ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಪಾಲನೆ ದೇಶದ ಅಭಿವೃದ್ಧಿಗೆ ಸಹಕಾರಿ

ಸಂವಿಧಾನ ದಿನಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಡಿ. ವಿನಯ್ ಅಭಿಮತ
Last Updated 26 ನವೆಂಬರ್ 2019, 15:12 IST
ಅಕ್ಷರ ಗಾತ್ರ

ಚಾಮರಾಜನಗರ: ‘ದೂರದೃಷ್ಟಿಕೋನ ಹೊಂದಿರುವ ಸಂವಿಧಾನದ ಅಂಶಗಳು, ಆಶಯಗಳು ಇಂದಿಗೂ ಪ್ರಸ್ತುತ’ ಎಂದು ಹೆಚ್ಚುವರಿ ಜಿಲ್ಲಾ ಮತ್ತುಸೆಷನ್ಸ್‌ನ್ಯಾಯಾಧೀಶ ಡಿ. ವಿನಯ್ ಅವರು ಮಂಗಳವಾರ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ನ್ಯಾಯಾಂಗ ಇಲಾಖೆ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆ ಹಾಗೂ ಮೂಲಭೂತ ಕರ್ತವ್ಯಗಳ ಕುರಿತ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

‘ತಂತ್ರಜ್ಞಾನ ಸರ್ವವ್ಯಾಪಿಯಾಗಿದ್ದರೂಯಾವ ರೀತಿಯಲ್ಲೂ ಸಂವಿಧಾನವನ್ನು ಬಾಧಿಸಿಲ್ಲ. ಸಂವಿಧಾನವನ್ನು ಎಲ್ಲರೂ ಒಪ್ಪುವ ಜೊತೆಗೆ ಪಾಲಿಸುತ್ತಾರೆ. ಇದು ಭಾರತೀಯ ಸಂವಿಧಾನದ ವೈಶಿಷ್ಟ್ಯ.ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಧರ್ಮ. ಅದರ ನೈಜ ಪಾಲನೆಯಿಂದ ಎಲ್ಲರಿಗೂ ಒಳಿತೇ ಆಗಲಿದೆ. ಇದರಿಂದ ದೇಶವು ಅಭಿವೃದ್ಧಿ ಸಾಧಿಸಲಿದೆ’ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಮೇಶ್ ಅವರು ಮಾತನಾಡಿ, ‘ಸಂವಿಧಾನ ಭಾರತೀಯ ಆಡಳಿತ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಮೂಲಾಧಾರ. ಹೀಗಾಗಿ ಅದಕ್ಕೆ ಯಾವುದೇ ರೀತಿ ಧಕ್ಕೆ ಉಂಟಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಬೇಕು. ಜತೆಗೆ ಸಂವಿಧಾನದ ಮಹತ್ವ ಮತ್ತು ಪ್ರಸ್ತುತತೆಯನ್ನು ಪ್ರತಿಯೊಬ್ಬರು ಅರಿಯಬೇಕು’ ಎಂದರು.

ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗಣಪತಿ ಜಿ. ಬಾದಾಮಿ ಅವರು ಮಾತನಾಡಿ, ‘ಭಾರತದಂತಹ ವೈವಿಧ್ಯಮಯ ರಾಷ್ಟ್ರಕ್ಕೆ ಸಂವಿಧಾನ ರಚಿಸುವುದು ಬಹಳ ಕಷ್ಟದ ಕಾರ್ಯವಾಗಿತ್ತು. ಅದನ್ನು ಸಾಧಿಸುವಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಯಶಸ್ವಿಯಾದರು. ಅವರು ಕೊಡುಗೆಯಾಗಿ ನೀಡಿರುವ ಈ ಸಂವಿಧಾನವನ್ನು ಪ್ರತಿಯೊಬ್ಬರೂ ಸರಿಯಾದ ರೀತಿಯಲ್ಲಿ ಪಾಲಿಸಿ, ಅದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಮಾತನಾಡಿದರು. ಇದೇ ವೇಳೆ ಸಂವಿಧಾನದ ಮುನ್ನುಡಿ ಬೋಧಿಸಿ, ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸ್ಮಿತಾ, ಸಿದ್ದಾರ್ಥ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರಾದ ರಂಗಸ್ವಾಮಿ, ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳಾದ ಲೋಲಾಕ್ಷಿ, ಎಚ್.ಎನ್.ಲೋಕೇಶ್, ಜಿಲ್ಲಾ ನ್ಯಾಯಂಗ ಇಲಾಖೆಯ ಅಧ್ಯಕ್ಷ ವಿ. ಯಂಕನಾಯಕ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ಹರವೆ, ಉಪಾಧ್ಯಕ್ಷ ಎಂ. ಶಿವರಾಮು, ಜಂಟಿ ಕಾರ್ಯದರ್ಶಿ ಬಿ. ಮಂಜು ಉಪಸ್ಥಿತರಿದ್ದರು.

‘ಅಂಬೇಡ್ಕರ್‌ಗೆ ಸಮರ್ಥ ಸಂವಿಧಾನದ ಶ್ರೇಯಸ್ಸು’

ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಪಿ.ದೇವರಾಜು ಅವರು, ‘ಯಾವ ದೇಶದಲ್ಲೂ ಇರದಂತಹ ವಿಶಿಷ್ಟ ಸಂವಿಧಾನವನ್ನು ಭಾರತ ಹೊಂದಿದೆ. ಇದನ್ನು ದೇಶದಲ್ಲಿರುವ ವೈವಿಧ್ಯತೆಯ ಆಧಾರದಲ್ಲಿ ರಚಿಸಲಾಗಿದೆ. ಇಂಥಹ ಸಮರ್ಥ ಸಂವಿಧಾನ ಸೃಷ್ಟಿಸಿದ ಶ್ರೇಯಸ್ಸು ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಇದನ್ನು ಗೌರವಿಸಿ, ಅದರಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು.

‘ಸಂವಿಧಾನ ನೀಡಿರುವ ಹಕ್ಕುಗಳ ಬಗೆಗಷ್ಟೇ ಚಿಂತಿಸದೇ, ಕರ್ತವ್ಯಗಳ ಪಾಲನೆಗೂ ಮುಂದಾಗಬೇಕು. ಸಂವಿಧಾನದ ಆದರ್ಶವನ್ನು ಮೈಗೂಡಿಸಿಕೊಂಡು, ಅದರಂತೆ ಜ್ಞಾನವನ್ನು ದೇಶದ ಅಭಿವೃದ್ಧಿಯಲ್ಲಿ ವಿನಿಯೋಗಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT