ಶನಿವಾರ, ಜನವರಿ 25, 2020
27 °C
ಚರ್ಚ್‌ಗಳಿಗೆ ವಿಶೇಷ ಅಲಂಕಾರ, ಕೇಕ್‌ಗಳಿಗೆ ಹೆಚ್ಚಿದ ಬೇಡಿಕೆ: ನಾಳೆ ಆಚರಣೆ

ಕ್ರಿಸ್‌ಮಸ್‌: ಜಿಲ್ಲೆಯಲ್ಲೂ ಸಂಭ್ರಮದ ಸಿದ್ಧತೆ

ಅವಿನ್ ಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಕೊಳ್ಳೇಗಾಲ: ಜಿಲ್ಲೆಯಾದ್ಯಂತ ಸಂಭ್ರಮ ಸಡಗರದ ಕ್ರಿಸ್‍ಮಸ್ ಹಬ್ಬದ ಆಚರಣೆಗೆ ಕ್ರಿಶ್ಚಿಯನ್ನರು ಭರ್ಜರಿ ತಯಾರಿ ನಡೆಸಿದ್ದಾರೆ. 

ಯೇಸು ಕ್ರಿಸ್ತ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸುವುದಕ್ಕಾಗಿ ಚರ್ಚ್‌ಗಳು ಸುಣ್ಣಬಣ್ಣ ಕಂಡು, ವಿಶೇಷ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ನಕ್ಷತ್ರ ದೀಪಗಳು ಮನೆಗಳಲ್ಲಿ ಬೆಳಗುತ್ತಿವೆ.  

ಕ್ರೈಸ್ತ ಸಮುದಾಯ ಹಬ್ಬಗಳಲ್ಲಿ ಕ್ರಿಸ್‌ಮಸ್‌ಗೆ ಪ್ರಮುಖ ಸ್ಥಾನವಿದೆ. ಹೊಸ ಧರ್ಮವನ್ನು ಸ್ಥಾಪಿಸಿದ ದೇವಪುತ್ರ ಯೇಸುಕ್ರಿಸ್ತ ಈ ದಿನ ಜನ್ಮ ತಾಳಿರುವುದು ಸಮುದಾಯದವರ ಸಂಭ್ರಮಕ್ಕೆ ಕಾರಣ. ಡಿಸೆಂಬರ್‌ ತಿಂಗಳು ಬಂತೆಂದರೆ ಕ್ರಿಶ್ಚಿಯನ್ನರಲ್ಲಿ ಸಂಭ್ರಮ ಮನೆ ಮಾಡುತ್ತದೆ. ಎರಡು ವಾರಗಳಿಂದಲೇ ನಿಧಾನವಾಗಿ ಸಿದ್ಧತೆ ಆರಂಭವಾಗುತ್ತದೆ. ಡಿಸೆಂಬರ್‌ 25 ಹತ್ತಿರವಾಗುತ್ತಿದ್ದಂತೆಯೇ ಇದು ಇನ್ನಷ್ಟು ಜಾಸ್ತಿಯಾಗುತ್ತದೆ.

ಹಬ್ಬಕ್ಕೆ ಇನ್ನು ಒಂದೇ ದಿನ ಬಾಕಿ ಇದ್ದು, ಎಲ್ಲರ ಮನೆ–ಮನಗಳಲ್ಲೂ ಸಂಭ್ರಮ ಮನೆ ಮಾಡಿದೆ. ವಿವಿಧ ಬಗೆಯ ಕೇಕ್ ತಯಾರಿಕೆ, ಖರೀದಿ ಭರಾಟೆ ಹಾಗೂ ಗೋದಲಿ ತಯಾರಿ ಜೋರಾಗಿ ನಡೆಯುತ್ತದೆ.

ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಹಬ್ಬದ ಖರೀದಿ ಜೋರಾಗಿದೆ. ಚಾಮರಾಜನಗರ, ಕೊಳ್ಳೇಗಾಲ ಸೇರಿದಂತೆ ಪಟ್ಟಣ ಪ್ರದೇಶದ ಅಂಗಡಿಗಳಲ್ಲಿ ವಿವಿಧ ಗಾತ್ರದ ಕ್ರಿಸ್‌ಮಸ್‌ ಟ್ರೀ, ಬೇರೆ ಬೇರೆ ವಿನ್ಯಾಸದ ನಕ್ಷತ್ರಗಳು, ಶುಭ ಸಂಕೇತದ ಗಂಟೆ, ರಿಬ್ಬನ್, ಬಣ್ಣದ ಕ್ಯಾಲೆಂಡರ್‌ಗಳು, ಅಲಂಕಾರಿಕ ದೀಪಗಳು ನಳನಳಿಸುತ್ತಿವೆ. ಇವುಗಳನ್ನು ಖರೀದಿಸಲು ಗ್ರಾಹಕರು ಸಂಭ್ರಮದಿಂದ ಅಂಗಡಿಗೆ ಮುಗಿಬಿದ್ದಿದ್ದಾರೆ.

ಕೇಕ್‌ ಹಬ್ಬ: ಕ್ರಿಸ್‌ಮಸ್‌ನಲ್ಲಿ ಕೇಕ್‌ಗೆ ಮಹತ್ವದ ಸ್ಥಾನವಿದೆ. ಕ್ರಿಶ್ಚಿಯನ್ನರು ಹಬ್ಬದ ಪ್ರಯುಕ್ತ ತಮ್ಮ ಸ್ನೇಹಿತರು, ಕುಟುಂಬಸ್ಥರಿಗೆ ಕೇಕ್‌ ಹಂಚುತ್ತಾರೆ. ಹಾಗಾಗಿ ‌ಕೇಕ್‌ಗೆ ಬೇಡಿಕೆ ಹೆಚ್ಚು. 

ನಗರದಲ್ಲಿ ಈ ಬಾರಿ ಕೇಕ್‌ ದರ ಸ್ವಲ್ಪ ಹೆಚ್ಚಾಗಿದೆ. ಕೆಜಿಗೆ ₹ 220ಕ್ಕಿಂತಲೂ ಹೆಚ್ಚಿನ ಬೆಲೆ ಇದೆ.  ₹ 100‌ರಿಂದ ₹ 200ರ ವರೆಗೂ ಬೆಲೆ ಇದೆ. 

ಎಷ್ಟೇ ಬಡವರಾದರೂ ಕ್ರಿಶ್ಚಿಯನ್ನರು ಕ್ರಿಸ್‌ಮಸ್‌ ಆಚರಿಸುತ್ತಾರೆ. ಹೊಸ ಬಟ್ಟೆ ತೊಟ್ಟು ಕೇಕ್‌ ತಿಂದು ಸಂಭ್ರಮಿಸುತ್ತಾರೆ. ಆ ಕಾರಣಕ್ಕೆ ಕ್ರಿಸ್‌ಮಸ್‌ ಎಂದರೆ ಒಂದು ರೀತಿಯಲ್ಲಿ ಕೇಕ್‌ನ ಹಬ್ಬ.

ಹಬ್ಬದ ಸಂದರ್ಭದಲ್ಲಿ ಮನೆಗಳಲ್ಲೂ ಕೇಕ್ ಮಿಕ್ಸಿಂಗ್ ಅದ್ಧೂರಿಯಾಗಿ ನಡೆಯುತ್ತದೆ. ದೊಡ್ಡ ಟ್ರೇಯಲ್ಲಿ ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾ, ಖರ್ಜೂರ, ಚೆರ್ರಿ ಮತ್ತಿತರ ಒಣಹಣ್ಣುಗಳ ರಾಶಿಯ ಮೇಲೆ ವಿವಿಧ ಕೇಕ್‌ಗಳನ್ನು ತಯಾರಿಸಲಾಗುತ್ತದೆ. 

ಕ್ರಿಸ್‍ಮಸ್ ಕೇಕ್, ಪ್ಲಮ್‌ ಕೇಕ್, ಫ್ರುಟ್‌ ಕೇಕ್, ಚಾಕೂ ಕೇಕ್, ಮಿಕ್ಸ್ ಕೇಕ್, ಸಲಾಡ್ ಕೇಕ್ ಸೇರಿದಂತೆ ಅನೇಕ ಕೇಕ್‍ಗಳನ್ನು ಹಬ್ಬಕ್ಕಾಗಿಯೇ ಸಿದ್ಧಪಡಿಸಲಾಗುತ್ತದೆ.

ಹಬ್ಬದ ಭೋಜನಕ್ಕೆ ಕ್ಷಣಗಣನೆ: ಕ್ರಿಶ್ಚಿಯನ್ನರ ಮನೆಗಳಲ್ಲಿ ಭರ್ಜರಿ ಹಬ್ಬದೂಟಕ್ಕೆ ಸಿದ್ಧತೆಗಳು ಆರಂಭವಾಗಿವೆ. ವಿವಿಧ ಬಗೆಯ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಮಟನ್ ಕಬಾಬ್, ಚಿಕನ್ ಕಬಾಬ್, ತಲೆಮಾಂಸ, ಮಟನ್ ಚಾಪ್ಸ್ ಸೇರಿದಂತೆ ಅನೇಕ ವೈವಿಧ್ಯಮಯ ತಿನಿಸುಗಳನ್ನು ಮಹಿಳೆಯರು ಸಿದ್ಧಪಡಿಸುತ್ತಾರೆ. 

ಚರ್ಚ್‍ಗಳಲ್ಲಿ ವಿವಿಧ ಸ್ಪರ್ಥೆ: ಕ್ರಿಸ್‍ಮಸ್ ಪ್ರಯುಕ್ತ ಅನೇಕ ಚರ್ಚ್‍ಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಯುವಕ ಹಾಗೂ ಯುವತಿಯರಿಗೆ ಹಾಡಿನ ಸ್ಪರ್ಧೆ, ನಾಟಕ, ಬೈಬಲ್ ಕುರಿತ ರಸಪ್ರಶ್ನೆ ನಡೆಸ, ಬಹುಮಾನಗಳನ್ನು ವಿತರಿಸಲಾಗುತ್ತದೆ.

ಕರೋಲ್ ಗೀತೆಗಳು 

ಕ್ರಿಸ್‌ಮಸ್‌ ಎಂದರೆ ತಕ್ಷಣ ನೆನಪಾಗುವುದು ಕರೋಲ್‌ ಗೀತೆಗಳು (ಭಜನೆ). 

ಹಬ್ಬ ಆಚರಣೆಗೂ ಮುನ್ನ ಕರೋಲ್ ಗೀತೆಯನ್ನು ಹಾಡಲಾಗುತ್ತದೆ. ಹಬ್ಬಕ್ಕಿಂತ ಮೊದಲೇ ಆರಂಭವಾಗುವ ಈ ಸಂಪ್ರದಾಯದಲ್ಲಿ ಯುವಕ, ಯುವತಿಯರ ಗುಂಪುಗಳು ರಾತ್ರಿ ತಮ್ಮ ಪ್ರದೇಶದ ಮನೆ ಮನೆಗಳಿಗೆ ತೆರಳಿ ಕರೋಲ್‍ಗಳನ್ನು (ಭಜನೆ ಅಥವಾ ಸೌಹಾರ್ದತೆಯ ಸಂದೇಶ ಸಾರುವ ಸ್ಮಸ್ ಹಾಡುಗಳು) ಹಾಡುತ್ತಾರೆ.

ಯೇಸು ಕ್ರಿಸ್ತನು ಈ ಮನೆಯಲ್ಲಿ ಹುಟ್ಟಿದ್ದಾನೆ, ಈ ಮನೆಯಲ್ಲಿ ಜೀವಿಸುತ್ತಾನೆ ಎಂದು ಸಾರುತ್ತಾ ಜನರಲ್ಲಿ ಪವಿತ್ರ ಭಾವನೆ ಮೂಡಿಸುವುದು ಈ ಭಜನೆಯ ಮುಖ್ಯ ಉದ್ದೇಶ.

ಹಾರ್ಮೋನಿಯಂ, ಕಾಂಗೊ, ಝಾಲರಿ, ಕೀಬೋರ್ಡ್‌ಗಳು ಸೇರಿದಂತೆ ವಿವಿಧ ಸಂಗೀತ ಸಾಧನಗಳ ಸಹಾಯದಿಂದ ಸುಶ್ರಾವ್ಯವಾಗಿ ಹಾಡುವ ಗೀತೆಗಳು ಗಮನ ಸೆಳೆಯುತ್ತವೆ. ಕನ್ನಡ, ತೆಲುಗು, ತಮಿಳು ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಗೀತೆಗಳನ್ನು ಹಾಡಲಾಗುತ್ತದೆ.

ವಿಶೇಷ ಪ್ರಾರ್ಥನೆ: ಕ್ರಿಸ್‌ಮಸ್‌ ಅಂಗವಾಗಿ ಜಿಲ್ಲೆಯಾದ್ಯಂತ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ. 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು