ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 8.6ಕ್ಕೆ ಇಳಿದ ಪಾಸಿಟಿವಿಟಿ ಪ್ರಮಾಣ: ಸಚಿವ ಸುರೇಶ್‌ ಕುಮಾರ್‌

ಕೋವಿಡ್‌ ಪರೀಕ್ಷೆ ಹೆಚ್ಚಳ, ಗರಿಷ್ಠ ಸಂಖ್ಯೆಯಲ್ಲಿ ಲಸಿಕೆಗೆ ವಿತರಣೆಗೆ ಸೂಚನೆ
Last Updated 12 ಜೂನ್ 2021, 2:58 IST
ಅಕ್ಷರ ಗಾತ್ರ

ಚಾಮರಾಜನಗರ: ‘ಶುಕ್ರವಾರದ ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಶೇ 8.6ರಷ್ಟಿದೆ. ಇದನ್ನು ಶೇ 5ರೊಳಗೆ ಇಳಿಸಬೇಕು. ಅದಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಶುಕ್ರವಾರ ಅಧಿಕಾರಿಗಳಿಗೆ ಸೂಚಿಸಿದರು.

ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ಗೂಗಲ್‌ ಮೀಟ್‌ ಮೂಲಕ ನಡೆಸಿದ ಜಿಲ್ಲಾ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗುತ್ತಿದ್ದು ಇನ್ನಷ್ಟು ಗಣನೀಯವಾಗಿ ತಗ್ಗಿಸಬೇಕಿದೆ. ಶೇ 5ಕ್ಕಿಂತ ಕಡಿಮೆಯಾಗಬೇಕಿದೆ. ಜಿಲ್ಲೆಯಲ್ಲೂ ಲಾಕ್‌ಡೌನ್‌ ಕಠಿಣ ನಿಯಮಗಳು ಯಥಾಸ್ಥಿತಿಯಲ್ಲಿ ಇದೇ 21ರ ವರೆಗೆ ಮುಂದುವರೆಯುತ್ತಿದೆ. ಲಾಕ್‌ಡೌನ್ ನಿರ್ಬಂಧ ಸಡಿಲಿಕೆಯಾಗಲು ಪಾಸಿಟಿವಿಟಿ ಪ್ರಮಾಣ ಶೇ. 5 ಕ್ಕಿಂತ ಕಡಿಮೆ ಗೊಳಿಸಲೇಬೇಕಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು’ ಎಂದರು.

‘ಕೋವಿಡ್ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಈಗಾಗಲೇ ನಿಗದಿಯಾಗಿರುವ ಗಂಟಲು ಮಾದರಿ ದ್ರವ ಸಂಗ್ರಹಣಾ ಕೇಂದ್ರಗಳಲ್ಲಿಯೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಬೇಕು. ಅಲ್ಲದೇ ಮೊಬೈಲ್ ವಾಹನಗಳ ಮೂಲಕವೂ ಮಾದರಿ ಸಂಗ್ರಹಣೆ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಿ ಪರೀಕ್ಷೆಯನ್ನು ಹೆಚ್ಚು ನಡೆಸಬೇಕು. ಇದರಿಂದ ಸೋಂಕು ಹರಡುವಿಕೆ ತಡೆಯಲು ಸಾಧ್ಯವಾಗಲಿದೆ’ ಎಂದರು.

‘ಕೋವಿಡ್ ಲಸಿಕೆ ನೀಡುವ ಕಾರ್ಯ ಜಿಲ್ಲೆಯ ಎಲ್ಲೆಡೆ ಹೆಚ್ಚಾಗಿ ನಡೆಯಬೇಕಿದೆ. ಇದಕ್ಕಾಗಿ ಇನ್ನಷ್ಟು ಸುವ್ಯವಸ್ಥಿತ ಯೋಜನೆಗಳೊಂದಿಗೆ ಲಸಿಕೆಯನ್ನು ಹೆಚ್ಚು ಜನರು ಪಡೆಯುವಂತಾಗಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಲಸಿಕೆಯ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಯಶಸ್ವಿಯಾಗಿ ಕೈಗೊಳ್ಳಬೇಕು. ಲಸಿಕೆ ನೀಡಲು ಆಯಾ ಸ್ಥಳೀಯ ಯುವ ಜನರು, ಮುಖಂಡರು, ಸಮುದಾಯಗಳ ಪ್ರತಿನಿಧಿಗಳ ಸಹಕಾರ ಪಡೆಯಬೇಕು. ವಿಶೇಷ ಆಂದೋಲನ ಮಾದರಿಯಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಮುಂದುವರೆಯಬೇಕು’ ಎಂದರು.

ಕೋವಿಡ್ ಚಿಕಿತ್ಸೆ ಆರೈಕೆಯಲ್ಲಿರುವವರ ನಿಗಾವಣೆ, ಸಕ್ರಿಯ ಪ್ರಕರಣಗಳು, ಲಾಕ್ ಡೌನ್ ನಿಯಮಗಳ ಅನುಷ್ಠಾನ ಸೇರಿದಂತೆ ಕೋವಿಡ್ ನಿಯಂತ್ರಣ ಕುರಿತು ವಿವರವಾಗಿ ಸಭೆಯಲ್ಲಿ ಸಮಾಲೋಚಿಸಲಾಯಿತು. ಶಾಸಕರು, ಅಧಿಕಾರಿಗಳು ಅಭಿಪ್ರಾಯ, ಸಲಹೆಗಳನ್ನು ವ್ಯಕ್ತಪಡಿಸಿದರು.

ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್.ನಿರಂಜನ್ ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಜಿಲ್ಲಾ ಪಂಚಾಯಿಯಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಹರ್ಷಲ್ ಭೊಯರ್ ನಾರಾಯಣ್ ರಾವ್, ಉಪವಿಭಾಗಾಧಿಕಾರಿ ಡಾ. ಗಿರೀಶ್‌ ದಿಲೀಪ್ ಬದೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂಜೀವ್, ಜಿಲ್ಲಾ ಆಸ್ಪತ್ರೆಯ ನೋಡೆಲ್ ಅಧಿಕಾರಿ ಡಾ. ಮಹೇಶ್, ಆರ್ಸಿಎಚ್ ಅಧಿಕಾರಿ ಡಾ. ವಿಶ್ವೇಶ್ವರಯ್ಯ, ತಹಶೀಲ್ದಾರ್ ಕೆ. ಕುನಾಲ್, ನೋಡೆಲ್ ಅಧಿಕಾರಿಗಳಾದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT