ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನ: ಆರ್‌. ಧ್ರುವನಾರಾಯಣ

ಬಡವರ ಪರ ಕೆಲಸ ಮಾಡಿ, ಪಕ್ಷ ಸಂಘಟನೆಗೂ ಒತ್ತುನೀಡಿ: ಗ್ರಾ,ಪಂ. ಸದಸ್ಯರಿಗೆ ಸಲಹೆ
Last Updated 11 ಜನವರಿ 2021, 15:50 IST
ಅಕ್ಷರ ಗಾತ್ರ

ಚಾಮರಾಜನಗರ: ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲವು ಸಾಧಿಸಿದ್ದು, ಆಯ್ಕೆಯಾಗಿರುವವರು ಗ್ರಾಮಗಳ ಅಭಿವೃದ್ಧಿಗೆ ಪಾರದರ್ಶಕವಾಗಿ ಕೆಲಸ ಮಾಡಬೇಕು. ಜೊತೆಗೆ ಪಕ್ಷ ಸಂಘಟನೆಗೂ ಒತ್ತು ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಆರ್‌. ಧ್ರುವನಾರಾಯಣ ಅವರು ಸೋಮವಾರ ಹೇಳಿದರು.

ಚಾಮರಾಜನಗರ ಹಾಗೂ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ31 ಸಾವಿರ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿ, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ಜಿಲ್ಲೆಯ 2157 ಸದಸ್ಯರ ಪೈಕಿ ಪಕ್ಷದ ಕಾರ್ಯಕರ್ತರು 1,135 ಮಂದಿ ಆಯ್ಕೆಯಾಗಿದ್ದಾರೆ.ಚಾಮರಾಜನಗರ ವಿಧಾನಸಭಾ ಕ್ಷೇತ್ರದ 26 ಗ್ರಾಮಪಂಚಾಯಿತಿಗಳಲ್ಲಿ 18ರಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೆಲುವು ಸಾಧಿಸಿದ್ದಾರೆ’ ಎಂದರು.

‘ಕಾಂಗ್ರೆಸ್ ಪಕ್ಷ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಿದೆ. ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆ ಸೇರಿದಂತೆ ನಾನಾ ಯೋಜನೆಗಳನ್ನು ಜಾರಿಮಾಡಿದೆ, ನೂತನ ಗ್ರಾಮಪಂಚಾಯಿತಿ ಸದಸ್ಯರು ಆಗಾಗ್ಗೆ ಗ್ರಾಮಸಭೆಗಳನ್ನು ಆಯೋಜಿಸುವ ಮೂಲಕ ಅರ್ಹರಿಗೆ ಮನೆಗಳನ್ನು ನೀಡಬೇಕು. ಬಡವರ ಪರ ಕೆಲಸ ಮಾಡಬೇಕು’ ಎಂದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೂಢನಂಬಿಕೆಯಿಂದ ಚಾಮರಾಜನಗರಕ್ಕೆ ಭೇಟಿ ನೀಡಿಲ್ಲ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ 12 ಬಾರಿ ಭೇಟಿ ನೀಡಿ ಜಿಲ್ಲೆಯ ಸರ್ವಾಂಗಿಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ’ ಎಂದು ಧ್ರುವನಾರಾಯಣ ಅವರು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ‘ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಇದೇ ರೀತಿಯಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಬೇಕು’ ಎಂದರು.

ಮುಖಂಡ ಎ.ಆರ್.ಕೃಷ್ಣಮೂರ್ತಿ ಅವರು ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಇತರೆ ಯೋಜನೆಗಳಿಂದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಯಿತು’ ಎಂದರು.

ಕಾರ್ಯಕ್ರಮದಲ್ಲಿ300ಕ್ಕೂ ಗ್ರಾಮ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಮುಖಂಡ ಗಣೇಶ್‌ಪ್ರಸಾದ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ಮುಖಂಡರಾದ ಎಸ್.ನಂಜುಂಡಸ್ವಾಮಿ, ಉಮೇಶ್, ಎಸ್.ಸೋಮನಾಯಕ ಮಾತನಾಡಿದರು.

ಕೆಪಿಸಿಸಿ ಸಂಯೋಜಕರಾದ ಪಲ್ಲವಿ, ಅಕ್ಬರ್‌ಅಲಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್‌, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಆರ್.ಮಹದೇವು, ಚಿಕ್ಕಮಹದೇವು, ಕಾಗಲವಾಡಿ ಚಂದ್ರು, ಮುಖಂಡರದ ಸೈಯದ್‌ರಫೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ, ಮಹಮದ್‌ಅಸ್ಗರ್, ಪು.ಶ್ರೀನಿವಾಸನಾಯಕ ಇದ್ದರು.

ಆಗದ ಅಭಿವೃದ್ಧಿ: ಪುಟ್ಟರಂಗಶೆಟ್ಟಿ

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಉಸ್ತುವಾರಿ ಸಚಿವರು 50 ಸಲ ಬಂದಿದ್ದೇನೆ ಎಂದು ಹೇಳುತ್ತಾರೆಯೇ ವಿನಾ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ತಂದಿಲ್ಲ’ ಎಂದು ದೂರಿದರು.

‘ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಸಾಕಷ್ಟು ಅನುದಾನ ಹರಿದು ಬಂದು ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT