ಸೋಮವಾರ, ಏಪ್ರಿಲ್ 6, 2020
19 °C
ಜಿಲ್ಲಾಧಿಕಾರಿ ಪತ್ರಿಕಾಗೋಷ್ಠಿ– 12 ಜನರ ಮೇಲೆ ತೀವ್ರ ನಿಗಾ, ಇಬ್ಬರು ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರ

ಕೋವಿಡ್-19: ಮತ್ತೊಬ್ಬರ ರಕ್ತ, ಕಫ ಮಾದರಿ ಪರೀಕ್ಷೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮೆಕ್ಕಾದಿಂದ ಸೋಮವಾರ ಯಳಂದೂರಿಗೆ ಬಂದಿದ್ದ ವ್ಯಕ್ತಿಯೊಬ್ಬರ ಕಫ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಮಂಗಳವಾರ ಮೈಸೂರಿಗೆ ಕಳುಹಿಸಲಾಗಿದೆ. ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಲಾಗಿರುವ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದೆ. 

ಕೊರೊನಾ ವೈರಸ್‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು, ‘ಜಪಾನ್‌ನಿಂದ ಬಂದಿದ್ದ ಕೊಳ್ಳೇಗಾಲದ ಯುವಕರೊಬ್ಬರ ಕಫ ಹಾಗೂ ರಕ್ತದ ಮಾದರಿಯನ್ನು ಸೋಮವಾರ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ವರದಿ ಇನ್ನೂ ಬಂದಿಲ್ಲ. ಅವರನ್ನು ಕಾಮಗೆರೆಯ ಹೋಲಿ ಕ್ರಾಸ್‌ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ’ ಎಂದರು. 

‘ಮೆಕ್ಕಾದಿಂದ ಬಂದಿದ್ದ ಯಳಂದೂರಿನ ವ್ಯಕ್ತಿಯೊಬ್ಬರಲ್ಲಿ ಮಂಗಳವಾರ ಕೆಮ್ಮಿನ ಲಕ್ಷಣ ಕಂಡು ಬಂದಿತ್ತು. ಹಾಗಾಗಿ, ಅವರ ಮಾದರಿಯನ್ನೂ ಪರೀಕ್ಷೆಗೆ ಕಳುಹಿಸುವ ನಿರ್ಧಾರ ತೆಗೆದು ಕೊಳ್ಳಲಾಯಿತು. ಆರೋಗ್ಯದ ಮೇಲೆ ನಿಗಾ ಇಡಲು ಅವರನ್ನು ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗೆ ದಾಖಲಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು. 

12 ಜನರ ಮೇಲೆ ನಿಗಾ: ‘ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ 16 ಮಂದಿ ವಿದೇಶದಿಂದ ಬಂದಿದ್ದಾರೆ. ಈ ಪೈಕಿ ನಾಲ್ವರನ್ನು 14 ದಿನಗಳ ಕಾಲ ಅವರ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಿ ನಿಗಾ ವಹಿಸಲಾಗಿದೆ. ಅವರಲ್ಲಿ ಏನೂ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಉಳಿದ 12 ಮಂದಿಯ ಮೇಲೆ ನಿಗಾ ಇರಿಸಿದ್ದೇವೆ. ಸೋಮವಾರ ಕೊಳ್ಳೇಗಾಲಕ್ಕೆ ಅಮೆರಿಕದಿಂದ ದಂಪತಿ ಹಿಂದಿರುಗಿದ್ದಾರೆ. ಮಂಗಳವಾರ ಲಂಡನ್‌ನಿಂದ ಒಬ್ಬ ವಿದ್ಯಾರ್ಥಿ ಬಂದಿದ್ದಾನೆ. ಇವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ’ ಎಂದು ಡಾ.ಎಂ.ಆರ್.ರವಿ ಅವರು ಹೇಳಿದರು. 

‘ಕೊರೊನಾ ವೈರಸ್‌ ಹರಡುವಿಕೆ ಹಾಗೂ ಅದನ್ನು ತಡೆಯುವುದು ಹೇಗೆ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸ್ವಚ್ಛತೆ, ನೈರ್ಮಲ್ಯ ಕಾಪಾಡುವುದರ ಬಗ್ಗೆ ಗ್ರಾಮೀಣ ಭಾಗಗಳಲ್ಲೂ ಡಂಗೂರ ಸಾರಲಾಗುತ್ತಿದೆ’ ಎಂದರು.

ಸಹಾಯವಾಣಿಗೆ ಕರೆ ಮಾಡಿ: ‘ವಿದೇಶದಿಂದ ಬಂದವರ ಬಗ್ಗೆ ಮಾಹಿತಿ ಇದ್ದರೆ ಜಿಲ್ಲಾಡಳಿತದ ಕಂಟ್ರೋಲ್‌ ರೂಂ 1950, ಆರೋಗ್ಯ ಸಹಾಯವಾಣಿ 104 ಮತ್ತು ಪೊಲೀಸ್‌ ಕಂಟ್ರೋಲ್‌ ರೂಂ 100ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಅವರು ಮನವಿ ಮಾಡಿದರು. 

ಮನೆಗಳಲ್ಲೇ ಪೂಜೆ ಮಾಡಿ: ‘ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳಿಗೆ ನಿಷೇಧ ಹೇರಲಾಗಿದೆ. ಜನರು ಮನೆಗಳಲ್ಲೇ ಪೂಜೆ ಮಾಡಿ. ದೇವಸ್ಥಾನಗಳಲ್ಲಿ ಗುಂಪು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ’ ಎಂದರು.   

ಕೃತಕ ಅಭಾವ ಸೃಷ್ಟಿಸಿದರೆ ಕ್ರಮ: ‘ಅಗತ್ಯ ವಸ್ತುಗಳ ಕೃತಕ ಅಭಾವವನ್ನು ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು. 

ಬಾರ್‌, ಹೋಟೆಲ್‌ಗಳು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ‌ ಅಂತಹ ಹೋಟೆಲ್‌ಗಳನ್ನು ಜಪ್ತಿ ಮಾಡಿ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು. 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌.ನಾರಾಯಣ ರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ, ವೈದ್ಯಕೀಯ ಕಾಲೇಜಿನ ಡೀನ್‌ ಮತ್ತು ನಿರ್ದೇಶ‌ಕ ಡಾ.ಸಂಜೀವ್‌ ಇದ್ದರು. 

ಮಹದೇಶ್ವರ ಬೆಟ್ಟ ಜಾತ್ರೆ ರದ್ದು

‘ಮುನ್ನೆಚ್ಚರಿಕೆ ಕ್ರಮವಾಗಿ ಮಹದೇಶ್ವರ ಬೆಟ್ಟದ ಯುಗಾದಿ ಜಾತ್ರೆಯನ್ನು ರದ್ದುಗೊಳಿಸಲಾಗಿದೆ’ ಎಂದು ಡಾ.ಎಂ.ಆರ್.ರವಿ ಅವರು ತಿಳಿಸಿದರು. 

ಈ ಮೊದಲು ಸರಳವಾಗಿ, ಸಂಪ್ರದಾಯಬದ್ಧವಾಗಿ ಆಚರಿಸಲಾಗುವುದು ಎಂದು ಹೇಳಲಾಗಿತ್ತು. ರದ್ದುಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಅವರು ಮಂಗಳವಾರ ಆದೇಶ ಹೊರಡಿಸಿದ್ದು, ರಥೋತ್ಸವವೂ ನಡೆಯುವುದಿಲ್ಲ. 

‘ದೇವಾಲಯದ ಒಳಗಡೆ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯಲಿವೆ. ಜಾತ್ರೆಗೆ ಸಂಬಂಧಿಸಿದ ಬೇರೆ ಯಾವುದೇ ಆಚರಣೆಗಳು ನಡೆಯುವುದಿಲ್ಲ. ಯುಗಾದಿ ಜಾತ್ರೆಗೆ ತಮಿಳುನಾಡಿನಿಂದ ಹೆಚ್ಚು ಭಕ್ತರು ಬರುವುದರಿಂದ, ಅಲ್ಲಿನ ಸೇಲಂ, ಈರೋಡ್‌, ಕೊಯಮತ್ತೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಭಕ್ತರು ದೇವಾಲಯಕ್ಕೆ ಹೋಗಬಾರದು ಎಂದು ಸಾರ್ವಜನಿಕ ಸೂಚನೆ ನೀಡುವಂತೆ ಮನವಿ ಮಾಡಲಾಗಿದೆ’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು