ಶನಿವಾರ, ಅಕ್ಟೋಬರ್ 23, 2021
20 °C
ಜಿಲ್ಲಾಸ್ಪತ್ರೆಯ ವಿಭಾಗಗಳನ್ನು ಯಡಬೆಟ್ಟದ ಹೊಸ ಆಸ್ಪತ್ರೆಗೆ ಸ್ಥಳಾಂತರಿಸಲು ಸಿದ್ಧತೆ

ಚಾಮರಾಜನಗರ: ಹೆರಿಗೆ ವಿಭಾಗ ಇಲ್ಲಿ, ಉಳಿದೆಲ್ಲವೂ ಅಲ್ಲಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರ‌ದ ಹೊರ ವಲಯದ ಯಡಬೆಟ್ಟದಲ್ಲಿ ಉದ್ಘಾಟನೆಗೊಂಡಿರುವ 450 ಹಾಸಿಗೆಗಳ ಹೊಸ ಬೋಧನಾ ಆಸ್ಪತ್ರೆಗೆ, ಜಿಲ್ಲಾಸ್ಪತ್ರೆಯಿಂದ ಎಲ್ಲ ವಿಭಾಗಗಳ ಸ್ಥಳಾಂತರಕ್ಕೆ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್‌) ಆಡಳಿತ ಸಿದ್ಧತೆ ನಡೆಸಿದೆ. 

ಸೋಮವಾರದಿಂದಲೇ ವಿಭಾಗಗಳು, ವೈದ್ಯಕೀಯ ಸಲಕರಣೆಗಳ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಿಮ್ಸ್‌ ನಿರ್ದೇಶಕ ಹಾಗೂ ಡೀನ್‌ ಡಾ.ಡಿ.ಎಂ.ಸಂಜೀವ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆ (ಹೆರಿಗೆ ವಿಭಾಗವನ್ನು) ಉಳಿಸಿಕೊಂಡು ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗ ಸೇರಿದಂತೆ ಉಳಿದ ಎಲ್ಲ ಘಟಕಗಳನ್ನು ಅಲ್ಲಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಸರ್ಜನ್‌ ಕಚೇರಿ ಸೇರಿದಂತೆ ಹಾಗೂ ಆಡಳಿತ ವಿಭಾಗ ಕೂಡ ಹೊಸ ಆಸ್ಪತ್ರೆಗೆ ಸ್ಥಳಾಂತರಗೊಳ್ಳಲಿದೆ.  

ಜಿಲ್ಲಾಸ್ಪತ್ರೆಯು 300 ಹಾಸಿಗೆ ಸಾಮರ್ಥ್ಯವನ್ನು ಹೊಂದಿದೆ. ಸದ್ಯದ ಮಟ್ಟಿಗೆ ಹೆರಿಗೆ ವಿಭಾಗದ ಜೊತೆಗೆ ಮಕ್ಕಳ ಚಿಕಿತ್ಸೆ ಹಾಗೂ ಕೋವಿಡ್‌ ಚಿಕಿತ್ಸಾ ವಿಭಾಗ ಇಲ್ಲೇ ಮುಂದುವರೆಯಲಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

‘ನಮ್ಮ ಬಹುತೇಕ ವಿಭಾಗಗಳು ಹೊಸ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲಿವೆ. ನಾವು ಕೂಡ ಅಲ್ಲಿಂದಲೇ ಕರ್ತವ್ಯ ನಿಭಾಯಿಸಲಿದ್ದೇವೆ. ಇಲ್ಲಿನ ಉಸ್ತುವಾರಿ ನಿರ್ವಹಣೆ ಹೊಣೆಯನ್ನು ಒಬ್ಬರು ವೈದ್ಯಾಧಿಕಾರಿಗೆ ವಹಿಸಲಾಗುವುದು’ ಎಂದು ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ ತಿಳಿಸಿದರು. 

‘ಹೊಸ ಆಸ್ಪತ್ರೆಯು ನಗರದಿಂದ ಕೊಂಚ ಹೊರಗಡೆ ಇರುವುದರಿಂದ ಆರಂಭದಲ್ಲಿ ರೋಗಿಗಳಿಗೆ ಓಡಾಡಲು ಸ್ವಲ್ಪ ಕಷ್ಟವಾಗಬಹುದು. ಸಾರಿಗೆ ವ್ಯವಸ್ಥೆ ಆರಂಭವಾದ ನಂತರ ಏನೂ ಸಮಸ್ಯೆಯಾಗದು. ಆಸ್ಪತ್ರೆಯಲ್ಲಿ ಸಾಕಷ್ಟು ಸ್ಥಳಾವಕಾಶ ಇದೆ’ ಎಂದು ಅವರು ಹೇಳಿದರು.  

ಸಿಬ್ಬಂದಿಯೇ ಸವಾಲು: 450 ಹಾಸಿಗೆಗಳ ಆಸ್ಪತ್ರೆ ನಿರ್ವಹಣೆಗೆ ಸಾಕಷ್ಟು ಸಿಬ್ಬಂದಿ ಬೇಕು. ಈಗಿರುವ ಆಸ್ಪತ್ರೆಯಲ್ಲೇ ಸಿಬ್ಬಂದಿ ಕೊರತೆ ಇದೆ. ಹೊಸ ಆಸ್ಪತ್ರೆಯಲ್ಲಿ ನೆಲ ಮಹಡಿ ಸೇರಿದಂತೆ ಐದು ಮಹಡಿಗಳಿದ್ದು, ಸ್ವಚ್ಛತೆ ಮಾಡುವ ಗ್ರೂಪ್‌ ಡಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಬೇಕು.

ವೈದ್ಯಕೀಯ ಕಾಲೇಜಿನಲ್ಲಿ ಬೋಧಕರು ಇದ್ದು, ವೈದ್ಯರ ಸಮಸ್ಯೆ ಹೆಚ್ಚು ಕಾಡದು. ಆದರೆ, ತಂತ್ರಜ್ಞರು ಹಾಗೂ ನರ್ಸ್‌ಗಳು ಬೇಕಾಗಿದೆ ಎಂದು ಹೇಳುತ್ತಾರೆ ವೈದ್ಯರು‌. 

ಈಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಶಾಸಕ ಸಿ.ಪುಟ್ಟರಂಗಶೆಟ್ಟಿ, ‘ಹೊಸ ಆಸ್ಪತ್ರೆಗೆ ತಂತ್ರಜ್ಞರು ಹಾಗೂ ಬೋಧಕೇತರ ಸಿಬ್ಬಂದಿ 355 ಮಂದಿ, ವಿವಿಧ ವೃಂದದ 228 ಮಂದಿ ಶುಶ್ರೂಷಕರ ಅಗತ್ಯವಿದೆ’ ಎಂದು ಹೇಳಿದ್ದರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡೀನ್‌ ಡಾ.ಸಂಜೀವ್‌, ‘ಸದ್ಯ ಈಗಿನ ಸಿಬ್ಬಂದಿಯನ್ನೇ ಬಳಸಿಕೊಂಡು ಆಸ್ಪತ್ರೆ ನಡೆಸಲಾಗುತ್ತದೆ. ಹೊಸ ಸಿಬ್ಬಂದಿ ನೇಮಕಾತಿಗೂ ಕ್ರಮವಹಿಸಲಾಗಿದೆ’ ಎಂದರು.

ಯಾವ ಮಹಡಿಯಲ್ಲಿ ಏನಿದೆ?
ನೆಲ ಮಹಡಿ ಸೇರಿದಂತೆ ಐದು ಮಹಡಿ ಹೊಂದಿರುವ ಹೊಸ ಬೋಧನಾ ಆಸ್ಪತ್ರೆಯು 30,728 ಚದರ ಮೀಟರ್‌ ವಿಸ್ತೀರ್ಣ ಹೊಂದಿದೆ. 

ನೆಲ ಮಹಡಿ: ಜನರಲ್‌ ಮೆಡಿಸಿನ್‌, ಚರ್ಮ, ಮನೋವೈದ್ಯಶಾಸ್ತ್ರ, ಕ್ಷಯರೋಗ ಮತ್ತು ಎದೆ, ದಂತ ವೈದ್ಯಶಾಸ್ತ್ರ, ಸಾಮಾನ್ಯ ಶಸ್ತ್ರಚಿಕಿತ್ಸೆ, ಮೂಳೆ, ರೇಡಿಯಾಲಜಿ, ಇಎನ್‍ಟಿ, ನೇತ್ರ ಚಿಕಿತ್ಸೆ ಹಾಗೂ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕಗಳಿ‌ವೆ. 

ಮೊದಲ ಮಹಡಿ: ವಿಶೇಷ, ಅರೆ ವಿಶೇಷ ಮತ್ತು ಸಾಮಾನ್ಯ ವಾರ್ಡ್‍ಗಳು, ರಕ್ತ ನಿಧಿಕೇಂದ್ರ, ಮುಖ್ಯಸ್ಥರ ಕೊಠಡಿ, ಆಸ್ಪತ್ರೆ ಕಚೇರಿ ಮತ್ತು ಕೇಂದ್ರ ಔಷಧಾಲಯಗಳಿವೆ.

ಎರಡನೇ ಮಹಡಿ: ಸೆಮಿನಾರ್ ಕೊಠಡಿ, ವಿಭಾಗದ ಮುಖ್ಯಸ್ಥರು, ಸಮಾಲೋಚನೆ ಕೊಠಡಿ, ಔಷಧಾಲಯ, ಸಾಮಾನ್ಯವಾರ್ಡ್, ವಿಶೇಷ ವಾರ್ಡ್, ಹಿರಿಯ ಮತ್ತು ಕಿರಿಯ ವೈದ್ಯರ ವಿಶ್ರಾಂತಿ ಕೊಠಡಿಗಳಿವೆ.

ಮೂರನೇ ಮಹಡಿ: ಉಪನ್ಯಾಸ ಸಭಾಂಗಣ, ಗ್ರಂಥಾಲಯ, ರೋಗಾಣು ಮುಕ್ತ ಸಂಗ್ರಹ ಕೊಠಡಿ, ಅಭ್ಯಾಸ ಕೊಠಡಿ, ಔಷಧಾಲಯ, ವಸ್ತ್ರಗಳ ಕೊಠಡಿ, ಸಾಮಾನ್ಯವಾರ್ಡ್, ಅರೆ ವಿಶೇಷ ವಾರ್ಡ್, ವಿಶೇಷ ವಾರ್ಡ್, ವೈದ್ಯರ ವಿಶ್ರಾಂತಿ ಕೊಠಡಿಗಳಿವೆ.

ನಾಲ್ಕನೇ ಮಹಡಿ: ಐಸಿಯು, ವಿಐಪಿ ವಾರ್ಡ್, ಸಿದ್ಧತಾ ಕೊಠಡಿ, ಪೂರ್ವ-ಆಪರೇಟಿವ್ ರೂಂ, ಉಪನ್ಯಾಸ ಕೊಠಡಿ, ಡೆಮೊ ಕೊಠಡಿ, ಕೇಂದ್ರಿತ ಸಂಗ್ರಹ ಕೊಠಡಿ, ಸರ್ವರ್ ರೂಂ, ಎಂಟು ಆಪರೇಷನ್ ಥಿಯೇಟರ್‌, ವೈದ್ಯರು ಮತ್ತು ನರ್ಸ್‌ಗಳ ವಿಶ್ರಾಂತಿ ಕೊಠಡಿಗಳಿವೆ.

ಬೇಕಿದೆ ಸಾರಿಗೆ ವ್ಯವಸ್ಥೆ
ಹೊಸ ಆಸ್ಪತ್ರೆಯು ನಗರದಿಂದ ಆರು ಕಿ.ಮೀ ದೂರದಲ್ಲಿದೆ. ಸದ್ಯಕ್ಕೆ ಅಲ್ಲಿಗೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಹಾಗಾಗಿ ವ್ಯವಸ್ಥಿತ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ. ಈಗಾಗಲೇ ಆಸ್ಪತ್ರೆಯ ಎದುರು ಆಟೊ ನಿಲ್ದಾಣ ಎಂಬ ಫಲಕ ಹಾಕಲಾಗಿದೆ. ಆಸ್ಪತ್ರೆ ಆರಂಭವಾದ ತಕ್ಷಣ ಬಾಡಿಗೆ ಆಟೊಗಳು ಅಲ್ಲಿ ಕಾರ್ಯಾರಂಭ ಮಾಡುವುದು ಖಚಿತ. ಆದರೆ, ಇವುಗಳು ಕೊಂಚ ದುಬಾರಿಯಾಗಿರುವುದರಿಂದ ಜನಸಾಮಾನ್ಯರಿಗೆ ಆಟೊಗಳಲ್ಲಿ ಓಡಾಡಲು ಸಾಧ್ಯವಿಲ್ಲ. ಹಾಗಾಗಿ, ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಓಡಿಸಬೇಕು ಎಂಬ ಒತ್ತಾಯ ಸಾರ್ವಜನಿಕರದ್ದು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ., ‘ಜಿಲ್ಲಾಧಿಕಾರಿ ಬಸ್‌ ಹಾಕುವ ಬಗ್ಗೆ ಹಿಂದೆ ಪ್ರಸ್ತಾಪಿಸಿದ್ದರು. ಆಸ್ಪತ್ರೆ ಆಡಳಿತದಿಂದ ನಮಗೆ ಇದುವರೆಗೆ ಮನವಿ ಬಂದಿಲ್ಲ. ಪ್ರಯಾಣಿಕರು ಇದ್ದರೆ ನಾವು ಬಸ್‌ ಓಡಿಸುತ್ತೇವೆ. ಜನರು ಬಾರದಿದ್ದರೆ ಮಾತ್ರ ನಮಗೆ ನಷ್ಟವಾಗುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.