ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಸೇರ್ಪಡೆಗೆ ಯುವಕರಿಗೆ ಧ್ರುವನಾರಾಯಣ ಕರೆ

ಕಾಂಗ್ರೆಸ್‌ ಪಕ್ಷದ 135ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸಮರ್ಪಣಾ ಸಮಾವೇಶ
Last Updated 28 ಡಿಸೆಂಬರ್ 2020, 16:08 IST
ಅಕ್ಷರ ಗಾತ್ರ

ಚಾಮರಾಜನಗರ: ‘ಭಾವನಾತ್ಮಕವಾಗಿ ಜನರನ್ನು ದಾರಿತಪ‍್ಪಿಸುತ್ತಿರುವ ಬಿಜೆಪಿ ವಿರುದ್ಧ ಯುವಜನಾಂಗ ಒಂದಾಗಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಕಾಂಗ್ರೆಸ್‌ಗೆ ಹೆಚ್ಚೆಚ್ಚು ಯುವಕರು ಸೇರ್ಪಡೆಗೊಳಿಸಬೇಕು. ಪಕ್ಷದಲ್ಲಿ ಮುಂಚೂಣಿಗೆ ಬರಬೇಕು’ ಎಂದು ಕೆಪಿಸಿಸಿ ವಕ್ತಾರ ಆರ್.ಧ್ರುವನಾರಾಯಣ ಅವರು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಸೋಮವಾರ ಕಾಂಗ್ರೆಸ್‌ ಪಕ್ಷದ 135ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು,‘ಭಾರತದ ಸರ್ವತೋಮುಖ ಅಭಿವೃದ್ಧಿಯನ್ನು ಬಯಸಿ ಕಾಂಗ್ರೆಸ್‌ ಪಕ್ಷ ಸ್ಥಾಪನೆಯಾಗಿದ್ದು, ತನ್ನದೇ ಆದ ಇತಿಹಾಸ ಹಾಗೂ ಪರಂಪರೆ ಹೊಂದಿದೆ’ ಎಂದು ಹೇಳಿದರು.

‘1885ರಲ್ಲಿ ಸ್ಥಾಪನೆಗೊಂಡ ಪಕ್ಷವು, ಬ್ರಿಟಿಷರ ದಾಸ್ಯದಿಂದ ದೇಶವನ್ನು ಬಿಡಿಸಿಕೊಳ್ಳಲು ದೊಡ್ಡ ಮಟ್ಟದ ಹೋರಾಟದಲ್ಲಿ ಭಾಗಿಯಾಗಿತ್ತು. ಅನೇಕ ಮಹನೀಯರು ಪಕ್ಷ ಕಟ್ಟಿ, ಬೆಳೆಸಿದ್ದಾರೆ. ನಮ್ಮದು ಕೇವಲ ಚುನಾವಣೆಗೆ ಮೀಸಲಾದ ಪಕ್ಷವಲ್ಲ; ಚಳವಳಿ ಹಾಗೂ ಆಂದೋಲನವಾಗಿ ರೂಪುಗೊಂಡಿದೆ. ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಯುವಕರು ಕಾಂಗ್ರೆಸ್ ಸೇರ್ಪಡೆಕೊಂಡು ಜಾತ್ಯತೀತ ನಿಲುವು ಹಾಗು ಸಾಮಾಜಿಕ ನ್ಯಾಯಪರವಾದ ಪಕ್ಷ ಸಂಘಟನೆ ಮಾಡಲು ಮುಂದಾಗಬೇಕು’ ಎಂದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೇಶ ಹಾಗೂ ರಾಜ್ಯದ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ. ಜಾತ್ಯತೀತ ರಾಷ್ಟ್ರವಾಗಿರುವ ಭಾರತದಲ್ಲಿ ಕೇವಲ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕಾಯ್ದೆಗಳನ್ನು ಮಾಡುವ ಮೂಲಕ ಕೋಮು ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ’ ಎಂದು ಧ್ರುವನಾರಾಯಣ ಅವರು ದೂರಿದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ ಅವರು ಮಾತನಾಡಿ, ‘ಕಾಂಗ್ರೆಸ್ ಪಕ್ಷ ಬೇರು ಮಟ್ಟದಿಂದ ಬೆಳೆದುಕೊಂಡು ಬಂದಿರುವ ದೊಡ್ಡ ಆಲದಮರ. ಕಾಂಗ್ರೆಸ್‌ನಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. 70 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷ ದೇಶವನ್ನು ಎಲ್ಲ ರೀತಿಯಲ್ಲಿಯೂ ಮುನ್ನಡೆಸಿದ ಪರಿಣಾಮ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ’ ಎಂದರು.

‘ಬಿಜೆಪಿಕೋಮುವಾದಿ ಪಕ್ಷವಾಗಿದ್ದು, ಕೇವಲ ಜನರ ಭಾವನೆಯ ಮೂಲಕ ಚುನಾವಣೆ ಎದುರಿಸಿ ಸಮಾಜ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ. ಈ ಪಕ್ಷವನ್ನು ದೂರವಿಟ್ಟಷ್ಟೂ ದೇಶ ಅಭಿವೃದ್ಧಿಯಾಗುತ್ತದೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಭಾರತದ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.

ಸನ್ಮಾನ:ಜಿಲ್ಲೆಯ ಎಂಟು ಬ್ಲಾಕ್‌ಗಳ 20ಕ್ಕೂ ಹೆಚ್ಚು ಹಿರಿಯ ಕಾಂಗ್ರೆಸ್ ಮುಖಂಡರನ್ನು ವೇದಿಕೆಯಲ್ಲಿ ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಲಾಯಿತು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್.ಮಹದೇವ್, ಬ್ಲಾಕ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ, ಮಹಮದ್ ಅಸ್ಗರ್, ತೋಟೇಶ್, ಹೊಂಗನೂರು ಚಂದ್ರು, ಈಶ್ವರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರಾಜಶೇಖರ್ ಜತ್ತಿ, ವೀಕ್ಷಕರಾದ ಅಕ್ಬರ್ ಅಲಿ, ಭಾಸ್ಕರ್, ಕಾರ್ಮಿಕ ವಿಭಾಗದ ಅಧ್ಯಕ್ಷ ವಿಷಕಂಠಮೂರ್ತಿ, ಕಾನೂನು ವಿಭಾಗದ ಅಧ್ಯಕ್ಷ ಎನ್.ಪಿ.ನಾಗಾರ್ಜುನ ಪೃಥ್ವಿ, ಕಾಗಲವಾಡಿ ಚಂದ್ರು, ಸ್ವಾಮಿ, ಶೇಖರಪ್ಪ, ರಾಜೇಂದ್ರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT