ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನ್‌ ಶೆಟ್ಟಿ ಕ್ಷಮೆ ಯಾಚನೆ, ಯುಟ್ಯೂಬ್‌ನಿಂದ ‘ಕೋಲು ಮಂಡೆ’ ಹಾಡು ತೆರವು

‘ಕೋಲು ಮಂಡೆ’ ಹಾಡಿನಲ್ಲಿ ಮಾದ‍ಪ್ಪ, ಶಿವಶರಣೆಗೆ ಅವವಮಾನ, ಭಕ್ತರ ಆಕ್ಷೇಪ
Last Updated 25 ಆಗಸ್ಟ್ 2020, 13:15 IST
ಅಕ್ಷರ ಗಾತ್ರ

ಚಾಮರಾಜನಗರ: ಕನ್ನಡದ ರ‍್ಯಾಪರ್‌ ಚಂದನ್‌ಶೆಟ್ಟಿ ಅವರು ಸಂಗೀತ ನೀಡಿ ಹಾಡಿದ್ದ, ಯುಟ್ಯೂಬ್‌ನಲ್ಲಿ ಇದೇ 22ರಂದು ಬಿಡುಗಡೆಗೊಂಡಿದ್ದ ‘ಕೋಲುಮಂಡೆ ಜಂಗಮ ದೇವರು’ ರ‍್ಯಾಪ್ ಹಾಡು ವಿವಾದ ಸೃಷ್ಟಿಸಿದೆ.

ಹಾಡನ್ನು ತಿರುಚಲಾಗಿದೆ ಹಾಗೂ ಶಿವಶರಣೆ ಸಂಕಮ್ಮ ಅವರಿಗೆ ಅವಮಾನ ಮಾಡಲಾಗಿದೆ ಎಂದುಮಲೆ ಮಹದೇಶ್ವರಸ್ವಾಮಿ ಭಕ್ತರು ಹಾಗೂ ಜಾನಪದ ಹಾಡುಗಳ ಪ್ರೇಮಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ಗಾಯಕ ಚಂದನ್‌ ಶೆಟ್ಟಿ ಅವರು ಕ್ಷಮೆ ಕೇಳಿದ್ದಾರೆ. ಯುಟ್ಯೂಬ್‌ನಿಂದ ಆ ಹಾಡನ್ನು ತೆಗೆಯಲಾಗಿದೆ.

ಅನಂದ್‌ ಆಡಿಯೊ ನಿರ್ಮಿಸಿರುವ ಈ ಆಲ್ಬಂನಲ್ಲಿ ‘ಕೋಲುಮಂಡೆ ಜಂಗಮ ದೇವ’ ಜಾನಪದ ಹಾಡಿಗೆ ಆಧುನಿಕ ಸ್ಪರ್ಶ ಕೊಟ್ಟು, ರ‍್ಯಾಪ್‌ ಹಾಡಿನಂತೆ ಚಂದನ್‌ ಶೆಟ್ಟಿ ಹಾಡಿದ್ದಾರೆ. ವಿಡಿಯೊದಲ್ಲಿ ನೃತ್ಯವನ್ನೂ ಮಾಡಿದ್ದಾರೆ.ಆನಂದ್‌ ಆಡಿಯೊದ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಹಾಡನ್ನುಚಂದನ್‌ಶೆಟ್ಟಿಅವರೇ ಬಿಡುಗಡೆ ಮಾಡಿದ್ದರು. ಮೂರು ದಿನಗಳ ಅವಧಿಯಲ್ಲಿ 30 ಲಕ್ಷಕ್ಕೂ ಹೆಚ್ಚು ಮಂದಿ ಹಾಡು ವೀಕ್ಷಿಸಿದ್ದರು.

‘ಭಕ್ತಿಗೀತೆಯಾಗಿರುವ ಈ ಹಾಡನ್ನು ತಿರುಚಲಾಗಿದೆ. ನೃತ್ಯ ಕಲಾವಿದರು ಆಧುನಿಕ ಪೋಷಾಕುಗಳನ್ನು ಧರಿಸುವ ಮೂಲಕ, ಶಿವಶರಣೆ ಸಂಕಮ್ಮ ಪಾತ್ರವನ್ನು ಅರೆನಗ್ನವಾಗಿ ತೋರಿಸುವ ಮೂಲಕ ಅವಮಾನ ಮಾಡಲಾಗಿದೆ’ ಎಂದು ಭಕ್ತರು ಹಾಗೂ ಜಾನಪದ ಹಾಡುಗಳು ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

‘ಶ್ರೀಮಲೆಮಹದೇಶ್ವರ ಸ್ವಾಮಿ- ದಕ್ಷಿಣ ದ್ವಾರ ಹನೂರು ಕ್ಷೇತ್ರ’ ಎಂಬ ಪೇಸ್‌ಬುಕ್‌ ಪೇಜ್‌ನಲ್ಲಿ ಈ ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್‌ ಮಾಡಲಾಗಿತ್ತು.

‘ಚಂದನ್‌ಶೆಟ್ಟಿ, ನೀವು ಮಹಾ ಕಲಾವಿದರು. ಆದರೆ, ನಮ್ಮ ಜಾನಪದದಲ್ಲಿ ನಾವು ಶಿವಶರಣೆ ಸಂಕಮ್ಮ ಅವರನ್ನೂ ಪೂಜಿಸುತ್ತೇವೆ. ಆದರೆ, ವಾಸ್ತವವಾಗಿ ನೀಲೇಗೌಡ ಆಕೆಯನ್ನು ಅನುಮಾನಿಸಲಿಲ್ಲ. ಯಾರಾದರೂ ಮರುಳು ಮಾಡಿ ತನ್ನಿಂದ ದೂರ ಆಗಬಾರದೆಂದು ಆಕೆಗೆ ಕಷ್ಟಕೋಟಲೆ ಕೊಟ್ಟು ಹೆಜ್ಜೇನು ಬೇಟೆಗೆ ಹೋರಡುತ್ತಾನೆ. ಆದರೆ, ಈ ರೀತಿ ಮಾದಕವಾಗಿ ತೋರಿಸುವ ಅವಶ್ಯಕತೆ ಏನಿತ್ತು?’ ಎಂದು ಪೋಸ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

‘ಮುತ್ತೈದೆಯ ಕೂಗು ಕೇಳಿ ಸ್ವತಃ ಶ್ರೀಮಲೆ ಮಹದೇಶ್ವರ ಸ್ವಾಮಿಯು ಭಕ್ತಿಗೆ ಒಲಿದು ಭಾಗ್ಯ ಕೊಟ್ಟಿದ್ದೂ ಇದೆ. ನಮ್ಮ ಜನಪದ, ನಮ್ಮ ಹೆಮ್ಮೆಯನ್ನು ದಯವಿಟ್ಟು ನಮ್ಮವರೇ ಈ ರೀತಿ ಪ್ರತಿಬಿಂಬಿಸುವುದು ಎಷ್ಟು ಸರಿ’ ಎಂದು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೊಳಗೊಂಡನಹಳ್ಳಿಯ ಶ್ರೀಮಲೆಮಹದೇಶ್ಟರಸ್ಟಾಮಿ ನೀಲಗಾರರ ಸಂಘವೂ ಪ್ರಶ್ನಿಸಿತ್ತು.

ಹಾಡನ್ನು ವಿರೋಧಿಸಿ ಬರೆದ ಪೋಸ್ಟ್‌ಗಳು ವೈರಲ್‌ ಆಗುತ್ತಿದ್ದಂತೆಯೇ ವಾಟ್ಸ್‌ವ್ಯಾಪ್‌ ಹಾಗೂ ಫೇಸ್‌ಬುಕ್‌ಗಳಲ್ಲಿ ಹಾಡಿನ ಬಗ್ಗೆ ವಿರೋಧ ಇನ್ನಷ್ಟು ಹೆಚ್ಚಾಯಿತು. ಮಾಧ್ಯಮಗಳು ಇದನ್ನು ಉಲ್ಲೇಖಿಸಿ ವರದಿ ಮಾಡಿದ ನಂತರ, ಚಂದನ್‌ ಶೆಟ್ಟಿ ಅವರು ಮಾಧ್ಯಮಗಳ ಮೂಲಕ ಕ್ಷಮೆ ಕೇಳಿದರು.

‘ಮಲೆಮಹಹೇಶ್ವರ ಸ್ವಾಮಿಯ ಭಕ್ತರಿಗೆ ಅವಮಾನ ಮಾಡುವ ಉದ್ದೇಶ ನನಗಿಲ್ಲ. ಆಗಿರುವ ಪ್ರಮಾದಕ್ಕೆ ಕ್ಷಮೆಯಾಚಿಸುತ್ತೇನೆ. ಶೀಘ್ರವೇ, ಈ ಹಾಡನ್ನು ಹಿಂತೆಗೆದುಕೊಳ್ಳಲಾಗುವುದು’ ಎಂದು ಅವರು ಹೇಳಿದರು. ಆದಾದ, ಕೆಲವೇ ಸಮಯದಲ್ಲಿ ಆನಂದ್‌ ಆಡಿಯೊ ಯುಟ್ಯೂಬ್‌ ಚಾನೆಲ್‌ನಿಂದ ಹಾಡನ್ನು ತೆಗೆಯಲಾಯಿತು.

ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದಲೂ ವಿರೋಧ

ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಮಾಧ್ಯಮಗಳಿಗೆ ವಿಡಿಯೊ ಸಂದೇಶ ರವಾನಿಸಿ, ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

‘ಈ ಹಾಡನ್ನು ಚಂದನ್‌ ಶೆಟ್ಟಿ ಮಾಡಬಾರದಿತ್ತು. ಹಾಡನ್ನು ತಿರುಚಲಾಗಿದೆ. ಸಂಕಮ್ಮ ಅವರ ಪಾತ್ರವನ್ನು ಅರೆನಗ್ನ ಸ್ಥಿತಿಯಲ್ಲಿ ತೋರಿಸಿದ್ದಾರೆ. ಇದು ಖಂಡಿತವಾಗಿಯೂ ಮಲೆ ಮಹದೇಶ್ವರರ ಭಕ್ತರಿಗೆ ನೋವುಂಟು ಮಾಡುವಂತೆ ಇದೆ. ಮಲೆ ಮಹದೇಶ್ವರರ ಸಾಹಿತ್ಯವನ್ನೂ ತಿರುಚಿದಂತೆ ಆಗಿದೆ. ಚಂದನ್‌ ಶೆಟ್ಟಿ ಅವರು ಕ್ಷಮೆ ಕೇಳಬೇಕು. ಯುಟ್ಯೂಬ್‌ ಚಾನೆಲ್‌ನಿಂದ ಹಾಡನ್ನು ತೆಗೆಯಬೇಕು. ಮುಂದೆ ಇಂತಹ ದುಸ್ಸಾಹಸಕ್ಕೆ ಕೈಹಾಕಬಾರದು. ಯಾವುದೇ ದೇವರ ಬಗ್ಗೆಯೂ ಈ ರೀತಿ ಮಾಡಬಾರದು’ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT