ಮಂಗಳವಾರ, ಜೂನ್ 15, 2021
21 °C
ಜಿಲ್ಲೆಯಲ್ಲಿ ಆಮ್ಲಜನಕಯುಕ್ತ ಹಾಸಿಗೆಗಳ ಸಂಖ್ಯೆಯಲ್ಲಿ ಹೆಚ್ಚಳ– ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್

‘ಕೊರೊನಾ ಮುಕ್ತ ಗ್ರಾಮ’ಕ್ಕೆ ಸಚಿವ ಎಸ್‌.ಸುರೇಶ್‌ ಕುಮಾರ್‌ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ‘ಕೊರೊನಾ ಮುಕ್ತ ಗ್ರಾಮ’ ಅಭಿಯಾನ ಆರಂಭಿಸಲಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೃಹತ್ ಆಂದೋಲನ ರೂಪಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿರುವ ಕೊರೊನಾವನ್ನು ನಿಯಂತ್ರಿಸುವ ಯೋಜನೆ ರೂಪಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ ಕುಮಾರ್ ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಮತ್ತು ಸದಸ್ಯರಿಗೆ ಇದರ ಜವಾಬ್ದಾರಿ ನೀಡಲಾಗುವುದು. ಗ್ರಾಮದಲ್ಲಿ ಕೊರೊನಾ ಸೋಂಕು ಹಬ್ಬದಂತೆ ನೋಡಿಕೊಳ್ಳಬೇಕು. ಹೊಸದಾಗಿ ಸೋಂಕಿತರಾದರೆ ಅಥವಾ ಹೊರಗಿನಿಂದ ಸೋಂಕಿತರು ಬಂದರೆ ಅವರನ್ನು ತಕ್ಷಣವೇ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಿಸಬೇಕು ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೊರೊನಾ ನಿಯಂತ್ರಣಕ್ಕೆ ಇರುವುದು ಕೇವಲ ಮೂರು ಹೆಜ್ಜೆಗಳಷ್ಟೇ. ಮೊದಲನೆಯದು ಲಕ್ಷಣ ಕಾಣಿಸಿಕೊಂಡ ತಕ್ಷಣ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವುದು. ನಂತರ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು. ಕೊನೆಯದಾಗಿ ಹಾಗೂ ಅತಿ ಮುಖ್ಯವಾಗಿ ಧೈರ್ಯವಾಗಿರುವುದು. ಈ ಮೂರು ಅಂಶಗಳನ್ನು ಎಲ್ಲರೂ ಪಾಲಿಸಿದರೆ, ಕೊರೊನಾ ವಿರುದ್ಧ ಜಯಿಸುವುದು ಸುಲಭ ಎಂದರು.

ಈಗ ರೋಗಿಗಳು ಉಸಿರಾಟದ ಸಮಸ್ಯೆ ಬಂದಾಗ ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದ ಅವರ ಚೇತರಿಕೆಯ ಅವಧಿಯೂ ಹೆಚ್ಚಾಗಲಿದೆ. ಒಂದು ವೇಳೆ ತೀವ್ರ ನಿಗಾ ಘಟಕಕ್ಕೆ ಹೋದರೆ ಅವರ ಮನೋಬಲವೇ ಕುಂದುತ್ತದೆ. ವಾಪಸ್ ಬದುಕಿ ಬರುವುದು ಸಾಧ್ಯವೇ ಇಲ್ಲ ಎಂದು ಯೋಚಿಸುತ್ತಾರೆ. ಆದರೆ, ಕೊರೊನಾ ಸೋಂಕಿನಿಂದ ಮರಣ ಪ್ರಮಾಣ ತೀರಾ ಅತ್ಯಲ್ಪ. ಗುಣಮುಖರಾದವರ ಸಂಖ್ಯೆ ಬಹಳ ಹೆಚ್ಚಿದೆ ಎಂಬುದನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರಿಗೆ ಪೊಲೀಸ್ ಭದ್ರತೆ: ಕೆಲವು ಗ್ರಾಮಗಳಲ್ಲಿ ಆಶಾ ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತರು ಮನೆಮನೆಗೆ ಹೋಗಿ ತಪಾಸಣೆ ನಡೆಸುವ ವೇಳೆ ಅವರಿಗೆ ಬೆದರಿಕೆ ಒಡ್ಡಿರುವ ಘಟನೆಗಳು ನಡೆದಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇನ್ನು ಮುಂದೆ ಆಶಾ ಕಾರ್ಯಕರ್ತೆಯರಿಗೆ ಗೃಹರಕ್ಷಕರು ಹಾಗೂ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ಅವರಿಂದ ಭದ್ರತೆ ಒದಗಿಸಲಾಗುವುದು ಎಂದರು.

ಇರುವುದು 2,006 ಬೆಡ್‌, ದಾಖಲಾಗಿರುವುದು 400 ಮಾತ್ರ!: ಜಿಲ್ಲೆಯಲ್ಲಿ ಕೋವಿಡ್‌ ಕೇರ್ ಕೇಂದ್ರಗಳಲ್ಲಿ 2,006 ಬೆಡ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಕೇವಲ 400 ಮಂದಿ ಮಾತ್ರವೇ ದಾಖಲಾಗಿದ್ದಾರೆ. 3,242 ಮಂದಿ ಹೋಂ ಐಸೋಲೇ ಷನ್‌ನಲ್ಲಿಯೇ ಇದ್ದಾರೆ ಎಂದು ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.

ಮನೆಯಲ್ಲಿ ಹೋಂ ಐಸೋಲೇಷನ್‌ಗೆ ಅಗತ್ಯ ಸೌಲಭ್ಯ ಇಲ್ಲದವರನ್ನು ಕೋವಿಡ್‌ ಕೇರ್‌ ಕೇಂದ್ರಗಳಿಗೆ ಸೇರಿಸಲು ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ವೈದ್ಯಾಧಿಕಾರಿ, ಸಿಡಿಪಿಒ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಶುಕ್ರವಾರದ ಒಳಗೆ ಅವರು ಈ ಕಾರ್ಯ ನೆರವೇರಿಸಬೇಕು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು