ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 | ಗ್ರಾ.ಪಂ ತೆರಿಗೆ ವಸೂಲಿಗೆ ಹೊಡೆತ

ಹೋಟೆಲ್‌, ರೆಸಾರ್ಟ್‌, ಹೋಂ ಸ್ಟೇಗಳಲ್ಲಿ ನಡೆಯದ ವಹಿವಾಟು
Last Updated 19 ಜುಲೈ 2020, 17:03 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕೋವಿಡ್ 19 ಹಾವಳಿ ಕಾರಣದಿಂದಾಗಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹದ ಮೇಲೆ ಭಾರಿ ಹೊಡೆತ ಬಿದ್ದಿದೆ. ಮೂರ್ನಾಲ್ಕು ತಿಂಗಳುಗಳಿಂದ ತೆರಿಗೆ ಸಂಗ್ರಹ ಸರಿಯಾಗಿ ಆಗುತ್ತಿಲ್ಲ.

ತಾಲ್ಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳು, ರೆಸಾರ್ಟ್, ಹೊಟೇಲ್‌ಗಳಿಗೆ ಕೋವಿಡ್‌ ಕಾರಣಕ್ಕೆ ವ್ಯಾಪಾರ ಇಲ್ಲದ ಕಾರಣ, ಮಾಲೀಕರು ಆಸ್ತಿ ತೆರಿಗೆ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.

ಹಿಂದಿನ ವರ್ಷ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತಿದ್ದ ಕಾರಣದಿಂದ ತಾಲ್ಲೂಕಿನ ಎಲ್ಲಾ ಪಂಚಾಯತಿಗಳಲ್ಲಿ ತೆರಿಗೆ ವಸೂಲಿ ಚೆನ್ನಾಗಿತ್ತು. ಅದರಲ್ಲಿ ಸಿಬ್ಬಂದಿ ಸಂಬಳ, ಕಚೇರಿ ನಿರ್ವಹಣೆ, ಪಂಚಾಯತಿ ವ್ಯಾಪ್ತಿಯ ಯೋಜನೆಗಳಿಗೆ ಅನುದಾನ, ವಿದ್ಯುತ್ ಬಿಲ್ ಕಟ್ಟಲು ಸೇರಿದಂತೆ ಇತರ ವೆಚ್ಚಗಳಿಗೆ ತೊಂದರೆ ಇರಲಿಲ್ಲ. ಮೂರ್ನಾಲ್ಕು ತಿಂಗಳುಗಳಿಂದ ಅಂಗಡಿಗಳ ಮಾಲೀಕರು ಮಾಲೀಕರು, ‘ವ್ಯಾಪಾರ ಇಲ್ಲ, ಮುಂದೆ ಕಟ್ಟುತ್ತೇವೆ’ ಎಂದು ಹೇಳುತ್ತಿದ್ದಾರೆ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬರು (ಪಿಡಿಒ) ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ 34 ಪಂಚಾಯತಿಗಳಿದ್ದು, ಬೇಗೂರು, ತೆರಕಣಾಂಬಿ ಹಂಗಳ ಮತ್ತು ಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚು ತೆರಿಗೆ ವಸೂಲಿ ಆಗುತ್ತಿತ್ತು. ಹಂಗಳ ಮತ್ತು ಮಂಗಲ ವ್ಯಾಪ್ತಿಯಲ್ಲಿ ಬರುವ ಹೊಟೆಲ್, ರೆಸಾರ್ಟ್‌ಗಳು ಮುಚ್ಚಿರುವುದರಿಂದ ತೆರಿಗೆ ವಸೂಲಿ ಆಗಿಲ್ಲ . ಕಳೆದ ವರ್ಷ ಈ ಪಂಚಾಯತಿಗಳಲ್ಲಿ ಲಕ್ಷ ರೂಪಾಯಿವರೆಗೆ ಮತ್ತು ವರ್ಷದ ತೆರಿಗೆ ₹15 ಲಕ್ಷ ರೂಪಾಯಿ ತರಿಗೆ ವಸೂಲಿ ಆಗಿತ್ತು. ಮೂರು ತಿಂಗಳಲ್ಲಿ ₹ 40 ಸಾವಿರ ಕೂಡ ವಸೂಲಿ ಆಗಿಲ್ಲ ಎಂಬುದು ಪಿಡಿಒಗಳ ಅಳಲು.

‘ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿಸಬೇಕು’

ಕೋವಿಡ್‌–19 ತಡೆಗೆ ಎಂದು ಹೇಳಿಕೊಂಡುಎಲ್ಲ ಅಂಗಡಿಗಳನ್ನು ಮಧ್ಯಾಹ್ನದ ನಂತರ ಮುಚ್ಚಿಸುತ್ತಿದ್ದಾರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಕೆಲವು ಗ್ರಾಮಗಳಲ್ಲಿರುವ ಅಂಗಡಿಗಳ ಮಾಲೀಕರು ಪ್ರವಾಸಿಗರನ್ನು ನಂಬಿದ್ದಾರೆ. ಈಗ ವ್ಯಾಪಾರ ಕುಂಠಿತವಾಗಿದೆ. ಜೀವನ ನಿರ್ವಹಣೆಗೆ ಕೂಲಿ ಮಾಡಬೇಕಾದ ಸ್ಥಿತಿ ಬಂದಿದೆ. ಹೀಗಾದರೆ ತೆರಿಗೆ ಕಟ್ಟುವುದಾದರೂ ಹೇಗೆ’ ಎಂದು ಅಂಗಡಿಯೊಂದರ ಮಾಲೀಕ ಭಾಸ್ಕರ್ ಅವರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕುಲ್‌ದೀಪ್‌ ಅವರು, ‘ನೀರಿನ ತೆರಿಗೆ, ಮನೆ, ನಿವೇಶನ ತೆರಿಗೆ ಸೇರಿದಂತೆ ಯಾವುದೇ ತೆರಿಗೆ ವಸೂಲಿ ಆಗುತ್ತಿಲ್ಲ. ಕೋವಿಡ್ 19 ಕಾರಣದಿಂದಾಗಿ ನಾವೂ ಹೆಚ್ಚು ಒತ್ತಡ ಹೇರುತ್ತಿಲ್ಲ. ಜನರೇ ಸ್ವಯಂ ಪ್ರೇರಿತರಾಗಿ ತೆರಿಗೆ ಕಟ್ಟಲು ಮಂದಾಗಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT