ಬುಧವಾರ, ಮಾರ್ಚ್ 29, 2023
32 °C
ದಾಖಲಾತಿ ಆಂದೋಲನಕ್ಕೆ ಉತ್ತಮ ಸ್ಪಂದನೆ, ಅನುದಾನಿತ, ಖಾಸಗಿ ಶಾಲೆಗಳಲ್ಲಿ ನಿಧಾನ

ಚಾಮರಾಜನಗರ: ಸರ್ಕಾರಿ ಶಾಲೆಯತ್ತ ಮಕ್ಕಳ ದಾಪುಗಾಲು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಅಲೆಯ ಸಂಕಷ್ಟ ಕಾಲದಲ್ಲಿ ಶಾಲಾ ಶುಲ್ಕ ಹೆಚ್ಚಿಸಿರುವ ವಿಚಾರದಲ್ಲಿ ಕೆಲವು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಪೋಷಕರ ಮಧ್ಯೆ ಹಗ್ಗಜಗ್ಗಾಟ ನಡೆಯುತ್ತಿರುವುದರ ನಡುವೆಯೇ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಜೂನ್‌ 15ರಿಂದ 30ರವರೆಗೆ ಶಾಲಾ ದಾಖಲಾತಿ ಆಂದೋಲನ ಹಮ್ಮಿಕೊಂಡಿತ್ತು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶಿಕ್ಷಣ ಇಲಾಖೆಯ ಅಂಕಿ ಅಂಶಗಳನ್ನು ಗಮನಿಸಿದರೆ, 2021–22ನೇ ಸಾಲಿಗಾಗಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುತ್ತಿದ್ದಾರೆ.  

‘ಈವರೆಗೆ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳು ಕೂಡ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ದಾಖಲಾತಿ ಮಾಡಿಸಿಕೊಂಡಿದ್ದಾರೆ. ಇವರ ನಿಖರ ಸಂಖ್ಯೆ ಸದ್ಯಕ್ಕೆ ಇಲ್ಲ. ಕೆಲವು ದಿನಗಳಲ್ಲಿ ಸಿಗಲಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

ಶಿಕ್ಷಣ ಇಲಾಖೆಯ ಶಾಲೆಗಳು (830), ಅನುದಾನಿತ (97), ಖಾಸಗಿ (204), ಸಮಾಜ ಕಲ್ಯಾಣ ಇಲಾಖೆ (24), ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ (42) ನಿರ್ವಹಿಸುತ್ತಿರುವ ಶಾಲೆಗಳು, ಕೇಂದ್ರೀಯ ವಿದ್ಯಾಲಯ (2– ಪ್ರಾಥಮಿಕ, ಪ್ರೌಢಶಾಲೆ ಸೇರಿ), ಜವಾಹರ ನವೋದಯ ವಿದ್ಯಾಲಯ (ಪ್ರಾಥಮಿಕ, ಪ್ರೌಢಶಾಲೆ ಸೇರಿ–2), ಕೇಂದ್ರ ಟಿಬೆಟನ್ನರ ಶಾಲೆ (ಪ್ರಾಥಮಿಕ, ಪ್ರೌಢಶಾಲೆ ಸೇರಿ –2) ಸೇರಿದಂತೆ ಒಟ್ಟು 1,203 ಶಾಲೆಗಳು ಜಿಲ್ಲೆಯಲ್ಲಿವೆ.

ಶಿಕ್ಷಣ ಇಲಾಖೆ ಮಕ್ಕಳನ್ನು ದಾಖಲು ಮಾಡಲು ಸೂಚನೆ ನೀಡಿದ ಬಳಿಕ, ಜಿಲ್ಲೆಯಲ್ಲಿ ಜೂನ್‌ 30ರವರೆಗೆ 1ರಿಂದ 10ನೇ ತರಗತಿವರೆಗೆ 56,815 ಮಂದಿ ಶಾಲೆಗೆ ಸೇರ್ಪಡೆಯಾಗಿದ್ದಾರೆ. ಈ ಪೈಕಿ 18,493 ಹೆಣ್ಣುಮಕ್ಕಳು ಹಾಗೂ 17,413 ಮಂದಿ ಗಂಡು ಮಕ್ಕಳು. 

ಸರ್ಕಾರಿ ಶಾಲೆಗಳಿಗೆ 35,906, ಅನುದಾನಿತ ಶಾಲೆಗಳಿಗೆ 8,451 ಹಾಗೂ ಖಾಸಗಿ ಶಾಲೆಗಳಿಗೆ 12,458 ಮಂದಿ ದಾಖಲಾಗಿದ್ದಾರೆ.

ಖಾಸಗಿ ಶಾಲೆಗಳಿಗೆ ಕಡಿಮೆ ಮಕ್ಕಳು: ಒಂದನೇ ತರಗತಿಗೆ ದಾಖಲಾದ ಮಕ್ಕಳ ಅಂಕಿ ಅಂಶ ಗಮನಿಸಿದರೆ, ಜೂನ್‌ 30ರವರೆಗೆ ಖಾಸಗಿ ಶಾಲೆಗಳಲ್ಲಿ 268 ಮಕ್ಕಳು ಮಾತ್ರ ದಾಖಲಾಗಿದ್ದಾರೆ. 

ಕೆಲವು ಖಾಸಗಿ ಶಾಲೆಗಳಲ್ಲಿ ಈಗಷ್ಟೇ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಕೆಲವು ಶಾಲೆಗಳಲ್ಲಿ ಆನ್‌ಲೈನ್‌ ತರಗತಿಗಳು ಈಗಾಗಲೇ ಆರಂಭಗೊಂಡಿವೆ.

ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ 15 ದಿನಗಳ ದಾಖಲಾತಿ ಆಂದೋಲನದ ಫಲವಾಗಿ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಗೆ 2,476 ಚಿಣ್ಣರು ಸೇರಿದ್ದಾರೆ. ಈ ಪೈಕಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 1,127 ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ. ಅನುದಾನಿತ ಶಾಲೆಗಳಲ್ಲಿ 210 ಮಕ್ಕಳು ಒಂದನೇ ತರಗತಿಗೆ ಸೇರ್ಪಡೆಗೊಂಡಿದ್ದಾರೆ. 

‘ಕೋವಿಡ್‌ ಸಂಕಷ್ಟ ಕೆಲವು ಕುಟುಂಬಗಳನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡಿದೆ. ಖಾಸಗಿ ಶಾಲೆಗಳಿಗೆ ದಾಖಲಿಸುವಷ್ಟು ಶಕ್ತಿ ಅವರಿಗೆ ಇಲ್ಲದಿರುವ ಸಾಧ್ಯತೆ ಹೆಚ್ಚಾಗಿದೆ. ಆನ್‌ಲೈನ್‌ ತರಗತಿಗಳಿಗೆ ಬೇಕಾದ ಸೌಲಭ್ಯಗಳು ಅವರಲ್ಲಿ ಇರುವ ಸಾಧ್ಯತೆ ಕಡಿಮೆ. ಕೋವಿಡ್‌ ಕಾರಣದಿಂದ ಈ ವರ್ಷವೂ ಸರಿಯಾಗಿ ತರಗತಿಗಳು ನಡೆಯುತ್ತವೆ ಎಂಬುದರ ಖಚಿತತೆ ಇಲ್ಲ. ಹೀಗಿರುವಾಗ ಹೆಚ್ಚು ಶುಲ್ಕ ಪಾವತಿಸುವುದು ಏಕೆ ಎಂಬ ಪೋಷಕರ ನಿಲುವು ಕೂಡ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಜಾಸ್ತಿಯಾಗಲು ಕಾರಣವಿರಬಹುದು’ ಎಂದು ಹೇಳುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ದಾಖಲಾತಿಗೆ ಇನ್ನೂ ಅವಕಾಶ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಡಿಪಿಐ ಜವರೇಗೌಡ, ‘ಆಂದೋಲನದ ಅಂಗವಾಗಿ ಎಲ್ಲ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಗುರುತಿಸಿ, ಶಾಲೆಗೆ ಸೇರಿಸುವುದರ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ ಮಕ್ಕಳನ್ನು ಶಾಲೆಗೆ ಕರೆತಂದಿದ್ದಾರೆ. 15 ದಿನ ನಡೆದ ಆಂದೋಲನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ತಿಂಗಳ ಕೊನೆಯವರೆಗೂ ಶಾಲೆಗೆ ಮಕ್ಕಳನ್ನು ಸೇರಿಸಲು ಅವಕಾಶ ಇದೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು