ಗುರುವಾರ , ಮೇ 26, 2022
30 °C

ದೇಶದಲ್ಲಿ ಅಂಬಾನಿ, ಅದಾನಿ ಕಂಪನಿ ಸರ್ಕಾರಗಳ ಆಳ್ವಿಕೆ–ದೇವನೂರು ಮಹಾದೇವ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಒಂದು ಕಂಪನಿ ಸರ್ಕಾರದ ಆಳ್ವಿಕೆ ಇತ್ತು. ಇಂದು ಅಂಬಾನಿ, ಅದಾನಿ ಮತ್ತಿತರ ಹತ್ತಾರು ಕಂಪನಿ ಸರ್ಕಾರಗಳ ಆಳ್ವಿಕೆ ನಡೆಯುತ್ತಿದೆಯೇನೋ ಎಂದೆನಿಸುತ್ತಿದೆ. ಜನರಿಂದ ಆಯ್ಕೆಯಾದ ಯಾವ ಲಕ್ಷಣವೂ ಮೋದಿ –ಶಾರ ಆಳ್ವಿಕೆಯಲ್ಲಿ ಕಾಣಿಸುತ್ತಿಲ್ಲ ಎಂದು ಸಾಹಿತಿ ದೇವನೂರು ಮಹಾದೇವ ಅವರು ಶನಿವಾರ ಟೀಕಿಸಿದರು. 

ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 85ನೇ ಜನ್ಮ ದಿನಾಚರಣೆಯ ಅಂಗವಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸಿ ಲಕ್ಷಾಂತರ ಜನರು ಎರಡೂವರೆ ತಿಂಗಳುಗಳಿಂದ ದೆಹಲಿಯ ಗಡಿಯ ಸುತ್ತಲೂ ಜೀವಪಣಕ್ಕಿಟ್ಟು ಕುಳಿತಿದ್ದಾರೆ. ಧರಣಿ ಸ್ಥಳದಲ್ಲಿ ಹಲವು ರೈತರು ಮೃತಪಟ್ಟಿದ್ದಾರೆ. ಇಡೀ ದೇಶವೇ ಒಕ್ಕೊರಲಿನಿಂದ ಅದೇ ಬೇಡಿಕೆಗಳನ್ನು ಮುಂದಿಡುತ್ತಿದ್ದರೂ, ಮೋದಿ–ಶಾ ಅವರು ಕಲ್ಲು ಹೃದಯದವರಾಗಿದ್ದಾರೆ. ಅವರ ನಡೆ ನುಡಿಗಳಲ್ಲಿ ಜನರಿಂದ ಆಯ್ಕೆಯಾಗಿರುವ ಲಕ್ಷಣಗಳು ಕಾಣಿಸುತ್ತಿಲ್ಲ. ಅಂಬಾನಿ, ಅದಾನಿ ಬಂಡವಾಳಶಾಹಿ ಕಂಪನಿ ಸರ್ಕಾರಗಳಿಂದ ನೇಮಕಗೊಂಡವರಂತೆ ಕಾಣಿಸುತ್ತಿದ್ದಾರೆ’ ಎಂದು ಹೇಳಿದರು. 

ವಂಚಕ ರಾಜಕಾರಣ: ದೇಶದಲ್ಲಿ ಈಗ ವಂಚಕ ರಾಜಕಾರಣ ನಡೆಯುತ್ತಿದೆ. ರಾಜ್ಯ ಸಭೆಯಲ್ಲಿ ಮೋದಿ ಅವರು ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಮಾತನಾಡುತ್ತಾ, ಕನಿಷ್ಠ ಬೆಂಬಲ ಬೆಲೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ ಎಂದು ಪ್ರವಾದಿಯಂತೆ ಭೂತ, ವರ್ತಮಾನ ಮತ್ತು ಭವಿಷ್ಯದ ಕಾಲ ನುಡಿಯುತ್ತಿರುವ ರೀತಿಯಲ್ಲಿ ಹೇಳಿದ್ದಾರೆ. ಹಾಗಿದ್ದರೆ, ದೆಹಲಿಯಲ್ಲಿ ಲಕ್ಷಾಂತರ ಜನರು ರಸ್ತೆಗಿಳಿದು ಸರ್ಕಾರ, ಬಿಜೆಪಿಯವರು ಕೊಟ್ಟ ಕಷ್ಟಕೋಟಲೆಗಳನ್ನು ಸಹಿಸಿಕೊಂಡು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿರುವುದು ಏಕೆ? ದೇಶದ ಜನರು ಕೃಷಿ ಕಾಯ್ದೆಗಳ ವಿರುದ್ಧ ಮಾತನಾಡುತ್ತಿರುವುದು ಏಕೆ? ಅವರೇನು ಮೂಢಾತ್ಮರೇ’ ಎಂದು ಪ್ರಶ್ನಿಸಿದರು.

‘ಅವರು ಕೇಳುತ್ತಿರುವುದು ಇಷ್ಟೇ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಶಾಸನ ಮಾಡಿ. ಇದನ್ನು ಮಾಡದಿದ್ದರೆ, ಕನಿಷ್ಠ ಬೆಂಬಲ ಬೆಲೆ ಇದ್ದರೂ ಇಲ್ಲದಂತೆ ಎಂದು ಹೇಳುತ್ತಿದ್ದಾರೆ. ರೈತರು, ಜನಸಾಮಾನ್ಯರು ಮೂಡಾತ್ಮರಲ್ಲ. ಸಮಸ್ಯೆ ಇರುವುದು ಮೋದಿ ಮತ್ತು ಶಾ ಅವರಲ್ಲಿ. ಅವರು ವಂಚಕಾತ್ಮರು. ಬೇಡಿಕೆಗಳನ್ನು ಕೇಳಿಸಿಕೊಳ್ಳುತ್ತಿಲ್ಲ’ ಎಂದರು.

ನಿಮ್ಮ ಮಾತನ್ನೇ ಕೇಳಿಸಿಕೊಳ್ಳಿ: ‘ಪ್ರಧಾನಿ ಮೋದಿ ಅವರಲ್ಲಿ ನನ್ನದೊಂದು ಪ್ರಾರ್ಥನೆ ಇದೆ. ನೀವು ಬೇರೆಯವರ ಮಾತನ್ನು ಕೇಳುವುದಿಲ್ಲ. ನಿಮ್ಮದೇ ಮಾತನ್ನಾದರೂ ಕೇಳಿಸಿಕೊಳ್ಳುತ್ತೀರಾ? ನೀವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2011ರಲ್ಲಿ ಯುಪಿಎ ಸರ್ಕಾರವು ಕೃಷಿ ಮಾರುಕಟ್ಟೆ ಸುಧಾರಣೆಗೆ ನಿಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡಿತ್ತು. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಬೇಕು ಎಂದು ವರದಿ ಕೊಟ್ಟಿದ್ದೀರಿ. ಈಗ ಎಲ್ಲರೂ ಇದನ್ನೇ ಕೇಳುತ್ತಿದ್ದಾರೆ. ಆದರೆ, ನೀವು ಕೇಳಿಸಿಕೊಳ್ಳುತ್ತಿಲ್ಲ’ ಎಂದು ಮಹಾದೇವ ಅವರು ಹೇಳಿದರು. 

ಜನರಿಗೆ ಬಣ್ಣದ ಮಾತು, ಬಂಡವಾಳ ಅಂಬಾನಿ ಅದಾನಿಗೆ

‘ಮಂಡಿಯೂ ಇರುತ್ತದೆ, ಖಾಸಗಿಯವರಿಗೂ ಅವಕಾಶ ಇರುತ್ತದೆ ಎಂಬ ಇನ್ನೊಂದು ಕಾನೂನು ಇದೆ. ಖಾಸಗಿ ಶಾಲೆಗಳ ಎದುರು ಸರ್ಕಾರಿ ಶಾಲೆಗಳ ಸ್ಥಿತಿ ಏನಾಗಿದೆ ಎಂಬುದು ನಮ್ಮ ಕಣ್ಣೆದುರೇ ಇದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಖಾಸಗಿ ಜಿಯೋ ಎದುರು ತೆವಳುತ್ತಿಲ್ಲವೇ? ಹಿಂದೆ ಕಾಫಿ ನಿಯಂತ್ರಿತ ಮಾರುಕಟ್ಟೆ ಇತ್ತು. ನಂತರ ಖಾಸಗಿ ಮಾರುಕಟ್ಟೆಗೆ ಅವಕಾಶ ಕೊಟ್ಟ ಕಾರಣಕ್ಕೆ ಈಗ ಕಾಫಿ ನಿಯಂತ್ರಿತ ಮಾರುಕಟ್ಟೆ ಹೆಸರಿಗಷ್ಟೇ ಇದೆ. ಖಾಸಗಿ, ದಲ್ಲಾಳಿಗಳು ಬಂಡವಾಳಶಾಹಿಗಳ ಹಿಡಿತಕ್ಕೆ  ಕಾಫಿ ಬೆಳೆಗಾರ ಕಣ್ಣುಬಾಯಿ ಬಿಡುತ್ತಿದ್ದಾನೆ’ ಎಂದು ದೇವನೂರು ಮಹಾದೇವ ಹೇಳಿದರು. 

‘ಬಂಡವಾಳಶಾಹಿಗಳ ಬಂಡವಾಳ ಹೆಚ್ಚುತ್ತಿದೆ. ರಾತ್ರಿ ಕಂಡ ಬಾವಿಗೆ ಹಗಲು ಬೀಳುವ ಕಾನೂನುಗಳು ಆಗುತ್ತಿವೆ. ಇವುಗಳಿಗೆಲ್ಲ ಮೋಹಕ ಒಕ್ಕಣೆಗಳನ್ನು ನೀಡಲಾಗುತ್ತಿದೆ. ಬಣ್ಣಬಣ್ಣದ ಮಾತುಗಳು ಜನಸಾಮಾನ್ಯರಿಗೆ; ಬಂಡವಾಳ ಮಾತ್ರ ಅಂಬಾನಿ ಅದಾನಿಯವರಿಗೆ. ಕೋವಿಡ್‌ ಹಾವಳಿಯಿಂದ ಜರ್ಜರಿತವಾದ ಕಾಲದಲ್ಲಿ ಕೇವಲ ನೂರು ಜನ ಶತಕೋಟ್ಯಧೀಶರು ₹12.5 ಲಕ್ಷ ಕೋಟಿ ಲಾಭ ಗಳಿಸಿದ್ದಾರೆ’ ಎಂದು ಕಿಡಿಕಾರಿದರು.

‘ಲಂಗು ಲಗಾಮಿಲ್ಲದ ಕಾನೂನುಗಳು ಜಾರಿಯಾದರೆ, ಈರುಳ್ಳಿ ಇನ್ನಿತರ ಪದಾರ್ಥಗಳನ್ನು ಸಂಗ್ರಹಿಸಿಟ್ಟು ಕೃತಕ ಅಭಾವ ಸೃಷ್ಟಿಸಿ ಬೆಲೆ ಗಗನಕ್ಕೆ ಏರಿಸುವಂತೆ ಎಲ್ಲ ದವಸ ಧಾನ್ಯಗಳ ಬೆಲೆಯೂ ಏರಿಕೆಯಾಗಲಿದೆ. ಮಧ್ಯಮ ವರ್ಗ ಬಡವರಾದರೆ, ಈಗಿನ ಬಡವರು ಹಸಿವಿನ ದವಡೆಗೆ ಸಿಲುಕಲಿದ್ದಾರೆ. ಈ ಕಾನೂನುಗಳು ರೈತರಿಗೆ ಮಾತ್ರವಲ್ಲ; ಎಲ್ಲರಿಗೂ ಸಂಬಂಧಿಸಿದ್ದು, ಇದನ್ನು ಎಲ್ಲರೂ ಮನಗಾಣಬೇಕಿದೆ’ ಎಂದು ದೇವನೂರು ಮಹಾದೇವ ಹೇಳಿದರು.

ನಂಜುಂಡಸ್ವಾಮಿ ‘ದೇಶದ್ರೋಹಿ’ಯಾಗಿರುತ್ತಿದ್ದರು

‘ಪ್ರೊ. ನಂಜುಂಡಸ್ವಾಮಿ ಅವರು ಈಗ ಬದುಕಿದ್ದರೆ ಎಲ್ಲಿರುತ್ತಿದ್ದರು ಎಂದು ನಾನು ಯೋಚಿಸುತ್ತಿದ್ದೇನೆ. ದೆಹಲಿಯಲ್ಲಿ ರೈತರೊಂದಿಗೆ ಅಥವಾ ಅಮೃತಭೂಮಿಯಲ್ಲಿಯೇ? ಬಹುಶಃ ಅವರಿಗೆ ಈ ಅವಕಾಶ ಇರುತ್ತಿರಲಿಲ್ಲ ಎಂದು ನನಗೆ ಅನ್ನಿಸುತ್ತಿದೆ. ಯುಎಪಿಎ ಅಡಿಯಲ್ಲಿ ವಿಚಾರಣೆಯೂ ಇಲ್ಲದೇ ಬಂಧನದಲ್ಲಿರುತ್ತಿದ್ದರು. ‘ದೇಶದ್ರೋಹಿ’ ಎಂದೂ ಕರೆಸಿಕೊಳ್ಳುತ್ತಿದ್ದರು’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು