ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ತಡೆ: ಟೊಂಕಕಟ್ಟಿ ನಿಂತ ಗ್ರಾಮಸ್ಥರು

ಮಾರ್ಟಳ್ಳಿ: ಹೊರ ರಾಜ್ಯ, ದೂರದ ಊರಿಂದ ಬರುವವರ ಮೇಲೆ ಮುಖಂಡರಿಂದಲೇ ನಿಗಾ
Last Updated 24 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಹನೂರು: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ ಸೋಂಕು ತಮ್ಮ ಗ್ರಾಮದವರಿಗೆ ತಗುಲದಂತೆ ತಡೆಯಲು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮಸ್ಥರು ಟೊಂಕಕಟ್ಟಿ ನಿಂತಿದ್ದು, ಹೊರರಾಜ್ಯ ಹಾಗೂ ದೂರದ ಊರಿನಿಂದ ಬರುತ್ತಿರುವವರನ್ನು ಸ್ವತಃ ಅವರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸುತ್ತಿದ್ದಾರೆ.

ಭಾನುವಾರದ ಜನತಾ ಕರ್ಫ್ಯೂ ನಂತರ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ಮನೆಯಲ್ಲೇ ಉಳಿದಿದ್ದಾರೆ. ಸೋಮವಾರ ಮತ್ತು ಮಂಗಳವಾರವೂ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಮಾರ್ಟಳ್ಳಿ, ವಡ್ಡರದೊಡ್ಡಿ, ನಾಲ್‌ರೋಡ್, ಹಳೇಮಾರ್ಟಳ್ಳಿ ಬಸ್ ನಿಲ್ದಾಣಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ.

ಗ್ರಾಮದಲ್ಲಿ ಎರಡು ದಿನಗಳಿಂದ ಹೊರಗಡೆಯಿಂದ ಬರುವ ಜನರ ಮೇಲೆ ನಿಗಾ ಇಡಲಾಗುತ್ತಿದೆ. ಮಾರ್ಟಳ್ಳಿ, ವಡ್ಡರದೊಡ್ಡಿ, ಸಂದನಪಾಳ್ಯ, ಆಲದಮರ, ಅಂತೋಣಿಯಾರ್ ಕೋಯಿಲ್ ಮುಂತಾದ ಗ್ರಾಮಗಳ ಜನರು ಕೂಲಿ ಕೆಲಸಕ್ಕಾಗಿ ತಮಿಳುನಾಡು ಹಾಗೂ ಕೇರಳಕ್ಕೆ ತೆರಳಿದ್ದಾರೆ. ಎಲ್ಲೆಡೆ ಉದ್ಭವಿಸಿರುವ ಕೊರೊನಾದಿಂದಾಗಿ ಅಲ್ಲಿದ್ದ ಜನರೆಲ್ಲಾ ಗ್ರಾಮಗಳತ್ತ ವಾಪಾಸ್ಸಾಗುತ್ತಿದ್ದಾರೆ. ಗ್ರಾಮಕ್ಕೆ ಸೋಂಕು ಹರಡವುದನ್ನು ತಡೆಗಟ್ಟಲು ಗ್ರಾಮಸ್ಥರೇ ಜವಾಬ್ದಾರಿ ವಹಿಸಿಕೊಂಡು ಗ್ರಾಮಪಂಚಾಯಿತಿ ಸದಸ್ಯ ರಾಮಲಿಂಗಂ ನೇತೃತ್ವದಲ್ಲಿ ಗರಿಕೆಕಂಡಿ ಹಾಗೂ ನಾಲ್‍ರೋಡ್ ಚೆಕ್‍ಪೋಸ್ಟ್‌ಗಳಲ್ಲಿ ಕಾವಲು ಕಾದು ಅಲ್ಲಿಂದ ಬರುವವರನ್ನು ತಡೆದು ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ.

‘ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಜನರು ತಮಿಳುನಾಡು ಹಾಗೂ ಕೇರಳದಲ್ಲಿ ಅಧಿಕವಾಗಿದ್ದು ಅವರೆಲ್ಲಾ ಈಗ ವಾಪಸಾಗುತ್ತಿದ್ದಾರೆ ಎಂದು ತಿಳಿದು ನಾವು ಗ್ರಾಮಸ್ಥರೊಡಗೂಡಿ ಅಲ್ಲಿಂದ ತಪಾಸಣೆಗೆ ಕಳುಹಿಸುತ್ತಿದ್ದೇವೆ. ಎರಡು ದಿನಗಳ ಅವಧಿಯಲ್ಲಿ 30 ಜನರನ್ನು ತಪಾಸಣೆಗೆ ಕಳುಹಿಸಿಕೊಡಲಾಗಿದೆ. ಇದಕ್ಕೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯೂ ಉತ್ತಮವಾಗಿ ಸಹಕರಿಸುತ್ತಿದ್ದಾರೆ’ ಎಂದು ರಾಮಲಿಂಗಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪಂಚಾಯಿತಿಯಿಂದಲೂ ಜಾಗೃತಿ

ಗ್ರಾಮಸ್ಥರ ಜಾಗೃತಿ ಅಭಿಯಾನದ ಜೊತೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಂಡಿದ್ದು, ಮಂಗಳವಾರ ಧ್ವನಿವರ್ಧಕದ ಮೂಲಕ ಕೊರೊನಾ ಸೋಂಕು ತಡೆಗಟ್ಟುವ ಬಗ್ಗೆ ಅರಿವು ಮೂಡಿಸಲಾಯಿತು. ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸದಸ್ಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆ ಹಾಗೂ ಗ್ರಾಮಗಳಿಗೆ ತೆರಳಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

‘ಮಾರ್ಟಳ್ಳಿ ಭಾಗದ ಬಹುತೇಕ ಜನರು ಆಸ್ಟ್ರೇಲಿಯಾ, ಅಮೆರಿಕ, ಇಟಲಿ ಹಾಗೂ ಕೇರಳ, ತಮಿಳುನಾಡು ಸೇರಿದಂತೆ ದೇಶದ ಹಲವು ಕಡೆ ವೈದ್ಯರಾಗಿ, ಶಿಕ್ಷಕರಾಗಿ, ದಾದಿಯರಾಗಿ, ಪಾದ್ರಿಗಳಾಗಿ ಯೋಧರಾಗಿ ದುಡಿಯುತ್ತಿದ್ದಾರೆ. ಕೊರೊನಾ ರೌದ್ರತೆ ಬಗ್ಗೆ ತಾವು ಇರುವ ಸ್ಥಳದಿಂದಲೇ ಅಲ್ಲಿನ ಚಿತ್ರಣವನ್ನು ವಿವರಿಸಿ ಎಚ್ಚರಿಕೆಯಿಂದರುವಂತೆ ಸೂಚಿಸುತ್ತಿದ್ದಾರೆ. ಅದನ್ನು ಗ್ರಾಮದ ಮುಖಂಡರು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಗ್ರಾಮಕ್ಕೆ ಸೋಂಕು ಹರಡದಂತೆ ತಡೆಯಲು ಇಡೀ ಗ್ರಾಮವೇ ಮುಂದಾಗಿರುವುದು ಶ್ಲಾಘನೀಯ ವಿಚಾರ’ ಎಂದು ಗ್ರಾಮದ ಡಾನ್‍ಬೋಸ್ಕೋ ಅವರು ಸಂತಸ ವ್ಯಕ್ತಪಡಿಸಿದರು.

ಚರ್ಚ್‍ಗಳಲ್ಲೂ ಪ್ರಾರ್ಥನೆ ರದ್ದು

ಮಾರ್ಟಳ್ಳಿ, ಸಂದನಪಾಳ್ಯ, ಅಂಥೋಣಿಯಾರ್ ಕೋಯಿಲ್, ವಡ್ಡರದೊಡ್ಡಿ, ಕೀರೇಪಾತಿ ಹಾಗೂ ಹಳೇ ಮಾರ್ಟಳ್ಳಿ ಗ್ರಾಮಗಳ ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸ್ಥಗಿತಗೊಳಿಸಲಾಗಿದೆ.

‘ಈಸ್ಟರ್ ಹಬ್ಬದ ಸಂದರ್ಭದಲ್ಲಿಯೂ ಜನರ ಸುರಕ್ಷೆ ದೃಷ್ಟಿಯಿಂದ ಪ್ರಾರ್ಥನೆಯಲ್ಲಿ ನಿಲ್ಲಿಸಲಾಗಿದ್ದು ಎಲ್ಲರೂ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಬಗ್ಗೆ ಜನರಿಗೂ ಅರಿವು ಮೂಡಿಸಲಾಗಿದೆ’ ಎಂದು ಚರ್ಚ್‍ನ ಪಾದ್ರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT