ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕೊರೊನಾ ಬಿಸಿಗೆ ಕರಗಿದ ಕಲ್ಲಂಗಡಿ

ಕೊಳ್ಳುವವರಿಲ್ಲದೇ ಬೆಳೆದ ರೈತನಿಗೆ ನಷ್ಟ, ಉಚಿತ ಹಂಚಿಕೆ, ಹಸುಗಳಿಗೆ ಮೇವು
Last Updated 3 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬೇಸಿಗೆಯಲ್ಲಿ ಜನರ ದಾಹವನ್ನು ನೀಗಿಸುತ್ತಾ ರೈತರ ಜೇಬನ್ನು ತುಂಬಿಸುತ್ತಿದ್ದ ಕಲ್ಲಂಗಡಿ ಹಣ್ಣುಗಳನ್ನು ಈಗ ಕೇಳುವವರೇ ಇಲ್ಲ. ಕೊರೊನಾ ದಿಗ್ಬಂಧನದ ಕಾರಣಕ್ಕೆ ಕಲ್ಲಂಗಡಿ ಬೇಡಿಕೆ ಕುಸಿದಿದ್ದು, ಬೆಳೆದ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಸುಡು ಬೇಸಿಗೆ ಸಮಯಕ್ಕೆ ಫಸಲು ಬರುವ ಉದ್ದೇಶದಿಂದ ರೈತರು ಜನವರಿಯಲ್ಲಿ ಬಿತ್ತನೆ ಮಾಡುತ್ತಾರೆ. ಮಾರ್ಚ್‌ ಅಂತ್ಯದಲ್ಲಿ ಕೊಯ್ದು ಮಾರಾಟ ಮಾಡುವುದು ಅವರ ಲೆಕ್ಕಾಚಾರ. ಈ ವರ್ಷ ತಾಲ್ಲೂಕಿನಾದ್ಯಂತ 400 ಹೆಕ್ಟೇರ್‌ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ.

ಬೇರೆ ಸಾಂಪ್ರದಾಯಿಕ ಉತ್ಪನ್ನಗಳನ್ನು ಹೇಗೋ ಕೆಲ ದಿನ ದಾಸ್ತಾನು ಮಾಡಬಹುದು. ಆದರೆ, ತೋಟಗಾರಿಕಾ ಬೆಳೆಗಳನ್ನು ಕಟಾವು ಮಾಡಿ ಮಾರಾಟ ಮಾಡದೆ ಬೇರೆ ದಾರಿಯೇ ಇಲ್ಲ. ಈಗ ಕಲ್ಲಂಗಡಿಯನ್ನು ಕೊಳ್ಳುವವರೇ ಇಲ್ಲದೆ, ರೈತರು ಜಮೀನಿನಲ್ಲಿ ಹಾಗೆ ಬಿಡುತ್ತಿದ್ದಾರೆ. ಇನ್ನೂ ಕೆಲವರು ಉಚಿತವಾಗಿ ಹಂಚುತ್ತಿದ್ದಾರೆ. ಜಾನುವಾರುಗಳಿಗೆ ಮೇಯಲು ಬಿಡುತ್ತಿದ್ದಾರೆ.

ಮಾರ್ಚ್ ತಿಂಗಳಿನಿಂದ ಜೂನ್‌ವರೆಗೆ ಶಾಲಾ ಮಕ್ಕಳಿಗೆ ರಜೆ ಇರುವುದರಿಂದ ಬಂಡೀಪುರ ಮತ್ತು ತಮಿಳುನಾಡಿನ ಊಟಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಹಣ್ಣಿನ ವ್ಯಾಪಾರಿಗಳು ಕಲ್ಲಂಗಡಿ ಹಣ್ಣುಗಳನ್ನು ಚೀಲಗಳಲ್ಲಿ ತುಂಬಿ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಮಾರಾಟ ಮಾಡುತ್ತಿದ್ದರು. 25 ಕೆಜಿಯ ಕಲ್ಲಂಗಡಿ ಚೀಲಕ್ಕೆ ₹200ರವರೆಗೂ ಬೆಲೆ ಸಿಗುತ್ತಿತ್ತು. ಇದಲ್ಲದೇ ಕೇರಳ ಮತ್ತು ತಮಿಳುನಾಡಿನ ವಿವಿಧ ಭಾಗಗಳಿಗೆ ತಾಲ್ಲೂಕಿನ ಕಲ್ಲಂಗಡಿ ಹಣ್ಣು ಹೆಚ್ಚಾಗಿ ರವಾನೆಯಾಗುತ್ತಿತ್ತು.

‘ಬಾಳೆ ಮತ್ತು ಕಲ್ಲಂಗಡಿ ಮಾರುಕಟ್ಟೆಗೆ ಬರದಿದ್ದರೂ ಮಾರಾಟಗಾರರು ರೈತರಿಂದನೇರವಾಗಿ ಖರೀದಿ ಮಾಡುತ್ತಿದ್ದರು. ಇದರಿಂದಾಗಿ ರೈತರಿಗೆ ಉತ್ತಮ ಬೆಲೆ ಸಿಗುತ್ತಿತ್ತು. ದಿಗ್ಬಂಧನ ಹೇರಿದ ನಂತರ ಕೊಳ್ಳಲು ಯಾರೂ ಬರುತ್ತಿಲ್ಲ. ಹೀಗಾಗಿ ಬೆಳೆಗಾರರಿಗೆ ತೊಂದರೆಯಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾಡಿದ ಖರ್ಚೂ ಬರಲಿಲ್ಲ’

ಸಂಕಷ್ಟವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಮಗುವಿನಹಳ್ಳಿ ರೈತ ಚಿನ್ನಸ್ವಾಮಿ ಅವರು, ‘ಕಳೆದ ವರ್ಷ ಕಲ್ಲಂಗಡಿ ಕೆ.ಜಿ.ಗೆ ₹15ರಿಂದ ₹20ರವರೆಗೆ ಮಾರಾಟವಾಗಿತ್ತು. ಕೊರೊನಾ ವೈರಸ್‌ ಪರಿಣಾಮ ಕೆ.ಜಿ. ಕಲ್ಲಂಗಡಿಯನ್ನು ₹2ಕ್ಕೂ ಬೇಡ ಎನ್ನುತ್ತಿದ್ದಾರೆ. ನಾವೇ ಕೊಯ್ದು ಕೊಟ್ಟರೂ ಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ’ ಎಂದರು.

‘ಒಂದು ಎಕರೆಗೆ ಐದು ಸಾವಿರ ಪೈರುಗಳು ಬೇಕು. ಒಂದು ಪೈರಿಗೆ ₹3ರಂತೆ ಎರಡು ಎಕರೆ ಪ್ರದೇಶದಲ್ಲಿ ₹30 ಸಾವಿರ ಖರ್ಚು ಮಾಡಿ 10 ಸಾವಿರ ಪೈರು ಹಾಕಿದ್ದೆ. ಕಟಾವಿಗೆ ಬರುವವರೆಗೆ ₹2 ಲಕ್ಷ ಖರ್ಚು ಮಾಡಿದ್ದೇವೆ. ಲಾಭ ಇರಲಿ, ಮಾಡಿದ್ದ ಖರ್ಚು ಸಹ ಬರಲಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಗಮನಿಸಿ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT