ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಕೊರೊನಾಗೆ ಮತ್ತಿಬ್ಬರು ಸಾವು, ಮೃತರ ಸಂಖ್ಯೆ 30ಕ್ಕೆ

1000 ದಾಟಿದ ಗುಣಮುಖರಾದವರ ಸಂಖ್ಯೆ, ಸೋಂಕಿತರ ಸಂಖ್ಯೆ 1,487ಕ್ಕೆ
Last Updated 14 ಆಗಸ್ಟ್ 2020, 15:39 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರು ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ. ಒಬ್ಬರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದರೆ, ಇನ್ನೊಬ್ಬರು ಬೇರೆ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 30 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲಾಡಳಿತದ ಪ್ರಕಾರ, ಕೋವಿಡ್‌ನಿಂದಾಗಿ 18 ಹಾಗೂ ಕೋವಿಡ್‌ಯೇತರ ಕಾರಣದಿಂದ 12 ಮಂದಿ ಪ್ರಾಣಕಳೆದುಕೊಂಡಿದ್ದಾರೆ.

ಚಾಮರಾಜನಗರದ ನಿವಾಸಿ 64 ವರ್ಷದ ವ್ಯಕ್ತಿ (ರೋಗಿ ಸಂಖ್ಯೆ–1,35,134) ಜುಲೈ 31ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಗುಂಡ್ಲುಪೇಟೆಯ 55 ವರ್ಷದ ವ್ಯಕ್ತಿ ಬುಧವಾರ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಗುರುವಾರ ಮೃತಪ‍ಟ್ಟಿದ್ದಾರೆ ಎಂದು ಜಿಲ್ಲಾಡಳಿತ ಹೇಳಿದೆ.

ಸಾವಿರ ದಾಟಿದ ಗುಣಮುಖ:ಶುಕ್ರವಾರ ಒಂದೇ ದಿನ 68 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈವರೆಗೆ 1,047 ಮಂದಿ ಸೋಂಕು ಮುಕ್ತರಾಗಿದ್ದಾರೆ.

ಶುಕ್ರವಾರ 55 ಮಂದಿಗೆ ಕೋವಿಡ್‌–19 ಇರುವುದು ಖಚಿತವಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಸೋಂಕಿತರ ಸಂಖ್ಯೆ 1,487ಕ್ಕೆ ಏರಿದೆ. ಸದ್ಯ 410 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ, 134 ಮಂದಿ ತಮ್ಮ ಮನೆಗಳಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಒಂದೇ ದಿನ 20 ಮಂದಿ ಹೋಂ ಐಸೊಲೇಷನ್‌ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. 20 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಚ್ಚು ಪರೀಕ್ಷೆ: ಶುಕ್ರವಾರ ಒಂದೇ ದಿನ ಜಿಲ್ಲೆಯಲ್ಲಿ 831 ಮಂದಿಯ ಗಂಟಲು ದ್ರವದ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಆರ್‌ಟಿಪಿಸಿಆರ್‌ ಪ್ರಯೋಗಾಲದಲ್ಲಿ 499, ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ 321, ಟ್ರುನಾಟ್‌ ವಿಧಾನದಲ್ಲಿ 11 ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್‌ಟಿಪಿಸಿಆರ್‌ನಲ್ಲಿ 34 ಮಂದಿಗೆ, ಆ್ಯಂಟಿಜೆನ್‌ ಪರೀಕ್ಷೆಯಲ್ಲಿ 19 ಮಂದಿಗೆ ಸೋಂಕು ದೃಢಪಟ್ಟಿದೆ. 778 ಮಂದಿಯ ವರದಿಗಳು ನೆಗೆಟಿವ್‌ ಬಂದಿದೆ. ಇಬ್ಬರಿಗೆ ಮೈಸೂರಿನಲ್ಲಿ ಕೋವಿಡ್‌–19 ಇರುವುದು ಖಚಿತವಾಗಿದೆ.

ದೃಢಪಟ್ಟ 55 ಪ್ರಕರಣಗಳ ಪೈಕಿ, ಕೊಳ್ಳೇಗಾಲ ತಾಲ್ಲೂಕಿನಲ್ಲಿ 24, ಚಾಮರಾಜನಗರ 14, ಗುಂಡ್ಲುಪೇಟೆ, ಹನೂರು ತಾಲ್ಲೂಕುಗಳಲ್ಲಿ ತಲಾ ಏಳು ಹಾಗೂ ಯಳಂದೂರು ತಾಲ್ಲೂಕಿನಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ.

ಗುಣಮುಖರಾದ 68 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 31, ಕೊಳ್ಳೇಗಾಲ ತಾಲ್ಲೂಕಿನ 28, ಗುಂಡ್ಲುಪೇಟೆ ತಾಲ್ಲೂಕಿನ ಆರು ಮತ್ತು ಯಳಂದೂರು ತಾಲ್ಲೂಕಿನ ಮೂವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT