ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಚಳಿರಾಯನ ಕಾಟಕ್ಕೆ ಥರಗುಟ್ಟಿದ ಜನ

ಮೂರ್ನಾಲ್ಕು ದಿನಗಳಿಂದ ಕುಸಿದ ಉಷ್ಣಾಂಶ, ಜನಜೀವನದ ಮೇಲೆ ಪರಿಣಾಮ
Last Updated 23 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಚಳಿರಾಯ ಜನರನ್ನು ಕಾಡಲು ಆರಂಭಿಸಿದ್ದಾನೆ. ಎರಡು ವಾರಗಳ ಹಿಂದಿನಿಂದಲೇ ಶೀತ ವಾತಾವರಣ ಜಿಲ್ಲೆಯಲ್ಲಿ ಕಂಡು ಬಂದಿದ್ದರೂ, ಮೂರು ದಿನಗಳಿಂದ ಕೊರೆಯುವ ಚಳಿಯ ಅನುಭವವಾಗುತ್ತಿದೆ.

ಭಾನುವಾರ ರಾತ್ರಿ, ಸೋಮವಾರ ಬೆಳಿಗ್ಗೆ ಥರಗುಟ್ಟುವ ಚಳಿ ಇತ್ತು. ಸೋಮವಾರ ಬೆಳಿಗ್ಗೆ ಬಿಳಿಗಿರಿರಂಗನಬೆಟ್ಟದಲ್ಲಿ 12 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ಇತ್ತು. ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಮೂರ್ನಾಲ್ಕು ದಿನಗಳಿಂದ ಕನಿಷ್ಠ ಉಷ್ಣಾಂಶ 12–16 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ಗರಿಷ್ಠ ಉಷ್ಣಾಂಶ 25–26 ಡಿಗ್ರಿ ಸೆಲ್ಸಿಯಸ್‌ಗಳಷ್ಟಿದೆ.

ಕೆಲವು ದಿನಗಳಿಂದ ಸಂಜೆ ಐದು ಗಂಟೆಯ ಹೊತ್ತಿಗೆ ಚಳಿಯ ಅನುಭವ ಆರಂಭವಾಗುತ್ತಿದ್ದು ರಾತ್ರಿ ಹೆಚ್ಚಾಗಿ, ಮುಂಜಾನೆಗೆ ತೀವ್ರವಾಗುತ್ತಿದೆ. ಸೋಮವಾರ ಬೆಳಿಗ್ಗೆ ಟೊಪ್ಪಿ, ಸ್ವೆಟರ್‌ ಇಲ್ಲದೆ ಹೊರಗಡೆ ಹೋಗಲು ಸಾಧ್ಯವಿರದ ಪರಿಸ್ಥಿತಿ ಇತ್ತು. ಕೊರೆಯುವ ಚಳಿಯಿಂದಾಗಿ ಹಲವರು ವಾಯು ವಿಹಾರಕ್ಕೆ ತೆರಳಲಿಲ್ಲ. ಹೋದವರು ಕೂಡ ಶೀತ ಹವೆಯಿಂದ ರಕ್ಷಣೆ ಪಡೆಯಲು, ಸ್ವೆಟರ್‌, ಜಾಕೆಟ್‌, ಮಫ್ಲರ್‌ಗಳ ಮೊರೆ ಹೋದರು. ಸೂರ್ಯನ ಕಿರಣ ಬಿದ್ದರೂ ಚಳಿ ಹೋಗಲಿಲ್ಲ. ಬೆಳಿಗ್ಗೆ 10.30ರವರೆಗೂ ಶೀತದ ಅನುಭವ ಇತ್ತು.

ಉಷ್ಣಾಂಶ ಕುಸಿತ: ಎರಡು ವಾರಗಳಿಂದ ಜಿಲ್ಲೆಯಲ್ಲಿ ಉಷ್ಣಾಂಶ ಕುಸಿಯುತ್ತಿದೆ. ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌ ಒಳಗೆ ದಾಖಲಾಗುತ್ತಿದೆ. 19–20 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿನಲ್ಲಿದ್ದ ಕನಿಷ್ಠ ಉಷ್ಣಾಂಶ ನಾಲ್ಕೈದು ದಿನಗಳಿಂದೀಚೆಗೆ ಮತ್ತಷ್ಟು ಕುಸಿದಿದೆ.

ದೂರವಾದ ಮಳೆ: ಚಳಿ ವಾತಾವರಣ ಆರಂಭವಾಗುತ್ತಿದ್ದಂತೆಯೇ ಮಳೆ ದೂರವಾಗಿದೆ. ವಾರದಿಂದೀಚೆಗೆ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸ್ವಲ್ಪ ಬೇಗ ಚಳಿಗಾಲ ಆರಂಭವಾಗಿದೆ. ಹೋದ ವರ್ಷ ಕೊಂಚ ವಿಳಂಬವಾಗಿ ಡಿಸೆಂಬರ್‌ ಆರಂಭದಲ್ಲಿ ಕೊರೆಯುವ ಚಳಿಯ ಅನುಭವವಾಗಿತ್ತು. ಈ ವರ್ಷ 10 ದಿನಗಳ ಮೊದಲೇ ಶೀತ ಹವೆ ಆರಂಭವಾಗಿದೆ.

ಇಬ್ಬನಿಯಾಟ ಜೋರು: ಮೂರ್ನಾಲ್ಕು ದಿನಗಳಿಂದ ಮುಂಜಾನೆ ಇಬ್ಬನಿ ಹೆಚ್ಚಾಗಿದೆ. ಎಂಟು ಗಂಟೆಯಾದರೂ ಮಂಜಿನ ವಾತಾವರಣ ತಿಳಿಯಾಗುತ್ತಿಲ್ಲ.ಕೆರೆ ಕಟ್ಟೆ, ಕಾಡಿಂಚಿನ ಪ್ರದೇಶ, ಹೊಲ ಗದ್ದೆಗಳು, ತೋಟಗಳಗಲ್ಲಿ ಆವರಿಸುವ ಮಂಜು, ಮನಮೋಹಕ ದೃಶ್ಯಕಾವ್ಯವನ್ನು ಸೃಷ್ಟಿಸುತ್ತಿದೆ.

ಗ್ರಾಮೀಣ ಭಾಗದಲ್ಲೂ ಚಳಿಯ ಹೊಡೆ‌ತ ಜೋರಾಗಿದೆ. ಕೊರೆಯುವ ಚಳಿ ಜನರ ಜನ ಜೀವನದ ಮೇಲೆಯೂ ಪರಿಣಾಮ ಬೀರಿದೆ. ಜನರು ಬೆಂಕಿ ಹಾಕಿ ಚಳಿ ಕಾಯಿಸುತ್ತಿರುವ, ಬಿಸಿಲಿಗೆ ಮೈಯೊಡ್ಡಿ ನಿಂತಿದ್ದ ದೃ‌ಶ್ಯ ಕಂಡು ಬರುತ್ತಿದೆ.

ಕೃಷಿಗೆ ತೊಂದರೆ‌ ಇಲ್ಲ: ಕೆಲವು ಬೆಳೆಗಳಿಗೆ ಚಳಿ ವಾತಾವರಣದಿಂದ ಅನುಕೂಲವಾಗುತ್ತದೆ. ಕಡಲೆ, ಕೊತ್ತಂಬರಿ, ಜೋಳ, ರಾಗಿ ಸೇರಿದಂತೆ ಹಲವು ಬೆಳೆಗಳು ಚಳಿಗಾಲದಲ್ಲಿ ಕಾಳು ಕಟ್ಟುವುದು ಹೆಚ್ಚು ಎಂದು ಹೇಳುತ್ತಾರೆ ರೈತರು.

ಎಚ್ಚರ ಇರಲಿ: ಕೋವಿಡ್‌–19 ಇರುವುದರಿಂದ ಚಳಿಗಾಲದಲ್ಲಿ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT