ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ನಿಷೇಧ ಮಸೂದೆ: ಸಂವಿಧಾನದ ಆಶ‌ಯಕ್ಕೆ ವಿರುದ್ಧ

ಮಸೂದೆ ಮಂಡಿಸದಂತೆ ಕ್ರಿಶ್ಚಿಯನ್‌ ಸಮುದಾಯದಿಂದ ಜಿಲ್ಲಾಧಿಕಾರಿಗೆ ಮನವಿ
Last Updated 7 ಡಿಸೆಂಬರ್ 2021, 16:28 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯ ಸರ್ಕಾರವು ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಬಾರದು ಹಾಗೂ ಕ್ರಿಶ್ಚಿಯನ್‌ ಮಿಷನರಿಗಳು ಹಾಗೂ ಕ್ರಿಶ್ಚಿಯನ್‌ ಸಂಸ್ಥೆಗಳ ಸಮೀಕ್ಷೆ ನಡೆಸಬಾರದು ಎಂದು ಜಿಲ್ಲೆಯ ಕ್ರಿಶ್ಚಿಯನ್‌ ಸಮುದಾಯದ ವಿವಿಧ ಪಂಗಡಗಳ ಧರ್ಮಗುರುಗಳು, ಮುಖಂಡರು ಆಗ್ರಹಿಸಿದ್ದಾರೆ.

ಈ ಸಂಬಂಧ ಕ್ರಿಶ್ಚಿಯನ್‌ ಸಮುದಾಯದ ನಿಯೋಗವೊಂದು ಮಂಗಳವಾರ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ, ಅವರ ಮೂಲಕ ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

‘ಈ ಮಸೂದೆಯು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಈ ವಿಚಾರವಾಗಿ ಈಗಾಗಲೇ ಹಲವು ಕಾನೂನು ಇವೆ. ಹೀಗಿರುವಾಗ ಹೊಸ ಮಸೂದೆಯ ಅಗತ್ಯವೇನಿದೆ?’ ಎಂದು ಹೇಳಲಾಗಿದೆ.

‘ತಮಗೆ ಬೇಕಾದ ಧರ್ಮ ಆಚರಿಸಿ ಮತ್ತು ಧರ್ಮ ಪ್ರಚಾರ ಮಾಡಬಹುದು ಎಂದು ಸಂವಿಧಾನದ 25ನೇ ವಿಧಿ ಹೇಳುತ್ತದೆ. ಎಲ್ಲ ಪಂಗಡಗಳು ಧರ್ಮದ ವಿಚಾರದಲ್ಲಿ ತಮ್ಮದೇ ಆದ ಆಚರಣೆಗಳನ್ನು ನಿರ್ವಹಿಸಬಹುದು ಎಂದು 26ನೇ ವಿಧಿಯೂ ಹೇಳುತ್ತದೆ. ಹೀಗಿರುವಾಗ ಈಗ ಪ್ರಸ್ತಾಪಿಸಿರುವ ಮಸೂದೆಯೂ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ಉಲ್ಲಂಘಿಸುತ್ತದೆ’ ಎಂದು ಮನವಿಯಲ್ಲಿ ಹೇಳಲಾಗಿದೆ.

‘ರಾಜ್ಯದಲ್ಲಿ ಸಾವಿರಾರು ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಕ್ರಿಶ್ಚಿಯನ್ ಸಂಸ್ಥೆಗಳು ನಿರ್ವಹಿಸುತ್ತಿವೆ. ವರ್ಷದಿಂದ ವರ್ಷಕ್ಕೆ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಜಾತಿ, ಮತ ಮತ್ತು ವರ್ಗಗಳ ಭೇದವಿಲ್ಲದೆ ಆಸ್ಪತ್ರೆ ಮತ್ತು ಆರೈಕೆ ಕೇಂದ್ರಗಳಿಂದ ಉತ್ತಮ ವೈದ್ಯಕೀಯ ನೆರವು ಪಡೆಯುತ್ತಿದ್ದಾರೆ. ಇವರಲ್ಲಿ ಒಬ್ಬರಾದರೂ, ಕ್ರಿಶ್ಚಿಯನ್‌ ಧರ್ಮದಿಂದ ಪ್ರಭಾವಿತರಾಗಿದ್ದಾರೆ ಅಥವಾ ಇಲ್ಲೆಲ್ಲ ಧರ್ಮವನ್ನು ಬದಲಾಯಿಸಲು ಒತ್ತಾಯಿಸಿದ್ದರೆ ಸರ್ಕಾರ ಸಾಬೀತುಪಡಿಸಲಿ’ ಎಂದು ಸಮುದಾಯದ ಮುಖಂಡರು ಹಾಗೂ ಧರ್ಮಗುರುಗಳು ಹೇಳಿದ್ದಾರೆ.

‘ಮತಾಂತರ ನಿಷೇಧ ಮಸೂದೆ ಜಾರಿಗೊಳಿಸಿದರೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಮತ್ತು ಕೋಮು ಸೌಹಾರ್ದತೆ ಹಾಗೂ ಅಶಾಂತಿಗೆ ದಾರಿಯಾಗುತ್ತದೆ. ಹಾಗಾಗಿ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಇಂಥ ಅನಪೇಕ್ಷಿತ ಮಸೂದೆ ಜಾರಿಗೊಳಿಸಬಾರದು’ ಎಂದು ಅವರು ಒತ್ತಾಯಿಸಿದ್ದಾರೆ.

‘ಸರ್ಕಾರವು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಧಿಕೃತ ಮತ್ತು ಅನಧಿಕೃತ ಕ್ರಿಶ್ಚಿಯನ್ ಮಿಷನರಿಗಳು ಮತ್ತು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಸಮೀಕ್ಷೆಯನ್ನು ನಡೆಸುವಂತೆ ಆದೇಶಿಸಿರುವುದು ತಪ್ಪು. ಎಲ್ಲ ಸಂಬಂಧಿತ ದತ್ತಾಂಶಗಳು ಸರ್ಕಾರದಲ್ಲೇ ಲಭ್ಯವಿರುವಾಗ ಈ ಕಸರತ್ತು ಏಕೆ ಬೇಕು? ಇದನ್ನು ಕೈಬಿಡಬೇಕು’ ಎಂದೂ ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಧರ್ಮಗುರುಗಳಾದ ಆಂತೋಣಪ್ಪ, ರೋನಾಲ್ಡ್ ಮಚಾದೊ, ಜೇಕಬ್‌ ವೆಂಕಟೇಶ್, ಫ್ರಾನ್ಸಿಸ್ ಕ್ರಿಸ್ಟೋಫರ್, ಕುಮಾರ್, ಆಂಥೋಣಿ ರಾಜು, ವಿನ್ಸೆಂಟ್‌ ಅಮಲ್‌ ದಾಸ್, ‌ಝೇರುಬ್ಬಾಬೆಲ್‌, ಸಿ ಚಂದ್ರು, ಎಂ. ಸುರೇಶ್, ಮಲ್ಲೇಶ್, ಐಸಾಕ್, ಅನಿಲ್ ತೇಜು, ಮುಖಂಡರಾದಜಾನ್‌ ಪೀಟರ್, ರಾಜು, ಎ.ಡಿ. ಸಿಲ್ವ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT