ ಆಧಾರಿತ ಶಿಕ್ಷಣವನ್ನು ಅವರಿಗೆ ಕಲ್ಪಿಸುವುದು ನನ್ನ ಉದ್ದೇಶ. ಶೈಕ್ಷಣಿಕ ವಿಚಾರಕ್ಕೆ ಪ್ರಾಧಾನ್ಯ ನೀಡುತ್ತೇನೆ.
ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸುವುದಕ್ಕೆ ನನ್ನ ಎರಡನೇ ಆದ್ಯತೆ. ಹಾಸ್ಟೆಲ್ ವ್ಯವಸ್ಥೆ, ಗುಣಮಟ್ಟದ ಆಹಾರ ಲಭ್ಯವಾಗುವಂತೆ ನೋಡಿಕೊಳ್ಳುವುದು, ಆರೋಗ್ಯದ ಕಾಳಜಿ ವಹಿಸುವುದರ ಬಗ್ಗೆಯೂ ಗಮನಹರಿಸುವೆ. ವಿ.ವಿ ಅಂದ ಮೇಲೆ ಮೂಲಸೌಕರ್ಯಗಳು ಬೇಕು. ಅವುಗಳನ್ನು ಕಲ್ಪಿಸುವುದಕ್ಕೂ ಒತ್ತು ನೀಡುತ್ತೇನೆ.
ಪ್ರ. ಹೊಸ ವಿ.ವಿ ಯಾವಾಗಿನಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ? ಸಿಬ್ಬಂದಿ ನೇಮಕಾತಿ ಯಾವಾಗ?
ಉ: ಈ ಶೈಕ್ಷಣಿಕ ವರ್ಷದವರೆಗೆ ಮೈಸೂರು ವಿ.ವಿಯೇ ಎಲ್ಲವನ್ನೂ ನೋಡಿಕೊಳ್ಳಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಚಾಮರಾಜನಗರ ವಿ.ವಿಯ ಅಡಿಯಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ನಡೆಯಲಿದೆ. ಜಿಲ್ಲೆಯಲ್ಲಿರುವ ಎಲ್ಲ ಪದವಿ ಕಾಲೇಜುಗಳು ನಮ್ಮ ವಿ.ವಿ ವ್ಯಾಪ್ತಿಗೆ ಬರಲಿವೆ.
ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಅಧಿಕಾರ ಸ್ವೀಕರಿಸಿದ್ದೇನೆ. ನೇಮಕಾತಿ ಬಗ್ಗೆಯೂ ಮಾತನಾಡಿದ್ದೇನೆ. ಈ ಸಂಬಂಧ ಮುಂದಿನ ವಾರ ಪ್ರಕ್ರಿಯೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಇಲ್ಲಿ ಹುದ್ದೆ ಸೃಷ್ಟಿಯಾದ ಬಳಿಕ, ಮೈಸೂರು ವಿ.ವಿಯಿಂದ ಕೆಲವರು ಬರಲಿದ್ದಾರೆ. ಹಂತ ಹಂತವಾಗಿ ನೇಮಕಾತಿ ಆಗಲಿದೆ.
ಪ್ರ: ಇದು ವಿನೂತನ ಮಾದರಿ ವಿ.ವಿ ಎಂದು ಸರ್ಕಾರ ಹೇಳಿದೆ. ಸಾಂಪ್ರದಾಯಿಕ ವಿ.ವಿಗಿಂತ ಹೇಗೆ ಭಿನ್ನವಾಗಿರುತ್ತದೆ?
ಉತ್ತರ: ಕಡಿಮೆ ಮೂಲ ಸೌಕರ್ಯ, ಕಡಿಮೆ ಮಾನವ ಸಂಪನ್ಮೂಲ ಬಳಸಿಕೊಂಡು ಇಂಟರ್‌ನೆಟ್, ತಂತ್ರಜ್ಞಾನ ಆಧಾರಿತವಾಗಿ ಉನ್ನತ ಶಿಕ್ಷಣ ನೀಡಬೇಕು ಎಂಬುದು ಸರ್ಕಾರದ ಉದ್ದೇಶ. ವಿದ್ಯಾರ್ಥಿಗಳಿಗೆ ಬಹುಬೇಗ ಉದ್ಯೋಗ ಸಿಗುವ, ಅವರನ್ನು ಕೌಶಲ ಹೊಂದಿರುವ ವ್ಯಕ್ತಿಗಳನ್ನಾಗಿ ರೂಪಿಸುವ ಶಿಕ್ಷಣ ನೀಡಬೇಕು ಎಂಬುದು ಆಶಯ. ಆ ದೃಷ್ಟಿಯಲ್ಲಿ ಏಳು ಜಿಲ್ಲೆಗಳಲ್ಲಿ ವಿ.ವಿಯನ್ನು ಸ್ಥಾಪಿಸಿದೆ. ಇಲ್ಲಿ ತಂತ್ರಜ್ಞಾನಕ್ಕೆ ಹೆಚ್ಚು ಆದ್ಯತೆ ಸಿಗಲಿದೆ. ಆನ್‌ಲೈನ್ ಆಧಾರಿತ ಕೋರ್ಸ್, ತರಬೇತಿಗಳು ಹೆಚ್ಚು ನಡೆಯಲಿವೆ. ಮೊದಲೆಲ್ಲ ತಜ್ಞರು, ಸಂಶೋಧಕರನ್ನು ವಿ.ವಿಗಳಿಗೆ ಕರೆಸಿಯೇ ತರಬೇತಿ, ವಿಶೇಷ ಉಪನ್ಯಾಸ ಕೊಡಿಸಬೇಕಿತ್ತು. ಈಗ ಆನ್‌ಲೈನ್ ಮೂಲಕ ಮಾಡಲು ಸಾಧ್ಯವಿದೆ.
ಪ್ರ: ಯಾವೆಲ್ಲ ಹೊಸ ಕೋರ್ಸ್‌ಗಳು ಪ್ರಾರಂಭಿಸುತ್ತೀರಿ?
ಉ:ಈಗ ಇರುವ ಎಲ್ಲ ಕೋರ್ಸ್‌ಗಳು ಮುಂದುವರಿಯಲಿವೆ. ಯಾವ ಕೋರ್ಸ್‌ಗಳಿಗೆ ಹೆಚ್ಚು ಬೇಡಿಕೆ ಬರುತ್ತದೆಯೋ ಅಂತಹವುಗಳನ್ನು ಆರಂಭಿಸುತ್ತೇವೆ. ಇದಕ್ಕಾಗಿ ತಜ್ಞರ ಸಮಿತಿ ರಚಿಸಿ ಚರ್ಚಿಸಲಾಗುವುದು. ಆನ್‌ಲೈನ್ ಕೋರ್ಸ್‌ಗಳು, ಕೌಶಲ ಅಭಿವೃದ್ಧಿ ಕೋರ್ಸ್‌ಗಳು ಕೂಡ ಇರಲಿವೆ.
ಪ್ರ: ಹೆಚ್ಚು ಅನುದಾನ ಕೊಡುವುದಿಲ್ಲ ಎಂದು ಸರ್ಕಾರ ಹೇಳಿದೆ. ಅನುದಾನ ಬಾರದಿದ್ದರೆ ವಿ.ವಿ ನಿರ್ವಹಣೆ ಕಷ್ಟವಲ್ಲವೇ?
ಉ: ಹಂತ ಹಂತವಾಗಿ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಲಿದೆ. ಸರ್ಕಾರ ಕೊಡುವ ಅನುದಾನ ಮಾತ್ರವಲ್ಲದೇ, ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ಹಣಕಾಸಿನ ನೆರವು ಪಡೆಯುವುದಕ್ಕೆ ಅವಕಾಶ ಇದೆ. ಯುಜಿಸಿ, ಐಸಿಎಚ್‌ಆರ್ ಸಂಸ್ಥೆಗಳು ಸಂಶೋಧನೆಗಾಗಿ ಧನ ಸಹಾಯ ಮಾಡುತ್ತವೆ. ಎಲ್ಲೆಲ್ಲಿ ಹಣಕಾಸಿನ ನೆರವು ಪಡೆಯಲು ಸಾಧ್ಯವಿದೆಯೋ, ಅಲ್ಲಿಂದೆಲ್ಲಾ ಪಡೆದು ಸಂಪನ್ಮೂಲ ಕ್ರೋಡೀಕರಿಸಲು ಪ್ರಯತ್ನಿಸಲಾಗುವುದು.
ಪ್ರ: ಚಾಮರಾಜನಗರಕ್ಕೆ ಹೊಸ ವಿ.ವಿ ಎಷ್ಟು ಮುಖ್ಯ ಎಂದೆನಿಸುತ್ತದೆ?
ಉ: ಚಾಮರಾಜನಗರ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹಿಂದೆಯೇ ಹೇಳಿತ್ತು. 2010–11ರಲ್ಲಿ ಪ್ರೊ.ವಿ.ಜಿ.ತಳವಾರ್ ಇಲ್ಲಿ ಮೈಸೂರು ವಿ.ವಿಯ ಉಪಕೇಂದ್ರ ಆರಂಭಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ನಂತರ ಅದು ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಆಯಿತು. ಕೇಂದ್ರವು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದೆ. ಈ ಕೇಂದ್ರದಿಂದಾಗಿ ಜಿಲ್ಲೆಯ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವುದು ಸಾಧ್ಯವಾಗಿದೆ. ಪ್ರತ್ಯೇಕ ವಿ.ವಿಯಿಂದಾಗಿ ಈ ಅವಕಾಶ ಇನ್ನಷ್ಟು ಹೆಚ್ಚಾಗಿದೆ. ವಿ.ವಿಯಿಂದ ಶೈಕ್ಷಣಿಕವಾಗಿ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ.
‘ಎನ್‌ಇಪಿ ಜಾರಿಗೆ ತಜ್ಞರ ಸಮಿತಿ’
ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೆ ತಂದಿದ್ದು, ದೇಶದಲ್ಲಿಯೇ ಕರ್ನಾಟಕ ಅದನ್ನು ಪ್ರಥಮವಾಗಿ ಜಾರಿಗೊಳಿಸಿದೆ. ವಿ.ವಿಯಲ್ಲಿ ಎನ್‌ಇಪಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು. ಈ ಸಂಬಂಧ ತಜ್ಞರ ಸಮಿತಿಯೊಂದನ್ನು ರಚಿಸಲಿದ್ದೇನೆ. ಅವರೊಂದಿಗೆ ಚರ್ಚಿಸಿ ನಮ್ಮ ವಿ.ವಿಯಲ್ಲಿ ಆರಂಭಿಸಬೇಕಾಗಿರುವ ಕೋರ್ಸ್‌ಗಳು, ಕೌಶಲ ಆಧಾರಿತವಾದ ಕೋರ್ಸ್‌ಗಳು, ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಬೇಕು ಎಂಬುದು ಸೇರಿದಂತೆ ಶೈಕ್ಷಣಿಕವಾದ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಡಾ.ಎಂ.ಆರ್.ಗಂಗಾಧರ್ ಹೇಳಿದರು.
ಅತಿಥಿ ಉಪನ್ಯಾಸಕನಿಂದ ಮುಖ್ಯಸ್ಥನವರೆಗೆ...
ಮೈಸೂರಿನವರೇ ಆದ ಡಾ.ಗಂಗಾಧರ್, 1996ರಲ್ಲಿ ಮೈಸೂರು ವಿ.ವಿಯ ಮಾನವಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಬೋಧನಾ ವೃತ್ತಿ ಆರಂಭಿಸಿದವರು. ವೃತ್ತಿಯ ಜೊತೆಗೆ ಪಿಎಚ್.ಡಿಯನ್ನೂ ಮಾಡಿದರು. 2003ರಲ್ಲಿ ಅದೇ ವಿಭಾಗದಲ್ಲಿ ರೀಡರ್ ಆಗಿ ನೇಮಕಗೊಂಡರು. 2006ರಲ್ಲಿ ಸಹ ಪ್ರಾಧ್ಯಾಪಕರಾಗಿ, 2009ರಲ್ಲಿ ಪ್ರಾಧ್ಯಾಪಕರಾಗಿ ಮುಂಬಡ್ತಿ ಪಡೆದರು. ಅದೇ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲೇ ಸರ್ಕಾರ ಅವರನ್ನು ಜಿಲ್ಲೆಯ ವಿ.ವಿಯ ಕುಲಪತಿಯಾಗಿ ನೇಮಕಾತಿ ಮಾಡಿದೆ.
ಮಾನವಶಾಸ್ತ್ರ ತಜ್ಞರಾಗಿ ಗಂಗಾಧರ್, ಕುಲಶಾಸ್ತ್ರೀಯ ಅಧ್ಯಯನ ಸೇರಿದಂತೆ ಹಲವು ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಕೇಂದ್ರ ವಿ.ವಿಯ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಧಾರವಾಡದ ಸಿಎಂಡಿಆರ್‌ನ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ. ಮೈಸೂರು ವಿ.ವಿಯ ಇಎಂಪಿಸಿಯ ನಿರ್ದೇಶಕರಾಗಿ ಆರು ತಿಂಗಳು ಕೆಲಸ ಮಾಡಿದ್ದಾರೆ.
ಅಧಿಕಾರ ಸ್ವೀಕಾರ: ಡಾ.ಗಂಗಾಧರ್ ಗುರುವಾರ ಅಧಿಕಾರ ಸ್ವೀಕರಿಸಿದರು. ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪಿ.ಮಾದೇಶ್ ಅಧಿಕಾರ ಹಸ್ತಾಂತರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.