ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಹೆಚ್ಚಳ: ಕಡಿಮೆ ಬೆಲೆಯ ಸೊಪ್ಪು ತರಕಾರಿಗಳತ್ತ ಮುಖ ಮಾಡಿದ ಗ್ರಾಹಕರು

ಗುಂಡ್ಲುಪೇಟೆ: ಮಾರುಕಟ್ಟೆಗಳಿಗೆ ಕಡಿಮೆ ಪ್ರಮಾಣದಲ್ಲಿ ಆವಕ, ಈರುಳ್ಳಿ, ತರಕಾರಿಗಳು ಗಗನಮುಖಿ
Last Updated 4 ಡಿಸೆಂಬರ್ 2019, 15:26 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಈರುಳ್ಳಿ ಸೇರಿದಂತೆ ದಿನ ನಿತ್ಯ ಬಳಕೆಗೆ ಬಹುತೇಕ ತರಕಾರಿಗಳ ಬೆಲೆ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಕಾಯಿ ಪಲ್ಲೆಗಳನ್ನು ಖರೀದಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಯಾವಾಗಲೂ ಕೆಜಿಗಟ್ಟಲೆ ಖರೀದಿಸುತ್ತಿದ್ದವರು ಈಗ ಅರ್ಧ ಕೆಜಿ, ಕಾಲು ಕೆಜಿಗೆ ಸೀಮಿತರಾಗಿದ್ದಾರೆ. ಕೆಲವರು ಕಡಿಮೆ ಬೆಲೆಯ ಸೊಪ್ಪು ತರಕಾರಿಗಳತ್ತ ಮುಖ ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ಎರಡು ಮಾರುಕಟ್ಟೆಗಳಿದ್ದು, ಗುಂಡ್ಲುಪೇಟೆ ಮತ್ತು ತೆರಕಣಾಂಬಿ ಮಾರುಕಟ್ಟೆಗಳಲ್ಲಿ ಟೊಮೆಟೊ (ಕೆಜಿಗೆ ₹20), ಬೀನ್ಸ್‌ (₹25) ಹಸಿ ಮೆಣಸಿನಕಾಯಿ (₹30) ಮಾತ್ರ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ಕ್ಯಾರೆಟ್ ಕೆಜಿಗೆ ₹60 ಈರುಳ್ಳಿ ₹90 ರಿಂದ ₹110, ಹೀರೇಕಾಯಿ ₹40, ದಪ್ಪ ಮೆಣಸಿನಕಾಯಿ ₹60ಕ್ಕೆ ಮಾರಾಟವಾಗುತ್ತಿದೆ.

ಸೊಪ್ಪುಗಳು ಅಗ್ಗ

ಮಾರುಕಟ್ಟೆಗಳಲ್ಲಿ ಸೊಪ್ಪುಗಳು ಅಗ್ಗದ ಬೆಲೆಗೆ ದೊರಕುತ್ತಿದೆ.ಗ್ರಾಹಕರೆಲ್ಲ ಹೆಚ್ಚಾಗಿ ಅವುಗಳನ್ನೇ ಖರೀದಿಸುತ್ತಿದ್ದಾರೆ. ಪಾಲಕ್ ಸೊಪ್ಪು ನಾಲ್ಕು ಕಟ್ಟಿಗೆ ₹10 , ಮೆಂತೆ ಐದು ಕಟ್ಟಿಗೆ ₹10, ಕೊತ್ತಂಬರಿ ಎರಡು ಕಟ್ಟಿಗೆ ₹10ನಂತೆ ಮಾರಾಟವಾಗುತ್ತಿದೆ.

ಈರುಳ್ಳಿ ಕ್ವಿಂಟಲ್‍ಗೆ ₹7,000ನಿಂದ ₹8,000 ತಲುಪಿದ್ದು, ಕೆಂಪು ಮತ್ತು ಒಣಗಿದ ಗಡ್ಡೆಗಳ ಬೆಲೆ ಇನ್ನೂ ಜಾಸ್ತಿಯಾಗಿದೆ. ಇದರ ಜೊತೆಗೆ ಆಲೂಗಡ್ಡೆ, ಬೀಟ್‍ರೂಟ್, ಬದನೆಕಾಯಿ, ಹಿರೇಕಾಯಿ, ಸೌತೆಕಾಯಿ, ಬೀನ್ಸ್, ದಪ್ಪ ಮೆಣಸಿನಕಾಯಿ, ಕ್ಯಾರೆಟ್ ಬೆಲೆಯೂ ಹೆಚ್ಚಿದೆ.

‘ಈರುಳ್ಳಿ ದರ ಹೆಚ್ಚಾಗಿರುವುದರಿಂದ ಅದನ್ನು ಖರೀದಿಸಲು ಹಿಂದೆ ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಸೋಮವಾರ ಷಷ್ಠಿ ಹಬ್ಬ ಇದ್ದುದರಿಂದ ಅವಶ್ಯ ಇರುವವಷ್ಟು ಈರುಳ್ಳಿಯನ್ನು ಮಾತ್ರ ಖರೀದಿಸಿದೆವು’ ಎಂದುಭೀಮನಬೀಡಿನ ಮಂಜು ಅವರು ಹೇಳಿದರು.

‘ತಾಲ್ಲೂಕಿನ ಎರಡು ತರಕಾರಿ ಮಾರುಕಟ್ಟೆಗಳಿಂದ ಪ್ರತಿನಿತ್ಯ ಕೇರಳ, ತಮಿಳುನಾಡು ಹಾಗೂ ರಾಜ್ಯದ ಇನ್ನಿತರೆ ಕಡೆಗಳಿಗೆ ತರಕಾರಿಗಳನ್ನು ರವಾನೆ ಮಾಡಲಾಗುತ್ತಿದೆ. ಆದರೆ, ಇದೀಗ ಮಾರುಕಟ್ಟೆಗೆ ತರಕಾರಿಗಳ ಆವಕ ಕಡಿಮೆಯಾಗಿದೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ಮಾಂಸ ಮಾರಾಟಕ್ಕೂ ಕುತ್ತು: ಈರುಳ್ಳಿ ಬೆಲೆ ವಿಪರೀತ ಏರಿಕೆಯಾಗಿರುವುದರಿಂದ ಜನರು ಖರೀದಿಗೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಹಾಗಾಗಿ, ಮಾಂಸ ಮಾರಾಟವೂ ಕಡಿಮೆಯಾಗಿದೆ.

‘ಮಾಂಸದ ಅಡುಗೆಯಲ್ಲಿ ಈರುಳ್ಳಿ ಬಳಕೆ ಹೆಚ್ಚಾಗಿದೆ. ಈಗ ಮಾಂಸದಷ್ಟೇ ಈರುಳ್ಳಿಗೂ ದುಡ್ಡು ಕೊಡಬೇಕು ಎಂಬ ಕಾರಣಕ್ಕೆ ಜನರು ಮಾಂಸ ಖರೀದಿಸಲು ಬರುತ್ತಿಲ್ಲ’ ಎಂದು ಕೋಳಿ ಮಾಂಸ ವ್ಯಾಪಾರಿ ಸಿದ್ದಿಕ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೇಡಿಕೆಗೆ ತಕ್ಕಂತೆ ಆವಕ

ತಾಲ್ಲೂಕಿನ ಮಾರುಕಟ್ಟೆಗಳಿಗೆ ಆವಕವಾಗುವ ತರಕಾರಿಗಳ ಬೆಲೆ ಹೆಚ್ಚಾಗಿದೆ. ಆದರೆ,ತಾಲ್ಲೂಕಿನ ವ್ಯಾಪ್ತಿಯಿಂದ ಬರುತ್ತಿರುವ ತರಕಾರಿಗಳ ಬೆಲೆ ಕಡಿಮೆ ಇದೆ. ಗ್ರಾಹಕರಿಗೆ ಅವುಗಳನ್ನು ಕೊಳ್ಳಲು ಅವಕಾಶ ಇದೆ. ಈಗ ಈರುಳ್ಳಿ ಭಾರಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಹಾಗಾಗಿ ಬೆಲೆ ಹೆಚ್ಚಾಗಿದೆ. ಬೇಡಿಕೆಗೆ ಅನುಗುಣವಾಗಿ ತರಿಸಲಾಗುತ್ತಿದೆ’ ಎಂದು ಗುಂಡ್ಲುಪೇಟೆ ಎಪಿಎಂಸಿ ಕಾರ್ಯದರ್ಶಿ ನಾಗೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT