ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಅಭಿವೃದ್ಧಿಗಾಗಿ ಸಿ.ಎಂ. ಭೇಟಿ :ಸೋಮಣ್ಣ

ಅಧಿಕಾರಿಗಳನ್ನು ಉದ್ದೇಶಿಸಿ ಮಾತು, ಕಾರ್ಯಕ್ರಮದ ಜಾಗ ಪರಿಶೀಲನೆ
Last Updated 7 ಡಿಸೆಂಬರ್ 2022, 15:25 IST
ಅಕ್ಷರ ಗಾತ್ರ

ಚಾಮರಾಜನಗರ: ‘ಹಿಂದುಳಿದಿರುವ ಚಾಮರಾಜನಗರ ಜಿಲ್ಲೆಯನ್ನು ಅಭಿ‌ವೃದ್ಧಿ ಪಡಿಸಬೇಕು ಎಂಬುದು ನಮ್ಮ ಉದ್ದೇಶ. ಇದೇ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ 12ಕ್ಕೆ ಜಿಲ್ಲೆಗೆ ಬರುತ್ತಿದ್ದಾರೆ. ಚಾಮರಾಜನಗರ, ಹನೂರು ಹಾಗೂ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಲಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿ ಭೇಟಿ ನೀಡುತ್ತಿರುವುದರಿಂದ ಕೈಗೊಂಡಿರುವ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಜೆ.ಎಚ್.ಪಟೇಲ್‌ ಸಭಾಂಗಣದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘₹1,000 ಕೋಟಿಗೂ ಹೆಚ್ಚು ವೆಚ್ಚದ ಯೋಜನೆಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ಗುರಿ. ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಬೇಕಿದೆ.ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆಗೆ ₹1,500 ಕೋಟಿ ವೆಚ್ಚದ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದೆ’ ಎಂದರು.

‘12ರ ಬೆಳಿಗ್ಗೆ 10.30ಕ್ಕೆ ಚಾಮರಾಜನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಭಾಗವಹಿಸಲಿದ್ದಾರೆ. 12.30ಕ್ಕೆ ಹನೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಬಳಿಕ ಮಹದೇಶ್ವರ ಬೆಟ್ಟಕ್ಕೆ ತೆರಳಲಿದ್ದಾರೆ. ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವುದರ ಜೊತೆಗೆ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ಮುಖ್ಯಮಂತ್ರಿ ವಿತರಿಸಲಿದ್ದಾರೆ. ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿ ಮಟ್ಟದಿಂದ ಫಲಾನುಭವಿಗಳನ್ನು ಕರೆದುಕೊಂಡು ಬರಲು ಬಸ್‌ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ನೋಡೆಲ್‌ ಅಧಿಕಾರಿಗಳನ್ನೂ ನಿಯೋಜಿಸಲಾಗಿದೆ. ಕಾರ್ಯಕ್ರಮದ ದಿನ ಸಂಬಂಧಿಸಿದ ಅಧಿಕಾರಿಗಳು ಫಲಾನುಭವಿಗಳನ್ನು ಬಸ್‌ಗಳಲ್ಲಿ ಕರೆದುಕೊಂಡು ಬರಬೇಕು. ಅವರಿಗೆ ಊಟ ತಿಂಡಿಯ ವ್ಯವಸ್ಥೆಯನ್ನೂ ಮಾಡಬೇಕು. ಎಲ್ಲಿ ಯಾರಿಗೂ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಸೋಮಣ್ಣ ತಿಳಿಸಿದರು.

ಜಿಲ್ಲಾಧಿಕಾರಿ ರಮೇಶ್‌ ಮಾತನಾಡಿ, ‘ಗ್ರಾಮ ಪಂಚಾಯಿತಿಗಳಿಂದ ಬೆಳಿಗ್ಗೆ 6.30ಕ್ಕೆ ಹೊರಟು, 9.30ರ ಹೊತ್ತಿಗೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತಲುಪಬೇಕು. ನಗರ ಸ್ಥಳೀಯ ಸಂಸ್ಥೆಗಳಿಂದಲೂ ಫಲಾನುಭವಿಗಳನ್ನು ಕರೆದುಕೊಂಡು ಬರಲು ವ್ಯವಸ್ಥೆ ಮಾಡಬೇಕು’ ಎಂದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎನ್‌.ಮಹೇಶ್‌, ಆರ್‌.ನರೇಂದ್ರ, ಸಿ.ಎಸ್‌.ನಿರಂಜನಕುಮಾರ್‌, ಎಸ್‌ಪಿ ಟಿ.ಪಿ.ಶಿವಕುಮಾರ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಎಡಿಸಿ ಎಸ್‌.ಕಾತ್ಯಾಯಿನಿದೇವಿ, ಎಎಸ್‌ಪಿ ಕೆ.ಎಸ್‌.ಸುಂದರ್‌ರಾಜ್ ಇತರರು ಇದ್ದರು.

ಕ್ರೀಡಾಂಗಣಕ್ಕೆ ಭೇಟಿ: ಸಭೆಯ ಬಳಿಕ ಸಚಿವ ಸೋಮಣ್ಣ ಅವರು ಅಧಿಕಾರಿಗಳೊಂದಿಗೆ ಕಾರ್ಯಕ್ರಮ ನಡೆಯಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.

ಸಾಕಷ್ಟು ಸಂಖ್ಯೆಯಲ್ಲಿ ಆಸನ ವ್ಯವಸ್ಥೆಗಳನ್ನು ಮಾಡಬೇಕು. ಸಮಾರಂಭದಲ್ಲಿ ಯಾವುದೇ ಕೊರತೆಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ವಿವಿಧ ಯೋಜನೆಗಳಿಗೆ ಚಾಲನೆ’

ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸೋಮಣ್ಣ, ‘ಮುಖ್ಯಮಂತ್ರಿಯವರು ಹಲವು ಪ್ರಮುಖ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.ಹನೂರು ವಿಧಾನಸಭಾ ಕ್ಷೇತ್ರದ 98 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ₹192 ಕೋಟಿ ವೆಚ್ಚದ ಮೊದಲನೇ ಹಂತದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಎರಡನೇ ಹಂತದ ಯೋಜನೆಗೆ ಚಾಲನೆ ನೀಡಲಿದ್ದಾರೆ. ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದು, ಯಳಂದೂರು ತಾಲ್ಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಮಹದೇಶ್ವರ ಬೆಟ್ಟದಲ್ಲಿ 66/11 ಕೆ.ವಿ ವಿದ್ಯುತ್ ಉಪಕೇಂದ್ರದ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ’ ಎಂದು ಸಚಿವರು ವಿವರಿಸಿದರು.

‘ಹಳೆ ಯೋಜನೆಗಳನ್ನೇ ಮತ್ತೆ ಉದ್ಘಾಟಿಸಲಾಗುತ್ತಿದೆ’ ಎಂದು ಕಾಂಗ್ರೆಸ್‌ ಶಾಸಕ ಪುಟ್ಟರಂಗಶೆಟ್ಟಿ ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪುಟ್ಟರಂಗಶೆಟ್ಟಿ ಅವರು ನನ್ನ ಸ್ನೇಹಿತರು. ಅವರಿಗೆ ಒಳ್ಳೆಯದಾಗಲಿ. ಜನರು ಹೇಳುತ್ತಾರೆ ನಾವು ಹೇಳುವುದಿಲ್ಲ. ಅವರು ಹೇಳುವುದನ್ನು ಹೇಳಲಿ, ಆದರೆ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಅವರು ಏನು ತಿಳಿದುಕೊಂಡಿದ್ದಾರೊ ಗೊತ್ತಿಲ್ಲ. ಅದಕ್ಕೆ ನನಗೆ ಬೇಜಾರಿಲ್ಲ. 12ರಂದು ವೇದಿಕೆಯಲ್ಲೇ ಅವರು ಹೇಳಲಿ’ ಎಂದರು.

ಕಾಂಗ್ರೆಸ್‌ ಶಾಸಕರ ಕ್ಷೇತ್ರಕ್ಕೆ ಸಿ.ಎಂ ಭೇಟಿ ನೀಡುತ್ತಿರುವ ಬಗ್ಗೆ ಕೇಳಿದ್ದಕ್ಕೆ, ‘ಯಾಕೆ ಬರಬಾರದು? ಅದರಲ್ಲೇನು ತಪ್ಪು? ಬೊಮ್ಮಾಯಿ ಅವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ’ ಎಂದರು.

ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಜನ್‌ ವರದಿ ಅಂತಿಮ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಮುಖ್ಯಮಂತ್ರಿ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ.
ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT