ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ವೈರಾಣು ಜ್ವರದ ಆತಂಕ

ಹವಾಮಾನ ವ್ಯತ್ಯಾಸ‌ದಿಂದ ಜ್ವರ, ಪೋಷಕರಲ್ಲಿ ಆತಂಕ, ಪರಿಸ್ಥಿತಿ ನಿಯಂತ್ರಣದಲ್ಲಿ–ವೈದ್ಯರ ಹೇಳಿಕೆ
Last Updated 27 ಸೆಪ್ಟೆಂಬರ್ 2021, 2:30 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದ ಉತ್ತರ ಕರ್ನಾಟಕದ ಭಾಗದಲ್ಲಿ ಮಕ್ಕಳಲ್ಲಿ ಕಂಡು ಬಂದಿರುವ ವೈರಾಣು ಜ್ವರದ ಪ್ರಕರಣ, ಜಿಲ್ಲೆಯಲ್ಲೂ ಸ್ವಲ್ಪ ಮಟ್ಟಿಗೆ ಕಂಡು ಬರುತ್ತಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳು ವರ‌ದಿಯಾಗದಿದ್ದರೂ, ಜ್ವರ, ಕೆಮ್ಮು ಶೀತದಿಂದ ಬಳಲುತ್ತಿರುವ ಮಕ್ಕಳನ್ನು ಪೋಷಕರು ಆಸ್ಪತ್ರೆಗಳಿಗೆ ಕರೆದುಕೊಂಡು ಬರುತ್ತಿದ್ದಾರೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ಸದ್ಯ 15 ಮಕ್ಕಳು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ದಿನ ನಾಲ್ಕರಿಂದ ಐದು ಮಕ್ಕಳು ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸಿಗೆಯ ಕೊರತೆ ಸದ್ಯಕ್ಕೆ ಉಂಟಾಗಿಲ್ಲ. ತೀವ್ರ ಸಮಸ್ಯೆ ಇಲ್ಲದ ಮಕ್ಕಳಿಗೆ ಹೊರ ರೋಗಿಗಳಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಆಗಸ್ಟ್‌ ತಿಂಗಳಲ್ಲಿ ಹೆಚ್ಚು ಪ್ರಕರಣಗಳು ಇರಲಿಲ್ಲ. ಸೆಪ್ಟೆಂಬರ್‌ನಲ್ಲಿ ಸ್ವಲ್ಪ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಹಾಗಿದ್ದರೂ ಪರಿಸ್ಥಿತಿ ಗಂಭೀರವಾಗಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳುತ್ತಾರೆ ವೈದ್ಯಾಧಿಕಾರಿಗಳು. ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೂ ಜ್ವರದ ಚಿಕಿತ್ಸೆಗಾಗಿ ಬರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುತ್ತಾರೆ ಖಾಸಗಿ ವೈದ್ಯರು.

ಕೋವಿಡ್‌ ಹಾವಳಿಯ ನಡುವೆಯೇ ಮಕ್ಕಳಲ್ಲಿ ಕೆಮ್ಮು, ಶೀತ, ಜ್ವರ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಕೋವಿಡ್‌ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ತಜ್ಞರು ಅಭಿಪ್ರಾಯ ಪಟ್ಟಿರುವುದರಿಂದ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.

ಹವೆ ವ್ಯತ್ಯಾಸದಿಂದಾಗಿ ಸಾಮಾನ್ಯ ವೈರಾಣು ಜ್ವರ ಕಾಣಿಸಿಕೊಂಡಿದೆ. ಪೋಷಕರು ಆತಂಕ ಪಡಬೇಕಾಗಿಲ್ಲ ಎಂದು ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸ್ವಚ್ಛತೆ ಕೊರತೆ: ಮಳೆಗಾಲದಲ್ಲಿ ಹಳ್ಳ ಕೊಳ್ಳದಲ್ಲಿ ನಿಲ್ಲುವ ನೀರು, ಪಾತ್ರೆಗಳು, ತೆರೆದ ಚರಂಡಿಗಳಲ್ಲಿನ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ವೈರಾಣುಗಳ ಹರಡುವಿಕೆಗೆ ಕಾರಣವಾಗುತ್ತಿದೆ. ಸ್ವಚ್ಛತೆಯ ಕೊರತೆಯಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಗ್ರಾಮ ಪಂಚಾಯಿತಿ, ಪಟ್ಟಣ, ನಗರ ಪ್ರದೇಶಗಳಲ್ಲಿ ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡದಿರುವುದರಿಂದ ಈ ರೀತಿ ಆಗುತ್ತಿದೆ ಎಂಬುದು ಜನರ ಆರೋಪ.

ರೋಗ ಲಕ್ಷಣ ಏನು?: ಈ ವೈರಾಣು ಕಾಯಿಲೆಯಲ್ಲಿ ಮೊದಲು ಕೆಮ್ಮು ಕಾಣಿಸಿಕೊಳ್ಳುತ್ತದೆ. ನಂತರ ಜ್ವರದೊಂದಿಗೆ ಕಫ, ನೆಗಡಿಯಿಂದ ಮಕ್ಕಳು ಬಳಲುತ್ತಿದ್ದಾರೆ. ಎರಡು ತಿಂಗಳ ಹಸುಗೂಸುಗಳಿಂದ ಹಿಡಿದು 10 ವರ್ಷದ ಮಕ್ಕಳವರೆಗೆ ಕಾಣಿಸಿಕೊಳ್ಳುತ್ತಿದೆ. ಮೂರ್ನಾಲ್ಕು ದಿನಗಳಾದರೂ ಜ್ವರ ಕೆಮ್ಮು ನೆಗಡಿ ಕಡಿಮೆಯಾಗುತ್ತಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಜ್ವರ ಕಡಿಮೆಯಾಗದಿದ್ದರೆ ರಕ್ತ ಪರೀಕ್ಷೆ ನಡೆಸಲಾಗುತ್ತಿದೆ. ಡೆಂಗಿ, ಮಲೇರಿಯಾಗಳು ಕಾಣಿಸಿಕೊಂಡಿಲ್ಲ. ಕೆಲವು ಮಕ್ಕಳಲ್ಲಿ ಟೈಫಾಯ್ಡ್‌ ಕಂಡು ಬರುತ್ತಿದೆ.

‘ನನ್ನ ಮೊಮ್ಮಗಳಿಗೆ ಮೂರು ತಿಂಗಳು. ಮೊದಲು ಕೆಮ್ಮು ಕಾಣಿಸಿಕೊಂಡಿತು. ನಂತರ ಕಫ, ನೆಗಡಿ, ಜ್ವರ ಬಂತು. ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೇನೆ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಮಗುವಿಗೆ ಗುಣಮುಖವಾಗುತ್ತಿದೆ. ಪ್ರತಿ ದಿನ ಆರೇಳು ಮಕ್ಕಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ’ ಎಂದು ತೆರಕಣಾಂಬಿಯ ನಾಗೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಡೆಂಗಿ ಆತಂಕ ಇಲ್ಲ: ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ಕಂಡು ಬಂದಿಲ್ಲ. ಜನವರಿಯಿಂದ ಇಲ್ಲಿಯವರೆಗೆ 10 ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಮೇ ಹಾಗೂ ಆಗಸ್ಟ್‌ ತಿಂಗಳಲ್ಲಿ
ಇಬ್ಬರು ಮಕ್ಕಳಲ್ಲಿ ಕಂಡು ಬಂದಿದೆ. ಮಲೇರಿಯಾ ಪ್ರಕರಣಗಳೂ ವರದಿಯಾಗಿಲ್ಲ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಕಾಂತರಾಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಾದ್ಯಂತ ಮನೆ ಮನೆಗಳಿಗೆ ಭೇಟಿ ನೀಡಿ ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳ ಪರಿಶೀಲನೆ ನಡೆಸಲಾಗಿದ್ದು, ಸ್ವಚ್ಛತೆ ಕಾಪಾಡುವ ಸಂಬಂಧ ಪರಿಶೀಲನೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವೈದ್ಯಾಧಿಕಾರಿಗಳು ಏನಂತಾರೆ?

ಪೋಷಕರು ಆತಂಕ ಪಡಬೇಕಿಲ್ಲ

ಹವಾಮಾನ ವ್ಯತ್ಯಾಸವಾದಾಗ ಮತ್ತು ಕುಡಿಯುವ ನೀರು ಕಲುಷಿತವಾಗುವುದರಿಂದ ಈ ಸಮಯದಲ್ಲಿ ಜ್ವರ, ಕೆಮ್ಮು ನೆಗಡಿ ಲಕ್ಷಣಗಳು ಬರುವುದು ಸಹಜ. ಯಾರೂ ಭಯಪಡುವ ಅಗತ್ಯವಿಲ್ಲ. ಆದರೆ ಪೋಷಕರು ಮುಂಜಾಗ್ರತೆ ವಹಿಸಬೇಕು. ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಜ್ವರ, ನೆಗಡಿ, ಕೆಮ್ಮು ರೋಗಿಗಳು ದಿನಕ್ಕೆ 6 ರಿಂದ 8 ಜನರು ಬರುತ್ತಿದ್ದಾರೆ. ನಾವು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ಎಲ್ಲರಿಗೂ ನೆಗೆಟಿವ್ ಬರುತ್ತಿದೆ. ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿಲ್ಲ. ಆಸ್ಪತ್ರೆಯಲ್ಲಿ ವಿಶೇಷವಾಗಿ 25 ಬೆಡ್ ವ್ಯವಸ್ಥೆ ಮಾಡಲಾಗಿದೆ.

ಡಾ.ರಾಜಶೇಖರ್,ಆಡಳಿತಾಧಿಕಾರಿ, ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ

ಸ್ವಚ್ಛತೆಗೆ ಗಮನಕೊಡಿ

ಡೆಂಗಿ ಪ್ರಕರಣಗಳು ವರದಿಯಾಗಿಲ್ಲ. ಈಡೀಸ್ ಈಜಿಪ್ಟೈ ಸೊಳ್ಳೆ‌ಯಿಂದ ಡೆಂಗಿ ಹರಡುತ್ತದೆ. ಇವು ಹಗಲಿನ ಸಮಯದಲ್ಲಿ ಕಚ್ಚುತ್ತವೆ. ಇದರ ಮೊಟ್ಟೆ 3 ವರ್ಷ ಜೀವಂತ ಇರಬಲ್ಲದು, ಹಾಗಾಗಿ, ಒಡೆದ ಬಾಟಲಿ,ತೆಂಗಿನಚಿಪ್ಪು, ಪೊದೆಗಳ ಬಳಿ ಮೊಟ್ಟೆ ಇಲ್ಲದಂತೆ ಎಚ್ಚರ ವಹಿಸಬೇಕು. ಶುದ್ಧ ನೀರನ್ನುಮುಚ್ಚಿಡಬೇಕು. ನೀರಿನ ಟ್ಯಾಂಕ್ ಮತ್ತು ವಾಟರ್ ಫಿಲ್ಟರ್ ಶುದ್ಧೀಕರಿಸಿ ಇಡಬೇಕು

ಡಾ. ಶ್ರೀಧರ್,ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ, ಯಳಂದೂರು

ಸಾಮಾನ್ಯ ಕಾಯಿಲೆ

ಪ್ರತಿ ವರ್ಷ ಮುಂಗಾರು ನಂತರದ ದಿನಗಳಲ್ಲಿ ಮಕ್ಕಳಲ್ಲಿ ಜ್ವರ, ಶೀತ, ಕೆಮ್ಮಿನಂತಹಸಾಮಾನ್ಯ ರೋಗಗಳು ಕಂಡುಬರುತ್ತವೆ. ಮಾರಕ ಡೆಂಗಿ, ಚಿಕೂನ್‌ಗುನ್ಯಾ ಹಾಗೂ ಕೋವಿಡ್ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಪ್ರತಿ ಚಿಣ್ಣರನ್ನು ವಿಶೇಷ ರೋಗ ಪತ್ತೆ ಸಾಧನಗಳಿಂದ ತಪಾಸಣೆ ಮಾಡಲಾಗುತ್ತದೆ. ತಾಲ್ಲೂಕಿನಲ್ಲಿ ಆತಂಕಕ್ಕೆ ಕಾರಣವಾಗುವ ರೋಗ ಲಕ್ಷಣಗಳು ಬಾಧಿಸಿಲ್ಲ.

ಡಾ.ನಾಗೇಂದ್ರಮೂರ್ತಿ,ಮಕ್ಕಳ ತಜ್ಞ, ಸಾರ್ವಜನಿಕ ಆಸ್ಪತ್ರೆ ಯಳಂದೂರು

ಡೆಂಗಿ ಪ್ರಕರಣಗಳಿಲ್ಲ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಯಾವುದೇ ಡೆಂಗಿ ಪ್ರಕರಣಗಳು ದಾಖಲಾಗಿಲ್ಲ. ಉಳಿದಂತೆ ಕೆಮ್ಮು, ನೆಗಡಿ ವೈರಲ್ ಜ್ವರ ಕಾಣಿಸಿಕೊಳ್ಳುತ್ತಿದೆ.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ ಹಾಗೂ ಸಿಬ್ಬಂದಿ ಕೊರತೆ ಇದೆ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಕ್ಕಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಭೇಟಿ ನೀಡಿ ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದಾರೆ

ಡಾ.ವೆಂಕಟಸ್ವಾಮಿ,ಗುಂಡ್ಲುಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ (ಪ್ರಭಾರ)

ವೈದ್ಯರನ್ನು ಸಂಪರ್ಕಿಸಿ

ಮಕ್ಕಳನ್ನು‌ ಮುದ್ದಾಡುವುದರಿಂದ ಸಾಂಕ್ರಾಮಿಕ ರೋಗಗಳು ಬೇಗ ಹರಡುವ ಸಂಭವವಿದೆ. ಆದ್ದರಿಂದ ಪೋಷಕರು‌ ಮಕ್ಕಳನ್ನು ಹೊರಗೆ ಕಳುಹಿಸದೇ ಮನೆಯಲ್ಲಿಯೇ ನೋಡಿಕೊಳ್ಳಬೇಕು. ಮಕ್ಕಳಲ್ಲಿ‌ ಸಾಮಾನ್ಯ ಶೀತ, ನೆಗಡಿ, ಜ್ವರ, ತಲೆನೋವು ಕಾಣಿಸಿಕೊಂಡರೆ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆಯಬೇಕು.

ಡಾ.ಪುಷ್ಪರಾಣಿ,ವೈದ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರ, ಹನೂರು

ಪೋಷಕರ ಅಭಿಪ್ರಾಯಗಳು

ಅರಿವು ಮೂಡಿಸಲಿ

ಕೋವಿಡ್‌ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಲಿದೆ ಎಂದು ಆರೋಗ್ಯ ಇಲಾಖೆ ಹೇಳಿರುವ ಬೆನ್ನಲ್ಲೇ ಮಕ್ಕಳಲ್ಲಿ ಜ್ವರ, ಶೀತ, ನೆಗಡಿ ಕಾಣಿಸಿಕೊಳ್ಳುತ್ತಿರುವುದು ಆತಂಕ ತಂದಿದೆ. ಆರೋಗ್ಯ ಇಲಾಖೆ ಪ್ರತಿ ಗ್ರಾಮಗಳಲ್ಲೂ ಮಕ್ಕಳ ಆರೋಗ್ಯದ ಕಾಳಜಿ ಮೂಡಿಸುವ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು.

ಲತಾಪುಷ್ಪ,ಸಂದನಪಾಳ್ಯ, ಹನೂರು ತಾಲ್ಲೂಕು

ಸ್ವಚ್ಛತೆಗೆ ಒತ್ತು ನೀಡಲಿ

20 ದಿನಗಳಿಂದ ಮಕ್ಕಳಿಗೆ ಜ್ವರ, ಕೆಮ್ಮು, ಕಫದ ಸಮಸ್ಯೆಗಳು ಕಂಡುಬಂದಿವೆ. ಬಿಸಿಲು, ಮಳೆಯ ವಾತಾವರಣ ಇದೆ. ಪರಿಸರದಲ್ಲಿ ಹಸಿರು ತುಂಬಿ ಸೊಳ್ಳೆಗಳ ಸಂಖ್ಯೆಏರುತ್ತಿದೆ. ಚರಂಡಿ ಮತ್ತು ಬೀದಿಗಳ ಸುತ್ತಮುತ್ತ ನೈರ್ಮಲ್ಯ ಸುಧಾರಿಸಿ, ರೋಗಾಣು ಹರಡುವುದನ್ನು ತಡೆಯಬೇಕು.

ದೀಪಾ,ಬಸವಾಪುರ, ಯಳಂದೂರು ತಾಲ್ಲೂಕು

ಸ್ವಚ್ಛತೆಯ ಪರಿಶೀಲನೆ

ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಸ್ವಚ್ಛತೆಪರಿಶೀಲಿಸುತ್ತಿದ್ದಾರೆ. ಲಾರ್ವ ಸರ್ವೆ ಕಾರ್ಯಕ್ಕೂ ಚಾಲನೆ ನೀಡಲಾಗಿದ್ದು, ಸದ್ಯದಪರಿಸ್ಥಿಯಲ್ಲಿ ಜ್ವರ ಸಂಬಂಧಿ ಕಾಯಿಲೆ ಹೆಚ್ಚು ಕಂಡುಬಂದಿಲ್ಲ.

ದೊಡ್ಡತಾಯಮ್ಮ,ಕಟ್ನವಾಡಿ

ಫಾಗಿಂಗ್ ಮಾಡಬೇಕಿದೆ

ಪಟ್ಟಣದ ಸುತ್ತಮುತ್ತಲ ಪೊದೆ, ಕಸವನ್ನು ಪ್ರತಿದಿನ ವಿಲೇವಾರಿ ಮಾಡಬೇಕು. ಕೊಳಚೆನಿಲ್ಲದಂತೆ ಕ್ರಮ ವಹಿಸಬೇಕು. ರಾತ್ರಿ ಕ್ರಿಮಿ ಕೀಟಗಳ ಸಂತಾನ ನಿಯಂತ್ರಿಸಲು,ಫಾಗಿಂಗ್ ಮಾಡಬೇಕು. ಇದರಿಂದ ಏರಿಕೆ ಆಗುತ್ತಿರುವ ಜ್ವರ ಸಂಬಂಧಿಕಾಯಿಲೆಗಳನ್ನು ನಿಯಂತ್ರಿಸಬಹುದು.

ಗೋಪಾಲಕೃಷ್ಣ,ದೇವಾಂಗಬೀದಿ, ಯಳಂದೂರು

ಹವಾಮಾನ ವ್ಯತ್ಯಾಸ

ಮಗಳಿಗೆ ಕಳೆದ ಏಳು ದಿನಗಳ ಹಿಂದೆ ಜ್ವರ
ಬಂದಿತ್ತು. ಆ ನಂತರ ವೈದ್ಯರನ್ನು ಭೇಟಿ ಮಾಡಿದ್ದೆವು. ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಈಗ ಮಗಳು ಚೇತರಿಸಿಕೊಂಡು ಶಾಲೆ ಹೋಗುತ್ತಿದ್ದಾಳೆ. ಹವಾಮಾನ ವ್ಯತ್ಯಾಸವೇ
ಜ್ವರಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.

ಶಿವಣ್ಣ,ಸಿದ್ದಯ್ಯನಪುರ, ಕೊಳ್ಳೇಗಾಲ ತಾಲ್ಲೂಕು

ಚುಚ್ಚುಮದ್ದು ಕೊಟ್ಟರೂ ಕಡಿಮೆಯಾಗಿಲ್ಲ

ನಾಲ್ಕು ದಿನಗಳಿಂದ ಮಗುವಿಗೆ ಹುಷಾರಿಲ್ಲ. ಆಸ್ಪತ್ರೆಗೆ ತೋರಿಸುತ್ತಿದ್ದೇವೆ. ಮಾತ್ರೆ, ಚುಚ್ಚುಮದ್ದು ತೆಗೆದುಕೊಂಡರೂ ಜ್ವರ ನೆಗಡಿ ಕಡಿಮೆಯಾಗಿಲ್ಲ. ವೈದ್ಯರು ರಕ್ತ ಪರೀಕ್ಷೆ ಮಾಡಿಸಲು ಹೇಳಿದ್ದಾರೆ. ವರದಿಗಾಗಿ ಕಾಯುತ್ತಿದ್ದೇನೆ.

ಕೆ.ಪಿ.ಕುಮಾರ್,ಕಾವುದವಾಡಿ, ಚಾಮರಾಜನಗರ ತಾಲ್ಲೂಕು

ಹೆಚ್ಚು ಮಕ್ಕಳಿಗೆ ಸೋಂಕು

ಮಗುವಿಗೆ ಎರಡೂವರೆ ತಿಂಗಳು. ಕೆಮ್ಮು ನಗೆಡಿ ಜ್ವರ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೇವೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಪ್ರತಿ ದಿನ ತುಂಬ ಮಕ್ಕಳು ಆಸ್ಪತ್ರೆಗೆ ಬರುತ್ತಿದ್ದಾರೆ. ಹಾಸಿಗೆ ವ್ಯವಸ್ಥೆಯೂ ಇಲ್ಲಿ ಸರಿಯಾಗಿಲ್ಲ

ವಿಶಾಲಾಕ್ಷಿ, ಬೇಡರಪುರ, ಚಾಮರಾಜನಗರ ತಾಲ್ಲೂಕು

ಮಾಹಿತಿ: ಸೂರ್ಯನಾರಾಯಣ ವಿ., ನಾ.ಮಂಜುನಾಥಸ್ವಾಮಿ,ಅವಿನ್‌ ಪ್ರಕಾಶ್‌ ವಿ., ಬಿ.ಬಸವರಾಜು, ಮಹದೇವ್‌ ಹೆಗ್ಗವಾಡಿಪುರ, ಮಲ್ಲೇಶ ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT