ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ಕ್ಕೆ ಸಿ.ಎಂ ಭೇಟಿ; ಸಿದ್ದತೆಗೆ ಸೋಮಣ್ಣ ಸೂಚನೆ

ಚಾಮರಾಜನಗರ, ಹನೂರು, ಮಹದೇಶ್ವರ ಬೆಟ್ಟಕ್ಕೆ ಭೇಟಿ, ವಿವಿಧ ಕಾರ್ಯಕ್ರಮದಲ್ಲಿ ಭಾಗಿ
Last Updated 3 ಡಿಸೆಂಬರ್ 2022, 14:47 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಗೆ ಇದೇ 12ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಅತ್ಯಂತ ಶಿಸ್ತುಬದ್ಧವಾಗಿ ಕಾರ್ಯಕ್ರಮ ನಡೆಸಲು ಅಧಿಕಾರಿಗಳು ಅಚ್ಚುಕಟ್ಟಾದ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಾಕೀತು ಮಾಡಿದರು.

ನಗರದಲ್ಲಿ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಸಭೆ ನಡೆಸಿದ ಅವರು, ‘12ರಂದು ಬೆಳಿಗ್ಗೆ ಹೆಲಿಕಾಪ್ಟರ್‌ ಮೂಲಕ ಜಿಲ್ಲಾ ಕೇಂದ್ರಕ್ಕೆ ಬರಲಿದ್ದು, ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಫಲಾನುಭವಿಗಳಿಗೆ ಸವಲತ್ತು ವಿತರಿಸುವರು. ಬಳಿಕ ಹನೂರಿನಲ್ಲಿಯೂ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಿದ್ದಾರೆ. ಮಧ್ಯಾಹ್ನದ ಮೇಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ’ ಎಂದರು.

‘ಜಿಲ್ಲೆ ಅಭಿವೃದ್ಧಿಯಾಗಬೇಕಿದೆ. ಇನ್ನಷ್ಟು ಕಾರ್ಖಾನೆಗಳು, ಉದ್ಯಮಗಳು ಬೆಳೆಯಬೇಕಿದೆ. ಮುಖ್ಯಮಂತ್ರಿ ಅವರ ಮೂಲಕ ಜಿಲ್ಲೆಯ ಪ್ರಗತಿಗೆ ಶಕ್ತಿ ತುಂಬಬೇಕಿದೆ. ಅಭಿವೃದ್ದಿಗೆ ಪೂರಕವಾಗಿ ಹಲವು ಪ್ರಕ್ರಿಯೆಗಳು ನಡೆಯಬೇಕಿದೆ. ಹೀಗಾಗಿ ಮುಖ್ಯಮಂತ್ರಿಗಳ ಭೇಟಿ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ’ ಎಂದರು.

‘ಇಡೀ ಜಿಲ್ಲೆಯ ಕೆರೆಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ವಿಸೃತ ಯೋಜನಾ ವರದಿ ತಯಾರಾಗಿದೆ. ಜಿಲ್ಲೆಯ ಜನರಿಗೆ ಅನುಕೂಲವಾಗುವ ಕಾರ್ಯಕ್ರಮ ಸೌಲಭ್ಯಗಳನ್ನು ತಲುಪಿಸಬೇಕು. ಅಧಿಕಾರಿಗಳು ಕಾರ್ಯಕ್ರಮ ಆಯೋಜನೆಗೆ ಪೂರಕವಾಗಿರುವ ಎಲ್ಲಾ ಕ್ರಮಗಳಿಗೆ ಮುಂದಾಗಬೇಕು’ ಎಂದರು.

‘ಎಲ್ಲ ಇಲಾಖೆಗಳು ಗರಿಷ್ಠ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ಸಮಾರಂಭಗಳಿಗೆ ಕರೆದುಕೊಂಡು ಬರಲು ವ್ಯವಸ್ಥೆ ಮಾಡಬೇಕು.ಇದೇ ತಿಂಗಳ 7 ಹಾಗೂ 8ರಂದು ಜಿಲ್ಲೆಗೆ ಮತ್ತೆ ಭೇಟಿ ನೀಡಿ ಸಭೆ ನಡೆಸಲಾಗುವುದು. ಅಷ್ಟೊತ್ತಿಗೆ ಎಲ್ಲವೂ ಅಂತಿಮವಾಗಿರಬೇಕು’ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಎಸ್‌ಪಿ ಟಿ.ಪಿ.ಶಿವಕುಮಾರ್, ಎಡಿಸಿ ಎಸ್‌.ಕಾತ್ಯಾಯಿನಿದೇವಿ, ಎಎಸ್‌ಪಿ ಕೆ.ಎಸ್. ಸುಂದರ್ ರಾಜ್, ಬಿ‌ಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ದೀಪ್‌ ಜೆ.ಕಾಂಟ್ರ್ಯಾಕ್ಟರ್‌, ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌ ಸಂತೋಷ್ ಕುಮಾರ್, ಕೆಶಿಪ್ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಇತರರು ಇದ್ದರು.

ಕ್ರೀಡಾಂಗಣ ಪರಿಶೀಲನೆ: ಸಭೆಯ ಬಳಿಕ ಸೋಮಣ್ಣ ಅವರುನಗರದಲ್ಲಿ ಕಾರ್ಯಕ್ರಮ ನಡೆಯಲಿರುವ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.

ಕ್ರೀಡಾಂಗಣದಲ್ಲಿ ಸುಸಜ್ಜಿತ ವೇದಿಕೆ, ಸಾರ್ವಜನಿಕರ ಆಸನಗಳ ವ್ಯವಸ್ಥೆ, ಫಲಾನುಭವಿಗಳಿಗೆ ಪ್ರತ್ಯೇಕ ಆಸನಗಳು ಬೃಹತ್ ಶಾಮಿಯಾನ, ಬ್ಯಾರಿಕೇಡ್ ಅಳವಡಿಸಲು ಸೂಚಿಸಿದರು.

‘ಸಾರ್ವಜನಿಕರು ಕ್ರೀಡಾಂಗಣಕ್ಕೆ ಆಗಮಿಸುವ ಹಾಗೂ ತೆರಳುವ ಮಾರ್ಗಗಳು ಹೆಚ್ಚು ಇರುವಂತೆ ನೋಡಿಕೊಳ್ಳಬೇಕು. ಹೆಚ್ಚು ಜನರು ಬರುವ ನಿರೀಕ್ಷೆ ಇರುವ ಕಾರಣ ಎಲ್ಲೂ ಗೊಂದಲಗಳಾಗಬಾರದು. ಸಾರ್ವಜನಿಕರಿಗೆ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಬೇಕು’ ಎಂದರು.

ಶಾಸಕರ ಸಲಹೆಗಳು

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಕುಡಿಯುವ ನೀರಿನ 2ನೇ ಹಂತ ಯೋಜನೆ ವಿಳಂಬವಾಗಿದೆ. ಇದು ಜಾರಿಗೆ ಬರಬೇಕು. ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸ್ಥಳ ಗುರುತಿಸಲಾಗಿದ್ದು ಈ ಕಾರ್ಯ ಚಾಲನೆಗೆ ಬರಬೇಕಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ‘ಕೂಡಲೇ ಕುಡಿಯುವ ನೀರು ಯೋಜನೆಯ ಕಡತ ಮಂಡಿಸಬೇಕು. ಇದರ ಮುಂದಿನ ಪ್ರಕ್ರಿಯೆಗೆ ನಾನೇ ಕ್ರಮವಹಿಸುತ್ತೇನೆ’ ಎಂದರು.

ಹನೂರು ಶಾಸಕ ಆರ್.ನರೇಂದ್ರ ಮಾತನಾಡಿ, ‘ಮುಖ್ಯಮಂತ್ರಿಯವರು ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಹೆಚ್ಚು ಮೊತ್ತದ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸುತ್ತಿದ್ದಾರೆ. ಇದೇ ವೇಳೆ ರಾಮನಗುಡ್ಡ ಸೇರಿದಂತೆ ಎರಡು ಜಲಾಶಯಗಳಿಗೆ ಪೈಪ್ ಲೈನ್ ಅಳವಡಿಸಿದರೆ 17 ಸಾವಿರ ಹೆಕ್ಟೇರ್ ರೈತರ ಭೂಮಿಗೆ ಅನುಕೂಲವಾಗಲಿದೆ. ಮಹದೇಶ್ವರಬೆಟ್ಟ ವ್ಯಾಪ್ತಿಯ ಆರು ಹಳ್ಳಿಗಳಿಗೆ ವಿದ್ಯುತ್ ಕಲ್ಪಿಸಬೇಕು. ಈ ಎಲ್ಲ ಕೆಲಸಗಳು ಮುಖ್ಯಮಂತ್ರಿಗಳು ಬರುವ ಹೊತ್ತಿಗೆ ಆಗಬೇಕು’ ಎಂದು ಗಮನಕ್ಕೆ ತಂದರು.

ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಮಾತನಾಡಿ, ‘ಕೋಟೆಕೆರೆ ಏತ ನೀರಾವರಿ ಯೋಜನೆ ಎರಡು ವರ್ಷಗಳಿಂದ ಬಾಕಿ ಉಳಿದಿದೆ. ಇದನ್ನು ಯೋಜನೆಗೆ ಸೇರ್ಪಡೆ ಮಾಡಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳು ವ್ಯವಸ್ಥೆಯಾಗಬೇಕು. ನಗರೋತ್ಥಾನ 4ನೇ ಹಂತದ ಅನುದಾನದಲ್ಲಿ ರಸ್ತೆ, ವಿದ್ಯುತ್ ದೀಪ ಇನ್ನಿತರ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಇದಕ್ಕೆ ಅಗತ್ಯ ಸೂಚನೆ ನೀಡಬೇಕು’ ಎಂದರು.

ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ ಕುಮಾರ್ ಮಾತನಾಡಿ, ‘ ಕ್ಷೇತ್ರದಲ್ಲಿರುವ ಕೆರೆಗಳಿಗೆ ನೀರು ಹರಿಸುವುದು, ನಿರಂತರ ಜ್ಯೋತಿಗೆ 30 ಗ್ರಾಮ ಬಿಟ್ಟುಹೋಗಿರುವುದನ್ನು ಸೇರ್ಪಡೆ ಮಾಡಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ವಿದ್ಯುತ್ ದೀಪಗಳು ಅಳವಡಿಕೆಯಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT