ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳವಾಡಿ: ಕೋಮು ಸಾಮರಸ್ಯದ ಕೊಂಡೋತ್ಸವ

ಮಸೀದಿ ಮುಂಭಾಗ ಕೊಂಡ ನಿರ್ಮಾಣ, ಸಾವಿರಾರು ಭಕ್ತರು ಭಾಗಿ
Last Updated 9 ಮಾರ್ಚ್ 2023, 14:13 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಗಡಿ ಪ್ರದೇಶ ತಮಿಳುನಾಡಿನ ತಾಳವಾಡಿಯಲ್ಲಿ ಕೋಮು ಸಾಮರಸ್ಯ ಸಾರುವ ಮಾರಮ್ಮನ ಕೊಂಡೋತ್ಸವ ಗುರುವಾರ ಬೆಳಿಗ್ಗೆ ಅದ್ಧೂರಿಯಾಗಿ ನೆರವೇರಿತು.

ತಾಳವಾಡಿ ಹಾಗೂ ಸುತ್ತಮುತ್ತಲಿನ ಊರಿನ ಜನರು ಸೇರಿದಂತೆ ಚಾಮರಾಜನಗರ ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಕೂಡ ಕೊಂಡೋತ್ಸವದಲ್ಲಿ ಪಾಲ್ಗೊಂಡರು.

ಮಾರಮ್ಮ ದೇವಿಯ ಉತ್ಸವ ಮೂರ್ತಿಯನ್ನು ತಲೆಯಲ್ಲಿ ಹೊತ್ತಿದ್ದ ಅರ್ಚಕ ಶಿವಣ್ಣ ಅವರು ಕೊಂಡ ಹಾಯ್ದರು.

ಸುದೀರ್ಘ ಇತಿಹಾಸ ಹೊಂದಿರುವ ಈ ಉತ್ಸವ ಕೋಮು ಸಾಮರಸ್ಯದ ಕೊಂಡೋತ್ಸವ ಎಂದೇ ಪ‍್ರಸಿದ್ಧಿ ಪಡೆದಿದೆ. ಮಾರಮ್ಮ ದೇವಾಲಯದ ಸಮೀಪ ಮಸೀದಿ ಇದೆ. ಅದರ ಗೋಡೆಗೆ ಹೊಂದಿಕೊಂಡೇ ವೇಣುಗೋಪಾಲ ಸ್ವಾಮಿ ದೇವಾಲಯ ಇದೆ. ಮಸೀದಿಯ ಮುಂಭಾಗದಲ್ಲೇ ಕೊಂಡ ನಿರ್ಮಿಸಿ ಉತ್ಸವ ನಡೆಸಲಾಗುತ್ತದೆ. ಮುಸ್ಲಿಮರು ಕೂಡ ಈ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ.

ತಾಳವಾಡಿ, ದೊಡ್ಡಗಾಜನೂರು, ತಲಮಲೈ, ಕೋಡಿಪುರ, ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಊರುಗಳಿಂದ ಬಂದಿದ್ದ ಭಕ್ತರು ಕೊಂಡೋತ್ಸವಕ್ಕೆ ಸಾಕ್ಷಿಯಾದರು.

ಕೊಂಡೋತ್ಸವಕ್ಕೂ ಮುನ್ನ ಮಾರಮ್ಮದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಊರಿನ ಬೀದಿಗಳಲ್ಲಿ ನಡೆಯಿತು. ಊರವರು ಮಾರಮ್ಮನಿಗೆ ಪೂಜೆ ಮಾಡಿ ಹರಕೆ ಸಲ್ಲಿಸಿದರು.

ಈ ಹಿಂದೆ 20ಕ್ಕೂ ಹೆಚ್ಚು ಮಂದಿ ಕೊಂಡ ಹಾಯುತ್ತಿದ್ದರು. ಆದರೆ, ನೂಕು ನುಗ್ಗಲು ಉಂಟಾಗುತ್ತಿದ್ದರಿಂದ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ 18 ವರ್ಷಗಳಿಂದ ಒಬ್ಬರು ಮಾತ್ರ ಕೊಂಡ ಹಾಯುತ್ತಿದ್ದಾರೆ. 20 ವರ್ಷಗಳಿಂದ ಶಿವಣ್ಣ ಒಬ್ಬರೇ ಕೊಂಡ ಹಾಯುತ್ತಿದ್ದಾರೆ.

ವಿಶೇಷ ಅಲಂಕಾರ, ಪೂಜೆ: ಜಾತ್ರೆಯ ಅಂಗವಾಗಿ ದೇವಾಲಯದಲ್ಲಿ ಬುಧವಾರ ರಾತ್ರಿಯಿಂದಲೇ ವಿಶೇಷ ಪೂಜಾ ವಿಧಿ ವಿಧಾನಗಳು ನಡೆದವು. ಮಾರಮ್ಮಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಾತ್ರಿ ಉಯ್ಯಾಲೋತ್ಸವ ನಡೆಯಿತು.

ಕೊಂಡೋತ್ಸವದ ಬಳಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ಮಾರಮ್ಮನ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT