ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಮಾರಿ: ದತ್ತೂರಿ ಕಾಯಿ, ಬೇವಿನಸೊಪ್ಪಿಗೆ ಮೊರೆ

ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ಕಟ್ಟುತ್ತಿರುವ ಜನರು, ಪೂಜೆ ಸಲ್ಲಿಕೆ
Last Updated 5 ಏಪ್ರಿಲ್ 2020, 15:29 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಕೊರೊನಾ ವೈರಸ್‌ನಿಂದ ಭೀತಿಗೆ ಒಳಗಾಗಿರುವ ಗ್ರಾಮೀಣ ಜನರು ಕೊರೊನಾ ಹರಡುವುದನ್ನು ತಡೆಯುವ ಸಲುವಾಗಿ ತಮ್ಮ ಮನೆಗಳ ಎದುರು ಬೇಲಿ ಮುಳ್ಳುಕಾಯಿಯನ್ನು (ದತ್ತೂರಿ ಕಾಯಿ) ಬೇವಿನ ಸೊಪ್ಪಿನೊಂದಿಗೆ ಕಟ್ಟುತ್ತಿದ್ದಾರೆ.

ಸಂತೇಮರಹಳ್ಳಿ ಸುತ್ತಮುತ್ತಲಿನ ಗ್ರಾಮಗಳಾದ ಕೆಂಪನಪುರ, ಹೆಗ್ಗವಾಡಿಪುರ, ದೇಶವಳ್ಳಿ ಹಾಗೂ ಮೋಳೆಗಳಲ್ಲಿ ಹಲವು ಮನೆಗಳಲ್ಲಿ ಈ ರೀತಿ ಮಾಡಲಾಗುತ್ತಿದೆ. ಬೇಲಿ ಮುಳ್ಳುಕಾಯಿ ಕೊರೊನಾ ವೈರಸ್‌ನ ಚಿತ್ರವನ್ನೇ ಹೋಲುತ್ತಿರುವುದು ಮತ್ತೊಂದು ವಿಶೇಷ.

‘ಕೊರೊನಾ ವೈರಸ್ ಸೋಂಕು ಎಂಬುದು ಸಾಂಕ್ರಾಮಿಕ ರೋಗ ಎನ್ನುವುದಕ್ಕಿಂತ ಅದೊಂದು ಮಾರಿ. ಈ ಮಾರಿಗೆ ಬೇವಿನ ಸೊಪ್ಪು ಎಂದರೆ ಇಷ್ಟ. ಹೀಗಾಗಿ ಕೊರೊನಾ ವೈರಸ್‌ ಅನ್ನೇ ಹೋಲುವ ಮುಳ್ಳಿನಕಾಯಿ ಹಾಗೂ ಬೇವಿನ ಸೊಪ್ಪನ್ನು ಮನೆಗಳ ಮುಂಭಾಗ ಕಟ್ಟಿ ಪೂಜೆ ಸಲ್ಲಿಸಿ ಕೊರೊನಾ ಮಾರಿಯನ್ನು ತಡೆಗಟ್ಟುತ್ತಿದ್ದೇವೆ’ ಎಂದು ಈ ಭಾಗದ ಮಹಿಳೆಯರು ಹೇಳುತ್ತಿದ್ದಾರೆ.

ಹಿಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಾಗ ಮಾರಿಗುಡಿಗೆ ಬೇವಿನ ಸೊಪ್ಪು ಹಾಗೂ ಎಳನೀರು ಕಾಯಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಈಗ ಅದೇ ರೀತಿಯ ಕಾಯಿಲೆ ಬಂದಿದೆ ಎನ್ನುತ್ತಾರೆ ಅವರು.

ಮನೆಯ ಎದುರು ಕಟ್ಟಿರುವ ಮುಳ್ಳುಕಾಯಿ ಹಾಗೂ ಬೇವಿನ ಸೊಪ್ಪಿಗೆಅರಿಸಿನ, ಕುಂಕುಮ ಹಚ್ಚಿ, ಗಂಧದ ಕಡ್ಡಿ ಹಾಗೂ ಧೂಪ ಹಾಕಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಕೊರೊನಾ ಮಾರಿ ಮನೆಯೊಳಗೆ ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಜನರದ್ದು.

ಹಿಂದಿನ ದಿನಗಳಲ್ಲಿ ಇಂತಹ ಕಾಯಿಲೆಗಳು ಬಂದಾಗ ಬೇವಿನಸೊಪ್ಪು ಕಟ್ಟಿ ಪೂಜೆ ಸಲ್ಲಿಸಲಾಗುತ್ತಿತ್ತು. ಆಗ ಕಾಯಿಲೆಗಳು ಗ್ರಾಮ ಬಿಟ್ಟು ಹೋಗುತ್ತಿದ್ದವು. ಈಗ ಅದೇ ರೀತಿಯ ಪೂಜೆಗಳನ್ನು ಮಾಡಬಹುದು ಎಂದು ಸಂತೇಮರಹಳ್ಳಿಯ ಹಿರಿಯ ಮಹಿಳೆ ಸಣ್ಣಮ್ಮ ಹೇಳಿದರು.

ಇದು ಮೌಢ್ಯಾಚರಣೆ: ವೈದ್ಯರು

‘ಮನೆಗಳ ಮುಂಭಾಗ ಮುಳ್ಳಿನ ಕಾಯಿ ಹಾಗೂ ಬೇವಿನಸೊಪ್ಪು ಕಟ್ಟಿ ಪೂಜೆ ಸಲ್ಲಿಸುವುದು ಮೌಢ್ಯಾಚರಣೆ. ಈ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಮನೆಯಿಂದ ಹೊರಗೆ ಬಾರದೇ ಇದ್ದರೆ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಬಹುದು. ಮುಳ್ಳಿನ ಕಾಯಿ ಹಾಗೂ ಬೇವಿನ ಸೊಪ್ಪುಗಳನ್ನು ಮನೆಗಳಿಗೆ ಕಟ್ಟಿ ಗುಂಪುಗೂಡುವುದು ಸರಿಯಲ್ಲ. ಇಂತಹ ಆಚರಣೆಗಳಿಂದ ಜನರು ದೂರ ಇರಬೇಕು’ ಎಂದು ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ದೇವರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT