ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಸುರೇಶ್‌ಕುಮಾರ್‌

Last Updated 25 ಜುಲೈ 2020, 14:27 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.

ಸರ್ಕಾರಕ್ಕೆ ಒಂದು ವರ್ಷ ಆಗುತ್ತಿರುವ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘2019ರ ಅಕ್ಟೋಬರ್‌ ಆರಂಭದಲ್ಲಿ ಉಸ್ತುವಾರಿ ಸಚಿವನಾಗಿ ನೇಮಕವಾದ ನಂತರ 36 ಬಾರಿ ಜಿಲ್ಲೆಗೆ ಭೇಟಿ ಕೊಟ್ಟಿದ್ದೇನೆ. ಎಲ್ಲ ಭಾಗಕ್ಕೂ ಭೇಟಿ ನೀಡಿದ್ದೇನೆ. ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿದ್ದೇನೆ. ವಿಶೇಷವಾಗಿ ಕಾಡಂಚಿನ ಗ್ರಾಮಗಳ ಅವಶ್ಯಕತೆಗಳನ್ನು ಪೂರೈಸಲು ಕ್ರಮ ಕೈಗೊಂಡಿದ್ದೇನೆ’ ಎಂದರು.

ಗೋಪಿನಾಥಂ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಮನವಿ ಮಾಡಿದ್ದರು. ಮಂಜೂರು ಮಾಡಿಸಿದ್ದೇವೆ. ಅಲ್ಲಿನ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ₹30 ಲಕ್ಷ ವೆಚ್ಚದ ಯೋಜನೆ ರೂಪಿಸಲಾಗಿದೆ. ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ, ಕೆಂಚಳ್ಳಿ ಗ್ರಾಮಗಳ ಮಕ್ಕಳಿಗೆ ಶಾಲೆಗೆ ಹೋಗಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ನ್ಯಾಯಬೆಲೆ ಅಂಗಡಿ ತೆರೆಯಲಾಗಿದೆ’ ಎಂದು ಹೇಳಿದರು.

‘ಕೆರೆ ತುಂಬಿಸುವ ಯೋಜನೆಗೆ ಮಹತ್ವ ನೀಡಲಾಗಿದೆ. ಕೊಟ್ಟ ಮಾತಿನಂತೆಯೇ ನಿಗದಿತ ಸಮಯದಲ್ಲಿ ಹುತ್ತೂರು ಕೆರೆಯಿಂದ ವಡ್ಡೆಗೆರೆ ಕೆರೆಗೆ ನೀರು ತುಂಬಿಸಲಾಗಿದೆ. ಕೋವಿಡ್‌ ನಿಯಂತ್ರಣದಲ್ಲಿ ಜಿಲ್ಲೆ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ₹1.79 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕೋವಿಡ್‌–19 ಪ್ರಯೋಗಾಲಯ ಸ್ಥಾಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ₹149.93 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಪೈಕಿ 109.93 ಕೋಟಿ ವೆಚ್ಚದ ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದೆ. ಪ್ರಾಧಿಕಾರದ ವತಿಯಿಂದ ಕಾಡಂಚಿನ ಗ್ರಾಮಸ್ಥರಿಗೆ ಅಕ್ಕಿ, ಮಾಸ್ಕ್‌ ವಿತರಿಸಲಾಗಿದೆ’ ಎಂದು ಸುರೇಶ್‌ ಕುಮಾರ್ ಹೇಳಿದರು.

‘ನರೇಗಾ ಅಡಿಯಲ್ಲಿ ಈ ವರ್ಷದ ಏಪ್ರಿಲ್‌ 1ರಿಂದ ಜುಲೈ 24ರವರೆಗೆ 16.80 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಗೆ ಬರುವ ಚಂಗಡಿ ಗ್ರಾಮವನ್ನು ಸ್ಥಳಾಂತರಕ್ಕೆ ಒಪ್ಪಿಗೆ ನೀಡಲಾಗಿದ್ದು, ಪ್ರಕ್ರಿಯೆ ಜಾರಿಯಲ್ಲಿದೆ’ ಎಂದರು.

‘ಸಂತೇಮರಹಳ್ಳಿಯ ತಾಯಿ ಮಗು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದಕ್ಕೆ ಹಾಗೂ ಅಲ್ಲಿ ಆಮ್ಲಜನಕ ಪೈಪ್‌ ಅಳವಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಸಚಿವರು ವಿವರಿಸಿದರು.

ಸಮಸ್ಯೆ ಇತ್ಯರ್ಥ: ‘ಉಸ್ತುವಾರಿ ಸಚಿವನಾದ ಮೇಲೆ ನಾಲ್ಕು ತಿಂಗಳು ಮಾತ್ರ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿದೆಯಷ್ಟೆ. ಮಾರ್ಚ್‌ನಿಂದ ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಮುಳುಗಿದ್ದೆ. ಚಾಮರಾಜನಗರದ ಜೋಡಿ ರಸ್ತೆಗೆ ಬೆಳಕಿನ ವ್ಯವಸ್ಥೆ ಹಾಗೂ ಬಾಕಿ ಉಳಿದಿರುವ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟೆಯನ್ನು ಕಿತ್ತು ಹಾಕಿ, ಕೈಗಾರಿಕಾ ಸ್ಥಾಪನೆ, ಉದ್ಯೋಗ ಸೃಷ್ಟಿಯಾಗಿ ಜಿಲ್ಲೆಯು ಅಭಿವೃದ್ಧಿ ಕಾಣಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ನನ್ನ ಕಡೆಯಿಂದ ತಪ್ಪಾಗಿಲ್ಲ: ಸ್ಪಷ್ಟನೆ

ಜಿಲ್ಲಾ ಉಸ್ತುವಾರಿ ಸಚಿವರು ಸಭೆಗೆ ಕರೆಯದೆ ಕಡೆಗಣಿಸುತ್ತಿದ್ದಾರೆ ಎಂಬ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸುರೇಶ್‌ ಕುಮಾರ್‌ ಅವರು, ‘ನಾನು ನಡೆಸಿದ ಎಷ್ಟು ಸಭೆಗಳಲ್ಲಿ ಶಾಸಕರು ಇದ್ದರು ಎಂದು ಎಲ್ಲರಿಗೂ ಗೊತ್ತಿದೆ. ಅವರ ಪಕ್ಷದಿಂದ, ಈ ರೀತಿಯ ಆರೋಪ ಮಾಡಬೇಕು ಎಂಬ ಸೂಚನೆ ಇರಬಹುದು, ನನ್ನ ಕಡೆಯಿಂದ ಯಾವುದೇ ತಪ್ಪಾಗಿಲ್ಲ’ ಎಂದು ಹೇಳಿದರು.

‘ನಾನು ಈ ಹಿಂದೆ ತುಮಕೂರು, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಉಸ್ತುವಾರಿ ಸಚಿವನಾಗಿದ್ದೆ. ಯಾರನ್ನೂ ಬೇಕಾದರೂ ಕೇಳಬಹುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೇನೆ. ರಾಜಕೀಯ ಬೆರೆಸದೇ ಇರುವ ವ್ಯಕ್ತಿ ನಾನು. ರಾಜಕೀಯ ಅಭಿವೃದ್ಧಿ ಆಗಬೇಕು ಎಂದು ಬಯಸುವವನು. ನಿದ್ದೆ ಮಾಡುವವರನ್ನು ಎಬ್ಬಿಸಬಹುದು. ನಿದ್ದೆ ಮಾಡಿದವರ ರೀತಿ ನಟನೆ ಮಾಡುವವರನ್ನು ಎಚ್ಚರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಕಾಂಗ್ರೆಸ್‌ ‌ಮುಖಂಡ ನಂಜುಡಸ್ವಾಮಿ ಅವರು ‘ನಾಲಾಯಕ್‌ ಮಂತ್ರಿ’ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ.ಅವರ ಬಗ್ಗೆ ನನಗೆ ಕನಿಕರ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT