ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೃತ್ತಿ ನಿಷ್ಠೆ ಇರಲಿ, ಜನರೊಂದಿಗೆ ಬೆರೆಯಿರಿ’

ಸಿಮ್ಸ್‌ ಮೊದಲ ಘಟಿಕೋತ್ಸವ: 138 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ– ಡಾ.ರಮೇಶ್‌ ಅಭಿಮತ
Last Updated 14 ಮೇ 2022, 16:08 IST
ಅಕ್ಷರ ಗಾತ್ರ

ಚಾಮರಾಜನಗರ: ‘ವೈದ್ಯರಿಗೆ ತಮ್ಮ ವೃತ್ತಿಯ ಬಗ್ಗೆ ಗೌರವ, ಪ್ರೀತಿ ಇರಬೇಕು. ನಾವು ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ಅದುವೇ ಸೇವೆ. ಜೀವನದಲ್ಲಿ ಯಶಸ್ಸು ಸಿಗಬೇಕು ಎಂದರೆ ನಿಮ್ಮ ವೃತ್ತಿಯನ್ನು ಅನುಭವಿಸಬೇಕು’ ಎಂದು ರಾಜೀವ್‌ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕುಲಪತಿ ಡಾ.ಎಂ.ಕೆ.ರಮೇಶ್‌ ಅವರು ಶನಿವಾರ ಅಭಿಪ್ರಾಯಪಟ್ಟರು.

ನಗರದ ಹೊರವಲಯದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) ಮೊದಲ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಎಂಬಿಬಿಎಸ್‌ ಸುಲಭದ ಕೋರ್ಸ್‌ ಅಲ್ಲ. ‌ಅದನ್ನು ಯಶಸ್ವಿಯಾಗಿ ಪೂರೈಸಿದ್ದೀರಿ. ನೀವು ಪಡೆದಿರುವ ಪದವಿಯ ಹಿಂದೆ ಹಲವರ ಶ್ರಮ ಇದೆ. ತಂದೆ– ತಾಯಿ, ಪೋಷಕರು, ಶಿಕ್ಷಕರು ಹೀಗೆ ಎಲ್ಲರ ಶ್ರಮವಿದೆ. ‌ಇದನ್ನು ಯಾರೂ ಮರೆಯಬಾರದು’ ಎಂದರು.

‘ವೈದ್ಯಕೀಯ ವೃತ್ತಿಯಲ್ಲಿ ಏನು, ಏಕೆ, ಹೇಗೆ ಎನ್ನುವ ಕುತೂಹಲವಿರಬೇಕು. ಸಂಶೋಧನೆಯ ಆಸಕ್ತಿ ಇರಬೇಕು. ಇದರೊಂದಿಗೆ ಸೇವಾ ಮನೋಭಾವನೆ ಇರಬೇಕು. ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಇರಬೇಕು. ತಂತ್ರಜ್ಞಾನ ಬಂದ ನಂತರ ನಾವು ಇನ್ನೊಬ್ಬರೊಂದಿಗೆ ಮಾತನಾಡುವುದು ಕಡಿಮೆ ಮಾಡಿದ್ದೇವೆ. ವೈದ್ಯರಿಗೆ ಅತ್ಯಂತ ಮುಖ್ಯವಾಗಿ ಸಂವಹನ ಕೌಶಲವಿರಬೇಕು. ಜನರೊಂದಿಗೆ ಮಾತನಾಡಬೇಕು. ಬೆರೆಯಬೇಕು’ ಎಂದು ಡಾ.ರಮೇಶ್‌ ಸಲಹೆ ನೀಡಿದರು.

‘ಚಾಮರಾಜನಗರದ ಹೊರ ವಲಯದಲ್ಲಿರುವ ಈ ಸಂಸ್ಥೆಯ ವಾತಾವರಣ ಹಿಂದಿನ ಗುರುಕುಲದ ಕಲಿಕೆಯನ್ನು ನೆನಪಿಸುತ್ತಿದೆ. ಆರಂಭದಲ್ಲಿ ಇಲ್ಲಿನ ವಾತಾವರಣ ನೋಡಿ ನಿಮಗೆ ಗಾಬರಿಯಾಗಿರಬಹುದು. ಆದರೆ, ಅತ್ಯಂತ ಪ್ರಶಾಂತ ಸ್ಥಳದಲ್ಲಿ ಕಾಲೇಜು ಇದೆ. ಇಲ್ಲಿಂದ ಪದವಿ ಪಡೆದಿರುವ ನೀವು ಹೊರಗಡೆ ಸಂಸ್ಥೆಯ ಗೌರವವನ್ನು ಹೆಚ್ಚಿಸುವ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ಎಂಎಆರ್‌ಬಿ ಅಧ್ಯಕ್ಷ ಡಾ.ಬಿ.ಎನ್‌.ಗಂಗಾಧರ್‌ ಮಾತನಾಡಿ‌, ‘ಎಂಬಿಬಿಎಸ್‌ ಪದವಿ ಪ‍ಡೆದ ನಂತರ ಸ್ನಾತಕೋತ್ತರ ಪದವಿ ಪಡೆಯಲು ವಿದ್ಯಾರ್ಥಿಗಳು ಹಾತೊರೆಯುತ್ತಾರೆ. ನಮ್ಮ ದೇಶದಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದಕ್ಕಾಗಿ 2 ಲಕ್ಷ ವೈದ್ಯರು ಓದುತ್ತಿದ್ದಾರೆ. ಉನ್ನತ ಶಿಕ್ಷಣ ಪಡೆಯಬೇಕು ಎನ್ನುವುದು ನಿಜ. ಆದರೆ, ಈಗ ಗಳಿಸಿರುವ ಪದವಿ ಶೂನ್ಯ ಅಲ್ಲ. ಸ್ನಾತಕೋತ್ತರ ಪದವಿ ಪಡೆದರೆ ಮಾತ್ರ ತಜ್ಞರಾಗುತ್ತೇವೆ ಎನ್ನುವ ಮನೋಭಾವವನ್ನು ಬದಿಗಿಡಬೇಕು’ ಎಂದರು.

ಪಿ.ಜಿ ಕೋರ್ಸ್‌: ಸಿಮ್ಸ್‌ ನಿರ್ದೇಶಕ, ಡೀನ್‌ ಡಾ. ಜಿ.ಎಂ. ಸಂಜೀವ್ ಮಾತನಾಡಿ, ‘2016ರಲ್ಲಿ ಆರಂಭಗೊಂಡ ವೈದ್ಯಕೀಯ ಕಾಲೇಜಿನಲ್ಲಿ ಈಗ ಎಲ್ಲ ಸೌಕರ್ಯಗಳು ಇವೆ. ಬಿಎಸ್‌ಸಿ ನರ್ಸಿಂಗ್‌, ಪ್ಯಾರಾ ಮೆಡಿಕಲ್‌ ಕೋರ್ಸ್‌ಗಳು ಇವೆ. ಈ ವರ್ಷದಿಂದ ಸ್ನಾತಕೋತ್ತರ ಪದವಿ ಕೋರ್ಸ್‌ಗಳೂ ಆರಂಭವಾಗಲಿವೆ. ನಾವು 11 ವಿಷಯಗಳ ಕೋರ್ಸ್‌ಗಳಿಗೆ ಬೇಡಿಕೆ ಇಟ್ಟಿದ್ದೆವು. ಎಂಟು ಕೋರ್ಸ್‌ಗಳ ಆರಂಭಕ್ಕೆ ಅನುಮತಿ ಸಿಕ್ಕಿದೆ’ ಎಂದರು.

ಕಾರ್ಯಕ್ರಮದಲ್ಲಿ ಜೀವರಸಾಯನ ವಿಭಾಗದ ಮುಖ್ಯಸ್ಥೆ ಡಾ.ದೇವಕಿ ಅವರು ತೇರ್ಗಡೆಗೊಂಡಿದ ಎಲ್ಲ 138 ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಗಣ್ಯರು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಿದರು. ಸಿಮ್ಸ್‌ ಪ್ರಾಂಶುಪಾಲ ಡಾ. ಗಿರೀಶ್ ವಿ ಪಾಟೀಲ, ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ, ಎಲ್ಲ ವಿಭಾಗಗಳ ಮು ಇತತರು ಸಮಾರಂಭದಲ್ಲಿ ಇದ್ದರು.

‘ಲಂಚ ಪಡೆಯಬೇಡಿ’

‘ನಮ್ಮ ಮೇಲಿರುವ ಋಣ ತೀರಿಸುವುದಕ್ಕಾಗಿ ನಾವು ಸಮಾಜಸೇವೆ ಮಾಡಬೇಕು. ವೈದ್ಯರಿಗೆ ತಮ್ಮ ವೃತ್ತಿಯ ಬಗ್ಗೆ ಪ್ರೀತಿ, ಗೌರವ ಇರಬೇಕು. ಬಡವರ ಬಗ್ಗೆ ಕಾಳಜಿ ಇರಬೇಕು. ಹಣವೊಂದೇ ಮುಖ್ಯವಾಗಬಾರದು. ಈ ಹಿಂದೆ, ಜಿಲ್ಲಾಸ್ಪತ್ರೆಯಲ್ಲಿ ಜನರಿಂದ ದುಡ್ಡು ಪಡೆಯುತ್ತಿದ್ದ ವೈದ್ಯರು ಲೋಕಾಯುಕ್ತದ ಬಲೆಗೆ ಬಿದ್ದಿದ್ದರು. ಬಡ ಜನರಿಂದ ಲಂಚ ಪಡೆಯುವುದು ಸರಿಯಲ್ಲ. ನೀವು ಲಂಚ ಪಡೆಯಬೇಡಿ. ಆರೋಗ್ಯ ಸೇವೆ ಲಭಿಸದ ಜಾಗಕ್ಕೆ ಅದನ್ನು ತಲುಪಿಸುವ ಕೆಲಸವನ್ನು ನೀವು ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಶೇ 25ರಷ್ಟು ತರಗತಿ ಆನ್‌ಲೈನ್‌ನಲ್ಲಿ

‘ಕೋವಿಡ್‌ನಿಂದ ತೊಂದರೆಗಳಾದರೂ, ಕೆಲವು ಲಾಭವೂ ಆಗಿದೆ. ಸಂಶೋಧನೆ ಮಾಡುವ ಪ್ರವೃತ್ತಿಯನ್ನು ಅದು ಹುಟ್ಟುಹಾಕಿದೆ. ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿದೆ. ಆನ್‌ಲೈನ್‌ ತರಗತಿಗಳು ಶಿಕ್ಷಣದ ಭಾಗವನ್ನಾಗಿ ಮಾಡಿದೆ.ಮುಂದಿನ ದಿನಗಳಲ್ಲಿ ನಮ್ಮ ವಿವಿ ವ್ಯಾಪ್ತಿಯಲ್ಲಿ ಶೇ 25ರಷ್ಟು ತರಗತಿಗಳನ್ನು ಆನ್‌ಲೈನ್‌ ಮೂಲಕವೇ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಕುಲಪತಿ ಡಾ.ರಮೇಶ್‌ ಹೇಳಿದರು.

ಸಾಧಕರು ಏನೆಂದರು...?

ಉತ್ತಮ ವಾತಾವರಣ

ಚಿಕ್ಕಮಗಳೂರಿನಕಡೂರಿನಿಂದ ಚಾಮರಾಜನಗರಕ್ಕೆ ಮೊದಲ ಬಾರಿ ಬಂದಾಗ ಭಯ ಇತ್ತು. ಅಭದ್ರತೆ ಕಾಡುತ್ತಿತ್ತು. ಆದರೆ, ಕೋರ್ಸ್‌ ಆರಂಭಗೊಂಡ ನಂತರ ಅದು ದೂರವಾಯಿತು. ನಮಗೆ ಬೋಧಕರು ತುಂಬಾ ಸಹಾಯ ಮಾಡಿದರು. ಈ ಕಾಲೇಜಿನಲ್ಲಿ ಓದುವುದಕ್ಕೆ ತುಂಬಾ ಒಳ್ಳೆಯ ವಾತಾವರಣ ಇದೆ. ಸುತ್ತಮುತ್ತ ಎಲ್ಲೂ ಗಲಾಟೆ ಇಲ್ಲ. ವಿಶಾಲವಾದ ಗ್ರಂಥಾಲಯ ಇದೆ. ಸ್ತ್ರೀರೋಗ ತಜ್ಞೆಯಾಗಬೇಕು ಎಂಬುದು ನನ್ನ ಆಸೆ. ಆ ದಿಕ್ಕಿನಲ್ಲಿ ವಿದ್ಯಾಭ್ಯಾಸ ಮುಂದುವರಿಸುವೆ.

ಡಾ.ಮೋನಿಶಾ,ಮೊದಲ ರ‍್ಯಾಂಕ್‌ ವಿಜೇತೆ

ಸಾಧನೆ ಖುಷಿ ತಂದಿದೆ

ದ್ವಿತೀಯ ಸ್ಥಾನ ಪಡೆದು ನನ್ನ ಹೆತ್ತವರನ್ನು ಖುಷಿ ಪಡಿಸಿರುವುದಕ್ಕೆ ಹೆಮ್ಮೆಯಾಗಿದೆ. ನಮ್ಮದೇ ಮೊದಲ ಬ್ಯಾಚ್‌ ಆಗಿದ್ದರಿಂದ ಮಾರ್ಗದರ್ಶನ ಮಾಡಲು ಹಿರಿಯ ವಿದ್ಯಾರ್ಥಿಗಳು ಇರಲಿಲ್ಲ. ಬೋಧಕರೇ ನಮಗೆ ಸಲಹೆಗಳನ್ನು ನೀಡಿ ಸಹಕಾರ ನೀಡಿದ್ದಾರೆ. ಪ್ಲಾಸ್ಟಿಕ್‌ ಸರ್ಜನ್‌ ಆಗಬೇಕು ಎನ್ನುವುದು ನನ್ನ ಬಯಕೆ. ಸ್ನಾತಕೋತ್ತರ ಪದವಿ ಪಡೆಯಲು ಪ್ರಯತ್ನಿಸುವೆ.

–ಡಾ.ಆಸ್ತಾ ಅರೋರಾ,ದ್ವಿತೀಯ ರ‍್ಯಾಂಕ್‌ ವಿದ್ಯಾರ್ಥಿನಿ

ಯಾವುದೇ ಕೊರತೆ ಇರಲಿಲ್ಲ

ಕಾಲೇಜು ನಗರದಿಂದ ಹೊರ ವಲಯದಲ್ಲಿರುವುದರಿಂದ ಇಲ್ಲಿ ಉತ್ತಮ ವಾತಾವರಣ ಇದೆ. ಓದುವುದಕ್ಕೆ ಎಲ್ಲ ಅನುಕೂಲ ಇತ್ತು. ಹೊಸ ಕಾಲೇಜು, ಬ್ಯಾಚ್‌ ಎಂದು ಯಾವುದೇ ಕೊರತೆ ಇರಲಿಲ್ಲ. ಹಾಗಾಗಿ ಓದುವುದಕ್ಕೆ ಸಹಾಯ ಆಯಿತು. ಸ್ನಾತಕೋತ್ತರ ಪದವಿ ಸೀಟು ಸಿಕ್ಕಿದರೆ ಖಂಡಿತವಾಗಿ ಈ ಕಾಲೇಜಿಗೆ ಧೈರ್ಯವಾಗಿ ಸೇರಬಹುದು. ಇಲ್ಲಿ ಎಲ್ಲ ಸೌಕರ್ಯಗಳು ಇವೆ.

ಡಾ.ಸಚಿನ್‌,ಮೂರನೇ ರ‍್ಯಾಂಕ್‌ ವಿಜೇತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT