ಕೊಳ್ಳೇಗಾಲ: ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆ, ಮೊಳೆ ಬಡಾವಣೆಯ ಅಂಗನವಾಡಿ ಕೇಂದ್ರ ಹಾಗೂ ವಿವಿಧ ಸರ್ಕಾರಿ ಕಚೇರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ದಿಡೀರ್ ಭೇಟಿ ನೀಡಿ ಶುಕ್ರವಾರ ಪರಿಶೀಲನೆ ಮಾಡಿದರು.
ನಗರದ ಮೊಳೆ ಬಡಾವಣೆಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮಕ್ಕಳ ಜೊತೆ ಕೆಲಕಾಲ ಮಾತನಾಡಿ, ನಂತರ ಆಹಾರ ಪದಾರ್ಥಗಳನ್ನು ಹಾಗೂ ಬೇಯಿಸಿದ ಮೊಟ್ಟೆಯನ್ನು ಒಡೆದು ನೋಡಿದರು. ಮಕ್ಕಳಿಗೆ ಉತ್ತಮ ಆಹಾರಗಳನ್ನು ನೀಡಬೇಕು ಕಳಪೆ ಆಹಾರಗಳನ್ನು ನೀಡಬಾರದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕಳಪೆ ಮೊಟ್ಟೆಗಳ ಬಗ್ಗೆ ರಾಜ್ಯದಾದ್ಯಂತ ಚರ್ಚೆಯಾಗುತ್ತಿದೆ. ಮೊಟ್ಟೆಗಳು ಉತ್ತಮವಾಗಿರಬೇಕು ಹಾಗೂ ಆಹಾರ ಪದಾರ್ಥಗಳು ಸ್ವಚ್ಛವಾಗಿರಬೇಕು. ಒಂದು ವೇಳೆ ಕಳಪೆ ಆಹಾರ ಪದಾರ್ಥಗಳು ಕಂಡುಬಂದರೆ ಇದಕ್ಕೆ ನೇರ ಹೊಣೆ ನೀವೇ ಆಗುತ್ತೀರಿ ಎಂದು ಸಿಡಿಪಿಓ ನಂಜುಮಣಿ ಅವರಿಗೆ ಎಚ್ಚರಿಸಿದರು. ನಂತರ ಅಲ್ಲಿಂದ ಹೊರಟ ಜಿಲ್ಲಾಧಿಕಾರಿಗಳು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಭೇಟಿ ನೀಡಿ ಕೆಲವು ಕಡತಗಳನ್ನು ಪರಿಶೀಲಿಸಿದರು. ಅದಲ್ಲದೆ ರೋಗಿಗಳ ಬಳಿ ಹೋಗಿ ರೋಗಿಗಳ ಯೋಗಕ್ಷೇಮವನ್ನು ವಿಚಾರಿಸಿದರು. ಇಲ್ಲಿ ಊಟ ತಿಂಡಿ ಸರಿಯಾಗಿ ನೀಡುತ್ತಿದ್ದಾರಾ ಹಾಗೂ ವೈದ್ಯರು ಮತ್ತು ನರ್ಸ್ ಗಳು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರಾ ಎಂದು ಕೆಲರೋಗಿಗಳನ್ನು ವಿಚಾರಣೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಸಾಗಿಸಬೇಕು ಅದಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ನಾನು ಅಧಿಕಾರವಹಿಸಿಕೊಂಡು ಕೇವಲ ಒಂದು ವಾರಗಳಷ್ಟೇ ಕಳೆದಿವೆ ಹಾಗಾಗಿ ಎಲ್ಲಾ ಸರ್ಕಾರಿ ಕಚೇರಿಗಳಿಗೂ ಸಹ ಖುದ್ದು ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದೇನೆ. ಕೆಲವು ಕಡೆ ಉತ್ತಮ ಸ್ಪಂದನೆಗಳು ಬರುತ್ತವೆ ಇನ್ನು ಕೆಲವು ಕಡೆ ಸಮಸ್ಯೆಗಳು ಇವೆ ಹಾಗಾಗಿ ಕೂಡಲೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದರು. ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಲು ದುಬಾರಿ ಹಣ ಪಡೆದುಕೊಳ್ಳುತ್ತಿದ್ದಾರೆ ಈ ವಿಚಾರದಲ್ಲಿ ಸ್ಕ್ಯಾನಿಂಗ್ ಸೆಂಟರ್ ಕೈವಾಡವಿದೆ. ಇದರ ಬಗ್ಗೆ ಗಮನಹರಿಸಬೇಕು ಎಂದು ಮಾಧ್ಯಮದವರ ಪ್ರಶ್ನಿಸಿದರು. ಉತ್ತರಿಸಿದ ಅವರು ಈಗಾಗಲೇ ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದೇನೆ .ಈ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹಾಗೂ ಸಿಬ್ಬಂದಿಗಳ ಕೊರತೆ ಇದೆ ಎಂದು ಹೇಳಿದ್ದಾರೆ ಇದರ ಜೊತೆಗೆ ರೇಡಿಯಾಲಜಿಸ್ಟ್ ಕೊರತೆಯೂ ಇದೆ.ಇಲ್ಲದೆ ಜೊತೆಗೆ ಡಯಾಲಿಸಿಸ್ ತಜ್ಞರ ಕೊರತೆಯೂ ಇದೆ . ಕೆಲವೇ ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳನ್ನೂ ಸರಿಪಡಿಸುತ್ತೇನೆ ಎಂದರು.
ಉಪ ವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಮಂಜುಳಾ, ಸಿಡಿಪಿಒ ನಂಜಮ್ಮಣಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಗೋಪಾಲ್, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜಶೇಖರ್ ಹಾಗೂ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.