ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕಾಂಗ್ರೆಸ್‌ ‘ಕೋಟೆ’ಯಲ್ಲಿ ಹೆಚ್ಚಿದ ಬಿರುಕು

‘ಕೈ’ ಜಾರಿದ ಚಾಮರಾಜನಗರ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆಯೂ ಬಿಜೆಪಿಗೆ ಖಚಿತ
Last Updated 3 ನವೆಂಬರ್ 2020, 14:30 IST
ಅಕ್ಷರ ಗಾತ್ರ

ಚಾಮರಾಜನಗರ: ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ಚಾಮರಾಜನಗರದಲ್ಲಿ ‘ಕೈ’ಯ ಶಕ್ತಿ ಈಗ ಇನ್ನಷ್ಟು ಉಡುಗಿದೆ.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರದ ಚುನಾವಣಾ ರಾಜಕೀಯವನ್ನು ಗಮನಿಸಿದರೆ ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ಕಂಡು ಬಂದಿರುವ ‘ಬಿರುಕು’ ದೊಡ್ಡದಾಗುತ್ತಾ ಹೋ‌ಗಿದೆ. ಈಚೆಗೆ ನಡೆದ ಕೊಳ್ಳೇಗಾಲ ಮತ್ತು ಚಾಮರಾಜನಗರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯ ಫಲಿತಾಂಶಗಳು ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿವೆ.

ಎಚ್‌.ಎಸ್‌.ಮಹದೇವಪ್ರಸಾದ್‌ ಅವರ ನಿಧನಾ ನಂತರ ಜಿಲ್ಲೆಯಲ್ಲಿ ನಡೆದ ಚುನಾವಣೆಗಳಲ್ಲಿ ಸೋಲಿನ ಕಹಿಯನ್ನೇ ಉಣ್ಣುತ್ತಾ ಬಂದಿರುವ ಕಾಂಗ್ರೆಸ್‌ ಪಾಲಿಗೆ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗಳಲ್ಲೂ ಕಹಿಯೇ ಆಗಿದೆ.

ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೊಳ್ಳೇಗಾಲ ಹಾಗೂ ಚಾಮರಾಜನಗರ ನಗರಸಭೆಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಗುಂಡ್ಲುಪೇಟೆ ಪುರಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇರುವುದರಿಂದ ಅಧಿಕಾರಕ್ಕೆ ಏರುವುದು ಖಚಿತ. ಅತಂತ್ರವಾಗಿರುವ ಹನೂರು ಪಟ್ಟಣ ಪಂಚಾಯಿತಿಯ ರಾಜಕೀಯ ಚಿತ್ರಣ ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ, ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಮಾತ್ರ ಕಾಂಗ್ರೆಸ್‌ ಅಧಿಕಾರಕ್ಕೆ ಏರಿದೆ.

ಲೋಕಸಭಾ ಚುನಾವಣಾ ಸೋಲಿನ ಆಘಾತದಿಂದ ಇನ್ನೂ ಹೊರಬರದ ಜಿಲ್ಲಾ ಕಾಂಗ್ರೆಸ್‌ ಸಮಿತಿ, ಎರಡೂ ನಗರಸಭೆಗಳಲ್ಲಿ ಅಧಿಕಾರ ಹಿಡಿಯಲು ಹೆಚ್ಚು ಪ್ರಯತ್ನ ಮಾಡಿಲ್ಲ ಎಂದು ಅದರ ಮುಖಂಡರೇ ಖಾಸಗಿಯಾಗಿ ಹೇಳುತ್ತಿದ್ದಾರೆ.

ಕೊಳ್ಳೇಗಾಲದಲ್ಲಿ ಸ್ಥಳೀಯ ಮುಖಂಡರು ಪ್ರಯತ್ನ ನಡೆಸಿದರಾದರೂ, ಎನ್‌.ಮಹೇಶ್‌ ಹಾಗೂ ಬಿಜೆಪಿ ಮುಖಂಡರ ಕಾರ್ಯತಂತ್ರದಲ್ಲಿ ಅದು ವಿಫಲವಾಗಿತ್ತು. ಚಾಮರಾಜನಗರದಲ್ಲಿ ನಗರಸಭೆಯ ಚುನಾವಣೆಯ ನೇತೃತ್ವವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ವಹಿಸಿದ್ದರು. ಅಧಿಕಾರವನ್ನು ತಂದುಕೊಡುವಲ್ಲಿ ಅವರು ವಿಫಲರಾಗಿದ್ದಾರೆ.

ಕಾಣದ ಒಗ್ಗಟ್ಟು: ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಮುಖಂಡರಲ್ಲಿ ಒಗ್ಗಟ್ಟು ಕಂಡು ಬರಲಿಲ್ಲ. ಸಭೆಗಳು ಹೆಚ್ಚು ನಡೆಯಲಿಲ್ಲ. ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆರ್‌.ಧ್ರುವನಾರಾಯಣ ಅವರು ಸಕ್ರಿಯವಾಗಿ ಭಾಗವಹಿಸಿದಂತೆ ಕಾಣಲಿಲ್ಲ.

ಕೊಳ್ಳೇಗಾಲ ನಗರಸಭೆಯಲ್ಲಿ ಬಿಎಸ್‌ಪಿ ಜೊತೆಗೆ ಇದ್ದ ಇಬ್ಬರು ಸದಸ್ಯರ ಬೆಂಬಲ ಪಡೆಯಲು ಅವರಿಗೆ ಸಾಧ್ಯವಾಗಿಲ್ಲ. ಪಕ್ಷೇತರ ನಾಲ್ವರು ಸದಸ್ಯರ ಪೈಕಿ ಒಬ್ಬರನ್ನು ಮನವೊಲಿಸುವಲ್ಲೂ ಅವರು ವಿಫಲರಾದರು. ಇದರಿಂದಾಗಿ ಕಳೆದ ಅವಧಿಯಲ್ಲಿ ಭಾರಿ ಬಹುಮತದೊಂದಿಗೆ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಈ ಬಾರಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗಿದೆ.

ಚಾಮರಾಜನಗರ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲೂ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕೈ ಪಕ್ಷಕ್ಕೆ ಆಗಿಲ್ಲ. ಚುನಾವಣೆಯ ಜವಾಬ್ದಾರಿ ಹೊತ್ತಿದ್ದ ಶಾಸಕ ಪುಟ್ಟರಂಗಶೆಟ್ಟಿ ಅವರೇ ಕೊನೆ ಕ್ಷಣದಲ್ಲಿ ಮತದಾನಕ್ಕೆ ಗೈರು ಹಾಜರಿಯಾಗಿದ್ದು ಪಕ್ಷಕ್ಕೆ ಭಾರಿ ಮುಜುಗರ ಉಂಟು ಮಾಡಿದೆ.

ಬಿಜೆಪಿ 15 ಸದಸ್ಯರನ್ನು ಹೊಂದಿದ್ದರೂ, ಕಾಂಗ್ರೆಸ್‌ಗೆ ಅಧಿಕಾರ ಹಿಡಿಯುವುದು ಕಷ್ಟವೇನಲ್ಲ. ಹಿಂದಿನ ಅವಧಿಯಲ್ಲೂ ಕಾಂಗ್ರೆಸ್‌ಗೆ ಬಹುಮತವೇನಿರಲಿಲ್ಲ. ಎಸ್‌ಡಿಪಿಐ ಹಾಗೂ ಪಕ್ಷೇತರರ ನೆರವಿನಿಂದ ಯಶಸ್ವಿಯಾಗಿ ಆಡಳಿತ ನಡೆಸಿತ್ತು.

ಈ ಬಾರಿಯೂ ಎಸ್‌ಡಿಪಿಐ, ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಬೆಂಬಲ ನೀಡಿತ್ತು. ಪಕ್ಷೇತರ ಸದಸ್ಯ ಬಸವಣ್ಣ ಹಾಗೂ ಬಿಎಸ್‌ಪಿ ಅಭ್ಯರ್ಥಿ ಪ್ರಕಾಶ್‌ ಅವರ ಬೆಂಬಲಗಳಿಸಿದ್ದರೆ ಸಾಕಿತ್ತು. ಆದರೆ, ಅದರಲ್ಲಿ ಮುಖಂಡರು ವೈಫಲ್ಯ ಕಂಡಿದ್ದರಿಂದ ಅಧಿಕಾರ ಕೈತಪ್ಪಿದೆ.

‘ಉಪ್ಪಾರ ಸಮುದಾಯಕ್ಕೆ ಸೇರಿದ ಶಾಂತಿ ಅವರು ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದರು. ಅದೇ ಸಮುದಾಯದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. ಕನಿಷ್ಠ ಪಕ್ಷ ಚುನಾವಣೆಗೆ ಬಂದು ಮತದಾನವಾದರೂ ಮಾಡಬಹದಿತ್ತು. ಅದನ್ನೂ ಮಾಡಿಲ್ಲ’ ಎಂದು ಹಿರಿಯ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಪುಟ್ಟರಂಗಶೆಟ್ಟಿ ಅವರು ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹಿರಿಯ ಮುಖಂಡರನ್ನು ಕರೆದಿರಲಿಲ್ಲ ಎಂದು ಪಕ್ಷದ ಮುಖಂಡರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ‘ನಗರಸಭೆಯ ಅಧಿಕಾರ ಹಿಡಿಯಲು ನಾನು ಎಲ್ಲ ಪ್ರಯತ್ನ ಮಾಡಿದ್ದೇನೆ. ಬಿಎಸ್‌ಪಿ ಸದಸ್ಯ ಹಾಗೂ ಪಕ್ಷೇತರ ಸದಸ್ಯ ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಹೇಳಿದ್ದರು. ಆದರೆ, ಕೊನೆ ಕ್ಷಣದಲ್ಲಿ ಇಬ್ಬರೂ ಕೈಕೊಟ್ಟರು. ಅದರಿಂದಾಗಿ ಸೋಲಾಯಿತು’ ಎಂದರು.

ಮತದಾನಕ್ಕೆ ಗೈರಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಬ್ಬರು ಸದಸ್ಯರು ಬೆಂಬಲ ನೀಡುವುದಿಲ್ಲ ಎಂದು ಗೊತ್ತಾದ ಬಳಿಕ, ನಮಗೆ ಬಹುಮತ ಸಿಗುವುದಿಲ್ಲ ಎಂಬುದು ಖಚಿತವಾಯಿತು. ನಾನು ಮತದಾನಕ್ಕೆ ಹೋದರೆ ಅವಮಾನವಾಗುತ್ತದೆ ಎಂದು ಹೋಗಿಲ್ಲ’ ಎಂದರು.

ಪ್ರಬಲವಾಗುತ್ತಿದೆ ಬಿಜೆಪಿ:2018ರ ವಿಧಾನಸಭಾ ಚುನಾವಣೆಯ ಬಳಿಕ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಪ್ರಬಲವಾಗುತ್ತಿದೆ. ಒಬ್ಬರು ಶಾಸಕರು (ಗುಂಡ್ಲುಪೇಟೆ) ಇದ್ದಾರೆ. ಬಿಎಸ್‌ಪಿಯಿಂದ ಉಚ್ಚಾಟಿತರಾಗಿರುವ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಈಗ ಬಿಜೆಪಿಗೆ ಹತ್ತಿರವಾಗಿದ್ದಾರೆ. ಕೊಳ್ಳೇಗಾಲ ನಗರಸಭೆಯ ವರಿಷ್ಠರ ಚುನಾವಣೆ ಇದನ್ನು ಸಾರಿ ಹೇಳಿದೆ.

ಹಿರಿಯ ಮುಖಂಡ ವಿ.ಶ್ರೀನಿವಾಸ ಪ್ರಸಾದ್‌ ಅವರು ಬಿಜೆಪಿಗೆ ಸೇರ್ಪಡೆಗೊಂಡ ನಂತರ, ಅವರ ಬೆಂಬಲಿಗರು ಕೂಡ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಿದ್ದು, ಕಮಲ ಪಾಳಯದ ಗೆಲುವಿಗೆ ಪ್ರಮುಖ ಕಾರಣವಾಯಿತು. ಜಿಲ್ಲೆಯ ಬಿಜೆಪಿಗೆ ಅವರು ತಮ್ಮದೇ ರೀತಿಯಲ್ಲಿ ಶಕ್ತಿ ತುಂಬಿದ್ದಾರೆ. ಎರಡೂ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಗಳಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೇ, ರಣತಂತ್ರವನ್ನೂ ಹೆಣೆದಿದ್ದಾರೆ. ಕೊಳ್ಳೇಗಾಲದಲ್ಲಿ ಎನ್‌.ಮಹೇಶ್‌ ಅವರ ಬೆಂಬಲಿಗರೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಅವರ ಪಾತ್ರವೂ ಇದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT