ಚಾಮರಾಜನಗರ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಸೈಕಲ್ ಜಾಥಾ ನಡೆಯಿತು.
ನಗರದ ಸತ್ತಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹಾಗೂ ಕಾಂಗ್ರೆಸ್ ಸಹಾಯ ಹಸ್ತ ಕಾರ್ಯಕ್ರಮದ ಉಸ್ತುವಾರಿ ಎನ್.ಚಲುವರಾಯಸ್ವಾಮಿ ಸೈಕಲ್ ಜಾಥಾಗೆ ಚಾಲನೆ ನೀಡಿದರು.
ಡಿವಿಯೇಷನ್ ರಸ್ತೆ ಮೂಲಕ ಸಾಗಿದ ಜಾಥಾ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನ ತಲುಪಿ ಮುಕ್ತಾಯಗೊಂಡಿತು. ಜಿಲ್ಲಾಡಳಿತ ಭವನದ ಪ್ರವೇಶದ್ವಾರದ ಬಳಿ ಕುಳಿತ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಇದಕ್ಕೂ ಮೊದಲು ಪಕ್ಷದ ಕಚೇರಿಯಲ್ಲಿ ಮಾತನಾಡಿದ ಧ್ರುವನಾರಾಯಣ, ‘ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಪೆಟ್ರೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ಮಾಡಲಾಗಿದೆ’ ಎಂದರು.
ಸಹಾಯಹಸ್ತ ಕಾರ್ಯಕ್ರಮ:ಕೋವಿಡ್‌ನಿಂದಾಗಿ ಸರಳವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಇಂಧನ ಬೆಲೆ ಗಗನಕ್ಕೇರಿದೆ. ಪ್ರಪಂಚದಲ್ಲಿ ಇಷ್ಟು ಪ್ರಮಾಣದಲ್ಲಿ ತೆರಿಗೆ ವಿಧಿಸುವ ರಾಷ್ಟ್ರ ಯಾವುದೂ ಇಲ್ಲ. ಪೆಟ್ರೋಲ್, ಡೀಸೆಲ್‌ನ ನಿಜವಾದ ಬೆಲೆ ₹ 35 ಮಾತ್ರ. ಆದರೆ, ₹ 65 ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಜನಸಾಮಾನ್ಯರ ಮೇಲೆ ಹೊರೆಯಾಗುತ್ತಿದೆ’ ಎಂದು ದೂರಿದರು.
ಎನ್.ಚಲುವರಾಯಸ್ವಾಮಿ ಮಾತನಾಡಿ, ‘ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡಬೇಕಾದ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಮಾಡಿ ಜನಸಾಮಾನ್ಯರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಬೆಲೆ ಏರಿಕೆ ಇಳಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಸಹಾಯಹಸ್ತ ಕಾರ್ಯಕ್ರಮದ ಉಸ್ತುವಾರಿ ಕೆ.ಮರಿಗೌಡ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಕೆಪಿಸಿಸಿ ಸದಸ್ಯ ಸೈಯದ್ ರಫಿ, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವು, ಆರ್.ಮಹದೇವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರುಸ್ವಾಮಿ, ಮಹಮ್ಮದ್ ಅಸ್ಗರ್, ಎಚ್.ವಿ.ಚಂದ್ರು,ಮುಖಂಡರಾದಎ.ಆರ್.ಕೃಷ್ಣಮೂರ್ತಿ, ಜಯಣ್ಣ, ಎಸ್.ಬಾಲರಾಜ್, ಗಣೇಶ್ ಪ್ರಸಾದ್, ಯೋಗೇಶ್, ಸದಾಶಿವಮೂರ್ತಿ, ಕಾಗಲವಾಡಿಚಂದ್ರು, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಲತಾಜತ್ತಿ, ಪದ್ಮ, ಕಾವೇರಿ,ನಾಗಶ್ರೀ, ಭಾಗ್ಯ, ನಾಗರತ್ನ, ನೀಲಮ್ಮ ಇದ್ದರು.
ಸಹಾಯ ಹಸ್ತ ಕಾರ್ಯಕ್ರಮ ಯಶಸ್ವಿಗೆ ಮನವಿ
ಕೋವಿಡ್ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬುವ ಪಕ್ಷದ ಸಹಾಯ ಹಸ್ತ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಧ್ರುವನಾರಾಯಣ, ‘ಸಹಾಯಹಸ್ತ ಕಾರ್ಯಕ್ರಮ ಒಂದು ತಿಂಗಳು ನಡೆಯುತ್ತದೆ’ ಎಂದರು.
‘ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳ ಮನೆ ಮನೆಗೆ ಹೋಗಿ ಸಾಂತ್ವನ ಹೇಳುವುದು, ಸಹಾಯ ಮಾಡುವುದು, ಸರ್ಕಾರವನ್ನು ಎಚ್ಚರಿಸಿ, ಜನರಿಗೆ ಪರಿಹಾರ, ನೊಂದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಬೇಕು. ಜಿಲ್ಲಾ ಸಮಿತಿ ಹಾಗೂ ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಅವರು ಮನವಿ ಮಾಡಿದರು.
ಸಹಾಯಹಸ್ತ ಕಾರ್ಯಕ್ರಮದ ಉಸ್ತುವಾರಿ ಚಲುವರಾಯಸ್ವಾಮಿ ಮಾತನಾಡಿ, ‘ಕಾಂಗ್ರೆಸ್ ಹೋರಾಟದ ಫಲವಾಗಿ ಆಮ್ಲಜನಕ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಸಿಕ್ಕಿದೆ. ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ 36 ಮಂದಿಯ ಕುಟುಂಬಗಳಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದ ಮೇಲೆ ಸರ್ಕಾರ ಪರಿಹಾರ ನೀಡಲು ಮುಂದೆ ಬಂದಿರುವುದು ಇತಿಹಾಸದಲ್ಲಿ ಇದೇ ಮೊದಲು’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.