ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಡರ ಹಾವಳಿ, ಸಂಚಾರ ನಿಯಮ ಉಲ್ಲಂಘನೆ: ಬೇಸತ್ತ ವಿದ್ಯಾರ್ಥಿನಿಯರು

ಕೊಳ್ಳೇಗಾಲ; ವಿದ್ಯಾರ್ಥಿನಿಯರಿಗೆ ಮುಜುಗರ, ಪಡ್ಡೆ ಹುಡುಗರಿಗೆ ಕಡಿವಾಣ ಹಾಕಲು ಒತ್ತಾಯ
Last Updated 21 ಸೆಪ್ಟೆಂಬರ್ 2022, 5:01 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದ ವಿವಿಧ ಕಡೆ, ಅದರಲ್ಲೂ ಕಾಲೇಜುಗಳ ಸುತ್ತಮುತ್ತ ಪುಂಡರ ಹಾವಳಿ ಮೀತಿ ಮೀರಿದ್ದು, ವಿದ್ಯಾರ್ಥಿನಿಯರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ.

‘ಪಡ್ಡೆ ಹುಡುಗರು ಹೆಲ್ಮೆಟ್‌ ಧರಿಸದೆ, ತ್ರಿಬಲ್ ರೈಡಿಂಗ್‌, ವೀಲ್ಹಿಂಗ್‌ ಮಾಡುತ್ತಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೂ ಪೊಲೀಸರು ಏನೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸಾರ್ವಜನಿಕರು ದೂರಿದ್ದಾರೆ.

ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಕಾಲೇಜುಗಳ ಆವರಣ, ಉಳಿದ ಸಮಯಗಳಲ್ಲಿ ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪಡ್ಡೆ ಹುಡುಗರು ಹೆಣ್ಣುಮಕ್ಕಳನ್ನು ಚುಡಾಯಿಸುತ್ತಾರೆ ಎಂಬುದು ಹಲವು ವಿದ್ಯಾರ್ಥಿನಿಯರ ಆರೋಪ.

‘ಅನುಭವಿಸುತ್ತಿರುವ ಮಾನಸಿಕ ಹಿಂಸೆಯನ್ನು ಅತ್ತ ಪೋಷಕರಿಗೂ ಹೇಳುವುದಕ್ಕೆ ಆಗದೆ ಇತ್ತ ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ತರಲೂ ಆಗದೆ ಸಂಕಟ ಅನುಭವಿಸುತ್ತಿದ್ದೇವೆ. ಇದರ ಬಗ್ಗೆ ತಿಳಿಸಿದ್ದರೂ ಆಡಳಿತ ಮಂಡಳಿಯವರು, ಪೊಲೀಸರು ಸುಮ್ಮನಿದ್ದಾರೆ’ ಎಂಬುದು ಅವರ ಅಳಲು.

ರಸ್ತೆಗಳಲ್ಲಿ ವೀಲಿಂಗ್: ದ್ವಿಚಕ್ರವಾಹನ ಸವಾರ ಮಾಡುವಾಗ ಹೆಲ್ಮೆಟ್‌ ಧರಿಸುವುದು ಕಡ್ಡಾಯ. ಆದರೆ, ಕಾಲೇಜು ಹುಡುಗರು ಹೆಲ್ಮೆಟ್‌ ಧರಿಸುವುದೇ ಇಲ್ಲ. ಹೋಗಲಿ ಬೈಕ್‌, ಸ್ಕೂಟರ್‌ಗಳನ್ನು ಸರಿಯಾಗಿ ಓಡಿಸುತ್ತಾರೆಯೇ? ಅದೂ ಇಲ್ಲ. ವಾಹನ, ಜನ ನಿಬಿಡ ರಸ್ತೆಗಳಲ್ಲಿಯೇ ವೀಲ್ಹಿಂಗ್‌ ಮಾಡುತ್ತಾರೆ.

‘ನಗರದ ಐಬಿ ರಸ್ತೆ ಮತ್ತು ಎಂ.ಜಿ.ಎಸ್.ವಿ ರಸ್ತೆಗಳಲ್ಲಿ ಹುಡುಗರು ವೀಲ್ಹಿಂಗ್‌ ಮಾಡುತ್ತಾರೆ. ಅದನ್ನು ನೋಡಿದರೆ ಮೈ ಜುಂ ಎನ್ನುತ್ತದೆ. ಅಪಾಯಕಾರಿಯಾಗಿರುವ ವೀಲ್ಹಿಂಗ್‌ಗೆ ಪೊಲೀಸರು ಕಡಿವಾಣ ಹಾಕಬೇಕು’ ಎಂದು ನಗರ ನಿವಾಸಿ ಮತ್ತೀನ್‌ ಒತ್ತಾಯಿಸಿದರು.

‘ನಿತ್ಯವೂ ಪುಂಡರ ಹಾವಳಿಯನ್ನು ಎದುರಿಸಬೇಕಾಗಿದೆ. ವೀಲ್ಹಿಂಗ್‌ ಮಾಡುವವರೂ ಇದ್ದಾರೆ. ಇದರಿಂದ ರಸ್ತೆಯಲ್ಲಿ ಹೋಗುವುದಕ್ಕೆ ಭಯವಾಗುತ್ತದೆ’ ಎಂದುಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿನಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತ್ರಿಬಲ್ ರೈಡಿಂಗ್: ಹೆಲ್ಮೆಟ್‌ ಧರಿಸದೇ ಇರುವುದು ಒಂದು ಸಮಸ್ಯೆಯಾದರೆ, ತ್ರಿಬಲ್‌ ರೈಡಿಂಗ್‌ ಇನ್ನೊಂದು ಸಮಸ್ಯೆ. ಕಾಲೇಜು ಹುಡುಗರು ಮಾತ್ರವಲ್ಲ ಜನಸಾಮಾನ್ಯರು ಕೂಡ ದ್ವಿಚಕ್ರವಾಹನಗಳಲ್ಲಿ ಮೂವರು ಸಂಚರಿಸಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ.

ನಗರ ಪೊಲೀಸ್ ಠಾಣೆ ಹಾಗೂ ಡಿವೈಎಸ್‌ಪಿ ಕಚೇರಿ ಮುಂದೆ ತ್ರಿಬಲ್ ರೈಡಿಂಗ್ ಹೋಗುತ್ತಾರೆ! ಸಿಬ್ಬಂದಿ ನೋಡಿದರೂ ಸುಮ್ಮನಿರುತ್ತಾರೆ. ಪೊಲೀಸರ ಮುಂದೆಯೇ ತ್ರಿಬಲ್ ರೈಡಿಂಗ್ ಹೋಗುವವರು ಬೇರೆ ಸ್ಥಳಗಳಲ್ಲಿ ಹೋಗದೆ ಇರುತ್ತಾರೆಯೇ ಎಂಬುದು ನಾಗರಿಕರ ಪ್ರಶ್ನೆ.

18 ವರ್ಷ ಆಗದೆ ಚಾಲನಾ ಪರವಾನಗಿ ಇಲ್ಲದಿದ್ದರೂ ಬೈಕ್‌, ಸ್ಕೂಟರ್‌ಗಳಲ್ಲಿ ಬರುವ ವಿದ್ಯಾರ್ಥಿಗಳು ಹಲವರು ಇದ್ದಾರೆ. ಒಬ್ಬೊಬ್ಬರಾಗಿ ಹೋಗದ ಇವರು, ಜೊತೆಗೆ ಸ್ನೇಹಿತರಿಬ್ಬರನ್ನೂ ಕೂರಿಸಿ ಕರೆದೊಯ್ಯುತ್ತಾರೆ.

‘ಹೋರಾಟ ಅನಿವಾರ್ಯ’

‘ಕೊಳ್ಳೇಗಾಲದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಲೇಜು ಸಮೀಪದಲ್ಲಿ ತ್ರಿಬಲ್ ರೈಡಿಂಗ್ ಹೆಚ್ಚಾಗಿದೆ. ಪುಂಡರ ಹಾವಳಿ ಮೀತಿ ಮೀರಿದೆ. ಇದಕ್ಕೆ ಕಡಿವಾಣ ಇಲ್ಲ. ಅನೇಕ ಸಭೆಗಳಲ್ಲಿ ಈ ವಿಚಾರವನ್ನು ಪ್ರಸ್ಥಾವನೆ ಮಾಡಿದರೂ ಪ್ರಯೋಜನವಾಗಿಲ್ಲ. ಇದನ್ನು ತಪ್ಪಿಸಬೇಕಾದರೆ ನಾವು ಹೋರಾಟವನ್ನೇ ಮಾಡಬೇಕಾಗಿದೆ’ ಎಂದುನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷನಟರಾಜ್ ಮಾಳಿಗೆ ಹೇಳಿದರು.

ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಖಚಿತ. ಪುಂಡರ ಹಾವಳಿ ತಪ್ಪಿಸಲು ಕಾಲೇಜುಗಳ ಮುಂದೆ ಪೊಲೀಸರನ್ನು ನಿಯೋಜಿಸಲಾಗುವುದು
– ಕೆ.ಎಸ್‌.ಸುಂದರ್‌ರಾಜ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT