ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ದಿಗ್ಬಂಧನಕ್ಕೆ ನಲುಗಿದ ಕುಕ್ಕುಟೋದ್ಯಮ

ಕೋಳಿಗಳಿಗೆ ಸಿಗುತ್ತಿಲ್ಲ ಆಹಾರ, ಫಾರಂ ಮಾಲೀಕರಿಗೆ ಇಕ್ಕಟ್ಟು
Last Updated 5 ಏಪ್ರಿಲ್ 2020, 6:58 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು ಮತ್ತು ದಾವಣಗೆರೆಯಲ್ಲಿ ದೃಢಪಟ್ಟಿದ್ದ ಹಕ್ಕಿಜ್ವರ ಪ್ರಕರಣಗಳಿಂದಾಗಿ ಆತಂಕಕ್ಕೀಡಾಗಿ ಚೇತರಿಸಿಕೊಂಡಿದ್ದ ಕುಕ್ಕುಟೋದ್ಯಮ ಈಗ ಕೊರೊನಾ ಭೀತಿಯಿಂದ ಹೇರಲಾಗಿರುವ ದಿಗ್ಬಂಧನದಿಂದಾಗಿ ನಲುಗುತ್ತಿದೆ.

ವಾಹನಗಳ ಸಾಗಣೆಗೆ ನಿರ್ಬಂಧವಿರುವುದರಿಂದ ಕೋಳಿಗಳಿಗೆ ಆಹಾರ (ಫೀಡ್‌) ಲಭ್ಯವಾಗದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ದೊಡ್ಡ ಪ್ರಮಾಣದ ಫಾರಂ ನಡೆಸುವವರಿಗೆ ಪ್ರತಿದಿನ ಭಾರೀ ಪ್ರಮಾಣದಲ್ಲಿ ಆಹಾರ ಬೇಕಾಗುತ್ತದೆ. ಬಹುತೇಕ ಫಾರಂಗಳಲ್ಲಿ ಶೇಖರಿಸಿಟ್ಟಿದ್ದ ಕೋಳಿ ಆಹಾರ ಮುಗಿಯುತ್ತಾ ಬಂದಿದ್ದು, ಈಗ ಪೂರೈಕೆಯಾಗುತ್ತಿಲ್ಲ. ಹಾಗಾಗಿ, ಕೋಳಿಗಳಿಗೆ ಆಹಾರ ಕೊಡಲು ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ.

ಚಿಕನ್‌ಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹140ರವರೆಗೆ ಇದೆ. ಆದರೆ, ಆಹಾರ ಲಭ್ಯವಿಲ್ಲದಿರುವುದರಿಂದ ಫಾರಂ ಇಟ್ಟುಕೊಂಡಿರುವವರಲ್ಲಿ ಕೆಲವರು ಕಡಿಮೆ ಬೆಲೆಗೆ ಕೋಳಿಯನ್ನು ನೀಡುತ್ತಿದ್ದಾರೆ. ಕೋಳಿಗಳ ಆಹಾರದ ಬದಲಿಗೆ, ಕಲ್ಲಂಗಡಿ ಸೇರಿದಂತೆ ಇನ್ನಿತರ ಆಹಾರ ವಸ್ತುಗಳನ್ನು ನೀಡಲು ಮುಂದಾಗುತ್ತಿದ್ದಾರೆ.

ನಗರಕ್ಕೆ ಸಮೀಪದ ಕರಿನಂಜನಪುರದಲ್ಲಿ ಕೋಳಿ ಫಾರಂ ಇಟ್ಟುಕೊಂಡಿರುವ ರಘು ಅವರು ತಾವು ಸೇರಿದಂತೆ ಫಾರಂ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು.

‘ನನ್ನ ಫಾರಂನಲ್ಲಿ 5,000ದಷ್ಟು ಬ್ರಾಯ್ಲರ್‌ ಕೋಳಿಗಳಿವೆ. ಪ್ರತಿದಿನ ಅವುಗಳಿಗೆ 1,000 ಕೆ.ಜಿ. (ಒಂದು ಟನ್‌) ಆಹಾರ ಬೇಕು. ಸುಗುಣ ಕಂಪನಿಯವರು ಆಹಾರ ಪೂರೈಸುತ್ತಿದ್ದರು. ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆ ತರುತ್ತಿದ್ದರು. ದಿಗ್ಬಂಧನ ಹೇರುವ ಮೊದಲು ಬಂದಿತ್ತು. ಆ ಬಳಿಕಸಂಚಾರ ನಿರ್ಬಂಧ ಹೇರಿದ್ದರಿಂದ ಪೂರೈಕೆಯಾಗಿಲ್ಲ. ಇದರಿಂದ ತೊಂದರೆಯಾಗಿದೆ. ಇದು ನನ್ನ ಸಮಸ್ಯೆ ಮಾತ್ರ ಅಲ್ಲ, ಕೋಳಿ ಫಾರಂ ಮಾಡುತ್ತಿರುವವರೆಲ್ಲರೂ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘ನನ್ನ ಬಳಿ ಇರುವ ಆಹಾರವೆಲ್ಲಾ ಖಾಲಿಯಾಗಿದೆ. ಬ್ರಾಯ್ಲರ್‌ ಕೋಳಿ ಆರು ವಾರಗಳಲ್ಲಿ ಬೆಳೆದು ಮಾರಾಟಕ್ಕೆ ಸಿದ್ಧವಾಗುತ್ತವೆ. ನನ್ನ ಕೋಳಿಗಳಿಗೆ 45 ದಿನಗಳು ಆಗಿವೆ. ಏಳೆಂಟು ದಿನಗಳಿಂದ ಆಹಾರ ಕೊಟ್ಟಿಲ್ಲ. ಹಾಗಾಗಿ, ಅವುಗಳ ಬೆಳವಣಿಗೆ ಸಾಕಷ್ಟು ಪ್ರಮಾಣದಲ್ಲಿ ಆಗಿಲ್ಲ. ಈಗ ಆಹಾರ ಸಿಕ್ಕಿದರೂ, ತೂಕ ಬರುವುದಿಲ್ಲ.ಸದ್ಯಕ್ಕೆ ಕಲ್ಲಂಗಡಿಯನ್ನು ಕೋಳಿಗಳಿಗೆ ಹಾಕುತ್ತಿದ್ದೇನೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಕೋಳಿ ಮಾಂಸಕ್ಕೆ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹140ರವರೆಗೂ ಇದೆ. ಸರಿಯಾಗಿ ಆಹಾರ ನೀಡಿ ಚೆನ್ನಾಗಿ ಸಾಕಿದರೆ, ಒಂದು ಕೋಳಿ ಸಾಮಾನ್ಯವಾಗಿ 2.5 ಕೆ.ಜಿ. ತೂಗುತ್ತದೆ. ಈಗ ಒಂದು ಕೋಳಿಯನ್ನು ₹60–₹70ಗೆ ಕೊಡುತ್ತಿದ್ದೇನೆ’ ಎಂದು ಹೇಳಿದರು.

ಸರಕು ಸಾಗಣೆ ವಾಹನಗಳಿಗೆ ಅವಕಾಶ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಶುಸಂಗೋಪನೆ ಮತ್ತು ವೈದ್ಯಕೀಯ ಸೇವೆ ಇಲಾಖೆಯ ಉಪ ನಿರ್ದೇಶಕ ಡಾ.ವೀರಭದ್ರಯ್ಯ ಅವರು, ‘ದಿಗ್ಬಂಧನ ಇದ್ದರೂ, ಈಗ ಸರಕು ಸಾಗಣೆ ವಾಹನಗಳಿಗೂ ಅವಕಾಶ ನೀಡಲಾಗಿದೆ. ಹಾಗಾಗಿ, ಆಹಾರ ಪೂರೈಕೆಗೆ ತೊಂದರೆಯಾಗದು. ಫಾರಂನವರು ಸಾಮಾನ್ಯವಾಗಿ ಆಹಾರ ಪೂರೈಸುವುದಕ್ಕೆ ವಿವಿಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT