ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಬಂಧನ: ಕಾಂಗ್ರೆಸ್‌ ಪ್ರತಿಭಟನೆ

ಕೇಂದ್ರದ ಬಿಜೆಪಿ ಸರ್ಕಾರ ವಿರುದ್ಧ ಮುಖಂಡರ ಆಕ್ರೋಶ, ಉಗ್ರ ಹೋರಾಟದ ಎಚ್ಚರಿಕೆ
Last Updated 4 ಸೆಪ್ಟೆಂಬರ್ 2019, 15:03 IST
ಅಕ್ಷರ ಗಾತ್ರ

ಚಾಮರಾಜನಗರ: ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಕಾಂಗ್ರೆಸ್‌ ನಾಯಕರ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಹರಿಹಾಯ್ದರು.

ಮಳೆಯ ನಡುವೆಯೇ ಪ್ರತಿಭಟನೆ:ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು, ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದರು. ನಂತರ ವೃತ್ತದಲ್ಲಿ ಬೃಹತ್‌ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು.

ಈ ಸಂದರ್ಭದಲ್ಲಿ ಮಳೆ ಸುರಿಯಲು ಆರಂಭಿಸಿತು. ಆದರೂ, ಪ್ರತಿಭಟನೆಯನ್ನು ಮುಂದುವರಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಕಾಂಗ್ರೆಸ್‌ನ ಪ್ರಭಾವಿ ನಾಯಕರಾದ ಡಿ.ಕೆ.ಶಿವಕುಮಾರ್‌ ಅವರ ಬಂಧನ ಖಂಡನೀಯ. ಅವರ ಪ್ರಭಾವವನ್ನು ಸಹಿಸದೆ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ’ ಎಂದು ಆರೋಪಿಸಿದರು.

ಹನೂರು ಶಾಸಕ ಆರ್‌.ನರೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

‘ಇವರಿಬ್ಬರೂ ಕುತಂತ್ರದಿಂದ ಕಾಂಗ್ರೆಸ್‌ನ ಅನೇಕ ನಾಯಕರನ್ನು ಬಂಧಿಸಿ, ಪಕ್ಷವನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ನಡೆಸುತ್ತಿರುವ ದ್ವೇಷ ರಾಜಕಾರಣದ ವಿರುದ್ಧ ಕಾಂಗ್ರೆಸ್‌ ನಿರಂತರವಾಗಿ ಪ್ರತಿಭಟನೆ ನಡೆಸಲಿದೆ. ಮುಂದೆಯೂ ಉಗ್ರ ಹೋರಾಟ ನಡೆಸುತ್ತೇವೆ’ ಎಂದರು.

ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಮಾತನಾಡಿ, ‘ಕೆಪಿಸಿಸಿ ಆದೇಶದ ಅನ್ವಯ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕಾಂಗ್ರೆಸ್‌ ಪಕ್ಷವನ್ನು ನಾಶ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಇಡಿ ಅಧಿಕಾರಿಗಳ ನಡೆ ಖಂಡನೀಯ’ ಎಂದರು.

ಮುಖಂಡ ಎ.ಆರ್‌.ಕೃಷ್ಣಮೂರ್ತಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಬಸವರಾಜು, ನಗರಸಭಾ ಸದಸ್ಯರಾದ ಚೆನ್ನಮ್ಮ, ಭಾಗ್ಯಮ್ಮ, ಮುಖಂಡರಾದ ಬಾಲರಾಜು, ಕಂದಹಳ್ಳಿ ನಂಜುಂಡಸ್ವಾಮಿ, ಬಿ.ಕೆ.ರವಿಕುಮಾರ್‌, ಸೈಯದ್‌ ರಫಿ, ಮಹಮ್ಮದ್‌ ಅಸ್ಗರ್‌ ಮುನ್ನಾ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT