ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಲ್ಲೂರು ಜಾತ್ರೆ ಸರಳ: ಭಕ್ತರಿಗೆ ನಿರಾಸೆ

ಪ್ರತಿ ವರ್ಷ ಲಕ್ಷಾಂತರ ಭಕ್ತರು ಭಾಗಿಯಾಗುವ ಉತ್ಸವದ ಸಂಭ್ರಮ ಕಸಿದ ಕೋವಿಡ್‌
Last Updated 14 ಜನವರಿ 2021, 12:58 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕೋವಿಡ್‌ ಕಾರಣದಿಂದಾಗಿ ತಾಲ್ಲೂಕಿನ ಸುಪ್ರಸಿದ್ದ ಚಿಕ್ಕಲ್ಲೂರು ಜಾತ್ರೆಗೆ ಈ ಬಾರಿ ಸಾರ್ವಜನಿಕರ ಹಾಗೂ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಹಾಗೂ ಉತ್ಸವವು ಸರಳ ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗಿರುವುದು ಭಕ್ತರ‌ಲ್ಲಿ ನಿರಾಸೆ ಮೂಡಿಸಿದೆ.

ಪ್ರತಿ ವರ್ಷ ಜನವರಿ / ಫೆಬ್ರುವರಿ ತಿಂಗಳಲ್ಲಿ ಐದು ದಿನಗಳ ಕಾಲ ನಡೆಯುವ (ಈ ಬಾರಿ ಜ.28ರಿಂದ ಫೆ.1ರವರೆಗೆ ನಡೆಯಲಿದೆ) ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ರಾಜ್ಯದಲ್ಲೇ ಪ್ರಸಿದ್ಧಿ. ಕೆಲವು ವರ್ಷಗಳಿಂದೀಚೆಗೆ ಜಾತ್ರೆ ಸಮಯದಲ್ಲಿ ಪ್ರಾಣಿ ಬಲಿ ಕೊಡುವ ವಿಚಾರದಲ್ಲಿ ಈ ಜಾತ್ರೆ ಸುದ್ದಿಯಾಗುತ್ತದೆ. ಪ್ರಾಣಿ ಬಲಿಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್‌ ತೀರ್ಪು ನೀಡಿದ ಬಳಿಕವೂ ಜಾತ್ರೆಯು ಯಾವುದೇ ತೊಂದರೆ ಇಲ್ಲದೇ ಅದ್ಧೂರಿಯಾಗಿ ನಡೆಯುತ್ತಲೇ ಬಂದಿದೆ. ಆದರೆ, ಈ ವರ್ಷ ಕೋವಿಡ್‌ ಹಾವಳಿ ಜಾತ್ರೆಯ ಸಂಭ್ರಮಕ್ಕೆ ತಣ್ಣೀರು ಎರಚಿದೆ.

ಕೋವಿಡ್‌ ಹರಡುವಿಕೆ ತಡೆಯುವ ದೃಷ್ಟಿಯಿಂದ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆ ಸೇರಿ ಈ ಬಾರಿ ಭಕ್ತರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಗರಿಷ್ಠ 100 ಜನರಿಗೆ ಅವಕಾಶ ನೀಡಿ,ಸಿದ್ದಪ್ಪಾಜಿ ದೇವಸ್ಥಾನದ ಟ್ರಸ್ಟ್ ಹಾಗೂ ಮಠಗಳಿಗೆ ಸಂಬಂಧಿಸಿದವರು, ಜಾತ್ರಾ ಮಹೋತ್ಸವದ ಅಂಗವಾಗಿ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ. ಇದಕ್ಕೆ ಟ್ರಸ್ಟ್‌ ಹಾಗೂ ಮಠದ ಆಡಳಿತ ಮಂಡಳಿಯವರೂ ಒಪ್ಪಿಕೊಂಡಿದ್ದಾರೆ.

ಕೋವಿಡ್‌ ಹಾವಳಿ ಆರಂಭವಾದಾಗಿನಿಂದ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಜನರು ಸೇರುವ ಎಲ್ಲ ಜಾತ್ರೆಗಳಲ್ಲೂ ರದ್ದು ಪಡಿಸಿ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ.

ವಿಜೃಂಭಣೆಯ ಜಾತ್ರೆ: ಚಿಕ್ಕಲ್ಲೂರು ಸಿದ್ದಾಪ್ಪಾಜಿ ಜಾತ್ರೆಗೆ ಜಿಲ್ಲೆ, ಹೊರಜಿಲ್ಲೆಗಳು ಸೇರಿದಂತೆ ನಾನಾ ಕಡೆಗಳಿಂದ ಭಕ್ತ ಸಾಗರವೇ ಹರಿದು ಬರುತ್ತದೆ. ಐದು ಹಗಲು ಮತ್ತು ಐದು ರಾತ್ರಿಗಳ ಜನಸಂದಣಿಯ ನಡುವೆ ಜರುಗುವ ಜಾತ್ರೆ ಇದು.

ಮೊದಲನೇ ದಿನ ರಾತ್ರಿ ನಡೆಯುವ ಚಂದ್ರಮಂಡಲ ಉತ್ಸವ ಬೆಳಕಿನ ಆಚರಣೆ. ಹುಣ್ಣಿಮೆಯ ದಿನ ಮಧ್ಯರಾತ್ರಿ ಉರಿಯುವ ಚಂದ್ರಮಡಲವು ಪರಂಜ್ಯೋತಿ ಜ್ಯೋತಿಲಿಂಗಯ್ಯನ ಪ್ರತಿರೂಪ ಎಂಬುದು ಭಕ್ತರ ಭಾವನೆ. ಎರಡನೇ ದಿನ ದೊಡ್ಡವರ ಸೇವೆ ನಡೆಯುತ್ತದೆ. ಧರೆಗೆ ದೊಡ್ಡವರು ಎಂದು ಕರೆಯುವ ದೊಡ್ಡಮ್ಮ ತಾಯಿ ಮತ್ತು ರಾಚಾಪ್ಪಾಚಿ ಅವರಿಗೆ ಸಲ್ಲಿಸುವ ಸೇವೆ ಇದು.

ಮೂರನೇ ದಿನ ಮುಡಿ ಸೇವೆ ಅಥವಾ ನೀಲಗಾರರ ದೀಕ್ಷೆ ನಡೆಯುತ್ತದೆ. ನಾಲ್ಕನೇ ದಿನ ಪಂಕ್ತಿಸೇವೆ ನಡೆಯುತ್ತದೆ. ಕುಟುಂಬ ಸಮೇತರಾಗಿ ಬರುವ ಭಕ್ತರು, ದೇವಾಲಯದ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಾಸ್ತವ್ಯ ಹೂಡಿ ಅಲ್ಲಿಯೇ ಮಾಂಸದ ಅಡುಗೆ ಸಿದ್ಧಪಡಿಸಿ, ಸಿದ್ದಪ್ಪಾಜಿಗೆ ಎಡೆ ಇಟ್ಟ ನಂತರ ಒಟ್ಟಾಗಿ ಸೇವಿಸುತ್ತಾರೆ.ಐದನೇ ದಿನ ಮುತ್ತತ್ತಿರಾಯನ ಸೇವೆ ಅಥವಾ ಕಡೆ ಬಾಗಿಲ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳುತ್ತದೆ.

ಈ ವರ್ಷ ಎಲ್ಲ ಆಚರಣೆಗಳು ಸಾಂಪ್ರದಾಯಿಕವಾಗಿ ನಡೆಯಲಿರುವುದರಿಂದ ಗೌಜಿ ಗದ್ದಲ ಇರುವುದಿಲ್ಲ. ಇದು ಸಹಜವಾಗಿ ಭಕ್ತರಲ್ಲಿ ಬೇಸರ ತರಿಸಿದೆ.

‘ಪ್ರತಿ ವರ್ಷವೂ ನಾವು ನಮ್ಮ ಕುಟುಂಬದ ಜೊತೆ ಜಾತ್ರೆಗೆ ಹೋಗುತ್ತಿದ್ದೆವು. ಈ ಬಾರಿ ಅದಕ್ಕೆ ಅವಕಾಶ ಇಲ್ಲ. ಮನೆಯಿಂದಲೇ ಸಿದ್ದಪ್ಪಾಜಿಗೆ ನಮಸ್ಕರಿಸಬೇಕಷ್ಟೆ’ ಎಂದು ಭಕ್ತರಾದ ಚಿಕ್ಕಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಹಕಾರ ನೀಡಬೇಕು: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹನೂರು ಶಾಸಕ ಆರ್‌.ನರೇಂದ್ರ ಅವರು, ‘ಕೋವಿಡ್‌ ಕಾರಣದಿಂದ ಈ ಬಾರಿ ಜಾತ್ರೆಗೆ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಒಂದು ವರ್ಷದಿಂದ ರಾಜ್ಯದಲ್ಲಿ ಯಾವ ಜಾತ್ರೆಯೂ ನಡೆದಿಲ್ಲ. ಕೋವಿಡ್‌ ಮುಕ್ತವಾದ ಬಳಿಕ, ಮುಂದಿನ ವರ್ಷದಿಂದ ವಿಜೃಂಭಣೆಯಿಂದಲೇ ಆಚರಣೆ ಮಾಡಲಾಗುತ್ತದೆ. ಈ ವರ್ಷದ ಮಟ್ಟಿಗೆ ಭಕ್ತರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು’ ಎಂದು ಹೇಳಿದರು.

ಬಿಗಿ ಭದ್ರತೆ: ‘ಕೋವಿಡ್-19ನಿಂದಾಗಿ ಭಕ್ತರನ್ನು ನಿರ್ಬಂಧಿಸಲಾಗಿದೆ. ಸಾಂಪ್ರಾದಯಕವಾಗಿ ಸರಳವಾಗಿ ಅಲ್ಲಿನ ಟ್ರಸ್ಟ್‌ನವರು ಜಾತ್ರೆ ಮಾಡಲಿದ್ದಾರೆ. ಹೊರಗಿನವರಿಗೆ ಯಾವುದೇ ಕಾರಣಕ್ಕೂ ಪ್ರವೇಶವಿಲ್ಲ. ಚಿಕ್ಕಲ್ಲೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳನ್ನು ಹಾಗೂ ಗ್ರಾಮದ ರಸ್ತೆಗಳನ್ನು ಬಂದ್ ಮಾಡಿ ಪೊಲೀಸ್ ನಿಯೋಜನೆ ಮಾಡಲಾಗುತ್ತದೆ. ಯಾರಾದರೂ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ತಹಶೀಲ್ದಾರ್ ಕುನಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT