ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲಾ ದಸರಾಗೆ ಕ್ಷಣಗಣನೆ, ಸಕಲ ಸಿದ್ಧತೆ

ಸಿನಿಮೋತ್ಸವ, ನಾಟಕೋತ್ಸವ, ಮಹಿಳಾ ದಸರಾಕ್ಕೆ ಸಜ್ಜು, ಚಂದನ್‌ ಶೆಟ್ಟಿ ಮತ್ತು ತಂಡದ ಆಕರ್ಷಣೆ
Last Updated 30 ಸೆಪ್ಟೆಂಬರ್ 2019, 14:54 IST
ಅಕ್ಷರ ಗಾತ್ರ

ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾದ ಅಂಗವಾಗಿ ನಗರದಲ್ಲಿ ನಾಲ್ಕು ದಿನಗಳ ಕಾಲ (ಅಕ್ಟೋಬರ್‌ 1ರಿಂದ 4) ನಡೆಯಲಿರುವ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

ಮಂಗಳವಾರ ಬೆಳಿಗ್ಗೆ 8.30ಕ್ಕೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯದೊಂದಿಗೆ 2019ನೇ ಸಾಲಿನ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಜಿಲ್ಲೆಯ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ನಗರಸಭಾ ಸದ್ಯಸರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳು ವಿಶೇಷ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಬಸವೇಶ್ವರ ಚಿತ್ರಮಂದಿರದಲ್ಲಿ ಸಿನಿಮೋತ್ಸವಕ್ಕೆ ಚಾಲನೆ ದೊರೆಯಲಿದೆ. ಇದರ ಅಂಗವಾಗಿ ನಗರದ ಬಸವೇಶ್ವರ, ಸಿಂಹ ಮೂವಿ ಪ್ಯಾರಡೈಸ್‌ ಮತ್ತು ಭ್ರಮರಾಂಬ ಚಿತ್ರಮಂದಿರಗಳಲ್ಲಿ ನಾಲ್ಕು ದಿನಗಳ ಕಾಲ ಬೆಳಗ್ಗೆ 10 ಗಂಟೆಗೆ ಸದಭಿರುಚಿಯ ಚಲನಚಿತ್ರಗಳು ಉಚಿತವಾಗಿ ಪ್ರದರ್ಶನಗೊಳ್ಳಲಿವೆ.

ಮಹಿಳಾ ದಸರಾ: ಬೆಳಿಗ್ಗೆ 10 ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಮಹಿಳಾ ದಸರಾ ಉದ್ಘಾಟನೆಯಾಗಲಿದೆ. ರಂಗೋಲಿ ಬಿಡಿಸುವುದು ಸೇರಿದಂತೆ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿವೆ.

ನಾಟಕೋತ್ಸವ: ದಸರಾ ಅಂಗವಾಗಿ ನಾಲ್ಕು ದಿನಗಳ ಕಾಲ ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಪ್ರತಿದಿನ ಮಧ್ಯಾಹ್ನ 2ರಿಂದ ಸಂಜೆ 5.30ರ ವರೆಗೆ ನಾಟಕೋತ್ಸವ ನಡೆಯಲಿದೆ.

ಆಕರ್ಷಕ ಮೆರವಣಿಗೆ: ಸಂಜೆ 4 ಗಂಟೆಗೆ ಆಕರ್ಷಕ ದಸರಾ ಮೆರವಣಿಗೆಗೆ ಚಾಲನೆ ಸಿಗಲಿದೆ. ಜಿಲ್ಲಾಡಳಿತ ಭವನದಿಂದ ಆರಂಭಗೊಳ್ಳುವ ಮೆರವಣಿಗೆಯು ಸಂತೇಮರಹಳ್ಳಿ ವೃತ್ತ, ಪೇಟೆ ಬೀದಿ, ಗುಂಡ್ಲುಪೇಟೆ ವೃತ್ತ, ಭುವನೇಶ್ವರಿ ವೃತ್ತ ಮಾರ್ಗವಾಗಿ ಚಾಮರಾಜೇಶ್ಚರ ದೇವಸ್ಥಾನ ತಲುಪಲಿದೆ. ಜಿಲ್ಲೆಯ ವಿವಿಧ ಕಲಾ ತಂಡಗಳು, ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ದೇವಾಲಯದ ಆವರಣದಲ್ಲಿ ಹಾಕಲಾಗಿರುವ ಬೃಹತ್‌ ವೇದಿಕೆಯಲ್ಲಿ ಮಹೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಚಂದನ್‌ ಶೆಟ್ಟಿ ಆಕರ್ಷಣೆ: ಸಂಜೆ 4.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ದಸರಾ ಮಹೋತ್ಸವದ ಮೊದಲ ದಿನ ಬಿಗ್‌ ಬಾಸ್‌ ಖ್ಯಾತಿಯ ಚಂದನ್‌ ಶೆಟ್ಟಿ ಹಾಗೂ ತಂಡದ ಕನ್ನಡ ರ‍್ಯಾ‍ಪ್‌ ಸಂಗೀತ ರಸಸಂಜೆ ನಡೆಯಲಿದೆ. ರಾತ್ರಿ 7 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಡೆಯಲಿರುವ ರಸ ಸಂಜೆಯ ಕಾರ್ಯಕ್ರಮವನ್ನು ಖ್ಯಾತ ಟಿವಿ ನಿರೂಪಕಿ ಅನುಶ್ರೀ ಅವರು ನಿರೂಪಣೆ ಮಾಡಲಿದ್ದಾರೆ.

ಆಹಾರಮೇಳ, ವಸ್ತುಪ್ರದರ್ಶನ
ದಸರಾ ಪ್ರಯುಕ್ತ ಇದೇ ಮೊದಲ ಬಾರಿಗೆ ನಗರದಲ್ಲಿ ಆಹಾರಮೇಳ ಆಯೋಜಿಸಲಾಗಿದೆ. ಪೇಟೆ ಪ್ರೈಮರಿ ಶಾಲೆಯ ಆವರಣದಲ್ಲಿ ಸಕಲ ವ್ಯವಸ್ಥೆಯನ್ನೂ ಮಾಡಲಾಗಿದೆ. ನಾಲ್ಕು ದಿನಗಳೂ ಬೆಳಿಗ್ಗೆ 11ರಿಂದ ರಾತ್ರಿ 10 ಗಂಟೆವರೆಗೆ ಮೇಳ ನಡೆಯಲಿದೆ.

ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ವಸ್ತುಪ್ರದರ್ಶನ ಕೂಡ ಏರ್ಪಡಿಸಲಾಗಿದೆ. ಅ.1ರಿಂದ 4ರ ವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ವಸ್ತುಪ್ರದರ್ಶನ ನಡೆಯಲಿದೆ.

ಕಳೆಗಟ್ಟಿದ ನಗರ
ದಸರಾಕ್ಕಾಗಿ ದೇವಸ್ಥಾನದ ಸುತ್ತಮುತ್ತಲಿನ ಬೀದಿಗಳು, ಬಿ.ರಾಚಯ್ಯ ಜೋಡಿರಸ್ತೆಯನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದ್ದು, ರಾತ್ರಿ ಹೊತ್ತು ಜಗಮಗಿಸುತ್ತಿದೆ. ಸೆಸ್ಕ್‌ ವತಿಯಿಂದ ವಿದ್ಯುತ್‌ ಅಲಂಕಾರ ಮಾಡಲಾಗಿದೆ. ಜಿಲ್ಲಾಡಳಿತ ಭವನ, ನಗರಸಭೆ ಸೇರಿದಂತೆ ಪ್ರಮುಖ ಕಟ್ಟಡಗಳೂ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿವೆ. ಜಿಲ್ಲಾ ದಸರಾ ಇತಿಹಾಸದಲ್ಲಿ ಇದುವರೆಗೆ ಈಪ್ರಮಾಣದಲ್ಲಿ ವಿದ್ಯುತ್‌ ಅಲಂಕಾರ ಮಾಡಲಾಗಿಲ್ಲ. ದಸರಾ ಉತ್ಸವಕ್ಕಾಗಿ ರಾಜ್ಯ ಸರ್ಕಾರ ₹1 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಸಿನಿಮೋತ್ಸವ: ಪ್ರದರ್ಶನಗೊಳ್ಳಲಿರುವ ಚಿತ್ರಗಳು

(ಪ್ರತಿ ದಿನ ಬೆಳಿಗ್ಗೆ 10 ಗಂಟೆಗೆ, ಉಚಿತ ಪ್ರದರ್ಶನ)

ದಿನಾಂಕ;ಬಸವೇಶ್ವರ ಚಿತ್ರಮಂದಿರ;ಸಿಂಹ ಮೂವಿ ಪ್ಯಾರಡೈಸ್‌;ಭ್ರಮರಾಂಬ ಚಿತ್ರ ಮಂದಿರ

ಅ.1;ನಾಗರಹಾವು;ಪ್ರೀಮಿಯರ್‌ ಪದ್ಮಿನಿ;ನಟಸಾರ್ವಭೌಮ

ಅ.2;ಬೆಲ್‌ ಬಾಟಮ್‌;ನಿಷ್ಕರ್ಷ;ಕೆಜಿಎಫ್

ಅ.3;ಜಿರ್ಜಿಂಬೆ;ರುಸ್ತುಂ;ನಾಗರಹಾವು

ಅ.4;ಕವಲುದಾರಿ;ನಟಸಾರ್ವಭೌಮ;ರಂಗಿತರಂಗ

ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

(ಚಾಮರಾಜೇಶ್ವರ ದೇವಸ್ಥಾನದ ಆವರಣ)

ಸಂಜೆ 4.30–5.30– ಸ್ಥಳೀಯ ಕಲಾವಿದರಿಂದ ಭಕ್ತಿ ಸುದೆ

ಸಂಜೆ 5.30–6.30– ಕಾಲೇಜು ವಿದ್ಯಾರ್ಥಿಗಳಿಂದ ನಾಟ್ಯ ಸೌರಭ

ಸಂಜೆ 6.30–7.00– ವೇದಿಕೆ ಕಾರ್ಯಕ್ರಮ ಉದ್ಘಾಟನೆ

ಸಂಜೆ 7.00–ರಾತ್ರಿ 10– ಚಂದನ್‌ ಶೆಟ್ಟಿ ಮತ್ತು ತಂಡದಿಂದ ಕನ್ನಡ ರ‍್ಯಾ‍ಪ್‌ ಸಂಗೀತ ಸಂಜೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT